ADVERTISEMENT

ಚಳಿಗೆ ಕೂದಲು ಜೋಪಾನ

ಚೆಲುವಿನ ಚಿತ್ತಾರ

ಎಸ್.ರಶ್ಮಿ
Published 12 ಡಿಸೆಂಬರ್ 2013, 19:30 IST
Last Updated 12 ಡಿಸೆಂಬರ್ 2013, 19:30 IST

ಚಳಿಗಾಲದಲ್ಲಿ ಚರ್ಮಕ್ಕೆ ಮಾತ್ರ ಗಮನ ನೀಡುತ್ತೇವೆ. ಚರ್ಮ ಒಣಗದಂತೆ, ತುಟಿ ಒಡೆಯದಂತೆ ಕಾಪಿಡುತ್ತೇವೆ. ಆದರೆ ಕೂದಲ ಬೇರುಗಳನ್ನು ನಿರ್ಲಕ್ಷಿಸುತ್ತೇವೆ. ಚಳಿಗಾಲದಲ್ಲಿ ಕೂದಲ ರಕ್ಷಣೆ ಎಂದರೆ ಕೇಶ ವಿನ್ಯಾಸ ಮಾತ್ರವಲ್ಲ, ತಲೆ ಬುರುಡೆ ಶುಷ್ಕವಾಗದಂತೆ, ತುರಿಕೆಯುಂಟಾಗದಂತೆ ನೋಡಿಕೊಳ್ಳುವುದೂ ಆಗಿದೆ. ಈ ನಿಟ್ಟಿನಲ್ಲಿ ವೈದ್ಯೆ ಡಾ.ವೃಷಾಲಿ ಢೋಲೆ ಏನು ಹೇಳುತ್ತಾರೆ ಗೊತ್ತೆ?

ಮೊದಲು ಬೇರುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ: ಕೂದಲಿನ ಬುಡಕ್ಕೆ ಅಥವಾ ನೇರವಾಗಿ ಬೇರುಗಳಿಗೆ ಯಾವುದೇ ಬಗೆಯ ವ್ಯಾಕ್ಸ್‌, ಜೆಲ್‌ ಅಥವಾ ಕಂಡೀಶನರ್‌ಗಳ ನೇರವಾಗಿ ಲೇಪಿಸುವುದನ್ನು ಆದಷ್ಟು ಕಡಿಮೆ ಮಾಡಿ. ಲೇಪನ ಮಾಡುವುದಾದರೆ ಕೂದಲು ಬುಡದಿಂದ ಇನಿತು ಅಂತರ ಕಾಯ್ದುಕೊಳ್ಳುವುದು ಒಳಿತು. ಇಲ್ಲದಿದ್ದರೆ ಇವು ಬೇರುಗಳ ಬದಿ ಇರುವ ರಂಧ್ರಗಳನ್ನು ಮುಚ್ಚುವುದರಿಂದ ಕೂದಲ ಬೆಳವಣಿಗೆಯ ಮೇಲೆ ಪರಿಣಾಮ ಉಂಟಾಗಬಹುದು. ಆದರೆ ಕೂದಲ ಅಡಿಯ ತಲೆಬುರುಡೆಯ ಚರ್ಮವನ್ನು ಸ್ವಚ್ಛವಾಗಿಡುವುದು ಅತಿ ಮುಖ್ಯ.

ಕೇಶರಕ್ಷಕಗಳ ಬಗ್ಗೆ ಎಚ್ಚರವಿರಲಿ: ಚಳಿಗಾಲದಲ್ಲಿ ಕೋಮಲವಾದ ಶಾಂಪು ಬಳಸುವುದು, ಮಾಯಿಶ್ಚರೈಸರ್‌ ಇರುವ ಕಂಡೀಶನರ್‌ ಬಳಸುವುದು ಉತ್ತಮ. ಕೂದಲು ನಡುವೆಯೇ ಕತ್ತರಿಸುವ ಸಾಧ್ಯತೆಗಳು ಈ ಋತುವಿನಲ್ಲಿ ಸಾಮಾನ್ಯವಾಗಿರುತ್ತದೆ. ಇದಕ್ಕೆ ಕೂದಲು ಶುಷ್ಕಗೊಳ್ಳುವುದೇ ಕಾರಣವಾಗಿರಬಹುದು. ಮಾಯಿಶ್ಚರೈಸರ್‌ ಇರುವ ಉತ್ಪನ್ನ ಬಳಸುವುದರಿಂದ ಮಧ್ಯದಲ್ಲಿಯೇ ತುಂಡರಿಸುವುದನ್ನು ತಡೆಯಬಹುದು. ಆದರೆ ತಮ್ಮ ಕೂದಲ ಬಗೆಯನ್ನು ಅನುಸರಿಸಿ ಶಾಂಪು ಹಾಗೂ ಕಂಡೀಶನರ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಆಹಾರ ಪದ್ಧತಿ: ಚಳಿಗಾಲದಲ್ಲಿ ಕುರುಕಲು ತಿನ್ನುವುದು ಹೆಚ್ಚು. ನಾಲಗೆ ಚಪಲಕ್ಕೆ ಕಟ್ಟುಬಿದ್ದು ಕರಿದ ತಿಂಡಿ, ಜಂಕ್‌ ಹಾಗೂ ಫಾಸ್ಟ್‌ ಫುಡ್‌ ಸೇವನೆ ಮಾಡಬಾರದು. ಸಮತೋಲಿತ ಆಹಾರವಿದ್ದು, ಪ್ರೊಟೀನ್‌ಯುಕ್ತ ಆಹಾರ ಸೇವಿಸಿದರೆ ಕೂದಲ ಹೊಳಪು ಹೆಚ್ಚುತ್ತದೆ. ಮಾಂಸಾಹಾರಿಗಳು ಮೀನು, ಮೊಟ್ಟೆಯನ್ನು ಸೇವಿಸಬಹುದು. ಸಸ್ಯಾಹಾರಿಗಳು ಮೊಳಕೆಯೊಡೆದ ಕಾಳುಗಳು ತರಕಾರಿಗಳನ್ನು ಹೇರಳವಾಗಿ ಸೇವಿಸಬೇಕು.

ನೈಸರ್ಗಿಕವಾಗಿರಲಿ: ಉದ್ದ ಕೂದಲುಳ್ಳವರು ಚಳಿಗಾಲದಲ್ಲಿ ಶೀತದಿಂದ ರಕ್ಷಣೆ ಪಡೆಯಲು ತಲೆ ತೊಳೆದಾಗಲೆಲ್ಲ ಹೇರ್‌ ಡ್ರೈಯರ್‌ ಬಳಸುವುದು ಸಾಮಾನ್ಯ. ಮನೆಯಿಂದಾಚೆ ಹೊರಡುವ ಮುನ್ನ ನೀರಿಳಿಯದೇ ಇರಲಿ ಎಂಬ ಎಚ್ಚರಿಕೆ ಎಲ್ಲರದು. ಆದರೆ ಕೆಲವೊಮ್ಮೆ ಸ್ಟ್ರೇಟ್ನಿಂಗ್‌ ಹಾಗೂ ಡ್ರೈಯರ್‌ ಬಳಸುವುದು ಅಪಾಯಕಾರಿಯಾಗಬಹುದು. ಅತಿ ಹೆಚ್ಚಿನ ಉಷ್ಣದಿಂದ ಕೂದಲಿಗೆ ಹಾನಿಯಾಗುತ್ತದೆ.
ಬೇಗ ಒಣಗಲಿ ಎಂದು ಉಜ್ಜುವುದಾಗಲೀ, ಕೊಡುವುದಾಗಲೀ ಮಾಡಬಾರದು. ಇದರಿಂದ ಕೂದಲು ಕತ್ತರಿಸುವ ಸಾಧ್ಯತೆಗಳೇ ಹೆಚ್ಚು.
ಸ್ಟೈಲಿಗಾಗಿ ಕೂದಲು ಉಂಗುರದಂತೆ ಗುಂಗುರು ಆಗಿಸಿಕೊಳ್ಳುವುದಾಗಲಿ, ಅಲೆ ಕೂದಲನ್ನು ನೇರವಾಗಿಸಿಕೊಳ್ಳುವುದಾಗಲೀ ಮಾಡಿದರೆ ಕೂದಲಿನ ಕೋಮಲತೆ ಹಾಗೂ ತೇವಾಂಶ ಹೀರಿಕೊಳ್ಳುತ್ತವೆ. ಯಾವುದೇ ರೀತಿಯ ಕೃತಕ ಅಲಂಕಾರಗಳ ಬದಲು ನೈಸರ್ಗಿಕವಾಗಿರಲು ಪ್ರಯತ್ನಿಸಿ. ಇಲ್ಲದಿದ್ದಲ್ಲಿ ಕೂದಲು ಸೀಳುವಿಕೆ, ಉದುರುವಿಕೆ ಮತ್ತು ಜೀವಂತಿಕೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕೂದಲಿಗೆ ಪದೇಪದೇ ಬಣ್ಣ ಹಚ್ಚುವುದೂ ಸೂಕ್ತವಲ್ಲ.

ಬಿಸಿನೀರು ಸ್ನಾನ ಬೇಡ: ಸುಡುಸುಡುವ ನೀರು ಚಳಿಗಾಲದಲ್ಲಿ ಹಿತವೆನಿಸಿದರೂ ಮೈಗೆ, ಕೂದಲಿನ ಶತ್ರು ಎಂಬುದನ್ನು ಮರೆಯುವಂತಿಲ್ಲ. ಚರ್ಮದ ತೇವಾಂಶವನ್ನು ಕಳೆದು, ಶುಷ್ಕವಾಗಿಸುತ್ತದೆ ಬಿಸಿನೀರಿನ ಬಳಕೆ. ತುಸು ಬಿಸಿನೀರು ಅಥವಾ ತಣ್ಣೀರಿನ ಸ್ನಾನವೇ ತಲೆ ಕೂದಲಿಗೆ ಹಿತ.

ಶಾಂತವಾಗಿರಿ: ಧಾವಂತದ ಜೀವನ, ಬದುಕಿನ ಒಳಗುದಿಗಳು ಚಳಿಗಾಲದಲ್ಲಿ ಮನಸು ಹೆಚ್ಚು ಮುದುಡುವಂತೆ ಮಾಡುತ್ತವೆ. ಇದಕ್ಕೆ ಈ ಋತುಮಾನದಲ್ಲಿ ಹಾರ್ಮೋನ್‌ನಲ್ಲಿ ಆಗುವ ವ್ಯತ್ಯಾಸವೂ ಕಾರಣವಾಗಿರುತ್ತದೆ. ಅನಾವಶ್ಯಕ ಒತ್ತಡ, ಖಿನ್ನತೆಗೆ ಒಳಗಾಗದಂತೆ ಮನಸನ್ನು ನಿಗ್ರಹಿಸುವುದು ರೂಢಿಸಿಕೊಳ್ಳಬೇಕು.

ಎಣ್ಣೆ ಮಸಾಜ್‌ ಮಾಡಿಕೊಳ್ಳುವುದು ಉತ್ತಮ ಪರಿಹಾರವಾಗಬಲ್ಲುದು. ಆಲಿವ್‌ ಆಯಿಲ್‌ ಇಲ್ಲವೇ ತೆಂಗಿನೆಣ್ಣೆಯನ್ನು ಉಗುರು ಬಿಸಿ ಮಾಡಿಕೊಂಡು ನೆತ್ತಿಗೆ ಎಣ್ಣೆಯುಣ್ಣಿಸಬೇಕು. ತಲೆಗೆ ಹಗುರುವಾದ ಮಸಾಜ್‌ ಮಾಡಿದರೆ ಹೊಟ್ಟು ಸಹ ನಿವಾರಣೆಯಾಗುತ್ತದೆ. ತಲೆಬುರುಡೆಯೂ ಶುಷ್ಕವಾಗದು. ಆದರೆ ಎಣ್ಣೆ ತಲೆಯಲ್ಲಿ ಉಳಿಯದಂತೆ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಫಂಗಸ್‌ ಅಥವಾ ಸೋಂಕು ಆಗುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ. 
ಮಾಹಿತಿಗೆ: ಡಾ. ವೃಷಾಲಿ ಢೋಲೆ 9448833736/2529 9002/3.
.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT