ADVERTISEMENT

ಟೀಕೆ ಬೇಡ ಪ್ರೋತ್ಸಾಹ ಬೇಕು

ಪ್ರಜಾವಾಣಿ ವಿಶೇಷ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಅವಕಾಶಗಳು ಹುಡುಕಿಕೊಂಡು ಬರಬೇಕಾದರೆ ನಮ್ಮಲ್ಲಿ ಪ್ರತಿಭೆ ಇರಬೇಕು ಎನ್ನುವ ರೆನಿಟಾ ಅವರು ನಗರದಲ್ಲಿ ನಡೆದ ಬ್ಲೆಂಡರ್ಸ್‌ ಪ್ರೈಡ್ ಫ್ಯಾಷನ್ ಶೋನಲ್ಲಿ ಹಲವಾರು ವಿನ್ಯಾಸಕರ ದಿರಿಸು ತೊಟ್ಟು ರ್‍ಯಾಂಪ್ ಮೇಲೆ ಮೆರೆದರು. ಗೋವಾ ಮೂಲದ ಈ ಬೆಡಗಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನಗರದ ನಾಗಾರ್ಜುನ ಹೋಟೆಲ್‌ನಲ್ಲಿ ಸಿಗುವ ಆಂಧ್ರ ಚಿಲ್ಲಿ ಚಿಕನ್ ಎಂದರೆ ಬಾಯಿಚಪ್ಪರಿಸಿಕೊಂಡು ತಿನ್ನುತ್ತಾರಂತೆ. ಇನ್ನು ಸಮಯ ಸಿಕ್ಕಾಗ ಗೆಳತಿಯರ ಜತೆ ಸೇರಿಕೊಂಡು ಯುಬಿ ಸಿಟಿಯಲ್ಲಿ ಒಂದು ಸುತ್ತು ಹೊಡೆದು ಟೈಂಪಾಸ್ ಮಾಡುತ್ತಾರಂತೆ.

ಮಾಡೆಲಿಂಗ್ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಯಾಕೆ?
ನಾನು ಈ ಕ್ಷೇತ್ರವನ್ನು ಮೊದಲು ಆಯ್ಕೆ ಮಾಡಿಕೊಂಡಿದ್ದು ಪಾಕೆಟ್ ಮನಿಗಾಗಿ. ಈ ಹವ್ಯಾಸವೇ ಇಂದು ನನಗೆ ರೂಪದರ್ಶಿ ಪಟ್ಟ ನೀಡಿದೆ. ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಆದರೆ ಅಪ್ಪ, ಅಮ್ಮನ ಊರು ಕಡಲ ತೀರದ ಗೋವಾ. ಮಾಡೆಲಿಂಗ್ ಅಲ್ಲದೆ ಬೇರೆ ಸಾಕ್ಷ್ಯಚಿತ್ರದಲ್ಲೂ ತೊಡಗಿಸಿಕೊಂಡಿದ್ದೇನೆ. ಫೋಟೊಗ್ರಫಿ ಮತ್ತು ಮೂವಿ ಮೇಕಿಂಗ್‌ನಲ್ಲಿ ಪದವಿ ಆಗಿದೆ.

ಈ ಕ್ಷೇತ್ರದಲ್ಲಿ ನೆಲೆಯೂರಲು ನೀವು ಅನುಸರಿಸಿದ ಮಾರ್ಗ?
ಯಾವುದೇ ಫ್ಯಾಷನ್ ನಿಯತಕಾಲಿಕೆ, ಬ್ಲಾಗ್‌ಗಳನ್ನು ನಾನು ಓದಲ್ಲ. ನನ್ನ ಸ್ಟೈಲ್ ಯಾವುದು ಎಂಬುವುದು ನನಗೆ ಸ್ಪಷ್ಟವಿದೆ. ವಿನ್ಯಾಸಕರು ವಿನ್ಯಾಸ ಮಾಡಿದ ದಿರಿಸಿಗೆ ಜೀವ ತುಂಬುವ ಕೆಲಸ ನಾನು ಮಾಡಬೇಕಾಗಿರುವುದು. ಅದನ್ನು ಶ್ರದ್ಧೆಯಿಂದ ಮಾಡುತ್ತೇನೆ.

ಫ್ಯಾಷನ್ ಬಗ್ಗೆ ನಿಮ್ಮ ಅಭಿಪ್ರಾಯ?
ನನ್ನ ದೇಹಸಿರಿಗೆ ಯಾವ ಬಟ್ಟೆ ಸರಿಹೊಂದುತ್ತದೆಯೋ ಅದನ್ನು ಧರಿಸುತ್ತೇನೆ. ಫ್ಯಾಷನ್ ಟ್ರೆಂಡ್ ಎಂದು ಕಣ್ಣುಮುಚ್ಚಿಕೊಂಡು ಯಾವುದೋ ಉಡುಪು ಧರಿಸಿ ನನ್ನತನವನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ.

ಬ್ಯಾಕ್ ಸ್ಟೇಜ್ ಹೇಗಿರುತ್ತದೆ?
ರ್‍ಯಾಂಪ್ ಮೇಲೆ ಎಲ್ಲರೂ ಗಂಭೀರರಾಗಿರುತ್ತಾರೆ. ಕ್ಯಾಮೆರಾಗಳಿಗೆ ಪೋಸು ನೀಡುತ್ತಾ, ವಿನ್ಯಾಸಕರ ಪರಿಶ್ರಮವನ್ನು ನಾವು ತೋರಿಸಬೇಕಾಗುತ್ತದೆ. ಆದೇ ಬ್ಯಾಕ್‌ಸ್ಟೇಜ್‌ನಲ್ಲಿ ಈ ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ಬಾರಿ ಶೋ ಮುಗಿಸಿಕೊಂಡು ಎಲ್ಲರೂ ಅವರವರ ಪಾಡಿಗಿರುತ್ತಾರೆ. ಕೆಲವೊಮ್ಮೆ ತಮಾಷೆ, ಆತ್ಮೀಯ ಮಾತುಕತೆಗೂ ಅಲ್ಲಿ ಜಾಗವಿರುತ್ತದೆ.

ನಗರದಲ್ಲಿ ಮಾಡೆಲ್‌ಗಳಿಗೆ ಅವಕಾಶ ಹೇಗಿದೆ?
ಚೆನ್ನಾಗಿದೆ. ಬೇರೆ ಬೇರೆ ದೇಶಗಳಿಂದ ರೂಪದರ್ಶಿಗಳು ಇಲ್ಲಿಗೆ ಬರುತ್ತಾರೆ. ಅವರ ಶೈಲಿಗಳನ್ನು ನಾವು ನೋಡಬಹುದು. ಒಳ್ಳೆಯ ಅಂಶಗಳನ್ನು ಅವರಿಂದಲೂ ಕಲಿಯಬಹುದು.

ನಿಮ್ಮ ಸಾಧನೆಗೆ ಸ್ಫೂರ್ತಿ?
ಅಪ್ಪ- ಅಮ್ಮ. ರ್‍ಯಾಂಪ್ ಕೂಡ ನನ್ನ ಸಾಧನೆಗೆ ಸ್ಫೂರ್ತಿ. ರ್‍ಯಾಂಪ್ ಮೇಲೆ ಹೆಜ್ಜೆ ಇಡುವುದೇ ಮಜವಾಗಿರುತ್ತದೆ.

ನಗರದಲ್ಲಿ ನಿಮ್ಮ ಶಾಪಿಂಗ್ ಸ್ಪಾಟ್‌ಗಳು ಯಾವುದು?
ಎಲ್ಲಾ ಕಡೆ ಶಾಪಿಂಗ್ ಮಾಡುತ್ತೇನೆ. ಮಾಲ್‌ನಲ್ಲೂ ಮಾಡುತ್ತೇನೆ, ರಸ್ತೆಯ ಬದಿಯಲ್ಲೂ ಖರೀದಿಸುತ್ತೇನೆ. ಎಲ್ಲಿ ಚೆನ್ನಾಗಿ ಕಾಣಿಸುತ್ತದೆಯೋ ಅಲ್ಲಿ ತೆಗೆದುಕೊಳ್ಳುತ್ತೇನೆ.

ಮಾಡೆಲಿಂಗ್ ಬಗ್ಗೆ ನಿಮ್ಮ ಅಭಿಪ್ರಾಯ?
ಇದು ಕೂಡ ಒಂದು ವೃತ್ತಿ. ಈ ವೃತ್ತಿಯಲ್ಲಿ ಇಲ್ಲಿಯವರನ್ನು ಅಲ್ಲದೆ ಬೇರೆ ಬೇರೆ ದೇಶದವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಅವರ ಒಡನಾಟದಿಂದ ನಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಇನ್ನೂ ಹೆಚ್ಚು ಶ್ರಮಪಡಲು ಮನಸ್ಸು ಬಯಸುತ್ತದೆ.

ನಿಮಗೆ ಇಷ್ಟವಾಗದೇ ಇರುವ ವಿಷಯಗಳು ಯಾವುವು?
ಟೀಕೆಗಳು ಇಷ್ಟವಾಗಲ್ಲ. ಇವು ನಮ್ಮನ್ನು ಮತ್ತಷ್ಟು ಕುಗ್ಗಿಸುತ್ತೆ. ಹಾಗಂತ ಎಲ್ಲಾ ಟೀಕೆಗಳು ಇದೇ ಕ್ಷೇತ್ರದಲ್ಲಿ ಇವೆ ಎಂದಲ್ಲ. ಇದೆಲ್ಲಾ ಸಾಮಾನ್ಯ. ಎಲ್ಲಾ ಕಡೆಯೂ ಇದು ಇದ್ದೇ ಇರುತ್ತದೆ ಎಂದು ಸುಮ್ಮನಾಗುತ್ತೇನೆ.

ಫಿಟ್‌ನೆಸ್ ಬಗ್ಗೆ ನಿಮ್ಮ ಮಾತು?
ಫಿಟ್‌ನೆಸ್ ರೂಪದರ್ಶಿಗಳಿಗೆ ಮಾತ್ರ ಅಗತ್ಯವಾಗಿ ಉಳಿದಿಲ್ಲ. ಇಂದು ಎಲ್ಲರೂ ಫಿಟ್ ಆಗಿ ಇರಲು ಬಯಸುತ್ತಾರೆ. ನಾನು ಮನೆಯಲ್ಲಿಯೇ ಯೋಗ ಮಾಡುತ್ತೇನೆ. ಶೋ ಇರುವಾಗ ಜಿಮ್‌ಗೆ ಹೋಗಿ ಸ್ವಲ್ಪ ಜಾಸ್ತಿ ಸಮಯ ಕಳೆಯುತ್ತೇನೆ. ಶೋ ಹಿಂದಿನ ದಿನ ಮಾತ್ರ ಎಲ್ಲಿಗೂ ಹೋಗುವುದಿಲ್ಲ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತೇನೆ. ನಾವು ಎಷ್ಟು ಕೂಲ್ ಆಗಿ ಇರುತ್ತೇವೆಯೋ ಅಷ್ಟು ಚೆನ್ನಾಗಿ ರ್‍ಯಾಂಪ್ ಮೇಲೆ ನಮ್ಮ ಪ್ರತಿಭೆ ತೋರಿಸಬಹುದು.

ಈ ವೃತ್ತಿಯಲ್ಲಿ  ನೀವು ಕಲಿತ ಒಳ್ಳೆಯ ಅಂಶಗಳು?
ಇದನ್ನು ವೃತ್ತಿಯಾಗಿ ಸ್ವೀಕರಿಸಿದ ನಂತರ ನನ್ನಲ್ಲಿ ಹೆಚ್ಚು ಬದಲಾವಣೆ ಕಂಡುಬಂತು. ನನ್ನ ವೃತ್ತಿಗೆ ಹೆಚ್ಚು ವಿಧೇಯಳಾದೆ. ಜೀವನದಲ್ಲಿ ಕೂಡ ವಿಧೇಯತೆಯನ್ನು ರೂಢಿಸಿಕೊಂಡೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.