`ರೊಟ್ಟಿ ಅಂಗಡಿ ಕಿಟ್ಟಪ್ಪ, ನನಗೊಂದು ರೊಟ್ಟಿ ತಟ್ಟಪ್ಪ, ಪುಟಾಣಿ ರೊಟ್ಟಿ ಕೆಂಪಗೆ ಸುಟ್ಟು...~
`ಹತ್ತು ಹತ್ತು ಇಪ್ಪತ್ತು, ತೊಟಕೆ ಹೋದನು ಸಂಪತ್ತು..~
`ನಾನು ಒಬ್ಬ ಮಂಗಣ್ಣ, ನನಗೆ ಉಂಟೂ ಬಾಲ, ನಾನು ಹಾಕುತ್ತೇನೆ ಲಾಗ...~
`ಚಿನ್ನೂ, ಯಾಕೆ ಎಲ್ರೂ ಅಲ್ಲಿ ಗುಂಪು ಸೇರಿದಾರೆ?~.
ನಂಗೂ ಗೊತ್ತಿಲ್ಲ ಪಪ್ಪು. ಬಾ, ಏನೂ ಅಂತ ನೋಡೋಣ.
ಯಾರೋ ಡ್ಯಾನ್ಸ್ ಮಾಡ್ತಿದಾರೆ. ಯಾರದು ಚಿನ್ನು?
ಅದು ಮಂಗಣ್ಣ ಪಪ್ಪು!
ಪಪ್ಪು, ಇಲಿಗೆ ಮೊದಲ ಶತ್ರು ಯಾರು?
ಬೆಕ್ಕು.
ಸರಿ. ಬೆಕ್ಕಿಗೆ ಮೊದಲ ಶತ್ರು ಯಾರು?
ನಾನೇ. (ನಾಯಿ)
ಚಿನ್ನೂ, ಅಲ್ನೋಡು. ಅದು ಎಷ್ಟು ಮಧುರವಾಗಿ ಕೂಗುತ್ತಿದೆ. ಏನದು?
ಅದು ಕೋಗಿಲೆ ಪಪ್ಪು...
ಹೀಗೆ, ರಿಲಯನ್ಸ್ ಟೈಂ ಔಟ್ ಮಳಿಗೆಯ ದೊಡ್ಡ ಪರದೆ ಮೇಲೆ 3ಡಿ ಅನಿಮೇಷನ್ ಕನ್ನಡ ಶಿಶು ಗೀತೆಗಳು ಹಾಗೂ ಅದರ ನಡು ನಡುವೆ ಬರುತ್ತಿದ್ದ ಸಂಭಾಷಣೆಯನ್ನು ಕೇವಲ ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಆಸ್ವಾದಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಡಿವಿಡಿಯಲ್ಲಿರುವ ಚಿನ್ನು ಪಾತ್ರಧಾರಿ ಎಲ್ಲರನ್ನೂ ಸೆಳೆದಳು. ರೇಶಿಮೆ ಜರಿಯುಳ್ಳ ಲಂಗ-ರವಿಕೆ ತೊಟ್ಟಿದ್ದ ಈ ಮುದ್ದು ಹುಡುಗಿಗೆ ಎಲ್ಲರೂ ಮನಸೋತಿದ್ದರು. `ಚಿನ್ನುವನ್ನು ನೋಡುತ್ತಿದ್ದರೆ ಎತ್ತಿ ಮುದ್ದಾಡಬೇಕು ಅಂತ ಆಸೆಯಾಗುತ್ತದೆ~ ಎಂದು ಅಲ್ಲಿ ಕೆಲವರು ಮಾತನಾಡಿಕೊಳ್ಳುತ್ತಿದ್ದರು.
ಶಿಶುಗೀತೆಗಳನ್ನು ಹಾಡುವ ಅಜ್ಜ-ಅಜ್ಜಿಯನ್ನು ದೂರಮಾಡಿಕೊಳ್ಳುವವರು ಹೆಚ್ಚಾಗಿರುವ ಈ ದಿನಗಳಲ್ಲಿ ಅವುಗಳನ್ನು ಜನಪ್ರಿಯಗೊಳಿಸಬೇಕು ಎಂಬ ಆಶಯದಿಂದ ಇನ್ಫೋಬೆಲ್ಸ್ ಸಂಸ್ಥೆ `ಚಿನ್ನು- ಚಿಣ್ಣರ ಚೆಲುವಿನ ಹಾಡುಗಳು~ ಎಂಬ 3ಡಿ ಅನಿಮೇಟೆಡ್ ಶಿಶು ಗೀತೆಗಳನ್ನು ಹೊರತಂದಿದೆ. ಈ ಡಿವಿಡಿಯಲ್ಲಿರುವ ಚಿನ್ನು ಮತ್ತು ಪಪ್ಪು ಎಂಬ ಮುದ್ದಾದ ಪಾತ್ರಗಳು ಎಲ್ಲರಿಗೂ ಇಷ್ಟವಾಗುತ್ತವೆ. ಈ ಎರಡು ಪಾತ್ರಗಳು ಉಲ್ಲಾಸಭರಿತ ಪ್ರಯಾಣದ ಮೂಲಕ ಮಕ್ಕಳಿಗೆ ಕನ್ನಡ ಹಾಡು ಕಲಿಸಿಕೊಡುತ್ತಾರೆ.
ಪುಟಾಣಿ ಮಕ್ಕಳು ಬಿಡುವು ಸಿಕ್ಕಾಗೆಲ್ಲಾ ಟೀವಿ ರಿಮೋಟ್ ಕೈಗೆತ್ತಿಕೊಂಡು ಕಾರ್ಟೂನ್ ನೆಟ್‌ವರ್ಕ್, ಪೋಗೊ ನೋಡುತ್ತಾ ಕೂರುತ್ತವೆ. ಛೋಟಾ ಭೀಮ್, ಕೃಷ್ಣ, ಗಣೇಶ, ಹನುಮಾನ್ ಮೊದಲಾದ ಕಾರ್ಟೂನ್ ಪಾತ್ರಧಾರಿಗಳು ಮಾಡುವ ಸಾಹಸ, ಚಿಣ್ಣಾಟ, ಹಾಸ್ಯ ಇವೆಲ್ಲವೂ ಮಕ್ಕಳಿಗೆ ಅಚ್ಚುಮೆಚ್ಚು. ಇವುಗಳ ಭರಾಟೆ ನಡುವೆ ಶಿಶು ಗೀತೆಗಳು ಮೂಲೆಗುಂಪಾಗಿದ್ದವು. ಈಗ ಶಿಶುಗೀತೆಗಳು 3ಡಿ ಅನಿಮೇಷನ್ ಎಂಬ ಹೊಸ ಬಟ್ಟೆ ತೊಟ್ಟುಕೊಂಡು ಸುಂದರವಾಗಿ ತೆರೆ ಮೇಲೆ ಬಂದಿವೆ.
ಶಿಕ್ಷಣ-ಮನೋರಂಜನೆಗೆ ಸಂಬಂಧಿಸಿದ ಪ್ರಕಾಶಕ ಸಂಸ್ಥೆ ಇನ್ಫೋಬೆಲ್ಸ್ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲೊಂದು 3ಡಿ ಅನಿಮೇಷನ್ ಶಿಶುಗೀತೆ ಹೊರತಂದಿದೆ. ಕನ್ನಡ ಶಿಶುಗೀತೆಗಳನ್ನು ಪ್ರೀತಿಸುವ ಎಲ್ಲರಿಗೂ ಈ ಡಿವಿಡಿ ಇಷ್ಟವಾಗುತ್ತದೆ. ಅಂದಹಾಗೆ, ಎರಡು ವರ್ಷ ಮೇಲ್ಪಟ್ಟ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಡಿವಿಡಿ ಹೊರತರಲಾಗಿದೆ. ಈ ಹಾಡುಗಳು ಸುಂದರ ಹಾಗೂ ಸರಳವಾಗಿ ಮೂಡಿಬಂದಿವೆ. ಜತೆಗೆ ಛೋಟಾ ಭೀಮ್, ಕೃಷ್ಣ, ಬಲರಾಮನ ಪಾತ್ರಗಳಂತೆ ಚಿನ್ನು ಮತ್ತು ಪಪ್ಪು ಪಾತ್ರಧಾರಿಗಳು ಜನಪ್ರಿಯತೆ ಗಳಿಸುತ್ತವೆ.
`ಈ ಡಿವಿಡಿಯಲ್ಲಿರುವ ಪ್ರತಿಯೊಂದು ಶಿಶುಗೀತೆಗೂ ಅದ್ಭುತವಾದ 3ಡಿ ಅನಿಮೇಷನ್ ಸ್ಪರ್ಶ ನೀಡಲಾಗಿದೆ. ಗೀತೆಗಳನ್ನು ಕೇಳುತ್ತಾ ತಲೆದೂಗಬಹುದು. ಹಾಡುಗಳ ನಡುವೆ ಆಕರ್ಷಕ ಸಂಭಾಷಣೆಗಳು, ವರ್ಣರಂಜಿತ ಹಿನ್ನೆಲೆಯಂತಹ ಅಂಶಗಳು ಈ ಡಿವಿಡಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
ಹಾಡುಗಳನ್ನು ನೋಡುತ್ತಿದ್ದರೆ ಅನಿಮೇಷನ್ ಸಿನಿಮಾ ನೋಡಿದ ಅನುಭವವಾಗುತ್ತದೆ. ಎಲ್ಲ ಮಳಿಗೆಯಲ್ಲಿ ಲಭ್ಯವಿರುವ ಈ ಡಿವಿಡಿಯನ್ನು ಈಗ ನಿಮ್ಮ ಆತ್ಮೀಯರು, ಪ್ರೀತಿ ಪಾತ್ರರಿಗೆ ನೀಡಲು ಒಂದು ಉತ್ತಮ ಉಡುಗೊರೆ~ ಎನ್ನುತ್ತಾರೆ ಇನ್ಫೋಬೆಲ್ ವ್ಯವಸ್ಥಾಪಕ ನಿರ್ದೇಶಕ ಕುಬೇರ್.
`ಈ ಡಿವಿಡಿ ಚಿಣ್ಣರಿಗೆ ಮನರಂಜನೆಯನ್ನಷ್ಟೇ ಅಲ್ಲ, ಮಾಹಿತಿಯನ್ನೂ ನೀಡುತ್ತದೆ. ಈ ಡಿವಿಡಿ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸುವಂತಹ ಕನ್ನಡ ಗೀತೆಗಳ ಸಂಗ್ರಹ. ಪುಟಾಣಿ ಮಕ್ಕಳು ಕನ್ನಡ ಕಲಿಯಲು ನೆರವಾಗುವಂತಿವೆ. ಇಲ್ಲಿ ಪಾತ್ರಗಳ ಆಯ್ಕೆ, ಕಥೆಯ ಎಳೆ, ಸಂಗೀತ ಎಲ್ಲರನ್ನು ಮೊದಲ ಬಾರಿಯೇ ಸೆಳೆಯುತ್ತವೆ.
ಮೋಜಿನಿಂದ ಕೂಡಿದ ಮತ್ತು ಮನರಂಜನೆ ಒದಗಿಸುವ 25 ಹಾಡುಗಳು ಈ ಡಿವಿಡಿಯಲ್ಲಿದ್ದು, ಗಾಯಕಿ ಅನುರಾಧ ಭಟ್ ಈ ಶಿಶುಗೀತೆಗಳನ್ನು ಹಾಡಿದ್ದಾರೆ. ಡಿವಿಡಿಯನ್ನು ಹೊರತರುವುದರ ಹಿಂದೆ ಸುಮಾರು 25 ಮಂದಿಯ ಪರಿಶ್ರಮವಿದೆ. ಕರ್ನಾಟಕದಲ್ಲಷ್ಟೇ ಅಲ್ಲ; ಸಾಗರದಾಚೆಗೂ ಇದರ ಕೀರ್ತಿ ಹಬ್ಬಬೇಕು~ ಎಂದು ಹಾರೈಸಿದರು ನಟಿ ತಾರಾ. -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.