ADVERTISEMENT

ನಮ್ಮೊಳಗಿನ ಅವ್ಯಕ್ತ ‘ನುಡಿ’

ಅಭಿಲಾಷ ಬಿ.ಸಿ.
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ನಮ್ಮೊಳಗಿನ ಅವ್ಯಕ್ತ ‘ನುಡಿ’
ನಮ್ಮೊಳಗಿನ ಅವ್ಯಕ್ತ ‘ನುಡಿ’   

ಮಹಾನಗರಿಯ ಕನ್ನಡೇತರರಿಗೆ ಕನ್ನಡ ಕಲಿಸುವ ಬಗೆ ಹೇಗೆ? ಕನ್ನಡ ಗೊತ್ತಿದ್ದರೂ ಮಾತನಾಡದ ಮಂದಿಯಲ್ಲಿ ಕನ್ನಡ ಪ್ರೀತಿ ಬಿತ್ತುವುದು ಎನಿತು? ಅನೇಕರನ್ನು ಕಾಡುತ್ತಿರುವ ಸಾಮಾನ್ಯ ಪ್ರಶ್ನೆಯಿದು. ಈ ಪ್ರಶ್ನಾರ್ಥಕಗಳಿಗೆ ಸಾಧ್ಯಸಾಧ್ಯತೆಗಳನ್ನು ತೆರೆದಿಡುತ್ತಲೇ ನಮ್ಮೊಳಗಿನ ಭಾಷಾ ಗೊಂದಲಗಳಿಗೆ ದನಿಯಾಗುವ ಕಿರುಚಿತ್ರ ‘ನುಡಿ’.

ಕೀರ್ತಿಶೇಖರ್‌ ನಿರ್ದೇಶನದ ‘ನುಡಿ’ ಹೇರಿಕೆಯಿಂದ ಭಾಷೆಯೊಂದನ್ನು ಕಲಿಸುವುದು ಅಸಾಧ್ಯ. ಅನಿವಾರ್ಯ ಸೃಷ್ಟಿಸಬೇಕು ಎನ್ನುವುದನ್ನು ಸೂಚ್ಯವಾಗಿ ಬಿಂಬಿಸುತ್ತದೆ. ಕ್ರೈಮ್‌ ಥ್ರಿಲ್ಲರ್‌ ಎಳೆಯೊಂದಿಗೆ ಸಾಗುವ ಚಿತ್ರದಲ್ಲಿ ಮೂರು ಭಿನ್ನ ಮನಸ್ಥಿತಿಗಳು ತೆರೆದುಕೊಳ್ಳುತ್ತವೆ.

ಇರುವುದು ಕನ್ನಡನೆಲ, ಕುಡಿಯುವುದು ಕನ್ನಡ ಜಲ, ದುಡಿಯುವುದು, ಗಳಿಸುವುದು ಇದೇ ಮಣ್ಣಿನಲ್ಲಿ. ಆದರೆ ಈ ಅನ್ಯಭಾಷಿಕರಿಗೆ ಕನ್ನಡ ಭಾಷೆ ಮತ್ತು ಭಾಷಿಕರು ಮಾತ್ರ ಬೇಡ ಅಂತಹವರಿಗೆ ಹೊಡೆದು ಬಡಿದಾದರೂ ಕನ್ನಡ ಕಲಿಸಬೇಕು ಎನ್ನುವ ‘ಕಿರಿಕ್‌’ ವ್ಯಕ್ತಿತ್ವ ಒಬ್ಬನದು. ಕನ್ನಡಿಗನೇ ಆದರೂ ಅನ್ಯಭಾಷಿಕರಿಗೆ ಭಾಷೆ ಕಲಿಸುವಲ್ಲಿ ಆಸಕ್ತಿ ತೋರದ, ಕನ್ನಡಿಗರೊಂದಿಗೆ ಕನ್ನಡದೊಂದಿಗೆ, ಬೇರೆ ಭಾಷಿಕರೊಂದಿಗೆ ಅವರದ್ದೇ ಭಾಷೆಯಲ್ಲಿ ಮಾತನಾಡುತ್ತಾ ನಿಭಾಯಿಸುವ ‘ತಟಸ್ಥ’ ನಿಲುವು ಮತ್ತೊಬ್ಬನದ್ದು. ಇವರಿಬ್ಬರದ್ದೂ ಬಾರ್‌ನಲ್ಲಿನ ಗೆಳತನ.

ADVERTISEMENT

ಭಾಷೆ ಕಲಿಸಲು ಹೇರಿಕೆ, ಹೊಡೆದಾಟವೇ ಉಳಿದಿರುವ ಏಕೈಕ ಮಾರ್ಗ ಎನ್ನುವ ‘ಕಿರಿಕ್‌’ ಗೆಳೆಯನಿಗೆ ಹೇರಿಕೆ ಸಲ್ಲದು ಎಂದು ವಾದಿಸುವ ತಟಸ್ಥ ಗೆಳೆಯ. ಹೀಗೆ ನಮ್ಮೊಳಗಿನ ಅವ್ಯಕ್ತ ಭಾವನೆ, ಸಂಭಾಷಣೆಗಳು ನುಡಿಯಾಗಿ ವ್ಯಕ್ತರೂಪ ಪಡೆದಂತೆ ಇಬ್ಬರ ಸಂಭಾಷಣೆ ಸಾಗುತ್ತದೆ. ಗೆಳೆಯರಿಬ್ಬರ ಚರ್ಚೆ ಮಾತೃಭಾಷೆಯ ಕುರಿತು ನಮ್ಮೊಳಗಿನ ಗೊಂದಲಗಳಿಗೆ ಮುಖಾಮುಖಿಯಾದಂತೆ ಭಾಸವಾಗುತ್ತದೆ. 

‘ನಮ್ಮನೆಲದಲ್ಲಿ ಬದುಕುವುದಲ್ಲದೆ ನಮ್ಮಿಂದಲೇ ನಗರಕ್ಕೆ ಗರಿ’ ಎಂದು ಅನ್ಯಭಾಷಿಕರು ಬೀಗುತ್ತಾರೆ ಎನ್ನುವ ಅರೋಪ ಕಿರಿಕ್‌ ಗೆಳೆಯನದ್ದು ‘ಕನ್ನಡ ಕಲಿಕೆಯ ಅನಿವಾರ್ಯತೆ ಸೃಷ್ಟಿಸಿದರೆ ಅವರಾಗಿಯೇ ಕನ್ನಡ ಕಲಿಯುತ್ತಾರೆ. ಕಲಿಯುವವನ ಆಸಕ್ತಿ, ಕಲಿಸುವವನ ತಾಳ್ಮೆ ಎರಡೂ ಒಂದಾಗಬೇಕು’ ಎನ್ನುವುದು ತಟಸ್ಥ ಗೆಳೆಯನ ಸಮಜಾಯಿಷಿ.

ಉತ್ತರ ಭಾರತೀಯ ಹಿಂದಿ ಭಾಷಿಕನಿಗೆ ಕನ್ನಡ ಕಲಿಯುವುದರ ಅನಿವಾರ್ಯವೇನು ಎನ್ನುವ ಪ್ರಶ್ನೆ. ಆತನ ಗೆಳತಿಗೆ ಇವನಿಗೆ ಕನ್ನಡ ಕಲಿಸಬೇಕು ಎನ್ನುವ ಹಂಬಲ. ಹಿಂದಿ ರಾಷ್ಟ್ರೀಯ ಭಾಷೆ ಅದನ್ನು ಕಲಿತರೆ ಸಾಕು ಎನ್ನುವ ಗೆಳೆಯನ ತರ್ಕಕ್ಕೆ ದೇಶಕ್ಕೆ ಯಾವುದೇ ರಾಷ್ಟ್ರೀಯ ಭಾಷೆಗಳಿಲ್ಲ ಎಂದು ಗೆಳತಿಯ ವಾಗ್ವಾದ.

ಹಿಟ್‌ ಅ್ಯಂಡ್‌ ರನ್‌ ನಡೆದಿದೆ. ಅಪಘಾತಕ್ಕೆ ಒಳಗಾಗಿರುವವನು ಶಾಸಕನ ಮಗನಾದ ಕಾರಣ ಶೀಘ್ರ ತನಿಖೆ ನಡಿಸುವುದು ಪೊಲೀಸರ ಅನಿವಾರ್ಯ. ಇಂತಹ ಒತ್ತಡದ ಸನ್ನಿವೇಶದಲ್ಲಿ ಎದುರಾಗುವವನೇ ಕನ್ನಡ ಕಲಿಕೆ ಅನಿವಾರ್ಯವಲ್ಲ ಎನ್ನುವ ಹಿಂದಿ ಭಾಷಿಕ. ಡಿಎಲ್‌ ಕಳೆದುಕೊಂಡಿರುವ ಆತನನ್ನೇ ಹಿಟ್‌ ಅ್ಯಂಡ್ ರನ್‌ನ ಸಂದೇಹಾಸ್ಪದ ವ್ಯಕ್ತಿ ಎಂದು ಕಸ್ಟಡಿಗೆ ತೆಗೆದುಕೊಳ್ಳಲು ತೀರ್ಮಾನಿಸುತ್ತಾರೆ. ಪೊಲೀಸರು ಏನು ಮಾತನಾಡುತ್ತಿದ್ದಾರೆ, ಹಿಟ್ ಅ್ಯಂಡ್‌ ರನ್‌ಗೂ ನನಗೂ ಏನು ಸಂಬಂಧ ಎಂದು ಮನದಲ್ಲೇ ಯೋಚಿಸುವ ಆತನಿಗೆ ಗೆಳತಿಯ ಮಾತುಗಳು ನೆನಪಾಗುತ್ತವೆ. ಕನ್ನಡ ಕಲಿಯುವುದರ ಅನಿವಾರ್ಯತೆ ಆತನ ಮನದಲ್ಲೊಮ್ಮೆ ಹಾದು ಹೋಗುತ್ತದೆ.

ತಟಸ್ಥ ಮನೋಭಾವದವನ ತಂದೆಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸೇರಿಸಿರುವ ಆತನ ಅಮ್ಮನಿಗೆ ಅಲ್ಲಿನ ಸಿಬ್ಬಂದಿಗಳ ಇಂಗ್ಲಿಷ್‌ ಮಾತುಗಳು ಅರ್ಥವಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಇಂಗ್ಲಿಷ್‌ ಹಾಗೂ ಮಲಯಾಳಂ ಬಿಟ್ಟರೆ ಬೇರೆ ಭಾಷಿಕರಿಲ್ಲ. ರೋಗಿಯ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಪರದಾಡುವ ತಾಯಿ ಎದುರಿಸುವ ಭಾಷಾ ಸವಾಲುಗಳನ್ನು ಅರ್ಥೈಸಿಕೊಂಡ ತಟಸ್ಥ ಮಗನಲ್ಲೂ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಅನಿವಾರ್ಯದ ಅರಿವಾಗುತ್ತದೆ. ‘ನಿನಗೂ ಒಂದು ಪರಿಸ್ಥಿತಿ ಎದುರಾಗುತ್ತಲ್ಲ. ಆಗ ಭಾಷೆ ಕಲಿಸುವ ಅಗತ್ಯ ಅರಿವಾಗುತ್ತದೆ’ ಎನ್ನುತ್ತಿದ್ದ ಕಿರಿಕ್‌ ಗೆಳೆಯನ ಮಾತುಗಳು ನೆನಪಿನಂಗಳದಲ್ಲಿ ತೆರೆದುಕೊಳ್ಳುತ್ತವೆ.

‘ಕಿರಿಕ್‌ಗಳಿಂದ ನಿನ್ನ ನೆಮ್ಮದಿ ಹಾಳಾಗುತ್ತದೆ ಹೊರತು ಯಾವುದೇ ಪ್ರಯೋಜನವಿಲ್ಲ’ ಎನ್ನುತ್ತಿದ್ದ  ತಟಸ್ಥ ನಿಲುವಿನ ಸ್ನೇಹಿತನ ಮಾತು ಕಿರಿಕ್‌ ಗೆಳೆಯನಿಗೆ ಭ್ರಾಂತಿಯಂತೆ ಕಾಡುತ್ತದೆ.

ಮೂರು ಭಿನ್ನ ಮನಸ್ಥಿತಿಯವರಿಗೂ ಆಪ್ತರ ಮಾತುಗಳು ನೆನಪಾಗುತ್ತಲೇ ಕಿರುಚಿತ್ರ ಮುಗಿಯುತ್ತದೆ. ಯಾವುದು ಸರಿ, ಯಾವುದು ತಪ್ಪು, ಏನನ್ನು ಮಾಡಿದರೆ ಭಾಷೆ ಕಲಿಸಬಹುದು ಎನ್ನುವುದನ್ನು ಚಿತ್ರ ಹೇಳುವುದಿಲ್ಲ. ಪ್ರಸಕ್ತ ಕನ್ನಡ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನಷ್ಟೇ ಚಿತ್ರ ಬಿಂಬಿಸುತ್ತದೆ.

ಕನ್ನಡ ಅನಿವಾರ್ಯ ಎನ್ನುವುದನ್ನು ಹೇಳುವ ಭರಾಟೆಯಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ದೂಷಿಸಿದಂತಾಗುತ್ತದೆ ಎನ್ನುವುದಕ್ಕೆ ಕೀರ್ತಿ ಅವರು ‘ಯಾವುದೋ ತುರ್ತು ಸನ್ನಿವೇಶ ನಿಭಾಯಿಸುವುದಕ್ಕೆ ಆದರೂ ಸ್ಥಳೀಯ ಭಾಷೆ ಕಲಿಯುವಂತಾಗಲಿ ಎನ್ನುವ ಆಶಯ. ಹೊರತು ವ್ಯವಸ್ಥೆ ದೂಷಿಸುವುದಲ್ಲ. ಜೊತೆಗೆ ಭಾಷೆ ಬರುವುದಿಲ್ಲ ಎನ್ನದವುದನ್ನೇ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವ ಎಚ್ಚರಿಕೆಯನ್ನು ರವಾನಿಸಿದ್ದೇವೆ’ ಎನ್ನುತ್ತಾರೆ

‘ಕೇವಲ ಭಾಷೆಯ ಕುರಿತೆ ಹೇಳಿದರೆ ಬೇಸರವಾಗುತ್ತದೆ ಎನ್ನುವ ಕಾರಣಕ್ಕೆ ಕ್ರೈಂ ಎಳೆಯೊಂದಿಗೆ ಹೆಣೆದಿದ್ದೇವೆ. ಭಾಷೆ ಕಲಿಸಲು ಯಾವ ಮಾರ್ಗ ಆಯ್ದುಕೊಳ್ಳಬೇಕು ಎನ್ನುವುದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಎನ್ನುವುದು ಕೀರ್ತಿ ಅಭಿಪ್ರಾಯ.

ನುಡಿ’ಯಲ್ಲಿ ಚೇತನ್ ವಿಕ್ಕಿ, ವಿಜಯ್‌ ಕುಮಾರ್ ಗುರಾವ್, ಸುನಂದಾ ಗುರಾವ್, ವಿಶಾಖ್ ಪುಷ್ಪಲತಾ ಮುಂತಾದವರು ಬಣ್ಣ ಹಚ್ಚಿದ್ದಾರೆ. ಶ್ರೀನಿವಾಸ್ ಪ್ರಸಾದ್, ಅವಿನಾಶ್ ಗೌಡ, ಉಮೇಶ್ ಅವರ ನಿರ್ಮಾಣ ಚಿತ್ರಕ್ಕಿದೆ. 
**
ಹೆಸರು: ನುಡಿ 
ನಿರ್ದೇಶನ: ಕೀರ್ತಿಶೇಖರ್‌ 
ಅವಧಿ : 23 ನಿಮಿಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.