ADVERTISEMENT

ತಬಲಾ ಮಾಸ್ತರ್...

ರಮೇಶ ಕೆ
Published 2 ನವೆಂಬರ್ 2011, 19:30 IST
Last Updated 2 ನವೆಂಬರ್ 2011, 19:30 IST

ಕಲೆ ಎಂಬುದು ಕೆಲವರಿಗೆ ಮಾತ್ರ ಒಲಿಯುವಂತದ್ದು. ಅದಕ್ಕೂ ಅದೃಷ್ಟ ಬೇಕು. ಅಂಥವರಲ್ಲಿ ಒಬ್ಬರು ಎಂ.ಎನ್. ಮಲ್ಲಿಕಾರ್ಜುನ. ದೈಹಿಕವಾಗಿ ಅಂಗವಿಕಲರಾದರೂ ಎದೆಗುಂದದೆ, ಕೈಕಟ್ಟಿ ಕುಳಿತುಕೊಳ್ಳದೆ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಬಲಾ ಹೇಳಿಕೊಡುತ್ತಿದ್ದಾರೆ. ಅಂಗವೈಕಲ್ಯತೆ ಮೆಟ್ಟಿ ಜೀವನ ಸಾಗಿಸುತ್ತಿದ್ದಾರೆ.

ಮೂಲತಃ ಬೆಂಗಳೂರಿನವರೇ ಆದ ಮಲ್ಲಿಕಾರ್ಜುನ ಹುಟ್ಟು ಅಂಗವಿಕಲರಲ್ಲ. ಶಾಲೆಯಲ್ಲಿ ಆಟವಾಡುವಾಗ ಬಿದ್ದು ಕಾಲು ಮುರಿದುಕೊಂಡರು. ಅದು ಸರಿ ಹೋಗಲೇ ಇಲ್ಲ. ಆದರೂ ಧೃತಿಗೆಡದೆ ಛಲದಿಂದ ಮುಂದೆ ಬರಬೇಕೆಂದು ಪಣ ತೊಟ್ಟರು.

ಚಿಕ್ಕಂದಿನಿಂದಲೇ ಸಂಗೀತ ವಿದ್ವಾಂಸರಾದ ತಂದೆ ಎಂ.ನಾಗಭೂಷಣಂ ಬಳಿ ಸಂಗೀತ ಅಭ್ಯಾಸ ಮಾಡಿದರು. ನಂತರ ಗದುಗಿನಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳಿಂದ ತಬಲಾ ಮತ್ತು ಗಾಯನ ಕರಗತ ಮಾಡಿಕೊಂಡರು.

ಅವರ ಬದುಕಿನ ದಾರಿ ಬದಲಾಯಿತು. ನಂತರ ರಂಗಭೂಮಿ, ಸಂಗೀತ ಗೋಷ್ಠಿಗಳಲ್ಲಿ ಸ್ವತಂತ್ರವಾಗಿ ಕಾರ್ಯಕ್ರಮ ನೀಡುವಂತಾದರು. `ಶಿವತಾಂಡವ ವಾದನ~ (ತಬಲಾ ತರಂಗ್) ದಲ್ಲಿ ಸತತವಾಗಿ 3ರಿಂದ ನಾಲ್ಕು ಗಂಟೆ ತಬಲಾ ನುಡಿಸುವ ಮೂಲಕ ಸಂಗೀತಪ್ರಿಯರ ಮನತಣಿಸಿದ್ದಾರೆ.

1976ರಲ್ಲಿ ನಡೆದ ಅಖಿಲ ಭಾರತ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರರಾದರು. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ರವೀಂದ್ರ ಜೈನ್, ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿ, ಶಿವಮೊಗ್ಗ ಸುಬ್ಬಣ್ಣ ಸೇರಿದಂತೆ ನಾಡಿನ ಪ್ರಮುಖ ಗಾಯಕರ ಕಾರ್ಯಕ್ರಮಗಳಿಗೆ ತಬಲಾ ಸಾಥ್ ನೀಡಿದ್ದಾರೆ.

ತಾನು ಕಲಿತ ವಿದ್ಯೆಯನ್ನು ನಾಲ್ಕಾರು ಮಂದಿಗೆ ಕಲಿಸಬೇಕೆಂಬ ಹಂಬಲದೊಂದಿಗೆ 2007ರಲ್ಲಿ `ಸುಮಧುರ ಸಂಗೀತ ಕಲಾವೇದಿಕೆ~ ಎಂಬ ಶಾಲೆಯನ್ನು ಆರಂಭಿಸಿ ಅಂಗವಿಕಲರಿಗೆ, ಆಸಕ್ತರಿಗೆ ಗಾಯನ, ತಬಲಾವನ್ನು ಕಲಿಸುತ್ತಿದ್ದಾರೆ.

ಆಸಕ್ತರು ಒಟ್ಟುಗೂಡಿ ತಬಲಾ ಕಲಿಸಿಕೊಡಿ ಎಂದು ಕೇಳಿಕೊಂಡರೆ ಅವರಿದ್ದಲ್ಲಿಗೆ ಹೋಗಿ ತಬಲಾ, ಸಂಗೀತ ಹೇಳಿಕೊಡುತ್ತೇನೆ ಎನ್ನುತ್ತಾರೆ ಮಲ್ಲಿಕಾರ್ಜುನ. ಶಾಲೆಯಲ್ಲಿ ಸುಗಮ ಸಂಗೀತ, ದೇವರನಾಮ, ಭಕ್ತಗೀತೆ, ಗಜಲ್‌ಗಳನ್ನು ಕಲಿಸುತ್ತಾರೆ. ಇವರ ಈ ಕಲೆಗೆ ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಅವರನ್ನು ಸಂಪರ್ಕಿಸಲು 98455 06813.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.