ADVERTISEMENT

ಚಿತ್ತಾಪಹಾರಿ ನೃತ್ಯರೂಪಕ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 19:30 IST
Last Updated 29 ಫೆಬ್ರುವರಿ 2012, 19:30 IST
ಚಿತ್ತಾಪಹಾರಿ ನೃತ್ಯರೂಪಕ
ಚಿತ್ತಾಪಹಾರಿ ನೃತ್ಯರೂಪಕ   

ಭಾನುವಾರ ನಗರದ ಭಾರತೀಯ ವಿದ್ಯಾ ಭವನದಲ್ಲಿ ಕರ್ನಾಟಕ ನೃತ್ಯ ಕಲಾ ಪರಿಷತ್ ಆಶ್ರಯದಲ್ಲಿ ಭರತ ಮುನಿ ಜಯಂತಿ ನಡೆಯಿತು. ಶಾಂತಲಾ ಪ್ರಶಸ್ತಿ ವಿಜೇತೆ ರಾಧಾ ಶ್ರೀಧರ್ ನೇತೃತ್ವದ ವೆಂಕಟೇಶ ನೃತ್ಯ ಮಂದಿರದ ಕಲಾವಿದರು ಮೋಹಿನಿ ಭಸ್ಮಾಸುರ ನೃತ್ಯ ರೂಪಕ ಪ್ರಸ್ತುತಪಡಿಸಿದರು. ಕಲಾರಸಿಕರನ್ನು ಮೋಡಿ ಮಾಡುವಲ್ಲಿ ಅವರ ಪ್ರದರ್ಶನ ಯಶಸ್ವಿಯಾಯಿತು. ಪುರಾಣದ ಹಲವಾರು ಸನ್ನಿವೇಶಗಳು ನೃತ್ಯ ರೂಪಕದ ಸಂಯೋಜನೆಯಲ್ಲಿದ್ದವು. ಶಿವಲೀಲಾಧಾರಿತ ಕಥೆಗಳು, ಅಮೃತ ಮಂಥನ , ಕುಮಾರ ಸಂಭವ, ಮಾರ್ಕಂಡೇಯ ಮೋಕ್ಷ, ದಕ್ಷ ಯಜ್ಞ, ಗಂಗಾವತರಣ, ಮನ್ಮಥ ದಹನ ಇತ್ಯಾದಿ ಸನ್ನಿವೇಶಗಳು ಸೇರಿದ್ದವು.

ವಿಕೃತ ವರುಕಾಸುರ (ನಂತರ ಭಸ್ಮಾಸುರ) ಉಗ್ರ ತಪಸ್ಸು ಮಾಡುವ ದೃಶ್ಯ ತೇಜೋಮಯವಾಗಿತ್ತು. ಅವನ ತಪಸ್ಸನ್ನು ಭಂಗ ಪಡಿಸುವ ಪ್ರಸಂಗವಂತೂ ನೃತ್ಯ ಕಲಾವಿದೆಯರ ತಾದಾತ್ಯ್ಮ ಪ್ರದರ್ಶನದಿಂದ ಮೋಡಿ ಮಾಡಿತು. ಶಿವ-ಪಾರ್ವತಿಯರ ನೃತ್ಯ ಲಾಸ್ಯ ಶೃಂಗಾರದಿಂದ ಕೂಡಿತ್ತು.

ವರುಕಾಸುರನ ತಪಸ್ಸಿಗೆ ಮೆಚ್ಚಿ, ವರವನ್ನು ನೀಡುವ ದೃಶ್ಯ ರೂಪಿಸಿದ್ದರಲ್ಲಿಯೇ ಜಾಣ್ಮೆ ಇದೆ. ಶಿವ  ಕೊಟ್ಟ ವರ ಶಿವನಿಗೆ ಶಾಪವಾದಾಗ, ಭಯಭೀತನಾದ ಶಿವ ಓಡುವ ದೃಶ್ಯ, ನಾರಾಯಣನಲ್ಲಿ ವಿನಮ್ರವಾಗಿ ಶರಣಾಗತನಾಗುವ ಭಾವದ ಅಭಿವ್ಯಕ್ತಿ ನೋಡುಗರ ಮನಸ್ಸನ್ನು ಹಿಡಿದಿಟ್ಟಿತು.

ನಾರಾಯಣ ಮೋಹಿನಿಯಾಗಿ ರೂಪಾಂತರವಾಗುವ ದೃಶ್ಯ ಮಾರ್ಮಿಕವಾಗಿತ್ತು. ಮೋಹಿನಿ ಮತ್ತು ಭಸ್ಮಾಸುರನ ನೃತ್ಯ ವಿವಿಧ ಜತಿಗಳಿಂದ  ವೈವಿಧ್ಯಮಯವಾಗಿತ್ತು. ನೃತ್ಯದಿಂದಲೇ ಭಸ್ಮಾಸುರ ಭಸ್ಮವಾಗುವ ಪರಿಕಲ್ಪನೆ ವಿಸ್ಮಯಕಾರಿ.

ಭಸ್ಮಾಸುರನಾಗಿ ರಾಮು ಕಣಗಾಲ್, ಶಿವನಾಗಿ ಸಂಜಯ್. ಪಾರ್ವತಿಯಾಗಿ ಅಪರ್ಣ ಶಾಸ್ತ್ರಿ , ಮೋಹಿನಿಯಾಗಿ ಐಶ್ವರ್ಯ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ನರ್ತಿಸಿದರು. ಸುಲಭವಾಗಿ ಅರ್ಥವಾಗುವ ಸಾಹಿತ್ಯ, ಎಚ್. ಕೆ. ನಾರಾಯಣ ಅವರ ಸಂಗೀತ ರಸಿಕರನ್ನು ರಂಜಿಸುವಲ್ಲಿ ಸಫಲವಾದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.