ADVERTISEMENT

ಗುಡ್ಡದ ನೀರು ಬಂಡೆಗಳ ಚುಂಬನ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಸಂವೇದನಾಶೀಲ ಕಲಾವಿದೆ ಪ್ರೊ.ಎ.ಶಶಿಕಲಾ ಅವರ ಛಾಯಾಚಿತ್ರ, ರೇಖಾಚಿತ್ರ ಮತ್ತು ವರ್ಣಚಿತ್ರಗಳ ಏಕವ್ಯಕ್ತಿ ಪ್ರದರ್ಶನ `ಚಿತ್ರ ಚುರುಮುರಿ' ಇದೇ ಡಿ.15 ಮತ್ತು 16ರಂದು ನಡೆಯಲಿದೆ.

ಪ್ರಕೃತಿಗೆ ಮನಸೋಲದ ಕಲಾವಿದರು ಯಾರೂ ಇಲ್ಲ. ಶಶಿಕಲಾ ಕೂಡ ಇದಕ್ಕೆ ಹೊರತಾಗಿಲ್ಲ. ಬಾನು ಬುವಿಯನ್ನು ಬೆಸೆದಂತೆ ತೋರುವ ನಿಸರ್ಗದ ರಮಣೀಯತೆಯನ್ನು ಇವರು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ. ಅವರು ದೋಣಿಯ ಮೇಲೆ ಪಯಣಿಸುತ್ತಿರುವಾಗ ರಭಸವಾಗಿ ಹರಿಯುತ್ತಿರುವ ನೀರಿನ ಚಲನೆ ಹಾಗೂ ಎದುರಿನ ಗುಡ್ಡದಲ್ಲಿ ಹಸಿರಾಗಿರುವ ಮರಗಿಡಗಳನ್ನು ಒಂದೇ ಚೌಕಟ್ಟಿಗೆ ತಂದುಕೊಂಡು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿರುವ ಪರಿ ಅನನ್ಯ. ಎರಡು ಕಪ್ಪು ಬಂಡೆಗಳು ಪರಸ್ಪರ ಮುತ್ತಿಟ್ಟುಕೊಳ್ಳುತ್ತಿರುವಂತೆ ಕಾಣಿಸುವ ನಿಸರ್ಗದ ಸಹಜ ಚೆಲುವನ್ನು ಇವರು ಮೋಹಕವಾಗಿ ಕ್ಲಿಕ್ಕಿಸಿದ್ದಾರೆ.

ಬಂಡೆಯೊಳಗೆ ನಿಂತ ನೀರಿನ ಛಾಯಾಚಿತ್ರವನ್ನು ಸೆರೆಹಿಡಿಯುವಲ್ಲಿ ಇವರ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ನೆರಳು, ಬೆಳಕಿನ ಚಿಣ್ಣಾಟವನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಮದುವೆ ಮನೆಯಲ್ಲಿ ಮಾಡಿಟ್ಟ ಶೇವಿಗೆ, ಮನೆಯೊಳಗೆ ಅಡ್ಡಾದಿಡ್ಡಿಯಾಗಿ ಬಿದ್ದಿರುವ ಶೂ ಕೆಳಗೆ ಸಿಕ್ಕು ನಲುಗುತ್ತಿರುವ ಹೆಣ್ಣು ಬೊಂಬೆ, ಹರಕೆಯ ನೆಪದಲ್ಲಿ ಉಟ್ಟಬಟ್ಟೆಯನ್ನೆಲ್ಲಾ ತಂದು ನದಿಗೆ ಎಸೆದ ಭಕ್ತರ ಬಟ್ಟೆಗಳನ್ನೆಲ್ಲಾ ಹೆಕ್ಕಿ ತಂದು ನದಿ ತಟಕ್ಕೆ ತಂದು ರಾಶಿಹಾಕುತ್ತಿರುವ ಅಂಬಿಗ, ಜಾರುಬಂಡೆಯಂಥ ಮಹಡಿಯ ಇಳಿಜಾರಿನಲ್ಲಿ ಬೈಕ್ ಇಳಿಸುತ್ತಿರುವ ಬೈಕ್‌ಸವಾರನ ಕಸರತ್ತು, ಧಗಧಗಿಸುತ್ತಿರುವ ಒಲೆಯ ಮೇಲೆ ರಂಧ್ರಗಳಿರುವ ದೊಡ್ಡ ಸೌಟಿನಲ್ಲಿ ಉಕ್ಕುಕ್ಕಿ ಬರುತ್ತಿರುವ ಎಣ್ಣೆ, ದೊಂಬರಾಟದಲ್ಲಿ ಕುಣಿದು ಕುಣಿದು ಸುಸ್ತಾದ ಮಂಗವೊಂದು ಶ್ವೇತ ವಸ್ತ್ರದ ಮೇಲೆ ಹಾಯಾಗಿ ನಿದ್ರಿಸುತ್ತಿರುವ ದೃಶ್ಯಗಳೆಲ್ಲಾ ಇವರ ಕ್ಯಾಮೆರಾ ಕಣ್ಣಿಗೆ ಸಿಕ್ಕು ಅಪರೂಪದ ಚಿತ್ರಕಾವ್ಯವಾಗಿವೆ.

ಪ್ರತಿವರ್ಷ ಲಾಲ್‌ಬಾಗ್‌ನಲ್ಲಿ ನಡೆವ ಫಲಪುಷ್ಪ ಪ್ರದರ್ಶನದ ಸೊಬಗು ಲಕ್ಷಾಂತರ ಮಂದಿಯನ್ನು ಸೆಳೆಯುತ್ತದೆ. ಮೂರು ನಾಲ್ಕು ದಿನ ನಡೆವ ಮೇಳದಲ್ಲಿ ನೂರಾರು ಬಗೆಯ ಹೂಗಳು ನಗು ಬೀರುತ್ತಾ ಎಲ್ಲರ ಮನಕದಿಯುತ್ತವೆ. ಮೇಳ ಮುಗಿದ ಮೇಲೆ ಆ ಹೂಗಳ ಬಗ್ಗೆ ಯಾರೂ ತಲೆಕಡಿಸಿಕೊಳ್ಳಲು ಹೋಗುವುದಿಲ್ಲ. ಶಶಿಕಲಾ ಅವರು ಮೇಳವನ್ನು ವಿಭಿನ್ನವಾಗಿ ಚಿತ್ರಿಸಿದ್ದಾರೆ.
ತಾಜ್‌ಮಹಲ್‌ನ ಆಕಾರದಲ್ಲಿ ವಿನ್ಯಾಸಗೊಂಡಿದ್ದ ಹೂಗಳು ಬಾಡಿ, ಕೊಳೆತು ನಿಂತ ಚಿತ್ರಣವದು.

ಅಂದಹಾಗೆ, ಪ್ರದರ್ಶನವನ್ನು ನಟಿ ಪವಿತ್ರಾ ಲೋಕೇಶ್ ಶನಿವಾರ ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಖ್ಯಾತ ಛಾಯಾಚಿತ್ರಗ್ರಾಹಕ ಟಿ.ಎನ್.ಎ.ಪೆರುಮಾಳ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಗ್ಯಾಲರಿ ನಂ.3, ಕುಮಾರಕೃಪಾ ರಸ್ತೆ. ಎರಡೂ ದಿನ ಬೆಳಿಗ್ಗೆ 10.30ರಿಂದ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.