ADVERTISEMENT

ದಕ್ಷಿಣ್‌ನಲ್ಲಿ ತೆಲಂಗಾಣ ಸವಿರುಚಿ

ಸತೀಶ ಬೆಳ್ಳಕ್ಕಿ
Published 24 ಜನವರಿ 2016, 19:30 IST
Last Updated 24 ಜನವರಿ 2016, 19:30 IST
ದಕ್ಷಿಣ್‌ನಲ್ಲಿ ತೆಲಂಗಾಣ ಸವಿರುಚಿ
ದಕ್ಷಿಣ್‌ನಲ್ಲಿ ತೆಲಂಗಾಣ ಸವಿರುಚಿ   

ದಕ್ಷಿಣ ಭಾರತೀಯ ತಿನಿಸುಗಳಿಗೆ ಜನಪ್ರಿಯವಾದ ‘ದಕ್ಷಿಣ್‌’ ರೆಸ್ಟೊರೆಂಟ್‌ನಲ್ಲಿ ಈಗ ತೆಲಂಗಾಣ ಆಹಾರೋತ್ಸವ ನೆಡೆಯುತ್ತಿದೆ. ತೆಲಂಗಾಣದ ಅಡುಗೆಯಲ್ಲಿ ಆಂಧ್ರಕ್ಕಿಂತಲೂ ಹೆಚ್ಚಿನ ಖಾರ ಬಳಕೆಯಾಗುತ್ತದೆ. ಚಳಿಗಾಲದಲ್ಲಿ ಹೆಚ್ಚು ಖಾರವಾದ ತಿನಿಸುಗಳನ್ನೇ ಸವಿಯಲು ಬಯಸುವ ಆಹಾರಪ್ರಿಯರಿಗೆ ಈ ಉತ್ಸವದಲ್ಲಿ ಭರ್ಜರಿ ರಸದೌತಣವೇ ಸಿಗಲಿದೆ.

ಅಂದಹಾಗೆ, ತೆಲಂಗಾಣ ಆಹಾರೋತ್ಸವಕ್ಕೆಂದೇ ಇಲ್ಲಿನ ಮುಖ್ಯ ಬಾಣಸಿಗ ಜಾರ್ಜ್‌ ಜಯಸೂರ್ಯ ವಿಶೇಷ ಮೆನು ಸಿದ್ಧಪಡಿಸಿದ್ದಾರೆ. ಸರ್ವೋತ್ತಮ, ಆರಂಭಂ, ಭೋಜನಂ ಮತ್ತು ಮಧುರಂನಲ್ಲಿ ಗ್ರಾಹಕರ ರುಚಿಮೊಗ್ಗುಗಳನ್ನು ಅರಳಿಸುವ ತರಹೇವಾರಿ ಖಾದ್ಯಗಳಿವೆ. 

ಸರ್ವೋತ್ತಮದಲ್ಲಿ ದಕ್ಷಿಣ್‌ ರೆಸ್ಟೊರೆಂಟ್‌ನ ರೆಗ್ಯುಲರ್‌ ಮೆನುವಿನಲ್ಲಿ ಸ್ಥಾನಪಡೆದಿರುವ ಅತ್ಯುತ್ತಮ ಹತ್ತು ಖಾದ್ಯಗಳು ಸಿಗುತ್ತವೆ. ಇದರ ಜೊತೆಗೆ ಗ್ರಾಹಕರು ಆರಂಭಂ, ಭೋಜನಂ ಮತ್ತು ಮಧುರಂ ವಿಭಾಗದಲ್ಲಿ ತೆಲಂಗಾಣದ ಜನಪ್ರಿಯ ತಿನಿಸುಗಳ ರುಚಿಯನ್ನು ಸವಿಯಬಹುದು.

ಮಿರ್ಯಾಲ ಚಾರು (ಸೂಪ್‌) ಸವಿಯೊಂದಿಗೆ ಗ್ರಾಹಕರು ತಮ್ಮ ತೆಲಂಗಾಣ ಭೋಜನಕ್ಕೆ ಚಾಲನೆ ನೀಡಬಹುದು. ಜೀರಿಗೆ, ಕರಿಮೆಣಸು, ನಿಂಬೆ ರಸದ ಸ್ವಾದದಲ್ಲಿ ಘಮ್‌ ಎನ್ನುವ ಈ ಸೂಪ್‌ ಸವಿಯುವಾಗ ಹೊಟ್ಟೆಯೊಳಗಿನ ಹಸಿವಿನ ಚಿಟ್ಟೆಗಳು ಶ್ರುತಿಗೊಳ್ಳತೊಡಗುತ್ತವೆ. ವಿಶೇಷ ರುಚಿಯಿರುವ ಮತ್ತು ಚಳಿಗಾಲಕ್ಕೆ ಹೇಳಿ ಮಾಡಿಸಿದಂತಿರುವ ಈ ಸೂಪ್‌ನೊಟ್ಟಿಗೆ ಮಕ್ಕ ಜನ ವಡಾ ಉತ್ತಮ ಕಾಂಬಿನೇಷನ್‌. ಮುಸುಕಿನ ಜೋಳ ಮತ್ತು ಕಡ್ಲೆಬೇಳೆ ಬಳಸಿ ತಯಾರಿಸುವ ಈ ತಿನಿಸು ಕೂಡ ತನ್ನ ವಿಶೇಷ ರುಚಿಯಿಂದ ಇಷ್ಟವಾಗುತ್ತದೆ.

ಸಸ್ಯಾಹಾರಿಗಳಿಗೆ ಮಿರ್ಯಾಲ ಚಾರು ಇರುವಂತೆ ಮಾಂಸಾರಿಗಳಿಗೆ ಚಿಕನ್‌ ಸೂಪ್‌ ಇದೆ. ಕೋಳಿಯ ಮೂಳೆಗಳೆನ್ನೆಲ್ಲ ರಾತ್ರಿಯಿಡೀ ಬೇಯಿಸಿ, ಅದಕ್ಕೆ ಚಿಕನ್‌ ಕೀಮಾ, ಜೀರಿಗೆ, ಕರಿಮೆಣಸು ಸೇರಿಸಿ ಸೂಪ್‌ ತಯಾರಿಸಲಾಗುತ್ತದೆ. ಸೂಪ್‌ ಸವಿಯುವಾಗ ಚಿಕನ್‌ ಪೀಸ್‌ಗಳೂ ಸಿಗುತ್ತವೆ. ವೆಜ್‌ ಸೂಪ್‌ಗಿಂತಲೂ ನಾನ್‌ವೆಜ್‌ ಸೂಪ್‌ ತುಂಬ ರುಚಿಯಾಗಿದೆ.

ಮಾಂಸಹಾರಿಗಳ ಜಿಹ್ವಾ ಚಾಪಲ್ಯ ತಣಿಸುವ ಚಾಪ ಮಸಾಲ, ಆರಂಭಂನ ಮತ್ತೊಂದು ಜನಪ್ರಿಯ ಸ್ಟಾರ್ಟರ್.  ದೊಡ್ಡಗಾತ್ರದ ಕಿಂಗ್‌ಫಿಷರ್‌ ಮೀನಿನಿಂದ ತಯಾರಿಸುವ ಈ ಖಾದ್ಯಕ್ಕೆ ಮಾಮೂಲಿ ಫಿಶ್‌ ಫ್ರೈಗೆ ಬಳಸುವ ಮಸಾಲೆಯನ್ನೇ ಬಳಸುತ್ತಾರೆ. ಆದರೆ, ಇದರ ರುಚಿಯಲ್ಲಿ ಮಾತ್ರ ಭಿನ್ನತೆ ಇರುವುದನ್ನು ಗುರ್ತಿಸಬಹುದು. ಚಾಪ ಮಸಾಲ ತಯಾರಿಸುವಾಗ ಇಲ್ಲಿನ ಬಾಣಸಿಗ ಜಯಸೂರ್ಯ ಅವರು ಗುಂಟೂರು ಚಿಲ್ಲಿ ಬದಲಿಗೆ ಬ್ಯಾಡಗಿ ಮೆಣಸಿನಕಾಯಿ ಬಳಸುತ್ತಾರೆ.

ಬ್ಯಾಡಗಿ ಚಿಲ್ಲಿಯಲ್ಲಿ ಸ್ವಲ್ಪ ಸ್ವೀಟ್‌ನೆಸ್‌ ಇರುತ್ತದೆ ಮತ್ತು ಗುಂಟೂರು ಚಿಲ್ಲಿಗಿಂತಲೂ ಖಾರ ಕಮ್ಮಿ ಇರುತ್ತದೆ ಎಂಬ ಕಾರಣಕ್ಕೆ ಅವರು ಇದನ್ನು ಬಳಸುತ್ತಾರಂತೆ. ಹಾಗೆಯೇ, ಸಣ್ಣ ಸಣ್ಣ ಮೀನಿನ ತುಂಡುಗಳನ್ನು ಡೀಪ್‌ ಫ್ರೈ ಮಾಡಿ ಬಡಿಸುವ ಪೊಡಿ ಚಾಪ ಮತ್ತೊಂದು ಸ್ಟಾರ್ಟರ್‌. ಮಸಾಲೆ ಮಿಶ್ರಣವಿರುವ ಮೀನಿನ ತುಂಡುಗಳನ್ನು ಎಣ್ಣೆಯಲ್ಲಿ ಬೇಯಿಸಿದ ನಂತರ ಅದರ ಮೇಲೆ ಕೆಂಪು ಮೆಣಸಿನಕಾಯಿ, ದನಿಯಾ ಮತ್ತು ಉಚ್ಚೆಳ್ಳು ಬಳಸಿ ತಯಾರಿಸಿದ ಪೌಡರ್‌ ಅನ್ನು ಉದುರಿಸಿ ಕೊಡುತ್ತಾರೆ. 

ಭೋಜನಂ ವಿಭಾಗದಲ್ಲಿ ಗೋಲಿಚೀನಾ ರಾಯಲು ಖಾದ್ಯದ ರುಚಿಯನ್ನು ತಪ್ಪದೇ ಸವಿಯಬೇಕು. ಸಿಗಡಿಗೆ ಈರುಳ್ಳಿ, ಟೊಮೊಟೊ ಮತ್ತು ಮಸಾಲ ಪದಾರ್ಥಗಳನ್ನು ಹಾಕಿ ತಯಾರಿಸಿದ ಈ ಖಾದ್ಯ ಸವಿಯುವಾಗ ಸಖತ್‌ ಕಿಕ್‌ ಸಿಗುತ್ತದೆ. ಸಿಗಡಿಯನ್ನು ತುಂಬ ಬೇಯಿಸಬಾರದು. ಅದಕ್ಕೆ ಹೆಚ್ಚು ಮಸಾಲೆಯೂ ಅಂಟಿಕೊಂಡಿರಬಾರದು.

ಸಿಗಡಿ ತಿನ್ನುವಾಗ ರಬ್ಬರ್‌ ಕಡಿದಂತೆ ಇರಬೇಕು. ಆ ರೀತಿಯಲ್ಲಿದ್ದಾಗಲೇ ಸಿಗಡಿ ತಿನ್ನಲು ಮಜಾ ಬರುವುದು. ಗೋಲಿಚೀನಾ ಇದೇ ಸೂತ್ರದಲ್ಲಿ ತಯಾರಾದ ಖಾದ್ಯವಾದ್ದರಿಂದ ಸಿಗಡಿ ಪ್ರಿಯರಿಗೆ ಇದು ತುಂಬ ಇಷ್ಟವಾಗುತ್ತದೆ.  ಪೊಟ್ಲಿ ಉರ್‌ಘೈ ಮಸಾಲಾ (ಕುರಿ ಮಾಂಸದ ತಿನಿಸು), ಚಾಪ ಮಸಾಲ ಕೂರ (ಮೀನಿನ ಖಾದ್ಯ) ಹಾಗೂ ಆಂಧ್ರದ ಜನಪ್ರಿಯ ತಿನಿಸು ಮಟನ್‌ ಗೊಂಗುರ ಮುಖ್ಯಮೆನುವಿನ ರಾಯಲ್‌ ಖಾದ್ಯಗಳು.

ಮುಖ್ಯಮೆನುವಿಗೆ ಹೊಂದಿಕೆಯಾಗುವಂತೆ ಮಲಬಾರ್‌ ಪರಾಟ, ಅಪ್ಪಂ, ಚಿಕನ್‌ ಪುಲಾವ್‌, ಮಟನ್‌ ಪುಲಾವ್‌ಗಳ ಆಯ್ಕೆ ಗ್ರಾಹಕರಿಗೆ ಲಭ್ಯವಿದೆ. ಮಧುರಂನಲ್ಲಿ ಪರಮಾನ್ನಂ, ಪಂಡಾಲ ಪಾಯಸಂ, ಪೆಸರು ಪಪ್ಪು ಪಾಯಸ ಸವಿದು ಊಟ ಮುಗಿಸಬಹುದು. ಈ ಆಹಾರೋತ್ಸವ ಜ.27ಕ್ಕೆ ಕೊನೆಗೊಳ್ಳಲಿದೆ.
*
ಆಂಧ್ರ ಅಡುಗೆಯಲ್ಲಿ ತೆಂಗಿನಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ,  ತೆಲಂಗಾಣದಲ್ಲಿ ಇದರ ಬಳಕೆ ಕಡಿಮೆ. ತೆಲಂಗಾಣದಲ್ಲಿ ಎಳ್ಳು, ಕಡ್ಲೆಕಾಯಿ, ಗಸಗಸೆ, ಗೋಡಂಬಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ತೆಲಂಗಾಣ ಆಹಾರ ಸಂಸ್ಕೃತಿಯ ಮೇಲೆ ನಿಜಾಮರ ಪ್ರಭಾವ ಇರುವುದರಿಂದ ಈ ಭಾಗದ ಖಾದ್ಯಗಳ ರುಚಿ ಶ್ರೀಮಂತವಾಗಿರುತ್ತವೆ. –ಜಾರ್ಜ್‌ ಜಯಸೂರ್ಯ
*

ಸ್ಥಳ: ದಕ್ಷಿಣ್‌, ಐಟಿಸಿ ವಿಂಡ್ಸರ್‌ ಮ್ಯಾನರ್‌, ಗಾಲ್ಫ್‌ ಕೋರ್ಸ್‌ ರಸ್ತೆ. ಟೇಬಲ್‌ ಕಾಯ್ದಿರಿಸಲು: 080 2226 9898.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.