ADVERTISEMENT

ನವಾಬಿ ಖಾನಾ

ಸತೀಶ ಬೆಳ್ಳಕ್ಕಿ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಏಕ್ ಚೀಸ್ ಜಿಗರ್ ಮೇ ಹೋತಿ ಹೈ,
ಏಕ್ ದರ್ದ್ ಸಾ ದಿಲ್ ಮೇ ಹೋತಾ ಹೈ,
ಹಮ್ ರಾತೋಂ ಕೋ ಉಟ್‌ಕರ್ ರೋತೆ ಹೈ,
ಜಬ್ ಸಾರಾ ಆಲಂ ಸೋತಾ ಹೈ,
ವೋ ಚಾಂದಿನಿ ರಾತೇಂ, ಚಾಂದಿನಿ ರಾತೇಂ...

ಕ್ವೀನ್ ಆಫ್ ಮೆಲೋಡಿ ಎಂದು ಆ ಕಾಲಕ್ಕೆ ಹೆಸರು ಮಾಡಿದ್ದ ನೂರ್‌ಜಹಾನ್‌ರ ಕಾಡುವ ಕಂಠದಲ್ಲಿ ಈ ಗಝಲ್ ಕೇಳಿದಾಗ ಮನಸ್ಸು ಆರ್ದ್ರಗೊಳ್ಳುತ್ತದೆ. ಹೋಟೆಲ್ ಮೂಲೆಯೊಂದರಲ್ಲಿ ಕುಳಿತು ಅದೇ ಧಾಟಿಯಲ್ಲಿ ಹವ್ಯಾಸಿ ಗಝಲ್ ಗಾಯಕ ಹಾಡುತ್ತಿದ್ದರೆ, ಮನಸ್ಸು ನೂರ್‌ಜಹಾನ್ ಕಾಲಕ್ಕೆ ಜಾರುತ್ತಿತ್ತು. ಊಟದ ಹದಕ್ಕೆ ಗಝಲ್‌ಗಿಂತ ಇನ್ನೇನು ಮುದ ಬೇಕು?

ಕಳೆದುಕೊಂಡಿದ್ದನ್ನು ನೆನೆದು ನೋಯುವ, ಪ್ರೀತಿಯ ವಿರಹವನ್ನು ನೆನೆದು ಹಾಡುವ ಗಝಲ್‌ಗಳನ್ನು ಕೇಳಿಸುತ್ತಲೇ ನವಾಬಿ ರಸೋಯ್ ಉತ್ಸವದ ವಿಶೇಷತೆಗಳನ್ನು ವಿವರಿಸತೊಡಗಿದರು ಬಾಣಸಿಗ ಧನರಾಜ್.

`ಭಾರತೀಯ ಶೈಲಿಯ ತಿನಿಸುಗಳನ್ನು ತಿಂದು ಬೇಜಾರಾಗಿರುವವರು ನವಾಬಿ ಉತ್ಸವಕ್ಕೆ ಲಗ್ಗೆ ಇಡಬಹುದು. ಉಜ್ಬೇಕಿಸ್ತಾನದ ಮಸಾಲೆಗಳ ಅಪ್ಪಟ ಸೊಗಡು ಗ್ರಾಹಕರ ಬಾಯಿರುಚಿಯನ್ನು ತಣಿಸಲಿದೆ~ ಎನ್ನುತ್ತಲೇ ಘಮಘಮಿಸುವ ಮಟನ್ ಸೂಪ್ ಸವಿಯಲು ಅವಕಾಶ ಮಾಡಿಕೊಟ್ಟರು.

ಊಟಕ್ಕೆ ಮುನ್ನ ಸವಿದ ನಿಂಬೆ ಸ್ವಾದದ ಮಟನ್ ಸೂಪ್ ರುಚಿ ಅದ್ಭುತ. ಸೂಪ್ ಹೊಟ್ಟೆ ಸೇರುತ್ತಿದ್ದಂತೆ ಹಸಿವಿನ ಕಟ್ಟೆ ಒಡೆದಿತ್ತು. ಅದರ ನಡುವೆಯೇ ಧನರಾಜ್ ಮಾತು ಮುಂದುವರಿಸಿದರು...

“ನವಾಬಿ ರಾಜರು ಸವಿಯುತ್ತಿದ್ದ ರುಚಿಯನ್ನು ಗ್ರಾಹಕರಿಗೆ ಒದಗಿಸುವುದು ಈ ಆಹಾರೋತ್ಸವದ ಉದ್ದೇಶ. ಇಲ್ಲಿ ಉಜ್ಬೇಕಿ ನಾನ್, ಗುಲಾಬಿ ಕಬಾಬ್, ನಾನ್-ಇ-ಟುನಕ್, ಚಾರ್ಸಿ ಚಾಪ್, ಚಿಪೆ ಕೆ ಮಚ್ಲಿ, ಕಂದಹಾರಿ ಸಬ್ಜಿ ಕುರ್ಮಾ, ಪನೀರ್ ಝರತಾರಿ ಹೀಗೆ ಅನೇಕ ಬಗೆಯ ಖಾದ್ಯಗಳನ್ನು ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾಗಿದೆ.

ಈ ಉತ್ಸವದಲ್ಲಿ ತಯಾರಿಸುವ ಪ್ರತಿಯೊಂದು ಆಹಾರಕ್ಕೂ ಉಜ್ಬೇಕಿಸ್ತಾನದಿಂದ ತರಿಸಲಾದ ವಿಶಿಷ್ಟ ಮಸಾಲೆಗಳನ್ನು ಉಪಯೋಗಿಸಲಾಗಿದೆ. ಈ ಖಾದ್ಯಗಳಿಗೆ ಯಾವುದೇ ಬಗೆಯ ಕೃತಕ ಪೌಡರ್ ಅಥವಾ ಬಣ್ಣ ಬಳಸಿಲ್ಲ. ಎಲ್ಲ ಮಸಾಲೆ ಪದಾರ್ಥಗಳನ್ನು ವಿಶೇಷವಾಗಿ ನಾವೇ ತಯಾರಿಸಿದ್ದೇವೆ. ಶುಚಿ-ರುಚಿಯಲ್ಲಿ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಉತ್ತಮ ಆಹಾರ ನೀಡಬೇಕೆಂಬುದು ನಮ್ಮ ಉದ್ದೇಶ.

ಎಲ್ಲ ಆಹಾರೋತ್ಸವದಲ್ಲಿ ಇರುವಂತೆ ನಾವು ಬಫೆ ಇರಿಸಿಲ್ಲ. ಗ್ರಾಹಕರು ಪ್ರತಿ ಬಾರಿ ಎದ್ದು ಓಡಾಡುವ ತೊಂದರೆ ತಪ್ಪಿಸುವ ಸಲುವಾಗಿ ಈ ಬಾರಿ `ಟಿಡಿಎಚ್ ಮೆನು~ (ಫ್ರೆಂಚ್ ಭಾಷೆಯಲ್ಲಿ ಟಿಡಿಎಚ್ ಎಂದರೆ ಟೇಬಲ್ ಡಿ ಹೋಟ್; ಅರ್ಥಾತ್ ಊಟದ ಮೇಜಿಗೇ ತಂದು ಬಫೆಯ ಪದಾರ್ಥಗಳನ್ನು ಬಡಿಸುವ ಬಗೆ) ಸಿದ್ಧಪಡಿಸಿದ್ದೇವೆ.
 
ಈ ಮೆನುವಿನಲ್ಲಿ ಗ್ರಾಹಕರಿಗೆ ಮೊದಲು ವೆಲ್‌ಕಂ ಡ್ರಿಂಕ್ ನೀಡಲಾಗುತ್ತದೆ. ನಂತರ ಸೂಪ್‌ನ ಸರದಿ. ಅದರ ನಂತರ ಮುಲ್ತಾನಿ ಪನ್ನೀರ್ ಟಿಕ್ಕಾ, ಕಲತ್ ಕೆ ಆಲೂ, ನಿಂಬೂ ಮುರ್ಗ್, ಚಾರ್ಸಿ ಚೂಪ್ಸ್ ಹೀಗೆ ನಾಲ್ಕು ವೆಜ್ ಮತ್ತು ನಾನ್ವೆಜ್ ಸ್ಟಾಟರ್ಸ್ ನೀಡಲಾಗುತ್ತದೆ.

`ಮುಖ್ಯ ಮೆನು~ವಿನಲ್ಲಿ ಒಂದು ವೆಜ್ ಬಿರಿಯಾನಿ ಜತೆಗೆ ಒಂದು ಚಿಕನ್/ಮಟನ್ ಬಿರಿಯಾನಿ ಕೊಡುತ್ತೇವೆ. ರುಮಾಲಿ ರೋಟಿ, ನಾನ್, ಬಟರ್ ಕುಲ್ಚಾ ಇರುವ ಒಂದು ರೊಟ್ಟಿ ಬಾಸ್ಕೆಟ್ ಜೊತೆಗೆ ಒಂದು ಮಾಂಸಾಹಾರಿ ಕರಿ, ಮತ್ತೊಂದು ವೆಜ್ ಕರಿ ಕೊಡುತ್ತೇವೆ.

ನವಾಬಿ ಉತ್ಸವದ ವಿಶೇಷ ತಿನಿಸು ಡಬ್ಬಲ್ ಕಾ ಮಿಟ್ಟಾ. ಇದಿಲ್ಲದೇ ನವಾಬರ ಊಟ ಪೂರ್ಣಗೊಳ್ಳುವುದೇ ಇಲ್ಲ. ಡೆಸರ್ಟ್‌ನಲ್ಲಿ ನೀಡುವ `ಡಬಲ್ ಕಾ ಮಿಟ್ಟಾ~ ರುಚಿಯನ್ನು ಅನುಭವಿಸಿಯೇ ತಿಳಿಯಬೇಕು. ಇದರ ಜತೆಗೆ ಡ್ರೈ ಗುಲಾಬ್ ಜಾಮೂನ್, ರಸಗುಲ್ಲಾ, ಫ್ರೂಟ್ ಸಲಾಡ್ ನೀಡುತ್ತೇವೆ. ಅಂದಹಾಗೆ, ಅನಿಯಮಿತವಾದ ಟಿಡಿಎಚ್ ಮೆನುವಿನ ಬೆಲೆ ರೂ 599.

ನವಾಬಿ ಉತ್ಸವದ ವಿವರಣೆ ನೀಡುವಷ್ಟರಲ್ಲಿ ವೆಜ್ ಹಾಗೂ ನಾನ್ವೆಜ್ ಸ್ಟಾಟರ್ಸ್‌ಗಳು ಬಂದು ಕುಳಿತಿದ್ದವು. ಅದರ ಹಿಂದೆಯೇ ಬಿರಿಯಾನಿ, ರೋಟಿ ನಾನ್‌ಗಳ ಮೆರವಣಿಗೆ ಬರುತ್ತಿತ್ತು. ಹಸಿದಿದ್ದ ಹೊಟ್ಟೆಗೆ ಉಜ್ಭೇಕಿಸ್ತಾನದ ಮಸಾಲೆ ತುಂಬಿ ಮಾಡಿದ ಖಾದ್ಯದ ಸವಿಯ ಜತೆಗೆ ಗಝಲ್‌ನ ಇಂಪು ಕಿವಿಯ ಮೇಲೆ ಬಿದ್ದು ಮನಸ್ಸು ಪ್ರಫುಲ್ಲಗೊಳ್ಳುತ್ತಿತ್ತು.
ಅಂದಹಾಗೆ, ಅಕ್ಟೋಬರ್ 15ರವರೆಗೆ ಆಹಾರೋತ್ಸವ ನಡೆಯಲಿದೆ. ನೈರುತ್ಯ ಪ್ರಾಂತ್ಯದ ನವಾಬರ ಶೈಲಿಯ ತಿನಿಸುಗಳ ಸವಿಯ ಜೊತೆಯಲ್ಲಿ ಗಝಲ್ ಗಾಯನ ಸವಿಯುವ ಮನಸ್ಸಿದ್ದವರು ಒಮ್ಮೆ ಇಲ್ಲಿ ಭೇಟಿ ನೀಡಬಹುದು.

ಸ್ಥಳ: ದಿ ಸಾಲಿಟರ್ ಹೋಟೆಲ್, ನಂ.3, ಕುಮಾರ ಕೃಪಾ ರಸ್ತೆ, ರೇಸ್‌ಕೋರ್ಸ್ ಹತ್ತಿರ, ಮಾಧವ ನಗರ. ಟೇಬಲ್ ಕಾಯ್ದಿರಿಸಲು: 4044 3636

 ಚಿತ್ರಗಳು: ರಮೇಶ ಕೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.