ADVERTISEMENT

ಚೀನಾದಲ್ಲೂ ಈಡಿಯೆಟ್ಸ್ ಫೇಮಸ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

`ಚೀನಾದಲ್ಲೂ `ತ್ರಿ ಈಡಿಯೆಟ್ಸ್~ ಅತ್ಯಂತ ಯಶಸ್ವಿ ಚಿತ್ರ ಎನಿಸಿಕೊಂಡಿದೆಯಂತೆ. ಆ ದೇಶದ ವಿದ್ಯಾರ್ಥಿ ಇಕೋ ಈ ಸಂಗತಿಯನ್ನು ಹೇಳಿದ್ದು ಬೆಂಗಳೂರಿನಲ್ಲಿ. ಐಐಬಿಎಂ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು) ನಲ್ಲಿ ನಡೆದ `ಷೇರ್ ವರ್ಲ್ಡ್ ಸೆಮಿನಾರ್~ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಈ ವಿಷಯವಾಗಿಯೇ ಸ್ವಲ್ಪ ಹೊತ್ತು ಚರ್ಚೆಯನ್ನೂ ನಡೆಸಿದರು.

`ಥ್ರೀ ಈಡಿಯಟ್ಸ್~ ಚಿತ್ರವನ್ನು ನೋಡಿದ್ದ ನನಗೆ ಚಿತ್ರೀಕರಿಸಿದ ಸ್ಥಳವನ್ನು ನೋಡುವ ಅವಕಾಶವೂ ಸಿಕ್ಕಿತು. ಇಲ್ಲಿನ ವಿದ್ಯಾರ್ಥಿಗಳಲ್ಲಿ ಸಮಾಜದ ಕುರಿತಾಗಿರುವ ಕಾಳಜಿ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು ಎಂದು ಇಕೋ ಹೇಳಿದಾಗ ಅನೇಕರಿಗೆ ಅಚ್ಚರಿ.

ನಗರದ ಐಐಬಿಎಂನಲ್ಲಿ ಇತ್ತೀಚಿಗೆ ನಡೆದ ಈ ವಿಶಿಷ್ಟ ಕಾರ್ಯಾಗಾರದಲ್ಲಿ ಏಳು ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡು `ದಕ್ಷಿಣ ಏಷ್ಯಾ ರಾಷ್ಟ್ರಗಳ ಶಕ್ತಿಮೂಲಗಳು ಹಾಗೂ ಆರ್ಥಿಕ ಸ್ವರೂಪ~ ವಿಷಯದ ಕುರಿತು ಚರ್ಚೆ ನಡೆಸಿದರು. ವೃತ್ತಿಯೊಂದಿಗೆ ಸಾಮಾಜಿಕ ಜವಾಬ್ದಾರಿ, ಮೈಕ್ರೋ ಫಿನಾನ್ಸಿಂಗ್, ಸಣ್ಣ ಸಾಲಗಳು, ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಮೊದಲಾದ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು.

ವಿಚಾರ ಸಂಕಿರಣ ಚಿಂತನಾಶಕ್ತಿ ಹೆಚ್ಚಿಸುವಂತಿದ್ದು, ವಿವಿಧ ಹಿನ್ನೆಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳೊಂದಿಗೆ ಬೆರೆಯಲು ನೆರವಾಯಿತು. ಇದರಿಂದ ಒಂದೇ ಸಂಗತಿಯನ್ನು ವಿಭಿನ್ನ ದೃಷ್ಟಿಕೋನದೊಂದಿಗೆ ನೋಡಲು ಸಾಧ್ಯವಾಯಿತು ಎನ್ನುತ್ತಾರೆ ಮತ್ತೊಬ್ಬ ವಿದ್ಯಾರ್ಥಿ ಯಾಸಿನ್.

ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿದ್ಯಾರ್ಥಿಗಳ ಸಂವಾದದಲ್ಲಿ ಪಾಲ್ಗೊಂಡ ಪೋರ್ಚುಗಲ್‌ನ ಹ್ಯೂಗೊ ಒಲಿಜೀರಿಯಾ `ಭಾರತಕ್ಕೆ ಇದು ನನ್ನ ಎರಡನೇ ಭೇಟಿಯಾಗಿದ್ದು ಬೆಂಗಳೂರಿಗೆ ಮೊದಲ ಬಾರಿ ಬಂದಿರುವೆ. ಇಲ್ಲಿನ ಹವಾಗುಣ ಬಹಳ ಇಷ್ಟ. ಭಾರತದ ಸಂಸ್ಕೃತಿ ಬಗ್ಗೆ ನನಗೆ ಅರಿವಿದೆ ಹಾಗೆಯೇ ಇಲ್ಲಿನ ವಿದ್ಯಾರ್ಥಿಗಳ ಬದ್ಧತೆ ಬಗ್ಗೆ ಗೌರವವೂ ಇದೆ~ ಎನ್ನುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.