ADVERTISEMENT

ಟಿಕೆಟ್‌ ಕೊಳ್ಳಲು ಹಣ ಇಲ್ಲದೇ ಹೋದಾಗ...

ಬಸ್ ಕತೆ

ಸುಂದರ ರಾಮಮೂರ್ತಿ, ಜಯನಗರ.
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಸುಮಾರು ಇಪ್ಪತ್ತು ವರ್ಷದ ಹಿಂದೆ ನಾನು ಮತ್ತು ನನ್ನ ಸಹೋದ್ಯೋಗಿ ಸರ್ಕಾರಿ ಕರ್ತವ್ಯದ ನಿಮಿತ್ತ ಕಡೂರಿಗೆ ಹೋಗಿದ್ದೆವು. ಕೆಲಸ ಮುಗಿಸಿ ತಕ್ಷಣ ನನ್ನ ಜೊತೆಗಿದ್ದವರು ಬೆಂಗಳೂರಿಗೆ ಹಿಂತಿರುಗಿದರೆ, ನಾನು ಮಾರನೇ ದಿನ  ಬೆಂಗಳೂರಿಗೆ ಹೊರಟಿದ್ದೆ. ಮಧ್ಯಾಹ್ನ ಬಸ್‌ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿ ಎಳೆನೀರು ಕುಡಿದು, ಹಣ ನೀಡಿದೆ.

ಉಳಿದ ಹಣ ಜೇಬಿನಲ್ಲೇ ಇತ್ತು. ನಿಲ್ದಾಣದಲ್ಲಿ ಬೆಂಗಳೂರಿಗೆ ಬರುವ ಸೆಮಿ ಲಕ್ಷುರಿ ಬಸ್‌ ಹತ್ತಿದೆ. ಬಹಳ ಜನಸಂದಣಿ ಇತ್ತು. ನಾನು ಅವಸರದಲ್ಲಿ ಸ್ಥಳ ಇಲ್ಲದೆ ಬಾಗಿಲಲ್ಲೇ ನಿಂತಿದ್ದೆ. ನಿರ್ವಾಹಕ ಟಿಕೆಟ್‌ ಕೇಳುವವರೆಗೂ ಹಣದ ಬಗ್ಗೆ ಗಮನಹರಿಸಲಿಲ್ಲ. ಟಿಕೆಟ್‌ ಕೊಳ್ಳಲು ಹಣ ತೆಗೆದುಕೊಳ್ಳಲು ಪ್ಯಾಂಟಿನ ಜೇಬಿಗೆ ಕೈ ಹಾಕಿದರೆ ಪರ್ಸ್‌ ಇರಲಿಲ್ಲ.  ಆ ಕ್ಷಣ ದಿಕ್ಕೇ ತೋಚದಂತಾಗಿತ್ತು. ನನ್ನ ಸಹೋದ್ಯೋಗಿ ಹಿಂದಿನ ದಿನವೇ ಊರಿಗೆ ಮರಳಿದ್ದ.

ಪರಿಚಯದವರಾರೂ ಬಸ್‌ನಲ್ಲಿ ಇಲ್ಲ. ಗುರ್ತು  ಪರಿಚಯವಿಲ್ಲದ ಊರು. ಧೈರ್ಯ ಮಾಡಿ ನಿರ್ವಾಹಕರಿಗೆ ಪಿಕ್‌ಪಾಕೆಟ್‌ ಆಗಿರುವ ವಿಚಾರ ಹೇಳಿದೆ. ಬೆಂಗಳೂರಿಗೆ ತಲುಪಿದ ಮೇಲೆ ಹಣ ಮರಳಿಸುವುದಾಗಿ ತಿಳಿಸಿದೆ.  ನಿರ್ವಾಹಕ ಎಲ್ಲವನ್ನೂ ಅರ್ಥ ಮಾಡಿಕೊಂಡವರಂತೆ ಒಂದೂ ಮರುಮಾತನಾಡದೆ ಟಿಕೆಟ್‌ ನೀಡಿದರು. ಆಗ ಟಿಕೆಟ್‌ ದರ ಇದ್ದದ್ದು 31 ರೂಪಾಯಿ.

ಬೆಂಗಳೂರು ಬಸ್‌ ನಿಲ್ದಾಣಕ್ಕೆ ಬಂದ ಮೇಲೆ ಸ್ವಲ್ಪ ಸಮಯದಲ್ಲಿ ಹಣ ತಂದುಕೊಡುವುದಾಗಿ ಹೇಳಿದೆ. ‘ನಿಮ್ಮ ಕೈಚೀಲವನ್ನು ಇಲ್ಲಿ ಇಟ್ಟು ಹೋಗಿ. ನಾನು ಇಲ್ಲದಿದ್ದರೆ ಸೆಕ್ಯುರಿಟಿ ಬಳಿ ಹಣ ಕೊಟ್ಟು ಚೀಲ ಕೊಂಡುಹೋಗಿ’ ಎಂದು ಆತ ಹೇಳಿದ. ನಾನು ಹಾಗೆಯೇ ಮಾಡಿದೆ. ನನ್ನ ಮಟ್ಟಿಗೆ ಇದು ಸ್ಮರಣೀಯ ಘಟನೆ.
–ಸುಂದರ ರಾಮಮೂರ್ತಿ, ಜಯನಗರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.