ADVERTISEMENT

ಟೇಕ್ವಾಂಡೊ ಕಲೆಯಲ್ಲಿ ಪ್ರಜ್ವಲ್‌ ಮಿಂಚು

ರಮೇಶ ಕೆ
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST
ಟೇಕ್ವಾಂಡೊ ಕಲೆಯಲ್ಲಿ ಪ್ರಜ್ವಲ್‌ ಮಿಂಚು
ಟೇಕ್ವಾಂಡೊ ಕಲೆಯಲ್ಲಿ ಪ್ರಜ್ವಲ್‌ ಮಿಂಚು   

ಹತ್ತನೇ ತರಗತಿ ಎನ್ನುವುದು ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಮಾರನೇ ದಿನ ಪರೀಕ್ಷೆ ಇದ್ದರೂ ಈ ವಿದ್ಯಾರ್ಥಿ ರಾತ್ರಿಯಿಡಿ ಟೇಕ್ವಾಂಡೊ ಸ್ಪರ್ಧೆಗೆ ತಯಾರಿ ನಡೆಸಿದ್ದರು. ಮರುದಿನ ಬರೆದ ಪರೀಕ್ಷೆಯಲ್ಲಿಯೂ ಉತ್ತಮ ಅಂಕಗಳಿಸಿದರು. ಟೇಕ್ವಾಂಡೊ ಪಟುವಾಗಿ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆಯನ್ನೂ ಮಾಡಿದರು.

ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ. ಓದುತ್ತಿರುವ ಪ್ರಜ್ವಲ್‌, ಭೂಪಾಲ್‌ ಟೇಕ್ವಾಂಡೊ ಕಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ.

ನಾಲ್ಕನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಟೇಕ್ವಾಂಡೊ ಕ್ರೀಡೆಯ ಬಗ್ಗೆ ಆಕರ್ಷಿತನಾದ ಪ್ರಜ್ವಲ್‌ ಈಗ ಆ ಕ್ರೀಡೆಯನ್ನೇ ಉಸಿರಾಗಿಸಿಕೊಳ್ಳುವ ಉತ್ಸಾಹ ಹೊಂದಿದ್ದಾನೆ.

‘ನನಗೆ ಈಗ 19 ವರ್ಷ. ಮಾರ್ಷಲ್‌ ಆರ್ಟ್ಸ್‌ನಲ್ಲಿ 10 ವರ್ಷದಿಂದ ತೊಡಗಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಟೇಕ್ವಾಂಡೊ ಕಲಿಸುವುದನ್ನೇ ವೃತ್ತಿಯಾಗಿ ಸ್ವೀಕರಿಸುವ ಮನಸ್ಸಿದೆ’ ಎಂದು ಜೀವನದ ಆಸೆಯನ್ನು ಹಂಚಿಕೊಳ್ಳುತ್ತಾನೆ. 

‘2012ರಲ್ಲಿ ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸುವ ಮೂಲಕ ಟೇಕ್ವಾಂಡೊ ಜಗತ್ತಿಗೆ ಪದಾರ್ಪಣೆ ಮಾಡಿದೆ. ಆ ಸ್ಪರ್ಧೆಯಲ್ಲಿ ನನಗೆ ಚಿನ್ನದ ಪದಕ ಸಿಕ್ಕಿತು. ಚೀನಾದಲ್ಲಿ ಟೇಕ್ವಾಂಡೊ ತರಬೇತಿಯನ್ನೂ ಪಡೆದಿದ್ದೇನೆ. ನಾಲ್ಕನೇ ತರಗತಿಯಲ್ಲಿರುವಾಗ ಕರಾಟೆ ಕಲಿತೆ, ಪಂಜುಮೂರ್ತಿ, ಸುರೇಶ್‌ ಬಾಬು ಎಂಬುವವರು ನನಗೆ ಕರಾಟೆ ಕಲಿಸಿದರು.

ಪಿಯುನಲ್ಲಿದ್ದಾಗ ಕರಾಟೆ ಸ್ಪರ್ಧೆ ಒಂದರಲ್ಲಿ ನನ್ನನ್ನು ನೋಡಿದ ರಾಜೇಶ್‌ ಮೇಥಿ, ಬಿ.ಎಂ. ಕೃಷ್ಣಮೂರ್ತಿ ಎಂಬುವವರು ನನಗೆ ಟೇಕ್ವಾಂಡೊ ಕಲಿಯಲು ಸಲಹೆ ನೀಡಿದರು. ಅವರೇ ತರಬೇತಿಯನ್ನೂ ಕೊಟ್ಟರು’ ಎಂದು ನಡೆದ ಬಂದ ಹಾದಿಯನ್ನು ಮೆಲುಕು ಹಾಕಿದರು ಪ್ರಜ್ವಲ್‌.

‘ರಾಜೇಶ್‌ ಮೇಥಿ ಮತ್ತು ಕೃಷ್ಣಮೂರ್ತಿ ರಾಷ್ಟ್ರಮಟ್ಟದ ತರಬೇತುದಾರರು. ಅವರ ಸಹಕಾರದಿಂದ ನನ್ನ ಕ್ರೀಡಾ ಪಯಣ ಆರಂಭವಾಯಿತು. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಕನಿಷ್ಠ 21 ವರ್ಷ ಆಗಿರಬೇಕು. ಆಗ ಮಾತ್ರ ನಾವು ಪ್ರೊಫೆಷನಲ್‌ ಎನಿಸಿಕೊಳ್ಳುತ್ತೇನೆ’. ಹಾಗೆಯೇ, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಆಡುವ ಹಂಬಲವಿದೆ ಎನ್ನುತ್ತಾನೆ ಪ್ರಜ್ವಲ್‌.

2014ರಲ್ಲಿ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಟೇಕ್ವಾಂಡೊ ಸ್ಪರ್ಧೆಯಲ್ಲಿ ಒಟ್ಟು 97 ದೇಶಗಳು ಭಾಗವಹಿಸಿದ್ದವು. ಆ ಕಠಿಣ ಸವಾಲನ್ನು ಕೆಚ್ಚೆದೆಯಿಂದ ಎದುರಿಸಿದ ಪ್ರಜ್ವಲ್‌ಗೆ ವಿಜಯಲಕ್ಷ್ಮೀ ಒಲಿದಳು. ಮತ್ತೊಂದು ಚಿನ್ನದ ಪದಕ ಆತನ ಕೊರಳಿಗೆ ಬಿತ್ತು.

2016ರಲ್ಲಿ ಚೀನಾದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಜ್ವಲ್‌ ಎರಡು ಪಂದ್ಯಾವಳಿಯಲ್ಲಿ ಪಾಲ್ಗೊಂಡು ಒಂದು ಚಿನ್ನ, ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದಾನೆ. ದಕ್ಷಿಣ ಕೊರಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ, ಸುಮಾರು 150ಕ್ಕೂ ಅಧಿಕ ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಪ್ರಜ್ವಲ್‌ ಅಲ್ಲಿಯೂ ಜಯಶಾಲಿಯಾಗಿ ಗೆಲುವಿನ ನಗು ಬೀರಿದ.

ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ನಡೆಯುವ ವರ್ಲ್ಡ್‌ ಯೂತ್‌ ಟೇಕ್ವಾಂಡೊ ಚಾಂಪಿಯನ್‌ಷಿಪ್‌ಗೆ ಇದೀಗ ಪ್ರಜ್ವಲ್‌ ತಯಾರಾಗುತ್ತಿದ್ದಾನೆ. ನಗರದ ಮನ್ನಾರಾಯನಪಾಳ್ಯದಲ್ಲಿ ಪ್ರಜ್ವಲ್ ಕುಟುಂಬ ವಾಸವಾಗಿದೆ. ತಂದೆ ಭೂಪಾಲ್‌ ಟೀವಿ ರಿಪೇರಿ ಮಾಡುತ್ತಾರೆ. ತಾಯಿ ವೆಂಕಟಲಕ್ಷಿ ಗೃಹಿಣಿ. ಮಗ ಟೇಕ್ವಾಂಡೊ ಕ್ರೀಡೆಯಲ್ಲಿ ಅಭೂತಪೂರ್ವವಾದುದನ್ನು ಸಾಧಿಸಲಿ, ದೇಶಕ್ಕೆ ಕೀರ್ತಿ ತರಲಿ ಎಂಬ ಆಸೆಯಿಂದ ಅವರು ಈವರೆಗೆ ಸುಮಾರು ₹10 ಲಕ್ಷ ಖರ್ಚು ಮಾಡಿದ್ದಾರೆ.

ಸ್ನೇಹಿತರು, ಸಂಬಂಧಿಗಳಿಂದ ಸಾಲ ಮಾಡಿ ಮಗನ ಕ್ರೀಡಾ ಪ್ರೀತಿಯನ್ನು ಪೊರೆಯುತ್ತಿದ್ದಾರೆ. ಎಲ್ಲರೂ ಈತನ ಟ್ರ್ಯಾಕ್‌ ರೆಕಾರ್ಡ್‌ ನೋಡಿ ಮೆಚ್ಚಿಕೊಂಡು ಬೆನ್ನು ತಟ್ಟುತ್ತಾರೆಯೇ ಹೊರತು ಆತನಿಗೆ ಆರ್ಥಿಕವಾಗಿ ಸಹಾಯ ಮಾಡಲು ಮುಂದೆ ಬಂದಿಲ್ಲ. ಜನಪ್ರತಿನಿಧಿಗಳು ಆಶ್ವಾಸನೆ ನೀಡಿ ಕೈತೊಳೆದುಕೊಂಡಿದ್ದಾರೆ. ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಹಣ ಹೊಂದಿಸಲೂ ಒದ್ದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರದಿಂದಲೂ ಸಹಕಾರ ಸಿಗುತ್ತಿಲ್ಲ ಎಂಬ ಕೊರಗು ಆತನ ತಂದೆ ತಾಯಿಯರದ್ದು. ‘ಟೇಕ್ವಾಂಡೊ ವೈಯಕ್ತಿಕ ಕ್ರೀಡೆ. ಹಾಗಾಗಿ, ಇದರಲ್ಲಿ ನಾವು ಏನೇ ಸಾಧನೆ ಮಾಡಿದರೂ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ. ನಾವೇ ಹಣ ವಿನಿಯೋಗಿಸಿ ನಮ್ಮ ಕ್ರೀಡೋತ್ಸಾಹವನ್ನು ತಣಿಸಿಕೊಳ್ಳಬೇಕಷ್ಟೇ.

ಕ್ರಿಕೆಟ್‌, ಫುಟ್‌ಬಾಲ್‌ಗೆ ಸಿಗುವಂತಹ ಪ್ರೋತ್ಸಾಹ ಇಂತಹ ಕ್ರೀಡೆಗಳಿಗೂ ಸಿಕ್ಕರೆ ರಾಷ್ಟ್ರವೇ ಹೆಮ್ಮೆ ಪಡುವಂತಹ ಸಾಧನೆಯನ್ನು ವಿಶ್ವಮಟ್ಟದಲ್ಲಿ ಮಾಡುತ್ತೇನೆ’ ಎನ್ನುವಾಗ  ಪ್ರಜ್ವಲ್‌ ಕಣ್ಣುಗಳಲ್ಲಿ ಕಣ್ಣೀರು ತುಳುಕುತ್ತದೆ. ಮುಂದಾದರೂ ಪ್ರಾಯೋಜಕರು ಸಿಗಬಹುದೇ ಎಂಬ ಆಸೆಯ ಮಿಂಚೊಂದು ತೇಲಿ ಹೋಗುತ್ತದೆ. ಪ್ರಜ್ವಲ್‌ ಸಂಪರ್ಕಿಸಲು: 9901045390.  

ಸಮರ ಕಲೆಯ ಪ್ರಮುಖ ಕವಲು
ದಕ್ಷಿಣ ಕೊರಿಯಾ ಮೂಲದ ಟೇಕ್ವಾಂಡೊ, ಸಮರ ಕಲೆಗಳ ಒಂದು ಪ್ರಮುಖ ಕವಲು. ಟೇಕ್ವಾಂಡೊ ಅಲ್ಲಿ ರಾಷ್ಟ್ರೀಯ ಕ್ರೀಡೆ ಮತ್ತು ಕದನ ಕಲೆಯಾಗಿಯೂ ಜನಪ್ರಿಯತೆ ಗಳಿಸಿದೆ. ಇತರ ಸಮರ ಕಲೆಗಳ ಹಾಗೆ ಇದೂ ಕೂಡ ಹೋರಾಟ ತಂತ್ರಗಳನ್ನು, ಸ್ವ ರಕ್ಷಣೆ, ಕ್ರೀಡೆ, ಕಸರತ್ತು, ಧ್ಯಾನ ಹಾಗೂ ಸಿದ್ಧಾಂತಗಳನ್ನು ಒಳಗೊಂಡಿದೆ. ದಕ್ಷಿಣ ಕೊರಿಯಾ ಸೇನೆಯು ತನ್ನ ತರಬೇತಿಯ ಭಾಗವಾಗಿ ಟೇಕ್ವಾಂಡೊವನ್ನು ಅಳವಡಿಸಿಕೊಂಡಿದೆ. 2000ನೇ ಇಸವಿಯ ನಂತರ ಟೇಕ್ವಾಂಡೋ ಕ್ರೀಡಾಳುಗಳಿಗೆ ಒಲಿಂಪಿಕ್ಸ್‌ನಲ್ಲಿ ಅವಕಾಶ ನೀಡಲಾಗಿದೆ.

ಕರಾಟೆಯಲ್ಲಿ ಕಿಕ್‌ಗಳಿಗೆ ಮಿತಿ ಇರುತ್ತದೆ, ಅಲ್ಲದೇ ಪಂಚ್‌ಗಳೂ ಇರುತ್ತವೆ. ಆದರೆ ಟೇಕ್ವಾಂಡೊದಲ್ಲಿ ಕಿಕ್‌ಗಳಿಗೆ ಮಿತಿಯಿಲ್ಲ. ಟೇಕ್ವಾಂಡೊದಲ್ಲಿ ಫ್ರಂಟ್‌ ಕಿಕ್‌, ಸೈಡ್‌ ಕಿಕ್‌, ರೌಂಡರ್ಸ್‌ ಕಿಕ್‌,  ಸ್ಪಿನ್‌ ಕಿಕ್‌ , ಜಂಪಿಂಗ್‌ ಮಾಷಿ ಕಿಕ್‌, ಜಂಪಿಂಗ್‌ ಸ್ಪಿನ್‌ ಕಿಕ್‌ ಹಾಗೂ 360 ಡಿಗ್ರಿ ಕಿಕ್‌ ಇರುತ್ತದೆ. ಪಂಚ್‌ಗೆ ಒಂದು ಪಾಯಿಂಟ್‌ ಇದ್ದರೆ, ಕಿಕ್‌ಗೆ ಮೂರು ಪಾಯಿಂಟ್‌ ಇರುತ್ತದೆ. ಜಂಪಿಂಗ್‌ನಲ್ಲಿ ಕಿಕ್‌ ಮಾಡಿದ್ರೆ 4 ಪಾಯಿಂಟ್‌ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT