ADVERTISEMENT

ಚಿತ್ರೀಕರಣದ ಹೊತ್ತಲ್ಲೇ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2012, 19:30 IST
Last Updated 5 ಆಗಸ್ಟ್ 2012, 19:30 IST
ಚಿತ್ರೀಕರಣದ ಹೊತ್ತಲ್ಲೇ ಪ್ರಶಸ್ತಿ ಗರಿ
ಚಿತ್ರೀಕರಣದ ಹೊತ್ತಲ್ಲೇ ಪ್ರಶಸ್ತಿ ಗರಿ   

ಚಿತ್ರೀಕರಣ ಪೂರ್ಣಗೊಳ್ಳುವ ಮುನ್ನವೇ `ಲೈಫು ಇಷ್ಟೇನೆ~ ಖ್ಯಾತಿಯ ನಿರ್ದೇಶಕ ಪವನ್‌ರ `ಲೂಸಿಯಾ~ ಸುದ್ದಿಯಲ್ಲಿದೆ. ಇತ್ತೀಚಿನ ಕನ್ನಡ ಚಿತ್ರರಂಗದ ಪರಿಸ್ಥಿತಿಗೆ ಅಪವಾದವೆನ್ನುವಂತೆ ಅದು ಸುದ್ದಿ ಮಾಡಿರುವುದು ವಿವಾದದಿಂದಲ್ಲ, ಚಿತ್ರೀಕರಣ ಹಂತದಲ್ಲಿರುವಾಗಲೇ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡ ಕಾರಣಕ್ಕೆ.

ಇಂಗ್ಲೆಂಡಿನ ಬ್ರಿಟಿಷ್ ಕೌನ್ಸಿಲ್ ಎಂಬ ಸಂಸ್ಥೆಯೊಂದು ನೀಡುವ `ಕ್ರಿಯೇಟಿವ್ ನ್ಯೂ ಬ್ಯುಸಿನೆಸ್ ಐಡಿಯಾ ಅವಾರ್ಡ್~ ಪ್ರಶಸ್ತಿಯನ್ನು `ಲೂಸಿಯಾ~ ಗೆದ್ದುಕೊಂಡಿದೆ.

ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಷೆಯ ಸುಮಾರು 150 ಚಿತ್ರಗಳ ನಡುವೆ ಪೈಪೋಟಿ ನಡೆಸಿ `ಲೂಸಿಯಾ~ ಉತ್ತಮ ಸೃಜನಶೀಲ ಚಿತ್ರವೆಂಬ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ವಿವಿಧ ವೃತ್ತಿಯಲ್ಲಿರುವ 110 ಮಂದಿ `ಲೂಸಿಯಾ~ದ ನಿರ್ಮಾಪಕರಾಗಿರುವುದು ವಿಶೇಷ. ಈ ಕಾರಣಕ್ಕಾಗಿಯೇ ಚಿತ್ರಕ್ಕೆ ಪ್ರಶಸ್ತಿ ಗರಿ ಲಭಿಸಿರುವುದು.

ಅಕ್ಟೋಬರ್ ಎರಡನೇ ವಾರದಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಸ್ಥೆ ನಿರ್ದೇಶಕ ಪವನ್‌ರನ್ನು ಆಹ್ವಾನಿಸಿದೆ. ಆ ಕಾರ್ಯಕ್ರಮದಲ್ಲಿ ಪವನ್ ತಮ್ಮ `ಲೂಸಿಯಾ~ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಇದೇ ವೇಳೆ ನಡೆಯಲಿರುವ ಲಂಡನ್ ಚಲನಚಿತ್ರೋತ್ಸವದಲ್ಲಿಯೂ ಪವನ್ ಪಾಲ್ಗೊಳ್ಳಲಿದ್ದಾರೆ.

ಇದೇ ರೀತಿ ಬ್ರಿಟಿಷ್ ಕೌನ್ಸಿಲ್‌ನ ಪ್ರಶಸ್ತಿಯನ್ನು ರಾಷ್ಟಮಟ್ಟದಲ್ಲಿ ಪಡೆದ ಇತರೆ ದೇಶಗಳ ನಿರ್ದೇಶಕರು ಸಹ ಭಾಗವಹಿಸಲಿದ್ದು ಸಿನಿಮಾ ತಂತ್ರಜ್ಞಾನ, ನಿರ್ಮಾಣ ಮುಂತಾದವುಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಪವನ್‌ರ `ಲೂಸಿಯಾ~ ಮಾತ್ರವಲ್ಲದೆ ಅವರ ಮುಂದಿನ ಚಿತ್ರಗಳಿಗೂ ಈ ಸಂಸ್ಥೆ ಆರ್ಥಿಕ ಹಾಗೂ ತಾಂತ್ರಿಕ ಸಹಾಯ ಮಾಡಲಿದೆ.

`ಲೂಸಿಯಾ~ದ ಶೇಕಡಾ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ನಾಯಕ ನೀನಾಸಂ ಸತೀಶ್ ಕತೆಗೆ ಅಗತ್ಯವಿರುವುದರಿಂದ ದೇಹಾಕಾರ ಬದಲಿಸುವ ಕಾರ್ಯದಲ್ಲಿ ಎರಡು ತಿಂಗಳು ತೊಡಗಿಕೊಳ್ಳುತ್ತಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ ಪ್ರತಿಯೊಬ್ಬ ಕಲಾವಿದರೂ ದ್ವಿಪಾತ್ರದಲ್ಲಿ ನಟಿಸಿರುವುದು. ಚಿತ್ರದಲ್ಲಿ ಐದು ಹಾಡುಗಳಿವೆ.
 
ಅದರಲ್ಲಿ ಎರಡು ಹಾಡುಗಳು ವಿಶಿಷ್ಟ -ಪದಪ್ರಯೋಗಗಳಿಗೆ ಹೆಸರಾದ ಯೋಗರಾಜ್ ಭಟ್ ಲೇಖನಿಯಲ್ಲಿ ಸೃಷ್ಟಿಯಾಗಿದೆ. ಮೈಸೂರಿನ ಪೂರ್ಣಚಂದ್ರ ಸಂಗೀತ ನೀಡಿದ್ದಾರೆ.

ಹಾಡು, ಚಿತ್ರಕಥೆ, ಛಾಯಾಗ್ರಹಣ, ಸಂಕಲನ ಹೀಗೆ ಪ್ರತಿಯೊಂದರಲ್ಲೂ ವಿಭಿನ್ನ ಪ್ರಯೋಗವಿದೆ. ಕಮರ್ಷಿಯಲ್ ಸಿನಿಮಾವಾದರೂ ಇದುವರೆಗೆ ಭಾರತೀಯ ಚಿತ್ರರಂಗದಲ್ಲಿ ಮಾಡಿರದ ವಿನೂತನ ಪ್ರಯೋಗಗಳನ್ನು ಲೂಸಿಯಾ ಮಾಡುತ್ತಿದೆ ಎನ್ನುತ್ತಾರೆ ನಾಯಕ ನಟ ನೀನಾಸಂ ಸತೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.