ADVERTISEMENT

ಗಮನ ಸಳೆದ ಗಾಂಭೀರ್ಯದ ಹೆಜ್ಜೆಗಳು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಇಳಿಸಂಜೆ ಹೊತ್ತು ಬಣ್ಣ ಬಣ್ಣದ ಉಡುಪು ತೊಟ್ಟ ಬೆಡಗಿಯರು ಕಿಲಕಿಲ ನಗುತ್ತಾ ಮಾತಿನ ಚಟಾಕಿ ಹಾರಿಸುತ್ತಿದ್ದರು. ಇನ್ನು ಕೆಲವರು ಗೊಂಬೆಗಳ ಮೈಯನ್ನು ಅಲಂಕರಿಸಿದ್ದ ಉಡುಪುಗಳನ್ನು ಮೆತ್ತಗೆ ಮುಟ್ಟುತ್ತಾ ಅದರ ಪಕ್ಕದಲ್ಲಿ ನೇತುಹಾಕಿದ್ದ ಬೆಲೆಯ ಪಟ್ಟಿಯನ್ನು ನೋಡುತ್ತಾ ಕಣ್ಣರಳಿಸುತ್ತಿದ್ದರು.

ಅಲ್ಲಿದ್ದ ಮಕ್ಕಳು ಇದ್ಯಾವುದರ ಗೋಜಿಲ್ಲದೇ ಹೂವಿನ ಪಕಳೆಯಿಂದ ಅಲಂಕರಿಸಿದ್ದ ವೇದಿಕೆಯನ್ನು ಆಗಾಗ ಮುಟ್ಟುತ್ತ, ಅಲ್ಲಿದ್ದ ಪಕಳೆಯನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಹಾರಿಸುತ್ತಾ ಆಟವಾಡುತ್ತಿದ್ದರು. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಎಂ.ಜಿ ರಸ್ತೆಯಲ್ಲಿ ಹೊಸದಾಗಿ ಆರಂಭವಾದ ಪ್ಯಾಂಟಲೂನ್ಸ್‌ ಮಳಿಗೆಯಲ್ಲಿ.

ಮಳಿಗೆಯ ಹೊರಗಡೆ ಒಂದಷ್ಟು ಮಂದಿಯ ಗುಂಪು ಜೋರಾಗಿ ಡೋಲು ಬಾರಿಸುತ್ತಿದ್ದರು. ಒಳಗಡೆ ಪಾಶ್ಚಾತ್ಯ ಹಾಡು ಕಿವಿಗಪ್ಪಳಿಸುತ್ತಿತ್ತು. ಇಷ್ಟೆಲ್ಲಾ ಇದ್ದ ಮೇಲೆ ರೂಪದರ್ಶಿಗಳ ಮೈಗೆ ಬಣ್ಣ ಬಣ್ಣದ ಉಡುಗೆ ತೊಡಿಸಿ ಬೆಕ್ಕಿನ ನಡಿಗೆಯ ಬಿನ್ನಾಣ ತೋರಿಸದಿದ್ದರೆ ಹೇಗೆ? ಅದಕ್ಕಾಗಿ ಅಲ್ಲೊಂದು ವೇದಿಕೆ ಸಿದ್ಧವಾಗಿ ಕಾಯುತ್ತಿತ್ತು. ಅಲ್ಲಿ ಬೆಡಗಿಯರ ಚೆಲುವು ನೋಡಲು ಒಂದಷ್ಟು ಮಂದಿ ಕುತೂಹಲರಾಗಿದ್ದರು. ತುಸು ಕಾಯಿಸಿದ ಮೇಲೆ ವಿನ್ಯಾಸಕಿ ಶೀತಲ್‌ ಶರ್ಮಾ ಅವರ ‘ನ್ಯೂ ಸ್ಪ್ರಿಂಗ್‌ ಸಮ್ಮರ್‌ 14 ಕಲೆಕ್ಷನ್‌’ ಫ್ಯಾಷನ್‌ ಷೋ ನಿಧಾನವಾಗಿ ಶುರುವಾಯಿತು. ಕುಳಿತವರಿಗೆ ಬೇಸರವಾಗಬಾರದು ಎಂದು ಆಗಾಗ ಚಾಕೊಲೆಟ್‌, ಹಣ್ಣಿನ ಹೋಳುಗಳನ್ನು ನೀಡುತ್ತಿದ್ದರು. 

ಚಾಕೊಲೆಟ್‌ ಸವಿಯುತ್ತಿದ್ದಂತೆ ವೇದಿಕೆಯ ಮೇಲೆ ತೆಳ್ಳಗಿನ ಬೆಡಗಿಯೊಬ್ಬಳು ತನ್ನ ಬಡ ನಡುವನ್ನು ಮತ್ತಷ್ಟೂ ಬೆಂಡಾಗಿಸಿಕೊಂಡು ಅಂಕುಡೊಂಕು ಹೆಜ್ಜೆ ಹಾಕುತ್ತಾ ಬಂದಳು. ತಿಳಿಹಳದಿ ಬಣ್ಣದ ಪ್ಯಾಂಟ್‌ ಅವಳ ತೊಡೆಯನ್ನು ಬಿಗಿಯಾಗಿ ಅಪ್ಪಿಕೊಂಡಿತ್ತು. ಗುಲಾಬಿ ಹೂಗಳ ಚಿತ್ತಾರವಿರುವ ಶರ್ಟ್‌ನಲ್ಲಿ ಹೇಳುವಷ್ಟು ಮುದ್ದಾಗಿ ಕಾಣದಿದ್ದರು ಉಡುಪಿನಿಂದ ಅವಳ ಅಂದ ತುಸು ಹೆಚ್ಚಿತ್ತು.

ಅವಳು ವೇದಿಕೆಗೆ ಬೆನ್ನು ಹಾಕಿ ಹೋಗುತ್ತಿದ್ದಂತೆ ಮತ್ತೊಬ್ಬಳು ಅಲ್ಲಿ ಹಾಜರಾದಳು. ಅದು ಬಿಳಿ ಬಣ್ಣದ ದಿರಿಸಿಗೆ ಬಂಗಾರದ ಬಣ್ಣದ ಹೂಗಳ ಚಿತ್ತಾರವಿರುವ ಅನಾರ್ಕಲಿ ಉಡುಪು. ದುಪ್ಪಟ್ಟವನ್ನು ಭುಜದ ಮೇಲೆ ಹೊದ್ದುಕೊಳ್ಳದ ಆ ಚೆಲುವೆ ಕುತ್ತಿಗೆಗೆ ಸ್ಟೈಲಾಗಿ ಸುತ್ತಿಕೊಂಡಿದ್ದಳು. ಇನ್ನೊಬ್ಬಳು ಬಾರ್ಬಿ ಗೊಂಬೆಯ ಚೆಲುವಿನಂತವಳು!. ತಿಳಿ ಗುಲಾಬಿ ಬಣ್ಣದ ದಿರಿಸಿನಲ್ಲಿ ವೈಯಾರವಾಗಿ ನಡೆಯುತ್ತ ತುಸುವೇ ನಕ್ಕು ಅಲ್ಲಿದ್ದ ಮನಸ್ಸುಗಳಿಗೆ ತಣ್ಣನೆಯ ಆಸೆ ಬಿತ್ತಿದಳು.

ಕ್ಯಾಮೆರಾ ಕಣ್ಣುಗಳು ಹೂ ಹಾದಿಯಲ್ಲಿ ನಡೆದು ಬಂದ ಆ ಸುಂದರಿಯರ ಸೊಬಗನ್ನು ತನ್ನ ಕಣ್ಣಗಳಲ್ಲಿ ಸೆರೆ ಹಿಡಿಯುತ್ತಿತ್ತು. ಹುಡುಗಿಯರಿಗಿಂತ ನಾವೇನೂ ಕಡಿಮೆ ಇಲ್ಲವೆಂಬಂತೆ ಹುಡುಗರು ವೇದಿಕೆಯ ಮೇಲೆ ಹೆಜ್ಜೆ ಊರಿದರು. ಹುಡುಗಿಯರಷ್ಟು ವೈಯಾರ ತೋರದಿದ್ದರು ನೋಡಲು ಗಟ್ಟಿಮುಟ್ಟಾಗಿ ತೊಟ್ಟ ಉಡುಪಿಗೆ ಒಂದು ಹೊಸ ನೋಟ ನೀಡಲು  ಪ್ರಯತ್ನ ಪಟ್ಟರು.

ಕೆನೆ ಬಣ್ಣದ ಪ್ಯಾಂಟ್‌, ನೀಲಿ ಬಣ್ಣದ ಶರ್ಟ್‌ ಮೇಲೆ ಕಪ್ಪು ಬಣ್ಣದ ಗೆರೆಗಳಿರುವ ಶರ್ಟ್‌ನಲ್ಲಿ ಬಂದ ಹುಡುಗನ ನಡಿಗೆಯಲ್ಲಿ ಒನಪು ಕಾಣದಿದ್ದರು ಮೊಗದಲ್ಲಿ ಆತ್ಮವಿಶ್ವಾಸದ ನಗುವಿತ್ತು. ಒಬ್ಬ ಕ್ಲೀನಾಗಿ ಶೇವ್‌ ಮೊಗದಲ್ಲಿ ಮಿಂಚಿದರೆ ಇನ್ನೊಬ್ಬ ಗಡ್ಡದಾರಿ, ಮತ್ತೊಬ್ಬ ಉದ್ದನೆಯ ಕೂದಲನ್ನು ಎತ್ತಿ ಕಟ್ಟಿಕೊಂಡಿದ್ದ. ಒಟ್ಟಾರೆ ಹೊಸ ಲುಕ್‌ನೊಂದಿಗೆ ವೇದಿಕೆಯ ಮೇಲೆ ಹುಡುಗರು ಕಾಣಿಸಿಕೊಂಡಿದ್ದರು.

ಸುಂದರ ಸುಂದರಿಯರ ನಡಿಗೆಯ ನಂತರ ವೇದಿಕೆಯ ಮೇಲೆ ಬೆಡಗಿಯೊಬ್ಬಳ ಕೈ ಹಿಡಿದುಕೊಂಡು ಬಂದಿದ್ದು ಪುಟಾಣಿ ಹುಡುಗಿ. ಬಿಳಿ ಬಣ್ಣದ ಹೂ ಹಿಡಿದುಕೊಂಡ ಆ ಹುಡುಗಿ ಮೊಗದಲ್ಲಿ ತುಸು ಗಾಬರಿ, ಭಯದ ನಗುವಿತ್ತು. ವೇದಿಕೆಯ ಮೇಲೆ ತನಗೆ ತೋಚಿದ ಹಾಗೆ ನಡೆದು ಅಲ್ಲಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡಳು.

‘ನನಗೆ ಈ ಸಂಗ್ರಹ ತುಂಬಾ ಇಷ್ಟವಾಯಿತು. ತುಂಬಾ ಕಲರ್‌ಫುಲ್‌ ಆಗಿದೆ. ಎಂಜಿ. ರಸ್ತೆಯಲ್ಲಿ ಈ ಮಳಿಗೆ ಆರಂಭವಾಗಿರುವುದು ಖುಷಿಯಾಗಿದೆ. ಸ್ನೇಹಿತರೊಂದಿಗೆ ವಾರಾಂತ್ಯದಲ್ಲಿ ಸುತ್ತಾಡಲು ಇಲ್ಲಿ ಬರುತ್ತೇನೆ. ಹಾಗಾಗಿ ಶಾಪಿಂಗ್‌ ಮಾಡಲು ಈ ಜಾಗ ಚೆನ್ನಾಗಿದೆ. ಎಲ್ಲ ಉಡುಪುಗಳು ಒಂದೇ ಕಡೆ ಸಿಗುವುದರಿಂದ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ ಶಾಪಿಂಗ್‌ ಮಾಡಲು ಬಂದ ಪ್ರೀತಿ.


‘ನಗರದಲ್ಲಿ ಇದು ನಮ್ಮ ಆರನೇ ಮಳಿಗೆ. ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಆಕರ್ಷಕ ಪಾಶ್ಚಿಮಾತ್ಯ ಶೈಲಿಯ ಸಿದ್ಧ ಉಡುಪುಗಳು ಸೇರಿದಂತೆ ಪಾದರಕ್ಷೆಗಳು, ಫ್ಯಾಷನ್‌ ಆಭರಣಗಳು ಹಾಗೂ ಹ್ಯಾಂಡ್‌ ಬಾಗ್‌ಗಳು ಇಲ್ಲಿ ಲಭ್ಯವಿದೆ ಎಂದು ವಿವರಿಸಿದರು ಪ್ಯಾಂಟಲೂನ್ಸ್‌ ಫ್ಯಾಷನ್‌ ಆಂಡ್‌ ರೀಟೆಲ್‌ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಶೀತಲ್‌ ಮೆಹ್ತಾ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.