ADVERTISEMENT

ಜಾಂಟಿ ಮತ್ತು ಪಾರ್ಟಿ

ಏಜೆನ್ಸೀಸ್
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST
ಜಾಂಟಿ ಮತ್ತು ಪಾರ್ಟಿ
ಜಾಂಟಿ ಮತ್ತು ಪಾರ್ಟಿ   

ಜಾಂಟಿ ರೋಡ್ಸ್ ಅದ್ಭುತ ಕ್ರಿಕೆಟಿಗ. ಕ್ರಿಕೆಟ್ ಅಂಗಳದಲ್ಲಿ ಇವರು ಅಕ್ಷರಶಃ ಚಿಗರೆ ಇದ್ದಂತೆ. ವಿಪರೀತ ಎನಿಸುವಂತಹ ಲವಲವಿಕೆ, ವೇಗ ಹಾಗೂ ಅಕ್ರಮಣಕಾರಿ ಮನೋಭಾವ ಇವರ ಆಟದ ಹೆಗ್ಗುರುತು. ಜಾಂಟಿ ತಮ್ಮ ವಿಶಿಷ್ಟ ಕ್ಷೇತ್ರ ರಕ್ಷಣಾ ವೈಖರಿಯಿಂದಲೇ ಜಗತ್ಪ್ರಸಿದ್ಧಿ ಪಡೆದವರು. ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಸ್ಥಾನ ಗಳಿಸಿದವರು.

ಅವರು ಕ್ರೀಡಾಪಟು ಮಾತ್ರವಲ್ಲ; ಅಪ್ಪಟ ಕ್ರೀಡಾ ಮನೋಭಾವದ ವ್ಯಕ್ತಿಯೂ ಹೌದು. ಎಲ್ಲವನ್ನು ಕ್ರೀಡಾ ಮನೋಭಾವದಿಂದಲೇ ನೋಡುತ್ತಾರೆ. ತಮಗೆ ಇಷ್ಟವಾದದ್ದನ್ನು ನೇರವಾಗಿ ಹೇಳುತ್ತಾರೆ. ಅವರ ಈ ಗುಣವೇ ಇವರಿಗೆ ಅನೇಕ ಗೆಳೆಯರನ್ನು ಒದಗಿಸಿದೆ. 

ಕ್ರೀಡಾಪಟುಗಳ ದೈಹಿಕ ಸದೃಢತೆ ಕಾಯ್ದುಕೊಳ್ಳಲು ನೆರವಾಗುವ ಎವೊಲ್ಯೂಷನ್ ಸ್ಫೋರ್ಟ್ಸ್ ನ್ಯೂಟ್ರೀಶನ್ ಡ್ರಿಂಕ್‌ನ ಪ್ರಚಾರಕ್ಕೆಂದು ಜಾಂಟಿ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕ್ರೀಡಾ ಪ್ರೀತಿ, ಬೆಂಗಳೂರು ಹಾಗೂ ತಮ್ಮ ನೆಚ್ಚಿನ ತಿನಿಸುಗಳ ಬಗ್ಗೆ ಅಪ್ಯಾಯಮಾನವಾಗಿ ಆಡಿದ ಮಾತುಗಳು ಇಲ್ಲಿವೆ.

`ನನಗೆ ಮೊದಲಿನಿಂದಲೂ ಕ್ರೀಡೆ ಮೇಲೆ ಇನ್ನಿಲ್ಲದ ಆಸಕ್ತಿ. ಹಾಗಾಗಿ ನಾನು ಸಾರ್ವಕಾಲಿಕ ಕ್ರೀಡಾಪಟು. ನಮ್ಮ ಮನೆಯಲ್ಲಿಯೇ ಟೆನ್ನಿಸ್ ಅಂಕಣವಿದೆ. ಸಾಕಷ್ಟು ಬ್ಯಾಟ್ ಮತ್ತು ಬಾಲ್‌ಗಳು ಮನೆಯ ಜಾಗವನ್ನು ಆಕ್ರಮಿಸಿಕೊಂಡಿವೆ. ವಿಶ್ವವಿದ್ಯಾಲಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಕ್ರಿಕೆಟ್‌ನಲ್ಲಿ ನೈಪುಣ್ಯತೆ ಪಡೆಯುವತ್ತ ಹೆಜ್ಜೆ ಇರಿಸಿದೆ. ಆಗ ಹಾಕಿಯ ಮೇಲೂ ಸಹ ಒಲವಿತ್ತು~.

`ನನ್ನ ಹಾಗೂ ಕ್ರಿಕೆಟ್ ನಡುವಿನ ಸಂಬಂಧ ತುಂಬ ದೀರ್ಘವಾದುದು. ನಾನು ಮೊದಲ ಟೆಸ್ಟ್ ಕ್ರಿಕೆಟ್ ಆಡಿದ್ದು ಭಾರತ ತಂಡದ ವಿರುದ್ಧವೆ. ಈ ಸಂದರ್ಭದಲ್ಲಿ ಇಲ್ಲಿನ ಅಪ್ರತಿಮ ಆಟಗಾರರ ಒಡನಾಟ ದೊರೆಯಿತು~. `ಅಂದ ಹಾಗೆ, ಕ್ರಿಕೆಟಿಗರು ಫಿಟ್‌ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಅದರಲ್ಲೂ ಫೀಲ್ಡ್‌ರ್‌ಗಳು ದಿನನಿತ್ಯ ಬೆವರು ಸುರಿಸಲೇ ಬೇಕು. ನಾನೊಬ್ಬ ಕ್ಷೇತ್ರರಕ್ಷಕನಾಗಿ ನನ್ನ ದೇಹಕ್ಕೆ ಅವಶ್ಯಕವಾಗಿ ಏನು ಬೇಕು ಎಂಬುದರ ಅರಿವು ನನ್ನಲ್ಲಿತ್ತು. ಇದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ಹಾಗಾಗಿಯೇ ನಾನು ಇಂದಿಗೂ ಕೂಡ ಸದೃಢವಾಗಿದ್ದೇನೆ~.

ಜಾಂಟಿ ಪ್ರಸ್ತುತ ಮುಂಬೈ ಐಪಿಎಲ್ ಟೀಂ ತರಬೇತುದಾರ.~ ನಾನು ಇದುವರೆಗೂ ಹಲವು ದೇಶಗಳನ್ನು ಸುತ್ತಿದ್ದೇನೆ. ಆದರೆ ಎಂತಹ ಸಂದರ್ಭದಲ್ಲಿಯೂ ಕೂಡ ನಾನು ನನ್ನ ವ್ಯಾಯಾಮದ ಅಭ್ಯಾಸವನ್ನು ತಪ್ಪಿಸಿಲ್ಲ. ಕ್ರೀಡಾಪಟುಗಳ ದೈಹಿಕ ಸದೃಢತೆಗೆ ನೆರವಾಗುವ ಎನರ್ಜಿ ಡ್ರಿಂಕ್ ಒತ್ತಡ ಕಡಿಮೆ ಮಾಡಿ ದೇಹಕ್ಕೆ ಚೈತನ್ಯ ತುಂಬುತ್ತದೆ. ರಾಸಾಯನಿಕ ಅಂಶಗಳಿಂದ ಮುಕ್ತವಾಗಿರುವ ಎನರ್ಜಿ ಡ್ರಿಂಕ್ ಪುರುಷ ಹಾಗೂ ಮಹಿಳಾ ಕ್ರೀಡಾ ಪಟುಗಳಿಗೆ ಪ್ರತ್ಯೇಕವಾಗಿ ಲಭ್ಯವಿದೆ~ ಎನ್ನುತ್ತಾರೆ.

`ಬೆಂಗಳೂರು ಸುಂದರ ನಗರಿ. ಇಲ್ಲಿನ ಬಹುತೇಕ ಹೋಟೆಲ್‌ಗಳು ನನಗೆ ಅಚ್ಚುಮೆಚ್ಚು. ಆದರೆ ಒಂದು ಬೇಜಾರಿನ ಸಂಗತಿ ಎಂದರೆ, ಇಲ್ಲಿ ಎಲ್ಲವೂ ರಾತ್ರಿ 11ಕ್ಕೆ ಮುಚ್ಚುತ್ತವೆ. ನಾವು ಬೆಂಗಳೂರಿನಲ್ಲಿ ಪಾರ್ಟಿ ಮಾಡಬೇಕೆಂದರೆ ಸಂಜೆ ಬೇಗ ಸೇರಬೇಕು~ ಎನ್ನುವಾಗ ಅವರ ಮುಖದಲ್ಲಿ ಹುಸಿ ನಗುವಿತ್ತು.

`ಈ ದೇಶದ ಎಲ್ಲ ಆಹಾರಗಳು ನನಗೆ ಇಷ್ಟವಾಗುತ್ತವೆ. ಅದರಲ್ಲೂ ಕಾಶ್ಮೀರಿ ತಿನಿಸುಗಳೆಂದರೆ ನನಗೆ ಅಚ್ಚು ಮೆಚ್ಚು. ಕೇರಳದ ಸೀಫುಡ್ ಮೇಲೂ ಒಲವಿದೆ. ಇದರ ಜತೆಗೆ ನಾನ್ ಮತ್ತು ರೋಟಿ, ಪನ್ನೀರ್,  ಮಟನ್ ಎಂದರೇ ಬಲುಪ್ರೀತಿ. ಬಾಲಿವುಡ್ ನಟ ಜಾನ್ ಅಬ್ರಹಾಂ ಅಭಿಮಾನಿ ನಾನು~ ಎಂದು ತಮ್ಮ ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.