ADVERTISEMENT

ಜಿಗಿತಕ್ಕೆ ಅಣಿಯಾಗಿ...

ಡಿ.ಗರುಡ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST
ಜಿಗಿತಕ್ಕೆ ಅಣಿಯಾಗಿ...
ಜಿಗಿತಕ್ಕೆ ಅಣಿಯಾಗಿ...   

ಇದ್ದಲ್ಲಿಗೆ ಬಂದು ಉಡಿಯೊಳಗೆ ಬೀಳುವುದಿಲ್ಲ ಅವಕಾಶಗಳು. ಆಗಸದ ತುಂಬಾ ಹರಡಿಕೊಂಡಿವೆ; ಹುಡುಕಿಕೊಂಡು ಹಾರಿ ಹೋಗಬೇಕು. ಕನಸುಗಳ ರೆಕ್ಕೆಗಳ ಕಟ್ಟಿಕೊಂಡು ಹಾರಿದ್ದಾಗಿದೆ. ಮುಗಿದಿಲ್ಲ ಪಯಣ. ಉತ್ಸಾಹವೂ ಉಡುಗಿಲ್ಲ. ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ... ಹೀಗೆ ಸಾಗಿದೆ ಬದುಕು. ಆಸೆಯ ಪೂರೈಸಿಕೊಂಡು ಗಟ್ಟಿಯಾದ ನೆಲೆಯೊಂದನ್ನು ಕಂಡುಕೊಳ್ಳುವ ಪ್ರಯತ್ನವೂ ನಿರಂತರ. ಇದೇ ತೆಳ್ಳನೆಯ, ಬೆಳ್ಳನೆಯ, ಚೆಲುವ ಕಂಗಳ, ಚಂಚಲ ನೋಟದ ಚೆಂದುಳ್ಳಿ ಇಶಿಕಾ ಕಥೆ.

ಇಷ್ಟಗಲ ಕಣ್ಣುಬಿಟ್ಟು ಇವಳಾಡುವ ಪ್ರತಿಯೊಂದು ಮಾತಿಗೂ ಮನಕ್ಕೆ ತಟ್ಟುವ ಶಕ್ತಿ. ಕಾಲೇಜು ದಿನಗಳಲ್ಲಿ ವೇದಿಕೆ ಹತ್ತಿ ನೃತ್ಯ ಮಾಡಿದ್ದಾಗಲೇ ಅಭಿನಯ ಕ್ಷೇತ್ರಕ್ಕೆ ಬರಲು ಸಿಕ್ಕಿತು ಸ್ಫೂರ್ತಿ. `ನಿನ್ನ ಕಂಗಳಲ್ಲಿ ಅದ್ಭುತ ಶಕ್ತಿಯಿದೆ. ಜನರನ್ನು ಹಿಡಿದಿಡುತ್ತೀಯಾ~ ಎಂದಿದ್ದರು ಆಗ ಪ್ರೇಕ್ಷಕ ಮಹಾಶಯರೊಬ್ಬರು. ಆಗಲೇ ಮನದಲ್ಲಿ ಮೊಳಕೆಯೊಡೆದ ಬಣ್ಣದ ಲೋಕದ ಕನಸು ಈಗ ಹೆಮ್ಮರವಾಗಿ ಬೆಳೆದಿದೆ. ಆದರೆ ಪ್ರತಿಭೆಯನ್ನು ಅನಾವರಣಗೊಳಿಸುವ ಸರಿಯಾದ ಒಂದು ಅವಕಾಶ ಸಿಕ್ಕಿಲ್ಲ ಎನ್ನುವ ಕೊರಗು. ಆದರೂ ಕೈಚೆಲ್ಲಿ ಕುಳಿತಿಲ್ಲ.

ಕೈಬೀಸಿ ಕರೆದ ಸಣ್ಣ ಪುಟ್ಟ ಪಾತ್ರಕ್ಕೂ ಬಣ್ಣ ಹಚ್ಚಿದ್ದಾಳೆ. ಹವ್ಯಾಸಿಗಳ ಕಿರುಚಿತ್ರವಿರಲಿ, ಅನುಭವಿಗಳ ಸಿನಿಮಾದಲ್ಲಿನ ಸಣ್ಣ ಪಾತ್ರವಿರಲಿ ಒಪ್ಪಿಕೊಂಡು ಶ್ರದ್ಧೆಯಿಂದ ಅಭಿನಯಿಸಿದ್ದಾಳೆ. ಯಾವುದೇ ಭಾಷೆಯನ್ನು ಸುಲಭವಾಗಿ ಗ್ರಹಿಸಿ ಅದಕ್ಕೆ ತಕ್ಕಂತೆ ಮುಖಭಾವ ತೋರಬಲ್ಲ ಗುಣವೇ ಇಶಿಕಾ ಪ್ಲಸ್ ಪಾಯಿಂಟ್. ಇಂಥದೊಂದು ಕಲಾತಂತ್ರ ಮೈಗೂಡಿಸಿಕೊಂಡಿದ್ದು ಪುಣೆಯ `ಎಫ್‌ಟಿಐಐ~ನಲ್ಲಿ ಅಭಿನಯ ಶಿಕ್ಷಣ ಪಡೆದ ಕಾಲದಲ್ಲಿ. ವಿವಿಧ ಭಾಷೆಯವರನ್ನು ಒಟ್ಟಿಗೆ ಕಂಡಿದ್ದು ಕೂಡ ಅಲ್ಲಿಯೇ.

ಈಗಾಗಲೇ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಏನೋ ತೃಪ್ತಿಯಿಲ್ಲ. ಅಭಿನಯದ ವಿಷಯದಲ್ಲಿ ಅಲ್ಲ; ಪ್ರಚಾರದ ನಿಟ್ಟಿನಲ್ಲಿ ಈ ಅತೃಪ್ತಿ. ಎಷ್ಟೇ ಇಂಥ ಸಣ್ಣ ಸಿನಿಮಾಗಳಲ್ಲಿ ಮಾಡಿದರೂ ಜನರು ಗುರುತಿಸುವುದಿಲ್ಲ ಎನ್ನುವ ಬೇಸರ. ಅದೇ ಕಮರ್ಶಿಯಲ್ ಚಿತ್ರಗಳಲ್ಲಿ ತೆರೆಯ ಮೇಲೆ ಮೂಡಿಬಂದರೆ ದೊಡ್ಡ ಅವಕಾಶಗಳ ಬಾಗಿಲು ತೆರೆಯುತ್ತದೆ ಎನ್ನುವ ಆಶಯ.

ಕೋಲ್ಗೇಟ್, ಆರ್‌ಸಿ ಕೋಲಾ, ಬಿರ್ಲಾ ಸನ್‌ಲೈಫ್, ಟಾಟಾ ಮೋಟಾರ್ಸ್ ಸೇರಿದಂತೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಈ ಮೀನುಕಂಗಳ ಹುಡುಗಿಗೆ ರಜತಪರದೆಯ ಮಿನುಗುತಾರೆ ಆಗುವ ಆಸೆ. ಸಿನಿಮಾಕ್ಕೆ ಕಾಲಿಟ್ಟರೆ ಅದು ತಂಗಿ, ನಾಯಕಿಯ ಗೆಳತಿಯಾಗಿ ಅಲ್ಲ ನಾಯಕಿಯಾಗಿ ಎನ್ನುವ ನಿರ್ಧಾರ ಮಾಡಿಕೊಂಡಿರುವ ಇಶಿಕಾ ಈಗ ಒಂದರ ಹಿಂದೊಂದು ಸ್ಕ್ರೀನ್ ಟೆಸ್ಟ್‌ಗಳಿಗೆ ಹೋಗುತ್ತಿದ್ದಾಳೆ.
 
ಕೆಲವು ನಿರ್ದೇಶಕರು `ತುಂಬಾ ಚಿಕ್ಕ ಹುಡುಗಿಯ ಹಾಗೆ ಕಾಣಿಸುತ್ತೀಯಾ~ ಎಂದು ಹೇಳಿ ಕಳುಹಿಸಿದ್ದೂ ಆಗಿದೆ. ಯಾರು ಏನೇ ಅಂದರೂ ತಾನು ಮುಂದೆ ನುಗ್ಗಬೇಕು ಎನ್ನುವ ವಿಶ್ವಾಸ ಬೆಳೆಸಿಕೊಂಡಿರುವ ಇಪ್ಪತ್ತರ ಬಾಲೆಗೆ ತಮಿಳು ಭಾಷೆಯ ಕಿರುಚಿತ್ರ `ಪೆರುಮಾನ್~ನಲ್ಲಿನ ಅಭಿನಯ ಸಂತಸ ನೀಡಿದೆ. ಇಂಥದೊಂದು `ಅವಕಾಶ ದೊಡ್ಡ ಸಿನಿಮಾದಲ್ಲಿ ಸಿಕ್ಕರೆ...!~ ಅದೃಷ್ಟವೇ ಬದಲಾಗುತ್ತದೆ ಎನ್ನುವುದು ಅವಳ ಅನಿಸಿಕೆ.

ಅಭಿನಯದ ಜೊತೆಗೆ ನೃತ್ಯ ಕ್ಷೇತ್ರದಲ್ಲಿಯೂ ಪರಿಣತಿ ಸಾಧಿಸುವ ಉದ್ದೇಶ ಹೊಂದಿರುವ ಇಶಿಕಾ ಈಗ ಕಲಾಗುರು ರಾಜಾ ರಾಧಾ ಅವರಿಂದ ನಾಟ್ಯ ತರಬೇತಿ ಪಡೆಯುತ್ತಿದ್ದಾಳೆ.

ಅವಕಾಶಗಳ ಹುಡುಕಿಕೊಂಡು ಓಡಾಡುವ ಈ ಕಾಲದಲ್ಲಿ ನೃತ್ಯದ ಕಡೆಗೆ ಸಂಪೂರ್ಣ ಗಮನ ಕೊಡುವುದು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗೂ ಇವಳಿಗಿದೆ. ಆದರೆ ಎಲ್ಲಿಯೇ ಇದ್ದರೂ ಎರಡು ತಾಸು ನೃತ್ಯಾಭ್ಯಾಸ ತಪ್ಪಿಸುವುದಿಲ್ಲ. ಭವಿಷ್ಯದಲ್ಲಿ ನೃತ್ಯ ಕಲೆಯೇ ಬದುಕಿನ ಮಾರ್ಗ ಆಗಲೂಬಹುದು ಎನ್ನುವ ಸಂಕೇತವನ್ನೂ ನೀಡುತ್ತಾಳೆ ಈ ಚಂಚಲ ಕಂಗಳ ಚೆಲುವೆ.

ಹೀಗೆ ಅಭಿನಯ ಹಾಗೂ ನೃತ್ಯ ಎರಡರಲ್ಲಿಯೂ ಆಸಕ್ತಿ ಉಳಿಸಿಕೊಂಡಿರುವ ಇಶಿಕಾ `ಭವಿಷ್ಯದಲ್ಲಿ ಹಿರಿತೆರೆಯ ಮೇಲೆ ಮಿಂಚುತ್ತೇನೆ~ ಎನ್ನುತ್ತಾಳೆ.
 
ಸದ್ಯ `ಸ್ಟ್ರಗ್ಲಿಂಗ್~; ಮುಂದೊಂದು ದಿನ `ಸ್ಟಾರ್~ ಎಂದು ಹೇಳಿ ಅವಳು ನಕ್ಕಾಗ ಕಣ್ಣಂಚಿನಲ್ಲೊಂದು ಬೆಳ್ಳಿಗೆರೆ ಮಿಂಚಿ ಮಾಯ!


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT