ADVERTISEMENT

ಜಾಣರಿಗಾಗಿ ಸಿನಿಮಾ ಮಾಡ್ತಾರಂತೆ ಜಾನ್!

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಜಾನ್‌ ಅಬ್ರಹಾಂ
ಜಾನ್‌ ಅಬ್ರಹಾಂ   

ಸಿನಿಮಾ ನಿರ್ಮಾಣ ನನಗೆಂದೂ ಪ್ರತಿಷ್ಠೆಯ ವಿಷಯವಾಗಿರಲಿಲ್ಲ. ಅದು ಕೇವಲ ಫ್ಯಾಷನ್‌ಗಾಗಿ ಅಥವಾ ಪ್ಯಾಷನ್‌ಗಾಗಿ ಸಿನಿಮಾ ನಿರ್ಮಾಣ ಮಾಡಲೇ  ಇಲ್ಲ. ನನಗಾಗಿಯೂ ನಿರ್ಮಾಣ ಮಾಡಲಿಲ್ಲ. ನನಗಾಗಿ ನಿರ್ಮಾಣಕ್ಕಿಳಿದಿದ್ದರೆ ಮೊದಲ ಪ್ರೊಜೆಕ್ಟ್‌ಗಳಲ್ಲಿಯೂ ನಾನೇ ಹೀರೋ ಅಗಿರುತ್ತಿದ್ದೆ.. ನಿರ್ಮಾಣ ಮಾಡಬೇಕೆಂದೇ ನಿರ್ಮಾಣಕ್ಕೆ ಇಳಿದೆ. ಇದು ನನಗೆ ಶುದ್ಧ ವ್ಯವಹಾರ.

ಹೀಗೆ ಸಿನಿಮಾ ನಿರ್ಮಾಣದ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಮಜಾಯಿಷಿ ಕೊಟ್ಟಿದ್ದು, ಜಾನ್‌ ಅಬ್ರಹಾಂ. ಅವರ ನಿರ್ಮಾಣದ ಪರಮಾಣು ಅ ಸ್ಟೋರಿ ಆಫ್‌ ಪೋಖ್ರಾನ್‌ ಚಿತ್ರ ಬಿಡುಗಡೆಯ ನಂತರ ಮಾತನಾಡುತ್ತಿದ್ದರು.

ನಿರ್ಮಾಣ ಹಂತದ ಪೂರ್ವದಲ್ಲಿಯೇ ನಾನು ಸಾಕಷ್ಟು ಕೆಲಸಗಳನ್ನು ಮಾಡುತ್ತೇನೆ. ನಿರ್ಮಾಣದ ನಿರ್ಧಾರಗಳನ್ನೂ ದಿಢೀರ್ ಆಗಿ ತೆಗೆದುಕೊಳ್ಳುವುದಿಲ್ಲ. ಹಾಗಾಗಿಯೇ ‘ವಿಕ್ಕಿ ಡೋನರ್‌’ ‘ಮದ್ರಾಸ್‌ ಕೆಫೆ’ಯಂಥ ವಿಭಿನ್ನ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಯಿತು.

ADVERTISEMENT

ಕಥೆಗಳು ಇಷ್ಟವಾಗಬೇಕು. ನನಗೆ ಕಥೆಯ ಎಳೆ ಇಷ್ಟವಾದರೆ ಅದಕ್ಕೇನು ಬೇಕೋ ಆ ಎಲ್ಲ ಅಗತ್ಯಗಳನ್ನೂ ನಿರ್ಮಾಪಕನಾಗಿ ಪೂರೈಸುತ್ತೇನೆ. ಚಿತ್ರಕ್ಕೆ ಟೈಗರ್‌ ಇರಬೇಕೆ, ಸೋನಾಕ್ಷಿ ಬೇಕೆ, ರಾಜಕುಮಾರ್‌ ಇರಬೇಕೆ...? ಹೀಗೆ ಪಾತ್ರಗಳಿಗೆ ತಕ್ಕಂತೆ ನಟನಟಿಯರ ಆಯ್ಕೆ ಮಾಡಿ, ಅವರ ಬಳಿ ಹೋಗುತ್ತೇನೆ. ನನ್ನ ನಿರ್ಮಾಣದ ಚಿತ್ರಗಳಲ್ಲಿ ನಾನಿರಲೇಬೇಕೆಂಬ ಅನಿವಾರ್ಯವಿಲ್ಲ.

ನಿರ್ಮಾಣ ಪೂರ್ವದಲ್ಲಿ ಕಥೆಗಳ ಆಯ್ಕೆಗೆ ಹೆಚ್ಚು ಸಮಯವನ್ನು ವ್ಯಯಿಸುತ್ತೇನೆ. ಪ್ರತಿ ಕಥೆಗೂ ಕಮರ್ಷಿಯಲ್‌ ಗುಣವಿದೆಯೇ ಇಲ್ಲವೇ ಎಂದು ಪರಿಶೀಲಿಸುತ್ತೇನೆ. ನಿರ್ಮಾಣವೆಂಬುದು ಹಣಗಳಿಕೆಯ ಮಾಧ್ಯಮವಾಗಬೇಕು. ಅದಕ್ಕಾಗಿ ಮೊದಲೇ ತಯಾರಿ ಮಾಡಿಕೊಳ್ಳುತ್ತೇನೆ. ಕೇವಲ ಹಣಕ್ಕಾಗಿಯೇ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗಾಗಿಯೇ ವಿಕ್ಕಿ ಡೋನರ್‌ ಮತ್ತು ಮದ್ರಾಸ್‌ ಕೆಫೆಗಳಂಥ ಚಿತ್ರಗಳ ಆಯ್ಕೆ ಮಾಡಿಕೊಳ್ಳುತ್ತೇನೆ.

ಮದ್ರಾಸ್‌ ಕೆಫೆ ಅತಿ ಜಾಣ್ಮೆಯ, ಬಿಗಿ ನಿರೂಪಣೆಯ ಚಿತ್ರವಾಗಿತ್ತು. ಆ ಚಿತ್ರದಲ್ಲಿ ಸಾಕಷ್ಟು ಮಾಹಿತಿಗಳನ್ನು ಇಕ್ಕಿರಿದು ತುರುಕಿದಂತಾಗಿತ್ತು. ಆದರೂ ಅದು ಹಣಗಳಿಕೆಯಲ್ಲಿ ಹಿಂಬೀಳಲಿಲ್ಲ. ಕಮರ್ಷಿಯಲ್‌ ಸೂತ್ರವಿಟ್ಟುಕೊಂಡೇ ಚಿತ್ರನಿರ್ಮಾಣ ಮಾಡುತ್ತೇನೆ. ಸೃಜನಶೀಲವ್ಯಕ್ತಿಯಾಗಿರುವುದರಿಂದ ವಿಭಿನ್ನವಾದ ಪ್ರಯೋಗಗಳನ್ನೂ ವಸ್ತುವಿಷಯಗಳೊಂದಿಗೆ ಮಾಡುತ್ತಲೇ ಕಮರ್ಷಿಯಲ್‌ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ.

ಪರಮಾಣು... ಚಿತ್ರ ತಯಾರಿಯೂ ಹಾಗೆಯೇ. ಕಥೆ ಇಷ್ಟವಾಗಿತ್ತು. ಅದಕ್ಕಾಗಿ ಸಾಕಷ್ಟು ಕೆಲಸ ಮಾಡಿದೆವು. ರಾಷ್ಟ್ರೀಯತೆ, ದೇಶಭಕ್ತಿ ಏನೆನ್ನುವುದು ಸಿನಿಮಾದುದ್ದಕ್ಕೂ ತಣ್ಣಗೆ ತನ್ನ ಪಾತ್ರ ನಿರ್ವಹಿಸುತ್ತದೆ. ಹಣವೂ ಮಾಡುತ್ತಿದೆ. ನಿರ್ಮಾಣದಲ್ಲಿಯೂ ರಾಜಿಯಾಗುವುದಿಲ್ಲ. ಗುಣಮಟ್ಟದಲ್ಲೂ ರಾಜಿಯಾಗುವುದಿಲ್ಲ. ಇದೇ ನಿರ್ಮಾಣದ ಸೂತ್ರವಾಗಿದೆ’ ಎನ್ನುತ್ತಾರೆ ಜಾನ್‌ ಅಬ್ರಹಾಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.