ADVERTISEMENT

`ಡಿಂಕು'ವಿನೊಡನೆ ಭಾವಲೋಕದಲ್ಲಿ...

ಪ್ರಜಾವಾಣಿ ವಿಶೇಷ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST
ಗೊಂಬೆಗಳೊಂದಿಗೆ ಇಂದೂಶ್ರೀ
ಗೊಂಬೆಗಳೊಂದಿಗೆ ಇಂದೂಶ್ರೀ   

ಗೊಂಬೆ ಮಾತಿಗೆ ಮಾತಾಗುತ್ತಲೇ ಸುದ್ದಿಯಾದ ನನಗೆ ಮಾತೆಂಬುದು ಅಕ್ಷರಶಃ ವರ. ಮಾತೆಂಬ ಜೀವನಚೈತನ್ಯದಿಂದ `ಡಿಂಕು'ಎಂಬ ಗೊಂಬೆಗೆ ಜೀವ ಬಂತು. ಹಾಗೇ ಆಗಿದ್ದರಿಂದ `ಡಿಂಕು ಇಂದೂಶ್ರೀ' ಅಂತಲೇ ಮನೆಮಾತಾದೆ.

ನನ್ನ ಮೂಲ ಊರು ಹಾಸನವಾದರೂ ಹುಟ್ಟಿದ್ದು, ಬೆಳೆದಿದ್ದೆಲ ಉದ್ಯಾನನಗರಿಯಲ್ಲಿಯೇ. ಅತಿ ಕುತೂಹಲ ಸ್ವಭಾವ ಮತ್ತು ಪ್ರಶ್ನಿಸುವ ಮನೋಭಾವ ಇದ್ದದ್ದರಿಂದ ಹಾಡುಗಾರಿಕೆ, ವಿವಿಧ ವಾದ್ಯ ನುಡಿಸುವ ಕೌಶಲ ಮತ್ತು ಕರಕುಶಲ ಕಲೆ ದಕ್ಕುತ್ತಾ ಹೋಯಿತು. ಎರಡನೇ ತರಗತಿಯಲ್ಲಿದ್ದಾಗಲೇ ಶಾಲೆಯಲ್ಲಿ ಜಾದೂ ಮಾಡಲು ಆರಂಭಿಸಿದ್ದೆ. ಐದನೇ ತರಗತಿಗೆ ಬರುವ ವೇಳೆಗೆ `ಧ್ವನಿಮಾಯೆ'ಯ ಕಲೆಯಲ್ಲಿ ಗೊಂಬೆ ಜತೆ ಮಾತನಾಡುತ್ತ ರಂಜಿಸಬೇಕೆಂಬ ಆಸೆ ಹುಟ್ಟಿತ್ತು. ಪಟ್ಟು ಬಿಡದೆ ಆ ಕಲೆಯನ್ನು ಕಲಿಯುವ ಮನಸ್ಸಾಯಿತು.

ತಂದೆ ರಂಗಭೂಮಿ ಕಲಾವಿದ ಆರ್.ಎನ್.ರವೀಂದ್ರ. ತಾಯಿ ಮಂಜುಳಾ ರವೀಂದ್ರ ಗಾಯಕಿಯಾಗಿದ್ದರು. ಒಟ್ಟು ಕುಟುಂಬವೇ ಕಲೆಗೆ ಮುಡಿಪಾಗಿದ್ದರಿಂದ ವೇದಿಕೆಯ ಬಗ್ಗೆ ಮೊದಲಿನಿಂದಲೂ ಅತೀವ ವ್ಯಾಮೋಹವಿತ್ತು. ಜಾದೂಗಾರರಾದ ಎ.ಕೆ.ದತ್ತ ತಮ್ಮ ಬಳಿ ಇದ್ದ `ಡಿಂಕು' ಬೊಂಬೆ ಕೊಟ್ಟು ಇದರೊಂದಿಗೆ ಮಾತನಾಡುವುದನ್ನು ಕಲಿ ಎಂದರು. ಅಲ್ಲಿಂದ ಆರಂಭವಾದ ಗೊಂಬೆಯೊಂದಿಗಿನ ಜರ್ನಿ ಇನ್ನೂ ನಿಂತಿಲ್ಲ.

ಆರಂಭದಲ್ಲಿ ಅದೇ ಗೊಂಬೆಯೊಂದಿಗೆ ಸತತವಾಗಿ ಹರಟಲು ಅಭ್ಯಾಸ ಮಾಡಿದೆ. ಚಾನೆಲ್‌ವೊಂದರಲ್ಲಿ `ಡಿಂಕು'ವನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತೇನೆ ಎಂದು ಅವಕಾಶ ಕೇಳಿದೆ. ಕಪ್ಪು ಬಣ್ಣದ, ದೊಡ್ಡ ಕಣ್ಣಿನ ಡಿಂಕುವನ್ನು ನೋಡಿದ ಚಾನೆಲ್ ಸಿಬ್ಬಂದಿ `ಇದನ್ನು ನೋಡಿದರೆ ಮಕ್ಕಳು ಹೆದರಿಕೊಳ್ಳುತ್ತಾರೆ. ಈ ರೀತಿಯ ಕಾರ್ಯಕ್ರಮ ಬೇಡ' ಎಂದು ತಿರಸ್ಕರಿಸಿಬಿಟ್ಟರು. ಆದರೆ ಛಲಬಿಡದೆ ಇದೇ ಗೊಂಬೆಯ ಬಣ್ಣ, ಆಕಾರ ಒಟ್ಟು ಅದರ ರೂಪುವಿನಲ್ಲಿ ಅಗತ್ಯಕ್ಕೆ ತಕ್ಕಷ್ಟು ಬದಲಾವಣೆ ತಂದೆ. ಆ ನಂತರ `ಸಿಟಿ ಕೇಬಲ್'ನಲ್ಲಿ ಮೂರು ವರ್ಷಗಳ ಕಾಲ ನಡೆಸಿಕೊಟ್ಟ `ಸಿಟಿ ಡಿಂಕು' ಕಾರ್ಯಕ್ರಮ ಜನಪ್ರಿಯವಾಯಿತು.

ಪ್ರತಿದಿನ ನೇರಪ್ರಸಾರದ ಕಾರ್ಯಕ್ರಮದಲ್ಲಿ ಹೊಸ ವಿಷಯ ಇಟ್ಟುಕೊಂಡು ನಾನು ಡಿಂಕು ಮಾತಿಗೆ ಕೂರುತ್ತಿದ್ದೆವು. ಇದರ ಯಶಸ್ಸಿನಿಂದ `ಜೀ' ಕನ್ನಡದಲ್ಲೂ `ಕಾಫಿ ವಿತ್ ಡಿಂಕು', `ಡಿಂಕು ದುನಿಯಾ' ಎಂಬ 68 ಕಂತಿನಲ್ಲಿ ಬರೋಬ್ಬರಿ ಒಂದು ಗಂಟೆ ಮಾತನಾಡಲು ಆರಂಭಿಸಿದ್ದೆ.

ನಾ ಜಾದೂಗಾರಳಾಗಿದ್ದರೂ ಜನ ಡಿಂಕು ಎಂಬ ಮಾಯಾವಿ ಮಾಯಾಗೊಂಬೆಯಿಂದಲೇ ನನ್ನನ್ನು ಗುರುತಿಸುತ್ತಾರೆ. ದನಿಯ ಮೂಲಕ ಗೊಂಬೆಗೆ ಜೀವ ಒದಗಿಸಿ, ಪರಸ್ಪರ ಮುಖಾಮುಖಿಯಾಗುವುದು ಬಹಳ ಸವಾಲಿನ ಕೆಲಸ. ನಗು, ಅಳು, ಎಲ್ಲ ವೈರುಧ್ಯ ಭಾವನೆಯನ್ನು ಏಕಕಾಲದಲ್ಲೇ ಎರಡು ಪಾತ್ರಗಳಿಗೆ ಒದಗಿಸುವುದರಲ್ಲಿ ಒಂದು ರೀತಿಯ ಖುಷಿ ಇದೆ. ಬೀಚಿ ಅವರ ಹಾಸ್ಯ ಸಾಹಿತ್ಯವನ್ನು ಸತತವಾಗಿ ಓದಿದ್ದರ ಪರಿಣಾಮ ನೇರಪ್ರಸಾರದಲ್ಲಿ ಡಿಂಕುವಿಗೆ ಏನೇ ಪ್ರಶ್ನೆ ಕೇಳಿದರೂ ಕ್ಷಣಾರ್ಧದಲ್ಲಿ ಉತ್ತರ ನೀಡುವ ಕಷ್ಟವನ್ನು ಎದುರಿಸಲು ಸಾಧ್ಯವಾಯಿತು.

ಜೀವನವೆಂಬುದು ಸಾವಿರ ಸವಾಲಿನ ಓಟ. ಹಾಗಾಗಿ ನನ್ನಿಷ್ಟದ ಗುರುಗಳಾದ ಉದಯ್ ಜಾದೂಗಾರ್ ಮತ್ತು ಪಾಲ್ ವಿಂಚಿಲ್ ಅವರ ಕಾರ್ಯಕ್ರಮದ ಸಿ.ಡಿ.ನೋಡುತ್ತಲೇ ಎಲ್ಲವನ್ನು ಕಲಿತೆ. ಈ ವಿಚಾರದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ ಬಂದ ನಾನು ಗೊಂಬೆಯೊಂದಿಗೆ ಮಾತನಾಡುವ ಕಲೆ ಕಲಿಸುವ ಶಾಲೆಯನ್ನು ಆರಂಭಿಸಬೇಕೆಂದಿದ್ದೇನೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕಲಾಕೋರ್ಸ್ ಮುಗಿಸಿ, ಸದ್ಯಕ್ಕೆ ರೆಸಿಡೆನ್ಸಿ ಕಾಲೇಜಿನಲ್ಲಿ ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದೇನೆ. ಬಾಲ್ಯದಲ್ಲಿ ತುಂಟಿಯಾಗಿದ್ದರಿಂದಲೋ ಏನೋ ಕಾಲೇಜು ದಿನಗಳಲ್ಲಿ ಪ್ರವೃತ್ತಿಯೆಡೆಗಿನ ಸೆಳೆತ ಹೆಚ್ಚಿತ್ತು. ಬಿಡುವಿನ ವೇಳೆ ಹಾಸ್ಯ ಸಿನಿಮಾಗಳನ್ನು ನೋಡುತ್ತೇನೆ. ಸಂಗೀತವೆಂದರೆ ಪ್ರಾಣ ಹಾಗಾಗಿ ಖುಷಿಗಾಗಿ ಕೊಳಲು ನುಡಿಸುತ್ತೇನೆ.

ಸುದ್ದಿವಾಹಿನಿಯೊಂದರಲ್ಲಿ ನೀಡಿದ `ರಾಜಕೀಯ ಬೊಂಬೆಯಾಟವಯ್ಯ' ಪ್ರದರ್ಶನವು ಹೆಚ್ಚಿನ ಕೀರ್ತಿ ತಂದುಕೊಟ್ಟಿತ್ತು. ಇದಲ್ಲದೆ ಮೈಸೂರು ದಸರಾದಲ್ಲಿ ಸತತ ಮೂರು ವರ್ಷ ಕಾರ್ಯಕ್ರಮ ನೀಡಿದ್ದೆ. ಅಮೆರಿಕ, ಆಸ್ಟ್ರೇಲಿಯಾ, ಥಾಯ್ಲೆಂಡ್, ಮಸ್ಕತ್, ಪೋಲೆಂಡ್ ಸೇರಿದಂತೆ ದೇಶ-ವಿದೇಶಗಳಲ್ಲಿ ಸುಮಾರು ಮೂರೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇನೆ.

`ಡಿಂಕು'ವಿನೊಂದಿಗೆ ಭಾವನಾತ್ಮಕ ಸಂಬಂಧ ಬೆಳೆದುಬಿಟ್ಟಿದೆ. ಹಾಗಾಗಿ ನಾನು ಮೊದಲ ಬಾರಿಗೆ ಕಾರು ಖರೀದಿಸಿದಾಗ ಡಿಂಕುವನ್ನು ಕರೆದುಕೊಂಡು ಹೋಗಿ ಅವನೇ ಮೊದಲಿಗೆ ಕಾರು ಡ್ರೈವ್ ಮಾಡಿದ್ದ. ಇನ್ನು ಕಾರ್ಯಕ್ರಮ ನೀಡುವಾಗ ಮಕ್ಕಳು ಅವನ ಕಾಲು ಎಳೆದದ್ದು, ಕಣ್ಣಿನ ಚಿಪ್ಪು ಕಿತ್ತ ಘಟನೆಗಳು ನಗು ತರಿಸುತ್ತವೆ. ತನ್ನ ಬಣ್ಣ ಮತ್ತು ದೊಡ್ಡ ಕಣ್ಣುಗಳಿಂದಲೇ ಮೂದಲಿಕೆ ಒಳಗಾಗಿದ್ದ `ಡಿಂಕು' ನನ್ನ ಭಾವಲೋಕದಲ್ಲಿ  ಮಹತ್ತರ ಸ್ಥಾನ ಪಡೆದುಕೊಂಡಿದ್ದಾನೆ ಮತ್ತು ನನ್ನ ವೃತ್ತಿ ಬದುಕಿಗೆ ತಿರುವು ನೀಡಿದ್ದಾನೆ. ಈಗ ಎಲ್ಲೇ ಹೋದರೂ ಗೊಂಬೆಗಳನ್ನು ಕೊಂಡುಕೊಳ್ಳುತ್ತೇನೆ. ಅಮೆರಿಕಕ್ಕೆ ಹೋದಾಗ `ಡಿಂಕು'ವಿನಂತದ್ದೇ ಸುಮಾರು ಐದಾರು ಗೊಂಬೆಗಳನ್ನು ಕೊಂಡುತಂದಿದ್ದೆ. ಅಜ್ಜಿ, ತಾತ ಹೀಗೆ ಬಗೆಯಬಗೆಯ ಪಾತ್ರಗಳನ್ನು ಸೃಷ್ಟಿಸಿ ಪ್ರೇಕ್ಷಕರನ್ನು ರಂಜಿಸುವ ಇರಾದೆಯಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.