ADVERTISEMENT

ತಿಲಕ್ ಸಿನಿಮಾ ಕಥೆ

ಅಮಿತ್ ಎಂ.ಎಸ್.
Published 20 ಮೇ 2012, 19:30 IST
Last Updated 20 ಮೇ 2012, 19:30 IST

ಸಿನಿಮಾ ವೃತ್ತಿ ಬದುಕಿನ ಬ್ರೇಕ್‌ನ ನಿರೀಕ್ಷೆಯಲ್ಲಿದ್ದಾರೆ ನಟ ತಿಲಕ್. `ಗಂಡ-ಹೆಂಡತಿ~ ಚಿತ್ರದ ನೆಗೆಟಿವ್ ಪಾತ್ರದ ಮೂಲಕ ಬೆಳ್ಳಿ ತೆರೆಗೆ ಪರಿಚಯವಾದ ಅವರು ಚಿತ್ರದಲ್ಲಿ ನಟಿ ಸಂಜನಾ ಜೊತೆಗಿನ ಅಧರ ಚುಂಬನ ದೃಶ್ಯಗಳಿಂದಲೇ ಸುದ್ದಿಯಾದವರು.

ಅದರ ಬಳಿಕ ತಿಲಕ್ `ಮೀರಾ ಮಾಧವ ರಾಘವ~, `ಆ್ಯಕ್ಸಿಡೆಂಟ್~, `ಖದೀಮರು~ ಹೀಗೆ ಸುಮಾರು ಹದಿನಾಲ್ಕು ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದರೂ ಜನ ಅವರನ್ನು ಗುರುತಿಸುವುದು `ಗಂಡ- ಹೆಂಡತಿ~ ತಿಲಕ್ ಎಂದೇ. ಇದಕ್ಕಾಗಿ ತಿಲಕ್‌ಗೆ ಬೇಸರವಿಲ್ಲ, ಮಡಿವಂತರ ಕೆಂಗಣ್ಣಿಗೆ ಗುರಿಯಾದದ್ದಕ್ಕೆ ಪಶ್ಚಾತ್ತಾಪವೂ ಇಲ್ಲ.

ಬದಲಿಗೆ ಖುಷಿ ಇದೆ. `ಗಂಡ -ಹೆಂಡತಿ ನನಗೆ ಬಣ್ಣದ ಬದುಕನ್ನು ತೋರಿಸಿದ ಚಿತ್ರ. ಇದರಲ್ಲಿನ ನೆಗೆಟಿವ್ ಪಾತ್ರವನ್ನು ಎಲ್ಲರಿಂದಲೂ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಅವಕಾಶವೂ ಎಲ್ಲರಿಗೆ ಸಿಗುವುದಿಲ್ಲ. ಇಂದಿಗೂ ಅಂತಹ ಪಾತ್ರ ಸಿಕ್ಕರೆ ಮಾಡಲು ಸಿದ್ಧ~ ಎಂಬ ದಿಟ್ಟ ಉತ್ತರ ತಿಲಕ್ ಅವರದು.

ತಿಲಕ್ ಕೈಯಲ್ಲಿ ಈಗ ಮೂರು ಚಿತ್ರಗಳಿವೆ. `ಸ್ಟೋರಿ ಕಥೆ~ ಎಂಬ ಮನೋವೈಜ್ಞಾನಿಕ ಥ್ರಿಲ್ಲರ್ ಕಥಾಹಂದರವುಳ್ಳ ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ. ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿರುವ ಅವರಿಗೆ ಅದು ಸವಾಲಿನ ಪಾತ್ರವಂತೆ.
 
ಕನ್ನಡದಲ್ಲಿ ಇದು ತೀರಾ ಅಪರೂಪದ ಪ್ರಯತ್ನವುಳ್ಳ ಕತೆ ಎನ್ನುತ್ತಾರೆ. ಶ್ರೀ ಮುರಳಿ ಜೊತೆಗೂಡಿ ನಟಿಸುತ್ತಿರುವ `ಗಲಾಟೆ~ ಚಿತ್ರದಲ್ಲಿ ಅವರದು ನೆಗೆಟಿವ್ ಪಾತ್ರ. `ನಂದೇ~ ಎಂಬ ಚಿತ್ರದಲ್ಲಿ ತಿಲಕ್‌ಗೆ ನಾಯಕನ ಪಟ್ಟ.

ಪ್ರಶಾಂತ್ ಎಂಬ ನಿರ್ದೇಶಕರು ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಇದು ಬಹುಶಃ ಎಲ್ಲೂ ಕೇಳಿರದ ಕಥೆಯ ಚಿತ್ರ. ನಮ್ಮ ಎಂದಿನ ಸೂತ್ರಗಳನ್ನು ಮೀರಿ ವಿಭಿನ್ನವಾಗಿ ಚಿತ್ರಿಸಲಾಗುತ್ತಿದೆ. ಫ್ರೆಂಚ್‌ನಲ್ಲಿ ಹೊಸ ಅಲೆ ಮೂಡಿಸಿದ್ದ `ರಿಯಾಲಿಟಿ ಸಿನಿಮಾ~ಗಳ ಮಾದರಿಯನ್ನು ಇದು ಅನುಸರಿಸುತ್ತದೆ ಎಂದು ಸಿನಿಮಾ ಬಗ್ಗೆ ಅವರು ಹೇಳಿಕೊಂಡರು.

ನಾಯಕ ಪಾತ್ರಗಳಿಗಿಂತಲೂ ಖಳನಾಯಕನ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ ಎನ್ನುವ ತಿಲಕ್‌ಗೆ ಎಲ್ಲರಂತೆ ಜನ ಗುರುತಿಸುವ ನಾಯಕ ನಟನಾಗಿ ಹೊರಹೊಮ್ಮಬೇಕೆಂಬ ಆಸೆ ಇದೆ. ಹಾಗೆಂದು ದೊರಕುತ್ತಿರುವ ಪಾತ್ರಗಳೇನೂ ಅವರಿಗೆ ಜನಪ್ರಿಯತೆ ತಂದುಕೊಟ್ಟಿಲ್ಲವೆಂದಲ್ಲ.

ನಟನಾಗಿ ಜನ ತಮ್ಮನ್ನು ಗುರುತಿಸುತ್ತಿದ್ದಾರೆ ಎಂಬ ಹೆಮ್ಮೆ ಅವರಿಗಿದೆ. ಕೆಲವು ನಟರಂತೆ ಅವಕಾಶಗಳಿಗಾಗಿ ಕೈ ಚಾಚಿ ನಿಲ್ಲುವ ಪ್ರಸಂಗ ಎಂದೂ ಎದುರಾಗಿಲ್ಲ. ಮೊದಲ ಚಿತ್ರದಿಂದ ಇಲ್ಲಿಯವರೆಗೂ ನಾನೊಬ್ಬ ಬ್ಯುಸಿ ನಟನಾಗಿಯೇ ಉಳಿದಿದ್ದೇನೆ. ಚಿತ್ರರಂಗದಲ್ಲಿ ನೆಲೆ ನಿಂತ ಸಂತೃಪ್ತಿಯಿದೆ ಎನ್ನುತ್ತಾರೆ.

ಒಂದು ಚಿತ್ರದೊಂದಿಗೆ ಗುರುತಿಸಿಕೊಂಡರೆ ಅದರ ಪ್ರಭಾವದಿಂದ ಹೊರಬರುವುದು ಕಷ್ಟ. ಇಷ್ಟು ಸಿನಿಮಾಗಳನ್ನು ಮಾಡಿದ್ದರೂ ಗಣೇಶ್‌ರನ್ನು `ಮುಂಗಾರು ಮಳೆ~ಯ ಮೂಲಕವೇ ಗುರುತಿಸುತ್ತಾರೆ. `ಗಂಡ-ಹೆಂಡತಿ~ಯ ತಿಲಕ್ ಆಗಿಯೇ ಗುರುತಿಸಿಕೊಳ್ಳಲು ಬೇಸರವಿಲ್ಲ. ಆದರೆ ಅದನ್ನೂ ಮೀರುವ ನಟನಾಗಬೇಕು ಎಂಬ ಅಭಿಲಾಷೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.