ADVERTISEMENT

ಜ್ವಲಂತ ಸಮಸ್ಯೆಗಳಿಗೆ ಕಲೆಯ ಪ್ರತಿಸ್ಪಂದನ

ಅನಿತಾ ಎಚ್.
Published 14 ಅಕ್ಟೋಬರ್ 2014, 19:30 IST
Last Updated 14 ಅಕ್ಟೋಬರ್ 2014, 19:30 IST
ಜ್ವಲಂತ ಸಮಸ್ಯೆಗಳಿಗೆ ಕಲೆಯ ಪ್ರತಿಸ್ಪಂದನ
ಜ್ವಲಂತ ಸಮಸ್ಯೆಗಳಿಗೆ ಕಲೆಯ ಪ್ರತಿಸ್ಪಂದನ   

ಜನಸಂಖ್ಯಾಸ್ಫೋಟ, ಮಾನವನ ಮೆದುಳಿನ ಕ್ರಿಯಾಶೀಲತೆ ಕುರಿತಾದ ಕಲಾಕೃತಿಗಳ ನಿರ್ಮಾಣ ಹಾಗೂ ವಿವಿಧ ಪ್ರವಾಸಿ ತಾಣಗಳನ್ನು ತಮ್ಮ ಚಿತ್ರಕಲೆಯಲ್ಲಿ ಸೆರೆಹಿಡಿದಿರುವ ಅಕ್ಷಯಾ ಕೆ. ಮತ್ತು ಪ್ರಣವ್‌ ಕೆ. ಅವರು ನಗರದ ರಂಗೋಲಿ ಮೆಟ್ರೊ ಕಲಾ ಕೇಂದ್ರದ ‘ಬೆಳಕು’ ಗ್ಯಾಲರಿಯಲ್ಲಿ  ಇತ್ತೀಚೆಗೆ ಪ್ರದರ್ಶನ ಏರ್ಪಡಿಸಿದ್ದರು.

ಇಲ್ಲಿನ ಚಿತ್ರಕಲಾ ಪರಿಷತ್ತಿನಲ್ಲಿ ಶಿಲ್ಪಕಲೆ ವಿಷಯದಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿರುವ ಅಕ್ಷಯಾ ಅವರು ತಮ್ಮ ಪ್ರವಾಸದ ವೇಳೆ ಕಂಡ ದೃಶ್ಯಾವಳಿಗಳನ್ನು ಚಿತ್ರಕಲೆಯಲ್ಲಿ ಅದ್ಭುತವಾಗಿ ಹಿಡಿದಿಟ್ಟಿದ್ದರು. ಇಟಲಿಯ ಚಿಂಕ್‌ ತೆರ್ರೆಯ ಸುಂದರ ಪರಿಸರವನ್ನೂ ಅಲ್ಲಿ ಕಾಣಲು ಸಾಧ್ಯವಾಗಿತ್ತು. ಜನಸಂಖ್ಯಾಸ್ಫೋಟ ದೇಶದ ದೊಡ್ಡ ಸಮಸ್ಯೆಯಾಗಿದ್ದು, ಸಮಸ್ಯೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲು ನಿರ್ಮಿಸಿದ್ದ ಕಲಾಕೃತಿ ಎಲ್ಲರ ಆಸಕ್ತಿ ಕೆರಳಿಸುವಂತಿತ್ತು.

ಹಾಸಿಗೆಯ ಮಧ್ಯಭಾಗವನ್ನು ಕೊರೆದು, ಅಲ್ಲಿ ಹುಲ್ಲುಹಾಸು ನಿರ್ಮಾಣ ಮಾಡಿದ್ದ ಅವರು, ‘ನಮ್ಮ ದೇಶದಲ್ಲಿ ಉತ್ಪಾದಿಸುವ ಆಹಾರ ಪದಾರ್ಥಗಳ ಪ್ರಮಾಣಕ್ಕಿಂತ ಮಕ್ಕಳ ಉತ್ಪಾದನೆ ಹೆಚ್ಚಿಗೆ ಆಗಬಾರದು. ಜನಸಂಖ್ಯಾ ಹೆಚ್ಚಳ ಮನುಕುಲದ ನಾಶಕ್ಕೆ ದಾರಿ ಮಾಡಿಕೊಡಲಿದ್ದು, ಸಮಸ್ಯೆಯ ನಿವಾರಣೆಯ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಪ್ರತಿಪಾದಿಸಿದ್ದರು.
ಅಂತೆಯೇ ಮಾನವನ ಮೆದುಳಿನ ಕ್ರಿಯಾಶೀಲತೆಯ ವಿಷಯವನ್ನು ಆಧರಿಸಿ ಪ್ರಣವ್‌ ಕೆ. ಅವರು ನಿರ್ಮಿಸಿದ್ದ ಕಲಾಕೃತಿಯೂ ವಿಶೇಷವಾಗಿತ್ತು.

ಇದಕ್ಕಾಗಿ ಒಂದು ಬದಿಯಲ್ಲಿ ಮಾನವನ ಮೆದುಳಿನ ಬಳ್ಳಿಯನ್ನೂ ಮತ್ತೊಂದು ಕಡೆ ಸಸ್ಯಗಳ ಕುಂಡಗಳನ್ನೂ ಇಟ್ಟಿದ್ದ ಪ್ರಣವ್‌ ಅವರು ‘ಸಾಮಾನ್ಯವಾಗಿ ಮನೆ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಚೆನ್ನಾಗಿ ಓದಬೇಕು, ಓದಿ ಒಳ್ಳೆಯ ಕೆಲಸ ಹಿಡಿಯಬೇಕು, ಹೆಚ್ಚು ಸಂಪಾದಿಸಬೇಕು ಎಂಬುದಕ್ಕೆ ಮಾತ್ರವೇ ಒತ್ತು ನೀಡಲಾಗುತ್ತದೆ. ಆದರೆ ಅದರ ಆಚೆಗೆ ನಾವು ಮಾಡಲು ಸಾಧ್ಯವಿರಬಹುದಾದ ಅಂಶಗಳ ಬಗ್ಗೆ ತಿಳಿವಳಿಕೆ ನೀಡುವುದಿಲ್ಲ. ಮಾನವನ ಮೆದುಳಿಗೆ ಅಸಾಧ್ಯವಾದುದನ್ನೂ ಸಾಧಿಸಬಲ್ಲ ಶಕ್ತಿ, ಕ್ರಿಯಾಶೀಲತೆ ಇದ್ದು, ಇದಕ್ಕೆ ಪೂರಕ ವಾತಾವರಣ ನಿರ್ಮಾಣವಾಗಬೇಕು’ ಎಂಬ ಸಂದೇಶವನ್ನು ನೀಡಿದ್ದರು.

‘ನಾವು ಮಾಡಿದ ಕೆಲಸವನ್ನು ಮತ್ತೊಬ್ಬರು ವಿಮರ್ಶಿಸಿದಾಗಲೇ ಇನ್ನೂ ಹೆಚ್ಚಿನ ಸಾಧನೆ ತೋರಲು ಸಾಧ್ಯ. ಹೊಗಳುವವರಿಗಿಂತ ತೆಗಳುವವರು ನಮ್ಮ ನಿಜವಾದ ಮಾರ್ಗದರ್ಶಕರು’ ಎನ್ನುವ ಪ್ರಣವ್‌, ಆ್ಯನಿಮೇಷನ್‌ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದು ಸದ್ಯ ಸ್ನೇಹಿತರ ಜೊತೆಗೂಡಿ ಲಾಜಿಕ್‌ ಅಂಡ್‌ ಮ್ಯಾಡ್‌ನೆಸ್‌ ಕ್ರಿಯೇಟೀವ್‌ ಲ್ಯಾಬ್‌ ಕಂಪೆನಿ ನಡೆಸುತ್ತಿದ್ದಾರೆ.

ಮಾಹಿತಿಗೆ: ಅಕ್ಷಯಾ ಕೆ. : ೯೫೩೮೦೬೭೭೬೩
ಪ್ರಣವ್‌ ಕೆ. : ೯೯೦೨೭೭೨೯೪೦

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.