ADVERTISEMENT

ಜೀವಿಗಳ ಧ್ವನಿಯಾಗಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST
ಜೀವಿಗಳ ಧ್ವನಿಯಾಗಿ
ಜೀವಿಗಳ ಧ್ವನಿಯಾಗಿ   

ಕೇರಳ ಮೂಲದ ಕಲಾವಿದ ಮ್ಯಾಥ್ಯು ಕುರಿಯನ್ ಅಬುಧಾಬಿಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಆದರೆ ತಮ್ಮ ನೆಲದ ನೆನಪು ಅವರನ್ನು ಬಿಟ್ಟೂ ಬಿಡದೆ ಕಾಡುತ್ತಿದೆ.

ಎರಡು ದಶಕಗಳಲ್ಲಿ ಬದಲಾಗುತ್ತಿರುವ ಕೇರಳದ ಮುಖಗಳು ಪ್ರಕೃತಿ ಪ್ರೀತಿಸುವ ಮ್ಯಾಥ್ಯು ಅವರಲ್ಲಿ ತಲ್ಲಣ ಹುಟ್ಟಿಸಿವೆ. ತಾವು ಆಟವಾಡುತ್ತ ಬೆಳೆದಿದ್ದ ದಿನ್ನೆ ಪ್ರದೇಶಗಳೆಲ್ಲವನ್ನೂ ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಯಾಗಿಸಿ ಭೂಮಿಗೆ ಸವರಲಾಗಿದೆ. ಕಾಡುಗಳು ನೆಲಕ್ಕುರುಳಿವೆ.

ದೇವರ ನಾಡು ಕೇರಳವನ್ನು ಜನರು ಪ್ರಗತಿಯ ಹೆಸರಿನಲ್ಲಿ ಸ್ವರ್ಗದಿಂದ ನರಕವಾಗಿಸುತ್ತಿದ್ದಾರೆ ಎನ್ನುವ ಆತಂಕ ಮ್ಯಾಥ್ಯು ಅವರದ್ದು.

ADVERTISEMENT

`ಕಾಡು, ಕಣಿವೆ ಮಾಯವಾಯಿತು. ಜನರ ಬದುಕಿನಲ್ಲಿ ಬದಲಾವಣೆಯಾಗಿಲ್ಲ. ಆದರೆ ಬದುಕು ಕಸಿದು ಹೋದದ್ದು ಬಣ್ಣ ಬಣ್ಣದ ಹಕ್ಕಿಗಳದ್ದು. ನೆಲದ ಮೇಲೆ ತೆವಳುತ್ತ ಬದುಕುತ್ತಿದ್ದ ತರಹೇವಾರಿ ಹುಳುಗಳದ್ದು. ಈ ಜೀವಿಗಳ ಧ್ವನಿಯಾಗಿವೆ~ ನನ್ನ ಚಿತ್ರಗಳು ಎನ್ನುತ್ತಾರೆ ಮ್ಯಾಥ್ಯು.

`ಮೊದಲೆಲ್ಲ ಮಳೆ ನಿಲ್ಲದ ಬಗ್ಗೆ ದೂರುಗಳಿರುತ್ತಿದ್ದವು. ಈಗಲೂ ಮಳೆಯ ಬಗ್ಗೆ ದೂರುಗಳಿವೆ. ಆದರೆ ಕೊರತೆಯ ದೂರುಗಳು. ಮಳೆ ಕಂಡು ಯಾವ ಕಾಲವಾಯಿತು ಎನ್ನುವ ಜನರಿದ್ದಾರೆ. ಕಾಡು ಕಳೆದು ಹೋಯಿತೇ ಎಂಬ ಭೀತಿ ಕಾಡುತ್ತದೆ. ನಾಡು ಬೆಳೆಯುತ್ತಲೇ ಮಳೆ ಕಾಣೆಯಾಯಿತು ಎನ್ನಿಸುತ್ತದೆ. ಇಂಥ ಎಲ್ಲ ತಲ್ಲಣಗಳೇ ಈ ಚಿತ್ರದಲ್ಲಿ ರಂಗುತುಂಬಿಕೊಂಡಿವೆ~ ಎಂದು ಮ್ಯಾಥ್ಯು ಈ ಚಿತ್ರಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಮ್ಯಾಥ್ಯು ಕುರಿಯನ್ ಕಲಾಕೃತಿಗಳ ಪ್ರದರ್ಶನವನ್ನು ಇದೇ 23ರವರೆಗೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಿನೈಸೆನ್ಸ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಯ: ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.