ADVERTISEMENT

ದೇವರಂತೆ ಬಂದವನು...

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST
ದೇವರಂತೆ ಬಂದವನು...
ದೇವರಂತೆ ಬಂದವನು...   

ಇದು 2002ರ ಮೇ ತಿಂಗಳಲ್ಲಿ, ನನ್ನ ಮೊದಲ ಮಗಳ ಮದುವೆ ಸಂದರ್ಭದಲ್ಲಿ ನಡೆದ ಘಟನೆ. ಅಂದು ಆ ಆಟೋ ಚಾಲಕ ನನ್ನ ಗೌರವವನ್ನಷ್ಟೆ ಅಲ್ಲ ಪ್ರಾಣವನ್ನೂ ಕಾಪಾಡಿದ್ದರಿಂದ ದಶಕವೇ ಕಳೆದರೂ ಆ ನೆನಪು ಮರೆಯಲಾಗುತ್ತಿಲ್ಲ.

ನೆಂಟರಿಷ್ಟರಿಂದ ತುಂಬಿ ಮನೆಯಲ್ಲಿ ಸಡಗರವೋ ಸಡಗರ. ಮದುವೆಗೆ ಎರಡು ದಿನ ಉಳಿದಿತ್ತು. ಆದಷ್ಟು ಸಾಮಾನುಗಳನ್ನು ಛತ್ರಕ್ಕೆ ಸಾಗಿಸುವುದೆಂದು ನಿರ್ಧರಿಸಿ ಅತ್ಯಗತ್ಯವಾದುದನ್ನು ಜೋಡಿಸಿ ವಾಹನಕ್ಕೆ ತುಂಬಿದೆವು. ಕೆಲವು ಅತಿಥಿಗಳೂ ಛತ್ರ ನೋಡಲು ಬಯಸಿದ್ದರಿಂದ ಅವರನ್ನೂ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿ ನಾನು ನನ್ನ ಅಣ್ಣನ ಮಗ ಕಿರಣನ ಬೈಕ್‌ನಲ್ಲಿ ಅವರೆಲ್ಲರನ್ನೂ ಹಿಂಬಾಲಿಸಿದೆ.

ಸಾಮಗ್ರಿಗಳನ್ನೆಲ್ಲ ಛತ್ರದ ಎರಡು ಕೊಠಡಿಗಳಲ್ಲಿ ಜೋಡಿಸುತ್ತಿರುವಾಗ ಅಪ್ಪಿತಪ್ಪಿ ನನ್ನ ಬ್ರೀಫ್‌ಕೇಸ್ ಕೂಡಾ ಸಾಮಗ್ರಿಗಳೊಂದಿಗೆ ಬಂದಿರುವುದು ಅರಿವಾಯಿತು. ಅದು, ಮದುವೆ ದಿನ ಮಂಟಪದಲ್ಲೇ ಬಳಸಬೇಕಾದ ವಸ್ತುಗಳನ್ನು ಜೋಡಿಸಿಟ್ಟ ಬ್ರೀಫ್‌ಕೇಸ್ ಆಗಿತ್ತು.

ಅದನ್ನು ಜೋಪಾನವಾಗಿ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ನನ್ನ ಮಾವನ ಮಗನಿಗೆ ಒಪ್ಪಿಸಿ ಸಾಧ್ಯವಾದಷ್ಟು ಬೇಗನೆ ಮನೆ ಸೇರುವಂತೆ ಆಟೊವೊಂದನ್ನು ಗೊತ್ತುಮಾಡಿ ಕೊಟ್ಟು ಆರು ಮಂದಿಯೂ ಅದರಲ್ಲೇ ಹೋಗುವಂತೆ ತಿಳಿಸಿ ನಾನು ಮತ್ತೆ ಕಿರಣನೊಂದಿಗೆ ಮುಂದಿನ ಕೆಲಸಕ್ಕೆ ತೆರಳಿದೆ.

ನಾನು ಮನೆಗೆ ಬಂದಾಗ ಆಗಲೇ ರಾತ್ರಿ 9 ಗಂಟೆಯಾಗಿತ್ತು. ಮನೆಯಲ್ಲಿ ಹರಟೆ ಸಾಗಿತ್ತು. ಬ್ರೀಫ್‌ಕೇಸ್ ಮನೆಯಲ್ಲಿ ಜೋಪಾನವಾಗಿಟ್ಟಿದ್ದಾರೆ ಎಂಬ ವಿಶ್ವಾಸವಿದ್ದರೂ ಸುಮ್ಮನೆ ಮಾತಿಗೆ ಕೇಳಿದೆ. ಆಟೊದಲ್ಲಿ ಬಂದ ಆರೂ ಮಂದಿಯೂ ಮುಖ ಮುಖ ನೋಡಿಕೊಂಡರು. ಜವಾಬ್ದಾರಿ ಹೊತ್ತಿದ್ದ ಮಾವನ ಮಗನೂ, `ಅವರ‌್ಯಾರೋ ತಂದಿದ್ದಾರೇಂತ ನಂಬಿದ್ದೆ~ ಎಂದುಬಿಟ್ಟ. ಅದರಲ್ಲೇನಿತ್ತು ಅಂತ ನನ್ನ ಪತ್ನಿ ಕೇಳಿದಾಗ ನಾನು ಮೌನವಹಿಸಿದೆ. ಮದುವೆ ಮನೆಯಲ್ಲಿ ಒಂದು ರೀತಿ ವಿಷಾದದ ಛಾಯೆ ಆವರಿಸಿತು.

ನನಗಂತೂ ಆತಂಕದಿಂದ ದಿಕ್ಕೇ ತೋಚಲಿಲ್ಲ. ಬ್ರೀಫ್‌ಕೇಸ್‌ನಲ್ಲಿ 90 ಸಾವಿರ ರೂಪಾಯಿ ನಗದು, ವರನಿಗೆ ಕೊಡಬೇಕಾದ ವಾಚ್, ನನ್ನ ನೆಚ್ಚಿನ ಕ್ಯಾಮರಾ, ಆಪ್ತರಿಗೆ ಕೊಡಬೇಕಿದ್ದ ಶರ್ಟ್‌ಪೀಸ್‌ಗಳು ಎಲ್ಲಾ ಇದ್ದವು. ಸಾಮಾನು ಸಾಗಿಸುವ ಭರದಲ್ಲಿ ಯಾರೋ ತಿಳಿಯದೆ ಛತ್ರಕ್ಕೆ ಸಾಗಿಸಿದ್ದರು.

ಆಗಲೇ ರಾತ್ರಿ 10 ಗಂಟೆ ದಾಟಿತ್ತು. ಅಷ್ಟರಲ್ಲಿ ಗೇಟಿನ ಬಳಿ ಆಟೋ ಬಂದು ನಿಂತಿತು. ಊರಿಂದ ಯಾರೋ ಬಂದಿರಬೇಕೆಂದು ತಿಳಿದು ಆಟೊ ಬಳಿ ಹೋದೆ. ಆಗ ಆಟೊ ಡ್ರೈವರ್ `ಸ್ವಾಮಿ ಒಂದು ಗಂಟೆಗೂ ಹಿಂದೆ ಕೆಲವರು ನನ್ನ ಆಟೊದಲ್ಲಿ ಈ ಕಡೆ ಛತ್ರದಿಂದ ಬಂದರು.

ಅವರೆಲ್ಲ ಆ ರಸ್ತೆಯಂಚಿನಲ್ಲೆ ಇಳಿದಿದ್ದರಿಂದ ಯಾವ ಮನೆಗೆ ಹೋದರೆಂಬುದು ತಿಳಿಯಲಿಲ್ಲ. ಆದರೆ ದಾರಿಯಲ್ಲಿ ಮದುವೆ ವಿಷಯ ಮಾತನಾಡುತ್ತಿದ್ದುದರಿಂದ ನಿಮ್ಮ ಮನೆ ಮುಂದಿನ ಚಪ್ಪರ ನೋಡಿ ಇದೇ ಮನೆಯಿರಬೇಕು ಎಂದು ಅಂದುಕೊಂಡು ಬಂದೆ. ನೋಡಿ ಅವರು ಈ ಬ್ರೀಫ್‌ಕೇಸ್‌ನ ನನ್ನ ಆಟೊದಲ್ಲೇ ಬಿಟ್ಟು ಬಂದಿದ್ದರು. ಇದು ನಿಮಗೆ ಸೇರಿದ್ದಾ?~ ಎಂದು ಕೇಳಿದ.

ನನಗೆ ದೇವರೇ ಸಾಕ್ಷಾತ್ ಎದುರು ನಿಂತಂತೆ ಭಾಸವಾಯಿತು. ಪ್ರಯಾಸದಿಂದ `ಹೌದಪ್ಪ ಅದು ನನ್ನದೇ~ ಅಂದೆ. ಹಾಗಿದ್ದರೆ ಒಮ್ಮೆ ಪೆಟ್ಟಿಗೆ ಪರಿಶೀಲಿಸಿಕೊಳ್ಳಿ ಅಂದ ಅವನು.  ನೋಡಿದರೆ ಪ್ರತಿಯೊಂದೂ ಯಥಾಸ್ಥಾನದಲ್ಲಿತ್ತು. ನನಗೆ ಮಾತೇ ಹೊರಡಲಿಲ್ಲ.

ಅವನ ಉಪಕಾರಕ್ಕೆ ಪ್ರತಿಯಾಗಿ ಏನಾದರೂ ಕೊಡಬೇಕು ಎಂದುಕೊಂಡು ಮನೆಯೊಳಗೆ ಹೋಗಿ ಹೊರಬಂದು ನೋಡುತ್ತೇನೆ, ಆಟೊ ಚಾಲಕ ಅಲ್ಲಿರಲಿಲ್ಲ! ಅಯ್ಯೋ ಅನಿಸಿತು.
ಅವನ ಉಪಕಾರದಿಂದ ನನ್ನ ಮಗಳ ಮದುವೆ ನಿರ್ವಿಘ್ನವಾಗಿ ನೇರವೇರಿತು. ದಶಕ ಕಳೆದರೂ ಆ ಆಟೊ ಚಾಲಕನನ್ನು ಮರೆತಿಲ್ಲ. ಮರೆಯುವುದೂ ಇಲ್ಲ. ದೇವರು ಅವನನ್ನು ಚೆನ್ನಾಗಿಟ್ಟಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.