ADVERTISEMENT

ಚಲನಚಿತ್ರೋಪಕರಣಗಳ ಅಪರೂಪದ ಸಂಗ್ರಾಹಕ ಕಿಟ್ಟಿ

ಹಳೆಯ ನೆನಪುಗಳನ್ನು ಸ್ಮರಿಸಿಕೊಳ್ಳುವ ವ್ಯಕ್ತಿ

ಜೆ.ಪಿ.ಕೋಲಾರ
Published 12 ಮಾರ್ಚ್ 2017, 19:30 IST
Last Updated 12 ಮಾರ್ಚ್ 2017, 19:30 IST
ಚಲನಚಿತ್ರೋಪಕರಣಗಳ  ಅಪರೂಪದ ಸಂಗ್ರಾಹಕ ಕಿಟ್ಟಿ
ಚಲನಚಿತ್ರೋಪಕರಣಗಳ ಅಪರೂಪದ ಸಂಗ್ರಾಹಕ ಕಿಟ್ಟಿ   
ಇಂದಿಗೆ ಸರಿಯಾಗಿ 84 ವರ್ಷಗಳ ಹಿಂದೆ ಬೆಂಗಳೂರಿನ ಕೋಟೆ ಪ್ರದೇಶದ ಪ್ಯಾರಾಮೌಂಟ್ (ದೊಡ್ಡಣ್ಣ ಹಾಲ್) ಚಿತ್ರ ಮಂದಿರದಲ್ಲಿ ಕನ್ನಡದ ಮಾತು, ಹಾಡು ಒಳಗೊಂಡ ಚಿತ್ರವೊಂದು ತೆರೆಕಂಡಿತ್ತು. ಚಿತ್ರದ ಹೆಸರು ‘ಸತಿ ಸುಲೋಚನ’ ಅದು ಕನ್ನಡದ ಮೊದಲ ವಾಕ್ಚಿತ್ರ (03–03–1934).
 
ಈ ನೆಲದ ಸೊಗಡಿನ ಜಾನಪದ ಹಾಡು, ಕುಣಿತದ ಬಳಿಕ ಜನರನ್ನು ರಂಜಿಸುತ್ತಿದ್ದ ನಾಟಕಗಳು ಜನಪ್ರಿಯವಾಗಿದ್ದ ಆ ಸಂದರ್ಭದಲ್ಲಿ ಹೊಸ ಆವಿಷ್ಕಾರ ಚಲನಚಿತ್ರ ಲೋಕ ತೆರೆದುಕೊಂಡಿದ್ದು, ಮೂಕಿಯಾಗಿ ಕ್ರಮೇಣ ಧ್ವನಿಯೂ ಸೇರಿದ್ದು ಅದೀಗ ವಿಶ್ವವ್ಯಾಪಿಯಾಗಿ ಆವರಿಸಿಕೊಂಡಿರುವುದು ಇತಿಹಾಸದಲ್ಲೇ ಸೇರಿ ಹೋಗಿರುವ ಸಂಗತಿ.
 
ವಿಜ್ಞಾನ, ಕಲೆ ಸೇರಿ ಶುರುವಾದ ಚಲನಚಿತ್ರಕ್ಕೆ ತಂತ್ರಜ್ಞಾನ ಪ್ರವೇಶ ಪಡೆದು ಹೊಸ ಆಯಾಮಗಳನ್ನು ಸೃಷ್ಟಿಸಿ ಟೆಂಟ್‌ನಿಂದ ಮಲ್ಟಿಪ್ಲೆಕ್ಸ್‌ವರೆಗೆ ಸುಗಮವಾಗಿ ಸಾಗಿ ಬಂದಿದೆ ಸಿನಿಮಾ ಜಗತ್ತು.
 
ಚಿತ್ರೀಕರಣ, ಧ್ವನಿ ಮುದ್ರಣ, ಕಪ್ಪು ಬಿಳುಪು, ವರ್ಣ ಸಂಸ್ಕರಣೆ, ರೀಲು ಟೇಪ್‌ಗಳೆಲ್ಲ ನೇಪಥ್ಯ ಸರಿದು ಕಂಪ್ಯೂಟರ್, ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಬಂದು ಮನೆಯಂಗಳಕ್ಕೆ ಮಾತ್ರವಲ್ಲ ಅಂಗೈ ಅಗಲದ ಮೊಬೈಲ್‌ನಲ್ಲೂ ಚಲನಚಿತ್ರ ನೋಡುವಂತಹ ಕಾಲ ಇದು.
 
ಚಿತ್ರ ನಿರ್ಮಾಣಕ್ಕೆ ಉಪಯೋಗವಾಗುತ್ತಿದ್ದ ಅನೇಕ ಉಪಕರಣಗಳಲ್ಲಿ ಬದಲಾವಣೆಗಳಾಗಿವೆ. ಹೊಸ ಹೊಸ ಯಂತ್ರೋಪಕರಣಗಳು ಬಳಕೆಗೆ ಬಂದಿವೆ. ಮೂಲೆಗೆ ಸೇರಿದ ಚಿತ್ರ ತಯಾರಿಕಾ ಪರಿಕರಗಳನ್ನು ಸಂಗ್ರಹಿಸುತ್ತ ಹಳೆಯ ನೆನಪುಗಳನ್ನು ಸ್ಮರಿಸಿಕೊಳ್ಳುವ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿದ್ದಾರೆ. ಅವರೇ ಸ್ವ್ಯಾನ್ ಕೃಷ್ಣಮೂರ್ತಿ (ಕಿಟ್ಟಿ)
 
ಬೆಂಗಳೂರಿನ ಮೊದಲ ಬಡಾವಣೆ ಚಾಮರಾಜಪೇಟೆಯಲ್ಲಿರುವ ಕಿಟ್ಟಿ ಅವರ ಮುದ್ರಣಾಲಯ ಕಚೇರಿಯಲ್ಲಿ ಹತ್ತು ಹಲವು ಪುರಾತನ ವಸ್ತು ವಿಶೇಷಗಳಿವೆ. ಅವುಗಳಲ್ಲಿ ವೈಜ್ಞಾನಿಕ ಉಪಕರಣಗಳೇ ಹೆಚ್ಚು. ನಾಲ್ಕಾರು ವಿಷಯಗಳಿಗೆ ಸಂಬಂಧಿಸಿದ ಹಳೆಯ ಪದಾರ್ಥಗಳನ್ನು ಬೇರೆ ಬೇರೆ ಕಡೆಗಳಿಂದ ಆಯ್ದು ತಂದು ಒಪ್ಪವಾಗಿ ಜೋಡಿಸಿಡುವುದು ಕಿಟ್ಟಿ ಅವರ ರೂಢಿ. ಅವುಗಳಲ್ಲಿ ಎದ್ದು ಕಾಣುವುದೇ ಚಲನಚಿತ್ರಗಳಿಗೆ ಸಂಬಂಧಿಸಿದ ವಸ್ತುಗಳು.
 
ಇಂತಹವುಗಳಲ್ಲಿ ಗಮನ ಸೆಳೆಯುವುದೇ ಆನೆ ಕಿವಿಯಂತಹ ಗ್ರಾಮೋಪೋನ್‌ಗಳು. ಹಾಡಿನ ತಟ್ಟೆಗಳನ್ನು ತಿರುಗಿಸಿ ಸೂಜಿಗಳ ಮೂಲಕ ಧ್ವನಿ ಹೊರಡಿಸುವ ಏಳೆಂಟು ಬಗೆಯ ಗ್ರಾಮೋಫೋನ್‌ಗಳು ಕಿಟ್ಟಿಯವರ ಖಜಾನೆಯಲ್ಲಿವೆ. ವಿದ್ಯುತ್ ಚಾಲಿತ, ಹ್ಯಾಂಡಲ್ ಸಹಾಯದಿಂದ ನಡೆಯುವ ಗ್ರಾಮೋಫೋನ್‌ಗಳು ಇವುಗಳಲ್ಲಿ ಸೇರಿವೆ.
 
ರೇಡಿಯೋ ಸಹಿತ ಗ್ರಾಮೋಫೋನ್, ವಿವಿಧ ಅಳತೆಯ ಹಾಡು ತಟ್ಟೆಗಳ ಬಳಸುವ ಯಂತ್ರಗಳೊಟ್ಟಿಗೆ ದೊಡ್ಡ ಧ್ವನಿ ಮುದ್ರಣ ಉಪಕರಣವೂ ಇಲ್ಲಿದ್ದು ಹಲವಾರು ಸ್ಟಿಲ್ ಕ್ಯಾಮೆರಾಗಳ ಸಂಗ್ರಹ ಕಾಣ ಬಹುದಾಗಿದೆ.
 
ಸಮಯ ಹೊಂದಿಸಿಕೊಂಡು ಬೇರೆ ಬೇರೆ ನಗರ–ಪಟ್ಟಣಗಳ ಹಳೇ ವಸ್ತುಗಳ ಮಾರುಕಟ್ಟೆಗೆ ಹೋಗಿ ಸೂಕ್ತವಾದುದನ್ನು ಆರಿಸಿ ತರುವ ಹವ್ಯಾಸ ಇಟ್ಟುಕೊಂಡ ಕೃಷ್ಣಮೂರ್ತಿ ಚಲನಚಿತ್ರ ನಿರ್ಮಾಣಕ್ಕೆ ಉಪಯೋಗಿಸುವಂತಹ ಪರಿಕರಗಳನ್ನು ಕೂಡಿಡುವ ಉದ್ದೇಶ ಹೊಂದಿದ್ದಾರೆ. ಚಲನಚಿಚತ್ರಗಳಿಗೆ ಸಂಬಂಧಿಸಿದ ಯಂತ್ರಗಳನ್ನು ಸಂಗ್ರಹಿಸುವುದರೊಂದಿಗೆ ಚಿತ್ರ ಜಗತ್ತಿಗೆ ಸಂಬಂಧಪಟ್ಟ ಅತ್ಯುತ್ತಮ ಗ್ರಂಥಗಳನ್ನು ಕಲಾತ್ಮಕವಾಗಿ ಮುದ್ರಿಸಿರುವುದು ಸ್ಪ್ಯಾನ್ ಕಿಟ್ಟಿಯ ಇನ್ನೊಂದು ವಿಶೇಷ.
 
ಕನ್ನಡ ಚಿತ್ರಕ್ಕೆ 75 ವರ್ಷ ತುಂಬಿದ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಿಸಿದ ಎಲ್ಲಾ 75 ಸಾಧಕರ ಕೃತಿಗಳನ್ನು ಮುದ್ದಿಸಿ ಕೊಟ್ಟದ್ದು ಇದೇ ಕಿಟ್ಟಿ. ಮಂಡಳಿ ಪರಿಷ್ಕರಿಸಿ ಹೊರತಂದ ಕನ್ನಡ ಚಿತ್ರ ಚರಿತ್ರ ಬೃಹತ್ ಹೊತ್ತಿಗೆಗಳನ್ನು ಅಚ್ಚು ಮಾಡಿ ಕೊಟ್ಟ ಕಿಟ್ಟಿ ಈವರೆಗೆ ಸಿನಿಮಾಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.