ADVERTISEMENT

ಜಪಾನ್ ಹಬ್ಬ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 19:30 IST
Last Updated 18 ಫೆಬ್ರುವರಿ 2011, 19:30 IST

ಬೆಂಗಳೂರಿನ ಜಪಾನ್ ಕಾನ್ಸಲ್ ಕಚೇರಿ, ನವದೆಹಲಿಯ ಜಪಾನ್ ಫೌಂಡೇಶನ್, ಬೆಂಗಳೂರು ವಿಶ್ವವಿದ್ಯಾಲಯ, ನಿಹೊಂಗೊ ಕ್ಯೊಶಿ-ಕೈ (ಜಪಾನೀಸ್ ಭಾಷಾ ಶಿಕ್ಷಕರ ಸಂಘಟನೆ ಬೆಂಗಳೂರು), ಜಪಾನೀಸ್ ಸಂಸ್ಥೆ ಹಾಗೂ ಕೊಯೊ ಜಪಾನೀಸ್ ಮಾತನಾಡುವ ಬಳಗದ ಆಶ್ರಯದಲ್ಲಿ ಶನಿವಾರ ಮತ್ತು ಭಾನುವಾರ ಜಪಾನ್ ಹಬ್ಬ ನಡೆಯಲಿದೆ.

ಭಾರತ, ಜಪಾನ್ ಬಾಂಧವ್ಯ ಬಲಗೊಳಿಸುವ ಹಾಗೂ ಜಪಾನ್ ಸಂಸ್ಕೃತಿ ಕುರಿತು ಸ್ಥಳೀಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ 2005ರಿಂದಲೂ ಈ ಹಬ್ಬ ಆಚರಿಸುತ್ತ ಬರಲಾಗುತ್ತಿದೆ.

ಈ ವರ್ಷದ ಜಪಾನ್ ಹಬ್ಬದ ಧ್ಯೇಯ ವಾಕ್ಯ ‘ಬ್ಲೂಮ್, ಬ್ಲಾಸಮ್, ಬಾಂಡ್’. ಭಾರತ ಮತ್ತು ಜಪಾನ್ ನಡುವಿನ ಸಂಬಂಧ ಅರಳುವುದು, ವಿಕಸಿತಗೊಳ್ಳುವುದು ಹಾಗೂ ಬಲಗೊಳ್ಳುವುದನ್ನು ಇದು ಸಂಕೇತಿಸುತ್ತದೆ.

ಶನಿವಾರ ಸಂಜೆ 6.30ಕ್ಕೆ ಅರಮನೆ ರಸ್ತೆಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌ನಲ್ಲಿ ವಿಶ್ವವಿಖ್ಯಾತ ಜಪಾನ್ ಕಲಾವಿದ ಜುಮೈ ತೊಕುಮಾರು ಅವರ ಶಾಕುಹಾಚಿ (ಜಪಾನ್ ಸಾಂಪ್ರದಾಯಿಕ ಕೊಳಲು ವಾದನ) ಮತ್ತು ಪಂಡಿತ್ ಜಯಂತ್ ಕುಮಾರ್ ದಾಸ್ ಅವರ ಸಿತಾರ್ ಜುಗಲ್‌ಬಂದಿ.ತಬಲಾ: ಅಶ್ಮಿ ದತ್.

ಭಾನುವಾರ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮ. ಬೆಳಿಗ್ಗೆ 10.30ರಿಂದ 12 ಗಂಟೆಯವರೆಗೆ ಕರೋಕೆ ಸ್ಪರ್ಧೆ (ಜಪಾನಿಗರಲ್ಲದವರಿಂದ ಜಪಾನಿ ಗೀತ ಗಾಯನ, ಜಪಾನಿಗರಿಂದ ಭಾರತೀಯ ಗೀತ ಗಾಯನ ಸ್ಪರ್ಧೆ). 1 ಗಂಟೆಗೆ ಉದ್ಘಾಟನೆ, 1.30ರಿಂದ 7 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ.

ಸೆಮಿನಾರ್ ಹಾಲ್‌ನಲ್ಲಿ ಬೆಳಿಗ್ಗೆ 10ರಿಂದ ಡಾ. ವಿ. ಸಾವಿತ್ರಿ ಅವರಿಂದ ಉಪನ್ಯಾಸ, 11ರಿಂದ ಇಂಡೋ ಜಪಾನ್ ರಸಪ್ರಶ್ನೆ  (ಎಲ್ಲರಿಗೂ ಮುಕ್ತ ಪ್ರವೇಶ, ಇಬ್ಬರ ತಂಡ ಇರಬೇಕು), ಮಧ್ಯಾಹ್ನ 2ರಿಂದ ಜಪಾನಿ ಅನಿಮೇಷನ್ ಚಲನಚಿತ್ರ ‘ನಿತಾಬೊ’ (ನಿ: ಅಕಿಯೊ ನಿಶಿಜಾವಾ) ಮತ್ತು ‘ಗಾಡ್ಜಿಲ್ಲಾ’ ಪ್ರದರ್ಶನ.

ಬೆಳಿಗ್ಗೆ 10ರಿಂದ 12ರ ಜಪಾನೀಸ್ ಕಲೆಯಾದ ಒರಿಗಾಮಿ, ಕಿರಿ-ಎ ಮತ್ತು ಕಿರಿಗಾಮಿ, ಕ್ಯಾಲಿಗ್ರಫಿ, ಬೊನ್ಸಾಯ್, ಇಕೆಬಾನಾ ಮುಂತಾದ ಕಲೆಗಳ ಪ್ರಸ್ತುತಿ ಹಾಗೂ ಪ್ರಾತ್ಯಕ್ಷಿಕೆ, ಭಾರತೀಯ ಚಿತ್ತಾರ ಹಾಗೂ ಮೆಹಂದಿ ಹಾಕುವ ಕಾರ್ಯಕ್ರಮ.

ಜಪಾನ್ ಸಂಸ್ಥೆಗಳು, ಕಾರ್ಪೋರೇಟ್ ಕಚೇರಿಗಳ ಮಳಿಗೆಗಳು, ಜಪಾನ್ ಕ್ರೀಡೆಗಳ ಮಳಿಗೆ ಹಾಗೂ ಆಹಾರ ಮಳಿಗೆಗಳು ಇರುತ್ತವೆ. ಜಪಾನ್ ಖಾದ್ಯಗಳನ್ನು ಇಲ್ಲಿ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.