ADVERTISEMENT

ಗೀತರಥದ ಮೇಲೆ ‘ದಳಪತಿ’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ದಳಪತಿ ಚಿತ್ರತಂಡ
ದಳಪತಿ ಚಿತ್ರತಂಡ   

‘ನನ್ನ ನಿರ್ದೇಶನದ ಎಲ್ಲ ಸಿನಿಮಾದ ಹಾಡುಗಳೂ ಸೂಪರ್‌ ಹಿಟ್ ಆಗಿವೆ. ಈ ಚಿತ್ರದ ಹಾಡುಗಳೂ ಅಷ್ಟೇ ಜನಮನ್ನಣೆ ಗಳಿಸಿಕೊಳ್ಳುತ್ತವೆ’ ಎಂದು ಅಪಾರ ಆತ್ಮವಿಶ್ವಾಸದಿಂದಲೇ ಹೇಳಿದರು ನಿರ್ದೇಶಕ ಪ್ರಶಾಂತ್ ರಾಜ್‌. ಅದು ದಳಪತಿ ಸಿನಿಮಾದ ಸಿ.ಡಿ. ಬಿಡುಗಡೆ ಕಾರ್ಯಕ್ರಮ. ಚಿತ್ರದ ಆರು ಹಾಡುಗಳನ್ನೂ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮಾಸ್ಟರಿಂಗ್‌ ಮಾಡಿಸಿದ್ದಾರೆ.

'ಯಾವುದೇ ಸಿನಿಮಾ ಯಶಸ್ವಿಯಾಗುವಲ್ಲಿ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಸಿನಿಮಾದ ಪ್ರತಿ ಹಾಡುಗಳೂ ಹೊಸ ರೀತಿಯ ಫೀಲ್‌ ಕೊಡುವಂತಿರಬೇಕು ಎಂಬ ಉದ್ದೇಶದಿಂದ ಆಸ್ಟ್ರೇಲಿಯಾದಲ್ಲಿ ಮಾಸ್ಟರಿಂಗ್‌ ಮಾಡಿಸಿದ್ದೇವೆ’ ಎಂದರು ಸಂಗೀತ ನಿರ್ದೇಶಕ ಚರಣ್ ರಾಜ್‌.

‘ಮುಂಬೈನ ಯಶ್‌ರಾಜ್‌ ಸ್ಟುಡಿಯೊದಲ್ಲಿಯೇ ಮಾಸ್ಟರಿಂಗ್‌ ಮಾಡಿಸಹುದಿತ್ತು. ಆದರೆ ಅದು ತುಂಬ ವೆಚ್ಚದಾಯಕ ಎಂಬ ಕಾರಣಕ್ಕೆ ಆಸ್ಟ್ರೇಲಿಯಾದಲ್ಲಿ ಮಾಡಿದೆವು’ ಎಂಬ ವಿವರಣೆಯನ್ನೂ ನೀಡಿದರು.

ADVERTISEMENT

ಚಿತ್ರತಂಡದ ಎಲ್ಲರೂ ಸಿನಿಮಾದ ಬಗ್ಗೆ ಯಾವ ಸುಳಿವೂ ಬಿಟ್ಟುಕೊಡಬಾರದು. ಬರೀ ಹಾಡುಗಳ ಬಗ್ಗೆಯಷ್ಟೇ ಮಾತಾಡಬೇಕು ಎಂದು ನಿರ್ಧಿಸಿದಂತಿತ್ತು.

ಹೊಸಬರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಸರಿಗಮಪ ಖ್ಯಾತಿಯ ಸಂಚಿತ್‌ ಹೆಗಡೆ, ಈಶ ಸುಖಿ, ಶ್ರೀಹರ್ಷ ಆಚಾರ್ ಎಂಬ ಹೊಸ ಪ್ರತಿಭೆಗಳಿಂದ ಹಾಡು ಹಾಡಿಸಲಾಗಿದೆ. ಇವರ ಜತೆಗೆ ಅನನ್ಯ ಭಟ್, ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ ಕೂಡ ಹಾಡಿದ್ದಾರೆ.

ಕೊನೆಯಲ್ಲಿ ಮಾತಿಗಿಳಿದ ನಾಯಕ ನಟ ಪ್ರೇಮ್‌, ‘ಹದಿನೈದು ವರ್ಷಗಳ ಸಿನಿಮಾ ಪಯಣದಲ್ಲಿ ಇದು 23ನೇ ಹೆಜ್ಜೆ. ನಾನು ನಿರ್ದೇಶಕರ ನಟ. ಈ ಚಿತ್ರದಲ್ಲಿಯೂ ನಿರ್ದೇಶಕರು ಹೇಳಿದ ಹಾಗೆಯೇ ನಟಿಸಿದ್ದೇನೆ. ‘ದಳಪತಿ’ಯಲ್ಲಿ ಒಳ್ಳೆಯ ಲವ್‌ ಸೆಂಟಿಮೆಂಟ್‌ ಮತ್ತು ಕಮರ್ಷಿಯಲ್ ಅಂಶ ಎರಡೂ ಬೆರೆತಿವೆ’ ಎಂದರು.

‘ನಿಮ್ಮ ಸಿನಿಮಾ’ ಬ್ಯಾನರ್‌ನಡಿ ತಯಾರಾಗಿರುವ ಈ ಚಿತ್ರ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.