ADVERTISEMENT

‘ಚೂರಿಕಟ್ಟೆ’ಯ ಕಾಡಿನ ರಹಸ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 19:30 IST
Last Updated 27 ಡಿಸೆಂಬರ್ 2017, 19:30 IST
ಪ್ರವೀಣ್‌ತೇಜ್‌ ಮತ್ತು ಪ್ರೇರಣಾ
ಪ್ರವೀಣ್‌ತೇಜ್‌ ಮತ್ತು ಪ್ರೇರಣಾ   

ಬ್ರಿಟಿಷರ ಕಾಲದಲ್ಲಿ ರೈಲಿನ ಮೂಲಕ ಸಾಗಿಸುವ ವಸ್ತುಗಳಿಗೆ ಸುಂಕ ತೆರಬೇಕಿತ್ತು. ಆದರೆ, ಅಧಿಕಾರಶಾಹಿಯ ಭ್ರಷ್ಟಾಚಾರದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿತ್ತು. ರೈಲು ಸಂಚರಿಸುವ ಜಾಗದಲ್ಲಿ ಕಟ್ಟೆ ಎನ್ನುವ ವೃತ್ತ ಇರುತ್ತಿತ್ತು. ಖದೀಮರ ಎದುರು ಹೋರಾಡಲು ಅಂಗರಕ್ಷಕರು ಚೂರಿ ಬಳಸುತ್ತಿದ್ದರು. ಹಾಗಾಗಿ, ಅಂತಹ ಪ್ರದೇಶಗಳಿಗೆ ಚೂರಿಕಟ್ಟೆ ಎಂದು ಕರೆಯುತ್ತಿದ್ದರು.

‘ಚೌಕಬಾರ’ ಕಿರುಚಿತ್ರ ನಿರ್ದೇಶಿಸಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ರಾಘು ಶಿವಮೊಗ್ಗ ಈಗ ‘ಚೂರಿಕಟ್ಟೆ’ ಹಿಂದೆ ಬಿದ್ದಿದ್ದಾರೆ. ಮೊದಲ ಬಾರಿಗೆ ಸಿನಿಮಾ ನಿರ್ದೇಶಿಸಿರುವ ಅವರು ಈ ಕುರಿತು ಹೇಳಲು ಸುದ್ದಿಗೋಷ್ಠಿ ಕರೆದಿದ್ದರು.

ವ್ಯಕ್ತಿಯೊಬ್ಬನ ಜೀವನದಲ್ಲಿ ಬಹಳಷ್ಟು ವಿಚಿತ್ರ ತಿರುವು ಎದುರಾಗುತ್ತವೆ. ಆ ವೇಳೆ ಅವನ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ಕಿರುಚಿತ್ರದಲ್ಲಿ ರಾಘು ಕಟ್ಟಿಕೊಟ್ಟಿದ್ದರು. ಈಗ ಉತ್ತರ ಕನ್ನಡದ ಗಡಿಭಾಗದಲ್ಲಿ ನಡೆಯುವ ಅರಣ್ಯ ಸಂಪತ್ತಿನ ಲೂಟಿಯ ಕಥೆಯನ್ನು ‘ಚೂರಿಕಟ್ಟೆ’ ಮೂಲಕ ಹೇಳಲು ಹೊರಟಿದ್ದಾರೆ.

ADVERTISEMENT

‘ಯುವಕನೊಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಲು ಹೋಗುತ್ತಾನೆ. ಆದರೆ, ಮುಂದೆ ಆತ ಏನಾಗುತ್ತಾನೆ ಮತ್ತು ಟಿಂಬರ್‌ ಮಾಫಿಯಾ ತಡೆಗಟ್ಟಲು ಪೊಲೀಸ್‌ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ’ ಎಂಬುದೇ ಚಿತ್ರದ ಕಥಾಹಂದರ ಎಂದರು ನಿರ್ದೇಶಕ ರಾಘು.

ಆಡಿಯೊ ಬಿಡುಗಡೆ ಮಾಡಿದ ನಿರ್ದೇಶಕ ಸಿಂಪಲ್‌ ಸುನಿ ತಾವು ಮನೆಯಲ್ಲಿ ಕಳ್ಳಾಟವಾಡುತ್ತಿದ್ದ ಬಗ್ಗೆ ಹೇಳಿಕೊಂಡರು. ‘ನನ್ನಪ್ಪ ಪೊಲೀಸ್‌ ಅಧಿಕಾರಿ. ಮನೆಯಲ್ಲಿ ತುಂಬಾ ಶಿಸ್ತಿನಿಂದ ಇರಬೇಕಿತ್ತು. ಅಪ್ಪ ಕೆಲಸಕ್ಕೆ ಹೋದ ಬಳಿಕ ನಾನು ಮನೆಯಲ್ಲಿ ಕಳ್ಳನಾಗುತ್ತಿದ್ದೆ. ಪೊಲೀಸ್‌ ಕೆಲಸ ನನಗೆ ಒಗ್ಗಲಿಲ್ಲ. ಕೊನೆಗೆ, ಬಣ್ಣದ ಜಗತ್ತಿಗೆ ಬಂದೆ’ ಎಂದರು.

ನಟ ಅಚ್ಯುತ್‌ಕುಮಾರ್, ‘ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜನರಿಗೆ ಇಷ್ಟವಾಗಲಿದೆ’ ಎಂದಷ್ಟೇ ಹೇಳಿದರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರವೀಣ್‌ತೇಜ್, ಪ್ರೇರಣಾ, ಮಂಜುನಾಥ್‌ ಹೆಗಡೆ, ದತ್ತಣ್ಣ, ಬಾಲಾಜಿ ಮೋಹನ್ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.