ADVERTISEMENT

'ಟುಕ್ ಟುಕ್' ಕೊರಿಯರ್...

ರೋಹಿಣಿ ಮುಂಡಾಜೆ
Published 25 ಸೆಪ್ಟೆಂಬರ್ 2013, 20:38 IST
Last Updated 25 ಸೆಪ್ಟೆಂಬರ್ 2013, 20:38 IST

ವತ್ತು ಮಧ್ಯಾಹ್ನದೊಳಗೆ ಯಾವುದೋ ಒಂದು ದಾಖಲೆಪತ್ರವನ್ನು ಸಿಲಿಕಾನ್ ಸಿಟಿಯ ಇನ್ನೊಂದು ಮೂಲೆಯಲ್ಲಿರುವ ಬಂಧುವಿಗೋ, ಗೆಳೆಯರಿಗೋ, ಕಂಪೆನಿಗೋ ತಲುಪಿಸಬೇಕೇ? ಕೊನೆಯ ದಿನವಾದ ಇಂದೇ ಕಂಪೆನಿಯೊಂದಕ್ಕೆ ಅರ್ಜಿ ಸಲ್ಲಿಸಬೇಕೇ? ಕೊರಿಯರ್ ಆಫೀಸಿಗೆ ಹೋಗಿಬರುವಷ್ಟೂ ಪುರುಸೊತ್ತಿಲ್ಲವೇ? ಅದಕ್ಯಾಕೆ ಚಿಂತೆ. ಆಟೊರಿಕ್ಷಾದಲ್ಲಿ ಕಳುಹಿಸಿ, ನಿರಾಳವಾಗಿದ್ದುಬಿಡಿ.

ಇದೆಂಥದು ಮಾರಾಯ್ರೆ ಆಟೊದಲ್ಲಿ ನಮ್ಮ ಅಮೂಲ್ಯ ಪಾರ್ಸೆಲ್ ಕಳುಹಿಸುವುದಾ ಅಂತ ತಲೆಕೆರೆದುಕೊಂಡಿರಾ? ಹೊಸ ಹೊಸ ಯೋಜನೆಗಳಿಗೆ ತೆರೆದುಕೊಳ್ಳುತ್ತಿರುವ ನಗರದ ‘ನಮ್ಮ ಆಟೊ’ರಿಕ್ಷಾಗಳು ಕೊರಿಯರ್ ವಾಹಕಗಳಾಗಿಯೂ ಕಾರ್ಯನಿರ್ವಹಿಸುವ ದಿನ ದೂರವಿಲ್ಲ ಗೊತ್ತುಂಟಾ?

ನಗರದ ಆಟೊರಿಕ್ಷಾಗಳ ಪಾಲಿಗೆ ಇದು ಮತ್ತೊಂದು ಮಾದರಿ ಯೋಜನೆ. ‘ತ್ರಿ ವ್ಹೀಲ್ಸ್ ಯನೈಟೆಡ್’ನ ‘ನಮ್ಮ ಆಟೊ’ಗಳು ಆರಂಭದ ಹಂತದಲ್ಲಿ ಕೊರಿಯರ್ ಸೇವೆಗೆ ಸಾಕ್ಷಿಯಾಗಲಿವೆ. ಇದೇ ಅಕ್ಟೋಬರ್‌ನಲ್ಲಿ ಕೊರಿಯರ್ ಸೇವೆ ಶುರುವಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಯೋಜನೆಯ ರೂವಾರಿ ರಮೇಶ್.

ಸೂಪರ್ ಎಕ್ಸ್‌ಪ್ರೆಸ್ ಕೊರಿಯರ್
‘‘ನೋಡಿ, ಈ ಕವರ್ ಮತ್ತಿಕೆರೆಗೆ ಇವತ್ತು ಮಧ್ಯಾಹ್ನ 3 ಗಂಟೆಯೊಳಗೆ ತಲುಪಬೇಕು. ಮಹತ್ವದ ದಾಖಲೆಪತ್ರ ಇದರಲ್ಲಿದೆ. ಮತ್ತಿಕೆರೆಗೆ ನನ್ನ ಸಮಯಕ್ಕೆ ತಲುಪಬೇಕಾದರೆ ಮೂರು ಆಯ್ಕೆಗಳಿವೆ. ಒಂದು– ನಾನೇ ಸ್ವತಃ ಹೋಗಿ ಕೊಡಬೇಕು. ಅಲ್ಲಿ ಹೋಗಿಬರುವಷ್ಟು ಹೊತ್ತು ನನ್ನ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಎರಡು– ನನ್ನ ಸಹಾಯಕರನ್ನು ಕಳುಹಿಸಬೇಕು. ಮತ್ತೆ ಒಬ್ಬನ ಶ್ರಮ ಮತ್ತು ಸಮಯ ವ್ಯರ್ಥ. ಮೂರನೆಯದು- ಕೊರಿಯರ್ ಕಂಪೆನಿ ಮೂಲಕ ಕಳುಹಿಸುವುದು. ಸ್ಥಳೀಯ ಕೊರಿಯರ್ ಆಗಿದ್ದರೂ ತಲುಪುವುದು ವಿಳಂಬವಾದರೆ ಅಷ್ಟೂ ಶ್ರಮ ವ್ಯರ್ಥ.

ಆಗ ನಾನೇನು ಮಾಡುತ್ತೇನೆಂದರೆ, ನಾವಿರುವ ಸ್ಥಳಕ್ಕೆ ಹತ್ತಿರವಿರುವ ‘ನಮ್ಮ ಆಟೊ’ ಚಾಲಕನನ್ನು ಜಿಪಿಎಸ್ ಫೋನ್ ಮೂಲಕ ಪತ್ತೆಹಚ್ಚಿ ಅವರನ್ನು ಮತ್ತಿಕೆರೆಗೆ ಬುಕ್ ಮಾಡುತ್ತೇನೆ. ಅಥವಾ ಮತ್ತಿಕೆರೆ ಕಡೆಗೆ ಹೋಗಬಯಸುವ ಜಿಪಿಎಸ್ ಮೊಬೈಲ್ ಚಾಲಕನನ್ನೇ ಆ ಕಡೆ ಕಳುಹಿಸುತ್ತೇನೆ. ಚಾಲಕನಿಗೆ ಇದೂ ಒಂದು ‘ಬಾಡಿಗೆ’ ಆಗಿರುತ್ತದೆ. ಆದರೆ ಬಳಕೆದಾರನಾದ ನನ್ನ ಪಾಲಿಗೆ ಅದು ಸೂಪರ್ ಎಕ್ಸ್‌ಪ್ರೆಸ್ ಕೊರಿಯರ್’ ಎಂದು ತಮ್ಮ ಯೋಜನೆಯನ್ನು ಅವರು ವಿವರಿಸುತ್ತಾರೆ.

ಇತರ ಕೊರಿಯರ್ ಕಂಪೆನಿಗಳಿಗಿಂತಲೂ ತ್ವರಿತವಾಗಿ ಕೊರಿಯರ್ ಸೇವೆ ಒದಗಿಸುವುದೇ ‘ಸೂಪರ್ ಎಕ್ಸ್‌ಪ್ರೆಸ್ ಕೊರಿಯರ್‌ ಸೇವೆ’ಯ ಗುರಿ. ಇದಕ್ಕೆ ಒನ್ ವೇಗೆ ಒಂದೂವರೆ ಪಟ್ಟು ದರ ವಿಧಿಸಲಾಗುವುದಂತೆ. ಆರಂಭದಲ್ಲಿ ‘ನಮ್ಮ ಆಟೊ’ ಯೋಜನೆಯಡಿ ಬರುವ ಆಟೊರಿಕ್ಷಾಗಳಲ್ಲಿ ಕೊರಿಯರ್ ಶುರುವಾಗಲಿದೆ. ಆದರೆ ಇತರ ಆಟೊ ಚಾಲಕರೂ ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.

ಇದಕ್ಕಾಗಿ ಅವರು ‘ನಮ್ಮ ಆಟೊ’ ಯೋಜನೆಗೆ ಸದಸ್ಯರಾಗಬೇಕು. ಇದರಿಂದ ಆಟೊ ಚಾಲಕರಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಸಾಧ್ಯವಾಗುತ್ತದೆ. ಆಟೊ ಚಾಲಕ ಸಮುದಾಯದ ಆದಾಯ ಮಟ್ಟವನ್ನು ಹೆಚ್ಚಿವುದೇ ‘ನಮ್ಮ ಆಟೊ’ದ ಎಲ್ಲಾ ಯೋಜನೆಗಳ ಗುರಿ’’ ಎನ್ನುತ್ತಾರೆ ಅವರು.

ನಮ್ಮ ಈ ಯೋಜನೆ ಯಶಸ್ವಿಯಾಗುವ ಹೊತ್ತಿಗೆ ಕೊರಿಯರ್ ಕಂಪೆನಿಗಳೂ ತ್ವರಿತವಾಗಿ, ಕೆಲವೇ ಗಂಟೆಯೊಳಗೆ ತಲುಪಿಸಬೇಕಾದ ಕೊರಿಯರ್‌ಗಳ ವಿಲೇವಾರಿಗೆ ನಮ್ಮ ಆಟೊ ಚಾಲಕರನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ ಎಂಬುದು ರಮೇಶ್ ಪ್ರಭು ಲೆಕ್ಕಾಚಾರ.
ತಮಾಷೆಯ ಸಂಗತಿ ಗೊತ್ತೇ? ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಟೊರಿಕ್ಷಾವನ್ನು ಸಾಮಾನ್ಯವಾಗಿ ‘ಟುಕ್‌ಟುಕ್’ ಎಂದು ಕರೆಯಲಾಗುತ್ತದೆ.

ಹಾಗಿದ್ರೆ ಡಿಸೆಂಬರ್‌ನಾಚೆ ಮನೆ/ಕಚೇರಿ ಮುಂದೆ ಟುಕ್‌ಟುಕ್ ಅಂತ ಆಟೊ ನಿಂತ ಸದ್ದು ಕೇಳಿದರೆ ಯಾರು ಬಂದರು ಎಂದು ನೋಡುತ್ತಿದ್ದವರು ಏನು ಬಂತು ಎಂದೂ ನೋಡಬೇಕಾಗುತ್ತದೆ, ಅಷ್ಟೇ. ‘ತ್ರಿ ವ್ಹೀಲ್ಸ್ ಯನೈಟೆಡ್’ನ ಸಂಪರ್ಕಕ್ಕೆ: 96630 03747.

ಮೊಬೈಲ್ ರೀಚಾರ್ಜ್
ಮೊಬೈಲ್‌ಗೆ ಕರೆನ್ಸಿ ತುಂಬುವ ಸೌಕರ್ಯವನ್ನೂ ನಮ್ಮ ಆಟೊ ಸದಸ್ಯರಿಗೆ ಒದಗಿಸಿಕೊಡಲು ತ್ರಿ ವ್ಹೀಲ್ಸ್ ಮುಂದಾಗಿದೆ. ಇದರಿಂದ ಬರುವ ಕಮಿಷನ್ ಚಾಲಕನಿಗೇ ಸಿಗುತ್ತದೆ. ಈಗಾಗಲೇ ಏರ್‌ಟೆಲ್ ಮೊಬೈಲ್ ಕಂಪೆನಿಯೊಂದಿಗೆ ಮಾತುಕತೆ ನಡೆದಿದ್ದು ಅಂತಿಮ ರೂಪರೇಷೆ ಸಿಗಬೇಕಷ್ಟೇ.

ಎರಡು ಸ್ಟ್ರೋಕ್ ಇಂಜಿನ್ ಗಾಡಿಗಳಿಗೆ ಗುಡ್‌ಬೈ ಹೇಳಿ 4ಸ್ಟ್ರೋಕ್ ಗಾಡಿಗಳನ್ನು ಸ್ವಂತವಾಗಿ ಹೊಂದಲು ಸಾಲ ಸೌಲಭ್ಯ ಮತ್ತು ನಿಯಮಿತ ಮರುಪಾವತಿ ಮಾಡುವ ‘ನಮ್ಮ ಆಟೊ’, ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿ, ಜಿಪಿಎಸ್: ಆಟೊದಂತಹ ಮಾದರಿ ಯೋಜನೆಗಳ ಅನುಷ್ಠಾನಕ್ಕೆ ಈಗಾಗಲೇ ತ್ರಿ ವ್ಹೀಲ್ಸ್ ಯುನೈಟೆಡ್ ಸಜ್ಜಾಗಿದೆ. ಈ ಸಾಲಿಗೆ ಕೊರಿಯರ್, ಜಾಹೀರಾತು ಮತ್ತು ಮೊಬೈಲ್ ರಿಚಾರ್ಜ್ ಯೋಜನೆಗಳು ಹೊಸ ಸೇರ್ಪಡೆ.

ADVERTISEMENT

ಆದಾಯದ ಮಾತು... ಜಾಹೀರಾತು
ಆಟೊರಿಕ್ಷಾಗಳ ಹೊರಭಾಗದಲ್ಲಿ ಜಾಹೀರಾತು ಪ್ರಕಟಿಸಲು ಪಾಲಿಕೆ ಮತ್ತು ಆರ್‌ಟಿಎ ಪರವಾನಗಿ ಬೇಕೇಬೇಕು. ಇದಕ್ಕಾಗಿ ಆಟೊದ ಒಳಭಾಗದಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಆಟೊ ಮಾಲೀಕರಿಗೆ ಮತ್ತೊಂದು ಆದಾಯ ಮೂಲವನ್ನು ಕಂಡುಕೊಂಡಿದೆ ‘ತ್ರಿ ವ್ಹೀಲ್ಸ್ ಯುನೈಟೆಡ್’.

ಐಎನ್‌ಜಿ ವೈಶ್ಯ ಬ್ಯಾಂಕ್ ‘ನಮ್ಮ ಆಟೊ’ಗಳಲ್ಲಿ ಜಾಹೀರಾತು ಹಾಕಿಕೊಂಡಿದೆ. ‘ತ್ರಿ ವ್ಹೀಲ್ಸ್’ನ ನಿಯಮದಂತೆ ಈ ಬ್ಯಾಂಕ್ ಸಂಬಂಧಪಟ್ಟ ಆಟೊ ಮಾಲೀಕ/ಚಾಲಕನಿಗೆ ಜೀವವಿಮೆಯನ್ನು ಮಾಡಿದ್ದು ಮೊದಲ ಕಂತನ್ನು ಸ್ವತಃ ಬ್ಯಾಂಕ್ ತುಂಬಿದೆ. ಜಾಹೀರಾತಿನ ಮೊತ್ತದಲ್ಲಿ ಅರ್ಧಪಾಲು ಚಾಲಕನಿಗೆ ಹೋಗುತ್ತದೆ.

ನಮ್ಮ ಆಟೊಗಳ ಸಂಖ್ಯೆ ಹೆಚ್ಚಿದಂತೆ ಆಟೊದ ಹೊರಭಾಗದಲ್ಲಿ ಜಾಹೀರಾತು ಪ್ರಕಟಿಸುವ ಮತ್ತು ವಿಮೆ ಯೋಜನೆಯನ್ನು ಒಪ್ಪಬಲ್ಲ ಇನ್ನಷ್ಟು ಬ್ಯಾಂಕ್/ಕಾರ್ಪೊರೇಟ್ ಕಂಪೆನಿಗಳನ್ನು ಸಂಪರ್ಕಿಸುತ್ತೇವೆ ಎನ್ನುತ್ತದೆ ‘ತ್ರಿ ವ್ಹೀಲ್ಸ್’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.