ADVERTISEMENT

ಜೀವ ಭಾವದ ಅಭಿವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 19:30 IST
Last Updated 20 ಜುಲೈ 2012, 19:30 IST
ಜೀವ ಭಾವದ ಅಭಿವ್ಯಕ್ತಿ
ಜೀವ ಭಾವದ ಅಭಿವ್ಯಕ್ತಿ   

ಕಲಾಪ

ಕಿಟಕಿಯಲ್ಲಿ ತೂರಿ ಮನೆಯೊಳಗಿಳಿಯುವ ಸೂರ್ಯನನ್ನು ತಡೆದು, ಇಲ್ಲಿ ನೀನು ಇಷ್ಟಿಷ್ಟು ಮಾತ್ರ ಅಡ್ಡಾಡಿದರೆ ಸಾಕು ಎಂದು ಮೂಗುದಾರ ತೊಡಿಸುವ ಪರದೆ, ಅಮ್ಮ ತೊಟ್ಟ ಸೀರೆ, ಗೋಡೆಯ ಅಂದ ಹೆಚ್ಚಿಸಿದ ಕನ್ನಡಿ...

ಹೀಗೆ ಒಂದೊಂದೂ ಆಕೆಯ ಕಣ್ಣಿಗೆ ಭಿನ್ನವಾಗಿ, ಪ್ರತಿ ಬಾರಿಯೂ ವಿಭಿನ್ನವಾಗಿ ಗೋಚರಿಸುತ್ತವಂತೆ. ಅವು ಎದ್ದು ಮಾತನಾಡಿದಂತೆ, ಇನ್ಯಾರದೋ ವ್ಯಕ್ತಿತ್ವದ ಭಾಗವಾದಂತೆ ಅವರು ಊಹಿಸುತ್ತಾರೆ... ಮರುಕ್ಷಣ ಅವರ ಕುಂಚದಲ್ಲಿ ಅವರು ಕಲಾಕೃತಿಗಳಾಗಿ ಮೂಡುತ್ತಾರೆ!

ಮುಂಬೈನಲ್ಲಿ ಹುಟ್ಟಿ ಬೆಳೆದ ರೇವತಿ ಗಾಂಗಳ್ ಚಿತ್ರಕಲಾವಿದೆಯ ಕಲಾಸಕ್ತಿ ಗರಿಗೆದರಿದ ಬಗೆಯಿದು.

`ಸೀರೆ ನನ್ನ ಕಣ್ಣಿಗೆ ಬರಿಯ ಸೀರೆಯಾಗಿ ಕಾಣಿಸುವುದಿಲ್ಲ. ಅದರಲ್ಲೊಂದು ಭಾವವನ್ನು ಕಾಣುತ್ತೇನೆ. ಪರದೆಯೂ ಮಾತನಾಡುತ್ತದೆ. ಕಣ್ಣಿಗೆ ಕಾಣುವ ಪ್ರತಿಯೊಂದು ವಸ್ತುವನ್ನೂ `ಕ್ಯಾನ್ವಾಸ್‌ನೊಳಗಿನ ಕಲಾಕೃತಿಯಾಗಿ~ ಕಲ್ಪಿಸಿಕೊಳ್ಳುತ್ತೇನೆ. ಬಣ್ಣದ ಮೂಲಕ ಜೀವ-ಭಾವ ತುಂಬುತ್ತೇನೆ. ಭಾವನೆಗಳನ್ನು ಕುಂಚದಲ್ಲಿ ಸೆರೆಹಿಡಿಯುವುದು ಸುಲಭವಲ್ಲ. ಒಂದು ಸಣ್ಣ ಗೆರೆಯೂ ಭಾವನೆಯ ಗತಿಯನ್ನೇ ಬದಲಾಯಿಸಿಬಿಡಬಹುದು~ ಎಂದು ವಿವರಿಸುತ್ತಾರೆ ರೇವತಿ.

ಮುಂಬೈನ ಸರ್ ಜೆ.ಜೆ ಕಲಾ ಶಾಲೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಅಲ್ಲಿನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಗ್ರಾಫಿಕ್ ಡಿಸೈನಿಂಗ್ ಶಿಕ್ಷಕಿಯಾಗಿ ಕೆಲಸ ಮಾಡಿದೆ. ಲಂಡನ್, ಪ್ಯಾರಿಸ್, ಬ್ರುಸೆಲ್ಸ್, ಮಸ್ಕತ್, ದುಬೈ, ದೋಹಾ, ಮನಾಮದಲ್ಲಿಯೂ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಜನ ಮೆಚ್ಚುಗೆ ಗಳಿಸಿರುವ ರೇವತಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರದರ್ಶನ ಹಮ್ಮಿಕೊಂಡಿದ್ದಾರೆ.

ನಗರದ ರಿನೈಸನ್ಸ್ ಗ್ಯಾಲರಿಯಲ್ಲಿ 23ರಿಂದ ಪ್ರದರ್ಶನ ಆರಂಭ. ಇಪ್ಪತ್ತಕ್ಕೂ ಹೆಚ್ಚು ಕಲಾಕೃತಿಗಳನ್ನು ವೀಕ್ಷಿಸಬಹುದು.

`ಟು ಮೈಂಡ್ಸ್~ ಕಲಾಕೃತಿ, ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲಕ್ಕೀಡಾಗುವ ಸಂದರ್ಭವನ್ನು ಸೆರೆಹಿಡಿದಿದೆ. `ಎಂಬ್ರೇಸ್~ನಲ್ಲಿ ದಂಪತಿಯ ಭಾವದೀಪ್ತಿಯ ಬಿಂಬವಿದೆ.

ನಿನಗೆ ನಾನು ನನಗೆ ನೀನು ಎಂಬ ಭರವಸೆ ತುಂಬುವಂತೆ, ನೀನು ನನ್ನ ಸ್ವಂತ ಎಂದು ಬಂಧವನ್ನು ಗಟ್ಟಿಗೊಳಿಸುವಂತೆ, ಹೀಗೇ ಸದಾಕಾಲ ಇರಲಿ ಈ ಬಂಧನ ಎಂಬಂತೆ ಆ ಬೆಚ್ಚಗಿನ ಅಪ್ಪುಗೆ ಹೇಳುವಂತಿದೆ.

ಕನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ರಿನೈಸನ್ಸ್ ಗ್ಯಾಲರಿಯಲ್ಲಿ ಜು.23ರಿಂದ ಜು.28ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರ ವರೆಗೂ ಪ್ರದರ್ಶನವಿರುತ್ತದೆ. ಸಂಪರ್ಕ ಸಂಖ್ಯೆ: 97408 58594.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT