ADVERTISEMENT

ಗುರುವಿಗೆ ನಾದ ನಮನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಸಪ್ತಕ  ಹಾಗೂ ಗುರು ಗಾನಯೋಗಿ ಪಂಚಾಕ್ಷರ ಸ್ಮೃತಿ ಸಂಯುಕ್ತವಾಗಿ ಹಾನಗಲ್ ಕುಮಾರ ಸ್ವಾಮಿಯವರ ಸ್ಮರಣಾರ್ಥ ಭಾರತೀಯ ವಿದ್ಯಾ ಭವನದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಿತ್ತು. ಆರಂಭದಲ್ಲಿ ಗುರುಸಂಗಪ್ಪ ಹೂಗಾರ ಅವರ  ಶಿಷ್ಯರಾದ ಎಂ. ನಂದೀಶ್, ಚಂದ್ರಶೇಖರ್ ಕೆ.ಎಂ. ಹಾಗೂ ಆಕಾಶ್ ಅವರಿಂದ ತಬಲಾ ತರಂಗ ಕಛೇರಿ ನಡೆಯಿತು.

ಗೀತಾ ಹೆಗಡೆಯವರ ಶಿಷ್ಯೆ, ಭರವಸೆಯ ಯುವ ಗಾಯಕಿ ರಿತಿಷಾ ಅವರಿಂದ ಗಾಯನ ಕಾರ್ಯಕ್ರಮ  ನಡೆಯಿತು. ತಮ್ಮ ಸುಶ್ರಾವ್ಯ ಕಂಠಸಿರಿಯಲ್ಲಿ ರಾಗ್ ಪೂರಿಯಾ, ವಿಲಂಬಿತ ಏಕತಾಳದಲ್ಲಿ ಏ ಪಿಯಾ ಗುಣವಂತ..  ಬಂದಿಶ್ ಅನ್ನು ವಿಸ್ತಾರವಾಗಿ ಆಲಾಪ ಮಾಡಿದರು. ಜೀವ ಸ್ವರಗಳಿಗೆ ಒತ್ತು ನೀಡಿ ರಾಗಾಂಗ ಶುದ್ಧಿಯಿಂದ ಹಾಡಿದ ಪರಿ ಹಾಗೂ ಧೃತ್ ಲಯದಲ್ಲಿ ಬೋಲ್ ತಾನ್‌ಗಳು ಹಾಗೂ ತಿಹಾಯಿಗಳು ಸುಂದರವಾಗಿ ಮೂಡಿಬಂದವು.

ನಂತರ ಲಘು ಶಾಸ್ತ್ರೀಯ ಧಾಟಿಯ ಪಂ. ಜಿತೇಂದ್ರ ಅಭಿಷೇಕಿ ಸಂಯೋಜನೆಯಲ್ಲಿ ಹಾಡಿದ `ಕೀ ತಕ್ ಧೀನ್' ಹಾಗೂ  ಮೀರಾ ಭಜನೆ  ರಿತಿಷಾಳ ಪ್ರತಿಭೆಗೆ ಸಾಕ್ಷಿಯಾಗಿತ್ತು. ಇವರಿಗೆ  ತಬಲಾದಲ್ಲಿ ಸುನೀತ್ ನಾಯಕ್ ಹಾಗೂ ಹಾರ್ಮೋನಿಯಂನಲ್ಲಿ ಪಂಚಾಕ್ಷರಿ ಹಿರೇಮಠ ಅವರ ಸಹಕಾರ ಉತ್ತಮವಾಗಿತ್ತು.

ನಂತರ ಮುಂಬೈಯ ಪಂ.ಸಂಜೀವ್ ಚಿಮ್ಮಲಗಿ ಅವರು ಋತುರಾಗವಾದ `ಗೌಡ ಮಲ್ಹಾರ'ದಲ್ಲಿ ತಾಳ ತಿಳವಾಡದಲ್ಲಿ ಕಾಹೇ ಹೋ ಪೀತಮ್ ಘರ ನಹಿ ಆಯೇ.. ಚೀಜನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿ ವಿಶಿಷ್ಟ ಬೋಲ್ ಆಲಾಪ್ ಗಮಕ್ ತಾನ್‌ಗಳ ಮೂಲಕ ತಮ್ಮ ಪ್ರೌಢಿಮೆಯನ್ನು ಮೆರೆದರು. 

ಧೃತ್ ತೀನ್‌ತಾಳದಲ್ಲಿ ಋತು ಆಯೀ ಬದರಿಯಾ ಸಾವನಕೀ.. ಬಂದಿಶ್‌ನಲ್ಲಿ ಇರುವ ಮಳೆಗಾಲದ ವರ್ಣನೆಯನ್ನು ಸ್ವರಾಲಂಕಾರದಲ್ಲಿ ತಾಳ ವೈವಿಧ್ಯ ಸಹಿತ ಪ್ರಸ್ತುತ ಪಡಿಸಿದರು.

ಅವರ  ಗುರುಗಳಾದ ಸಿ.ಆರ್. ವ್ಯಾಸ ಅವರ  ನೆನಪಿಗೋ ಎಂಬಂತೆ, ಧ ನಿ ಕೋ ನಿ ಕಲ್ಯಾಣ  ಸರಸ ಸುಲರು..  ಚೀಜನ್ನು ಹಾಗೂ ಪುರಂದರದಾಸರ ಕೃತಿ  ಕಂಗಳಿವ್ಯಾತಕೋ..  ಹಾಗೂ ಭೈರವಿಯಲ್ಲಿ ಭಜನ್ ಹಾಡಿ ಶ್ರೋತೃಗಳ ಮನ ತಣಿಸಿದರು.

ಇವರಿಗೆ ತಬಲಾ ಸಹಕಾರದಲ್ಲಿ ಗುರುಮೂರ್ತಿ ವೈದ್ಯ, ಹಾರ್ಮೋನಿಯಂನಲ್ಲಿ ರವೀಂದ್ರ ಕಾಟೋಟಿ ಅವರ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.