ADVERTISEMENT

ದಾರಿ ತೋರಿದವರು...

ಬಸ್ ಕತೆ

ಎಸ್.ವಿಜಯ ಗುರುರಾಜ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST
ದಾರಿ ತೋರಿದವರು...
ದಾರಿ ತೋರಿದವರು...   

ಆಗ ನಾವು ಬೆಂಗಳೂರಿಗೆ ಬಂದ ಹೊಸತು. ಮಲ್ಲೇಶ್ವರದ ರೈಲ್ವೆ ಸ್ಟೇಷನ್ ದಾಟಿ ಹೋದರೆ ಗಾಯಿತ್ರಿನಗರ ಸಿಗುತ್ತಿತ್ತು. ಅಲ್ಲೊಂದು ಶಾಲೆಯಲ್ಲಿ ನನಗೆ ಕ್ಲರ್ಕ್ ಕೆಲಸ ಸಿಕ್ಕಿತ್ತು.

ಕೆಲಸ ಕೊಡಿಸಿದ ಗೆಳತಿ ಒಂದು ದಿನ ಯಶವಂತಪುರದಿಂದ ಬಸ್ಸಿನಲ್ಲಿ ಕರೆದೊಯ್ದು ಶಾಲೆ ತೋರಿಸಿ ಬಂದಳು. ಮರುದಿನ ನಾನೇ ಬಸ್ ಹತ್ತಿದೆ. ಬಸ್ ಹೊರಟ ಸ್ವಲ್ಪ ಸಮಯಕ್ಕೇ ಶಾಲಾ ಮಕ್ಕಳಿಂದ ತುಂಬಿಹೋಯಿತು. 18ನೇ ಕ್ರಾಸ್ ಎಂದು ಹೇಳಿ ಟಿಕೆಟ್ ಪಡೆದು ಕಿಟಕಿಯ ಬಳಿ ಕುಳಿತು ಹೊರಗೆ ನೋಡುತ್ತಿದ್ದೆ.

ಎಷ್ಟು ಸಮಯ ಕಳೆದರೂ ನಾನು ಇಳಿಯುವ ಸ್ಥಳ ತಿಳಿಯಲೇ ಇಲ್ಲ. ಆಗ ಬಸ್ ದೊಡ್ಡ ಸ್ಟಾಪಿನ ಬಳಿ ನಿಂತಿತು. ಕಿಟಕಿಯಿಂದ ದೊಡ್ಡ ಆಟದ ಮೈದಾನವೊಂದು ಕಾಣುತ್ತಿತ್ತು. ‘ಯಾರ್ರೀ ಮಲ್ಲೇಶ್ವರ ಸರ್ಕಲ್’ ಎಂದಾಗ ಎದ್ದು ಬಾಗಿಲ ಬಳಿ ಬಂದು ‘ಹದಿನೆಂಟನೇ ಕ್ರಾಸ್‌ನಲ್ಲಿ ಇಳಿಯಬೇಕಿತ್ತು’ ಎಂದೆ. ಆಗ ಡ್ರೈವರ್, ‘ಅಯ್ಯೋ ಆಗಲೇ ಹೋಯ್ತಲ್ಲಮ್ಮ ಹೋಗ್ಲಿ ಇಳಿಯಿರಿ, ಆ ಕಡೆಯಿಂದ ಬರುವ ಬಸ್ ಹತ್ತಿ ಹೋಗಿ’ ಎಂದು ಹೇಳಿದರು.

ಸರಿ ಎಂದು ಇಳಿದ ನನ್ನ ಸ್ಥಿತಿ ‘ಬೋರೇಗೌಡ ಬೆಂಗಳೂರಿಗೆ ಬಂದ’ ಎನ್ನುವಂತಾಗಿತ್ತು. ಸುಮ್ಮನೆ ನಿಂತೆ. ಆ ಕಡೆಯಿಂದ ಬಸ್ಸೊಂದು ಬಂದು ನಿಂತಿತು. 18ನೇ ಕ್ರಾಸ್ ಎಂದೆ. ಬನ್ನಿ ಎಂದರು ಡ್ರೈವರ್.

ಐದು ನಿಮಿಷಕ್ಕೆಲ್ಲ ‘ಇಳೀರಮ್ಮ, ನಿಮ್ಮ ಸ್ಟಾಪ್ ಬಂತು’ ಎಂದರು. ಅಲ್ಲಿಂದ ಹೊರಗೆ ನೋಡಿದ ನಾನು, ‘ಇಲ್ಲಿಂದ ರೈಲ್ವೆ ಸ್ಟೇಷನ್ ಕಾಣುತ್ತಿಲ್ವಲ್ಲ’ ಎಂದೆ. ಆಗ ಡ್ರೈವರ್, ‘ನೀವು ಹೊಸಬರು ಅಂತ ಕಾಣುತ್ತೆ, ಇರಿ’ ಎಂದು ಕಂಡಕ್ಟರ್ ಗೆ ಏನೋ ಹೇಳಿದರು. ಬಸ್ ಇಳಿದ ನನ್ನೊಂದಿಗೆ ಕಂಡಕ್ಟರ್ ಸ್ವಲ್ಪ ದೂರ ನಡೆದು ಬಂದು, ‘ನೋಡಿ ಈ ರೋಡಿನಲ್ಲೇ ಹೋದರೆ ರೈಲ್ವೆ ಸ್ಟೇಷನ್ ಸಿಗುತ್ತೆ’ ಎಂದು ಧೈರ್ಯ ಹೇಳಿ ಹೊರಟು ಹೋದರು.

ಅವರು ಹೇಳಿದಂತೆಯೇ ಐದು ನಿಮಿಷಕ್ಕೆಲ್ಲ ಸ್ಟೇಷನ್ ಸಿಕ್ಕಿತ್ತು. ಈ ಕಡೆಯಿಂದ ಆ ಕಡೆಗೆ ರೈಲ್ವೆ ಗೇಟ್ ದಾಟಿದಾಗ ನೆನ್ನೆ ಬಂದಿದ್ದ ಶಾಲೆಯ ದಾರಿ ಕಂಡು ನಿರಾತಂಕವಾಗಿ ಶಾಲೆ ಸೇರಿ ಸಂಜೆ ಅದೇ ರೀತಿ ಸುರಕ್ಷಿತವಾಗಿ ಮನೆ ತಲುಪಿದೆ.

ಅಂದು ಗೌರವಪೂರ್ವಕವಾಗಿ ಮಾತನಾಡಿಸಿ ಹೊಸಬರಿಗೆ ದಾರಿ ತೋರಿದ ಆ ಡ್ರೈವರ್ ಮತ್ತು ಕಂಡಕ್ಟರ್‌ಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
---

ನಗರ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸದವರು ವಿರಳ. ಪ್ರಯಾಣದ ವೇಳೆ ಏನಾದರೊಂದು ಸಿಹಿ ಅನುಭವ ಬಸ್ ಚಾಲಕನಿಂದಲೋ, ನಿರ್ವಾಹಕನಿಂದಲೋ ಸಹಪ್ರಯಾಣಿಕರಿಂದಲೋ ಆಗಿರಬಹುದು. ಅಂಥ ಸವಿನೆನಪುಗಳನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಳ್ಳಿ. ಮಾನವೀಯ ಮೌಲ್ಯ ಇರುವ ಅನುಭವಗಳನ್ನಷ್ಟೇ ಬಸ್ ಕತೆ ಅಂಕಣದಲ್ಲಿ ಪ್ರಕಟಿಸಲಾಗುವುದು. ಮೊಬೈಲ್ ಕಳ್ಳತನ, ನಿರ್ವಾಹಕರ ಕೋಪದ ವರ್ತನೆ ಮೊದಲಾದ ಸಮಸ್ಯೆಗಳು ಬೇಡ. ನಿಮ್ಮ ಬರಹ 300 ಪದಗಳಿಗೆ ಮೀರದಂತಿರಲಿ. ನುಡಿ ಅಥವಾ ಬರಹ ತಂತ್ರಾಂಶ ರೂಪದಲ್ಲಿರಲಿ. ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಸ್ಪಷ್ಟವಾಗಿರಲಿ. ಇ-ಮೇಲ್: metropv@prajavani.co.in.
ಅಂಚೆ ವಿಳಾಸ: ‘ಮೆಟ್ರೊ’, ಪ್ರಜಾವಾಣಿ, ನಂ.75, ಎಂ.ಜಿ.ರಸ್ತೆ,
ಬೆಂಗಳೂರು–560 001.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.