ADVERTISEMENT

ನಗರಾಭಿವೃದ್ಧಿ ಕನಸು

ಹರವು ಸ್ಫೂರ್ತಿ
Published 1 ಅಕ್ಟೋಬರ್ 2017, 19:30 IST
Last Updated 1 ಅಕ್ಟೋಬರ್ 2017, 19:30 IST
ನಗರಾಭಿವೃದ್ಧಿ ಕನಸು
ನಗರಾಭಿವೃದ್ಧಿ ಕನಸು   

'ಹಳ್ಳಿಗೊಂದು ಅಚ್ಚುಕಟ್ಟಾಗಿ ಉಳುಮೆ ಮಾಡಿರುವ ಗದ್ದೆ ಕಂಡರೆ ಇದೊಂದು ಸಮೃದ್ಧ ಊರು ಎನ್ನುವ ಮಾತಿತ್ತು. ಈಗ ನಗರದಲ್ಲಿ ಯೋಜಿತ ಮತ್ತು ಸ್ವಚ್ಛವಾದ ರಸ್ತೆಗಳು ಇದ್ದರೆ ಇದೊಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಗರ ಎನ್ನಬಹುದು...’ - ಹೀಗೆ ಮಾತನಾಡಿದವರು ಆಕರ್ಷ್‌ ಶಾಮನೂರು.

ಅರ್ಬನ್ ಮ್ಯಾನೇಜ್‌ಮೆಂಟ್‌ ಅಂಡ್‌ ಡೆವಲ‌ಪ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಆಕರ್ಷ್‌ ಬೆಂಗಳೂರು ನಗರದ ಅಭಿವೃದ್ಧಿ ಕನಸು ಕಾಣುತ್ತಾ, ನೆದರ್‌ಲೆಂಡ್‌ನಲ್ಲಿ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಬಂದಿದ್ದಾರೆ.

ಜಯನಗರ 9ನೇ ಬ್ಲಾಕ್‌ನಲ್ಲಿ ಇರುವ ಬೀದಿಬದಿ ವ್ಯಾಪಾರಿಗಳ ಮೂಲ ಸೌಕರ್ಯಕ್ಕಾಗಿ ದುಡಿಯಬೇಕು ಎಂದುಕೊಂಡು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದೊಂದಿಗೆ ಯೋಜನೆ ರೂಪಿಸುತ್ತಿದ್ದಾರೆ. ಹಲವು ಬೀದಿ ಬದಿ ವ್ಯಾಪಾರಿಗಳನ್ನು ಮಾತನಾಡಿಸಿ ವಿಡಿಯೊ ಮಾಡಿ ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. #BePoliteDiwali ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

ADVERTISEMENT

ವಿಡಿಯೊದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಮಾತನಾಡಿಸಿ ಅವರ ಅಗತ್ಯಗಳೇನು, ಸಮಸ್ಯೆಗಳೇನು ಎಂಬ ಇಣುಕು ನೋಟ ನೀಡಿದ್ದಾರೆ. 2014ರ ಬೀದಿಬದಿ ವ್ಯಾಪಾರಿಗಳ ಕಾಯ್ದೆಯು ರಾಜ್ಯದಲ್ಲಿ ಇನ್ನೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ವ್ಯಾಪಾರಕ್ಕೆ ಸೂಕ್ತ ಸ್ಥಳಾವಕಾಶ, ಶೌಚಾಲಯ, ಸಂಜೆ ವೇಳೆ ವ್ಯಾಪಾರ ಮಾಡಲು ಬೆಳಕು... ಹೀಗೆ ಒಂದಿಷ್ಟು ಬೇಡಿಕೆಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ ಆಕರ್ಷ್‌ ಶಾಮನೂರು.

‘ನಗರಗಳ ಅಭಿವೃದ್ಧಿ ಎಂದರೆ ಕೇವಲ ಫ್ಲೈಓವರ್, ಕಟ್ಟಡಗಳ ನಿರ್ಮಾಣವಲ್ಲ. ಮೊದಲು ಇಲ್ಲಿನ ತಳ ಸಮುದಾಯಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು. ರಸ್ತೆ, ಪಾದಚಾರಿ ಮಾರ್ಗಗಳು ಸೂಕ್ತವಾಗಿರಬೇಕು’ ಎಂದು ಅಭಿವೃದ್ಧಿಯ ಕನಸು ಹಂಚಿಕೊಳ್ಳುತ್ತಾರೆ ಆಕರ್ಷ್‌. ಸದ್ಯಕ್ಕೆ ಜಯನಗರ 9ನೇ ಬ್ಲಾಕ್‌ನ ಬೀದಿ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ರಾತ್ರಿ ಹೊತ್ತು ವ್ಯಾಪಾರ ಮಾಡಲು ಬೆಳಕಿನ ವ್ಯವಸ್ಥೆ ಮಾಡಿಕೊಡಲು ಆಲೋಚಿಸಿದ್ದಾರೆ. ಇದಕ್ಕಾಗಿ ಹಣದ ಸಹಾಯವನ್ನೂ ಕೇಳಿದ್ದಾರೆ.

ಈ ದೀಪಾವಳಿಗೆ ಇಲ್ಲಿನ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಿಕೊಡಬೇಕು ಎನ್ನುವುದು ಅವರ ಆಶಯ.

ಯುಟ್ಯೂಬ್‌ನಲ್ಲಿ ವಿಡಿಯೊ ನೋಡಲು ಕೊಂಡಿ: bit.ly/2xHhyc9

ಆಕರ್ಷ್‌ ಅವರ ಕೆಲಸದೊಂದಿಗೆ ಕೈಜೋಡಿಸಲು ಇಚ್ಛಿಸಿದವರು ಹಣ ಸಹಾಯ ಮಾಡಬಹುದು. ಕ್ರೌಡ್‌ ಫಂಡಿಂಗ್‌ಗೆ ವೆಬ್‌ವಿಳಾಸ– milaap.org/fundraisers/bepolite.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.