ADVERTISEMENT

ಚೌಕಟ್ಟು ಮೀರುವ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST
ಚೌಕಟ್ಟು ಮೀರುವ ಚಿತ್ರಗಳು
ಚೌಕಟ್ಟು ಮೀರುವ ಚಿತ್ರಗಳು   

ಖ್ಯಾತ ಕಲಾವಿದ ಹೇಮಂತ್ ಜಾ ಅವರ ಅಪರೂಪದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ರಿನೈಸೆನ್ಸ್ ಗ್ಯಾಲರಿಯಲ್ಲಿ ಫೆಬ್ರುವರಿ 22ರವರೆಗೆ ನಡೆಯಲಿದೆ.

ನಗರಗಳಿಗೆ ವಲಸಿಗರ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಇದರಿಂದಾಗಿ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗುತ್ತಿದೆ. ಆಹಾರ, ನೀರು ಎಲ್ಲಕ್ಕಿಂತ ಹೆಚ್ಚಾಗಿ ವಸತಿ ಸಮಸ್ಯೆ ವಲಸಿಗರನ್ನು ಕಾಡುತ್ತದೆ. ರೈಲ್ವೆ, ಬಸ್ ನಿಲ್ದಾಣ ಹಾಗೂ ಖಾಲಿ ಜಾಗಗಳಲ್ಲಿ ಜನಜಂಗುಳಿ ಹೆಚ್ಚುತ್ತದೆ. ಉಳಿದುಕೊಳ್ಳಲು ಸೂರು ಸಿಗದಿದ್ದಾಗ ಎಲ್ಲೆಂದರಲ್ಲಿ ಕೊಳೆಗೇರಿಗಳು ತಲೆ ಎತ್ತುತ್ತವೆ. ಪ್ರತಿಯೊಬ್ಬನಿಗೂ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಆಗ ಶುರುವಾಗುತ್ತದೆ ಮರಗಳ ಮಾರಣ ಹೋಮ. ಕೊಳೆಗೇರಿಗಳ ಸಮಸ್ಯೆ ನಿವಾರಿಸಿ ಮನೆಗಳನ್ನು ಕಟ್ಟಿಕೊಡಲು ಅವರು ಆಯ್ದುಕೊಳ್ಳುವುದು ಗಿಡ-ಮರಗಳು ಇರುವ ಜಾಗವನ್ನೇ. ಇನ್ನು ಕೆಲವರು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಸಲುವಾಗಿ ಅರಣ್ಯ ನಾಶ ಮಾಡಿ ಅಲ್ಲಿ ಕಾಂಕ್ರೀಟ್ ಕಾಡು ನಿರ್ಮಿಸುತ್ತಾರೆ.

ಹೇಮಂತ್ ಜಾ ರಚಿಸಿರುವ ಹೆಸರಿಡದ ಕಲಾಕೃತಿಯೊಂದು ನಗರೀಕರಣದಿಂದ ಮರಗಳು ನಾಶವಾಗುವುದನ್ನು ಸಾದೃಶವಾಗಿ ಕಟ್ಟಿಕೊಡುತ್ತದೆ. ಸೂಟು ಬೂಟು ಧರಿಸಿದ ವ್ಯಕ್ತಿಯೊಬ್ಬ ಹೆಮ್ಮರದ ಮೇಲೆ ಕುಳಿತು ಅದರ ಕೊಂಬೆಗೆ ಕೊಡಲಿ ಪೆಟ್ಟು ಹಾಕುತ್ತಿರುವ ದೃಶ್ಯ ವಾಸ್ತವವನ್ನು ವ್ಯಂಗ್ಯದ ಧಾಟಿಯಲ್ಲಿ ದಾಟಿಸುತ್ತದೆ. ಕೊಂಬೆಯ ಒಂದು ತುದಿಯಲ್ಲಿ ತಾನು ಕುಳಿತು ಮತ್ತೊಂದು ತುದಿಯನ್ನು ಕಡಿಯುತ್ತಿರುವುದು ಅವನ ಮೂರ್ಖತನವನ್ನು ಬಿಂಬಿಸುತ್ತದೆ. ಅಂದರೆ ನಗರೀಕರಣದ ಪರಿಕಲ್ಪನೆಯಲ್ಲಿ ಮರಗಳನ್ನು ಕಡಿಯುತ್ತಾ ಹೋದಂತೆ ಏನೆಲ್ಲಾ ಕೆಡುಕು ಎದುರಾಗುತ್ತದೆ ಎಂಬ ಅರಿವಿಲ್ಲದ ಕಟುಕನ ಮೂರ್ಖತನವನ್ನು ಅಥವಾ ಎಲ್ಲ ತನಗೆ ಗೊತ್ತೆಂಬ ಹಮ್ಮಿನಿಂದ ಅಧೋಗತಿಯ ಹಾದಿ ಹಿಡಿದಿರುವುದನ್ನು ಆ ಕಲಾಕೃತಿ ಬಿಂಬಿಸುತ್ತದೆ.

ಗಂಡಿಗೆ ಹೆಣ್ಣು ಸಮಾನಳು. ಅವಳೂ ಎಲ್ಲ ರಂಗಗಳಲ್ಲಿ ತನ್ನ ಛಾಪು ಮೂಡಿಸಬಲ್ಲ ಛಾತಿ ಇರುವವಳು ಎಂದು ಎಷ್ಟೇ ಸಮಾನತೆಯ, ಸಮಾಧಾನದ ಮಾತುಗಳನ್ನು ಆಡಿದರೂ ಹೆಣ್ಣಿನ ಸ್ಥಿತಿಗತಿ, ಸ್ಥಾನಮಾನ ಹೆಚ್ಚೇನೂ ಬದಲಾಗಿಲ್ಲ. ಅವಳು ಇಂದಿಗೂ ಪಂಜರದ ಗಿಳಿ ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ತನ್ನ ಅಸ್ಮಿತೆಯ ಉಳಿವಿಗಾಗಿ ಹೋರಾಟ ಮಾಡುವ ಮನೋಭಾವ ಹಲವು ಹೆಣ್ಣು ಮಕ್ಕಳಲ್ಲಿ ಬೆಳೆದಿಲ್ಲ ಎಂಬುದನ್ನು ಇವರ ಮತ್ತೊಂದು ಕಲಾಕೃತಿ ತೋರಿಸುತ್ತದೆ .

ಹೇಮಂತ್ ಚಿತ್ರಕಲಾಕೃತಿಗಳ ವಸ್ತು ವಿಷಯ ಎಲ್ಲರಿಗೂ ಇಷ್ಟವಾಗುತ್ತದೆ. ಇವರ ಕಲಾಕೃತಿಗಳು ಕೇವಲ ಕಣ್ಣು ಹಾಗೂ ಮನಸ್ಸಿಗೆ ಮುದ ನೀಡುವುದಷ್ಟೇ ಅಲ್ಲ; ಚಿಂತನೆಗೂ ಹಚ್ಚುತ್ತವೆ. ಕಲಾಕೃತಿಗಳಲ್ಲಿ ಸೊಬಗು, ವೈಚಾರಿಕತೆ ಎರಡೂ ಮನೆ ಮಾಡಿಕೊಂಡಿರುವುದರಿಂದ ಮನಸ್ಸಿಗೆ ಆಪ್ತವೆನಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.