ADVERTISEMENT

ನಾಟಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST
ನಾಟಕ ಸಂಭ್ರಮ
ನಾಟಕ ಸಂಭ್ರಮ   

ರಂಗಿನ ನಿಲುವಂಗಿ
ಸಂತ ತೆರೇಸಮ್ಮನವರ ದೇವಾಲಯ: ಭಾನುವಾರ ‘ಜೋಸೆಫ್ ಮತ್ತು ವಿಸ್ಮಿತ ರಂಗು ರಂಗಿನ ನಿಲುವಂಗಿ’ ಧ್ವನಿ ಬೆಳಕು ಕಾರ್ಯಕ್ರಮ. ನಿರ್ದೇಶನ: ಫಾದರ್ ಎ. ತೋಮಾಸ್. ಸಾಹಿತ್ಯ: ದಿ. ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್. ಸಂಗೀತ: ಸ್ಟೀಫನ್ ದತ್. ಕಲಾವಿದರು: ಫಾದರ್ ಎಲಿಯಾಸ್ ಮತ್ತು ಮರಿಯಾಪುರ ಗ್ರಾಮಸ್ಥರು. ‘ಜೋಸೆಫ್ ಮತ್ತು ವಿಸ್ಮಿತ ರಂಗು ರಂಗಿನ ನಿಲುವಂಗಿ’ಯ ಕಥಾವಸ್ತು ಬೈಬಲ್ ಗ್ರಂಥದ ಮೊದಲ ಪುಸ್ತಕ ಆದಿಕಾಂಡದ 38 ಅಧ್ಯಾಯಗಳನ್ನು ಆಧರಿಸಿದೆ.

ಈ ಕಥೆ ಹೀಗೆ ಸಾಗುತ್ತದೆ. ಯಾಕೋಬನಿಗೆ 12 ಗಂಡು ಮಕ್ಕಳು. ಅವರಲ್ಲಿ 11ನೆಯವನಾದ ಜೋಸೆಫ್ ತಂದೆಗೆ ಪ್ರೀತಿ ಪಾತ್ರ. ಆತನ ಹುಟ್ಟುಹಬ್ಬದ ದಿನ ತಂದೆ ಬಣ್ಣದ ಅಂಗಿಯನ್ನು ಉಡುಗೊರೆಯಾಗಿ ನೀಡುತ್ತಾನೆ. ಇದು ಆತನ ಅಣ್ಣಂದಿರಲ್ಲಿ ಅಸೂಯೆಗೆ ಕಾರಣವಾಗುತ್ತದೆ.
 
ಸಮಯ ಕಾದು ಅಣ್ಣಂದಿರು ಜೋಸೆಫನನ್ನು ಈಜಿಪ್ತ್ ವರ್ತಕರಿಗೆ ಮಾರುತ್ತಾರೆ. ಅಲ್ಲಿ ಜೋಸೆಫನಿಗೆ ಹತ್ತಾರು ಕಷ್ಟಗಳು ಎದುರಾಗುತ್ತವೆ. ದೈವಭಕ್ತನಾದ ಜೋಸೆಫ್ ಅಲ್ಲಿನ ಫರೋ ರಾಜನ ಕನಸು ವಿವರಿಸಿ ಮಂತ್ರಿ ಪದವಿ ಪಡೆಯುತ್ತಾನೆ.
ಬರಗಾಲದಿಂದ ದಿವಾಳಿಯಾಗುವ ಜೋಸೆಫನ ಅಣ್ಣಂದಿರು ಗೋಧಿ ಕೊಳ್ಳಲು ಈಜಿಪ್ತ್‌ಗೆ ಬಂದಾಗ ಮೇಲ್ವಿಚಾರಕನಾಗಿದ್ದ ಜೋಸೆಫನ ಗುರುತು ಹಿಡಿಯಲಿಲ್ಲ. ಆದರೆ ಇವರನ್ನು ಗುರುತು ಹಿಡಿದ ಜೋಸೆಫ್ ಕೆಲವು ಪರೀಕ್ಷೆಗಳಿಗೆ ಒಳಪಡಿಸಿ ಆನಂತರ ಪರಿಚಯ ಮಾಡಿಕೊಳ್ಳುತ್ತಾನೆ. ಸೋದರರ ಕುಟುಂಬದ 70 ಮಂದಿಯನ್ನು ಈಜಿಪ್ತ್‌ಗೆ ಬರಮಾಡಿಕೊಳ್ಳುತ್ತಾನೆ.

ಜೋಸೆಫನ ಕಥೆ ಪಾಶ್ಚಾತ್ಯ ದೇಶಗಳಲ್ಲಿ ನಾಟಕವಾಗಿ ರೂಪುಗೊಂಡು ಪ್ರಸಿದ್ಧಿ ಪಡೆದಿದೆ. ಕನ್ನಡ ಕ್ರೈಸ್ತ ರಂಗಭೂಮಿ ಇದೇ ಕಥೆಯನ್ನು ಕನ್ನಡ, ಭಾಷೆ, ಸಂಸ್ಕೃತಿ ಮತ್ತು ಸೊಗಡಿಗೆ ತಕ್ಕನಾಗಿ 3 ಗಂಟೆ ಅವಧಿಯ ಧ್ವನಿ ಬೆಳಕು ಪ್ರದರ್ಶನವಾಗಿ ರೂಪಾಂತರಿಸಿದೆ.

80 ಅಡಿ ವಿಸ್ತಾರದ ಬೃಹತ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿರುವ ಈ ಕಥೆಯಲ್ಲಿ ಮರಿಯಾಪುರ ಗ್ರಾಮದ 350ಕ್ಕೂ ಹೆಚ್ಚು ಜನರು ಅಭಿನಯಿಸಲಿದ್ದಾರೆ. ಗ್ರಾಮಸ್ಥರು 17 ವರ್ಷಗಳಿಂದ ಬೈಬಲ್ ಆಧರಿಸಿದ ಧ್ವನಿ, ಬೆಳಕು ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ಸ್ಥಳ: ಸೇಂಟ್ ಫ್ರಾನ್ಸಿಸ್ ಝೇವಿಯರ್ ಕ್ಯಾಥೆಡ್ರಲ್ ಮೈದಾನ, ಕೋಲ್ಸ್ ಪಾರ್ಕ್ ಬಳಿ. ಸಂಜೆ 6.30.

30 ಬೆಳ್ಳಿ ನಾಣ್ಯಗಳು
ಲೂರ್ದು ಮಾತೆಯ ದೇವಾಲಯ: ಭಾನುವಾರ ಸಂಜೆ 7 ಗಂಟೆಗೆ ಏಸುವಿನ ಮರಣ ಮತ್ತು ಪುನರುತ್ಥಾನದ ‘ಮೂವತ್ತು ಬೆಳ್ಳಿ ನಾಣ್ಯಗಳು’ ಧ್ವನಿ ಬೆಳಕು ನಾಟಕ ಕಾರ್ಯಕ್ರಮ.ಸ್ಥಳ: ಲೂರ್ದು ಮಾತೆಯ ದೇವಾಲಯ, ಲೂರ್ದು ನಗರ (ದೊಡ್ಡಬಸವನಪುರ- ಸೀಗೇಹಳ್ಳಿ), ವಿರ್ಗೋನಗರ.  ಬಸ್ ಸಂಖ್ಯೆ: ಮೆಜೆಸ್ಟಿಕ್‌ನಿಂದ 315 ಎಫ್, ಶಿವಾಜಿನಗರದಿಂದ 311ಜಿ, 307, 308, 380, 381. ಇಳಿಯುವ ಸ್ಥಳ: ಭಟ್ಟರ ಹಳ್ಳಿ.

ಗಾಂಧಿ ಬಂದ
ರಂಗ ಮಂಟಪ: ಶನಿವಾರ ಡಾ. ಎಚ್. ನಾಗವೇಣಿ ಅವರ ಕಾದಂಬರಿ ಆಧಾರಿತ ‘ಗಾಂಧಿ ಬಂದ’ ನಾಟಕದ 25ನೇ ಪ್ರದರ್ಶನ (ರೂಪಾಂತರ ಮತ್ತು ನಿರ್ದೇಶನ: ಚಂಪಾ ಶೆಟ್ಟಿ) ಮತ್ತು ನಾಗವೇಣಿ ಅವರಿಗೆ ಸನ್ಮಾನ. ಜೋಗಿಲ ಸಿದ್ಧರಾಜು ತಂಡದಿಂದ ರಂಗಗೀತೆಗಳು. ಅತಿಥಿಗಳು: ಡಾ.ಕೆ.ವಿ. ನಾರಾಯಣ, ಡಿ.ಕೆ. ಚೌಟ, ಶ್ರೀನಿವಾಸ ಜಿ. ಕಪ್ಪಣ್ಣ, ಶಶಿಧರ ಅಡಪ, ವಿಶ್ವನಾಥ ಶೆಟ್ಟಿ, ರವೀಂದ್ರ ಪೂಜಾರಿ. ಅಧ್ಯಕ್ಷತೆ: ಐ.ಎಂ. ವಿಠಲಮೂರ್ತಿ. ಸ್ಥಳ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಹಿಂಭಾಗ, ಜೆಸಿ ರಸ್ತೆ. ಸಂಜೆ 5.30.

ಜುಗಾರಿ ಕ್ರಾಸ್!
ಸಮುದಾಯ ಬೆಂಗಳೂರು: ಶನಿವಾರ ಸಂಜೆ 7.30, ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ‘ಜುಗಾರಿ ಕ್ರಾಸ್’ (ರಚನೆ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ. ರಂಗರೂಪ ಮತ್ತು ನಿರ್ದೇಶನ: ನಟರಾಜ ಹೊನ್ನವಳ್ಳಿ. ಸಂಗೀತ: ಗಜಾನನ ನಾಯ್ಕ) ನಾಟಕ.
ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ತೇಜಸ್ವಿಯವರ ಜುಗಾರಿ ಕ್ರಾಸ್ ಒಂದು ವಿಶಿಷ್ಟ ಕಾದಂಬರಿ. ಕಾಡುಗಳ್ಳರ ಕಾಳದಂಧೆಗಳು, ಪರಿಸರ, ಪ್ರಾಕೃತಿಕ ಸಂಪತ್ತು, ಅವುಗಳನ್ನು ಕಾಪಾಡುವ ಬಗೆಗಳನ್ನು ಇಲ್ಲಿ ಅವರು ಚರ್ಚಿಸುತ್ತಾರೆ.

ಈ ನಾಟಕ ಕೇವಲ 24 ಘಂಟೆಗಳಲ್ಲಿ ನಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್, ಜೊತೆಗೆಯೇ ಇದು ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ಸಾಮಾಜಿಕ ವಾಸ್ತವ ಕೂಡ. ಮಲೆನಾಡಿನ ದಟ್ಟ ಕಾಡೇ ಕಾಳದಂಧೆಗಳ ತವರೂರಾಗುವುದು, ಇದರಿಂದ ಉತ್ಪತ್ತಿಯಾಗುವ ಕಾಳಧನ ದೇಶದ ರಾಜಕೀಯವನ್ನೇ ನಿಯಂತ್ರಿಸುವುದು, ಈ ಕಾಳ ವ್ಯವಹಾರಗಳ ಜೊತೆ ಜೊತೆಗೇ ಮಾದಕದ್ರವ್ಯ ಮಾಫಿಯಾ, ಜೂಜು ಸೇರಿಕೊಂಡು ಅಮಾಯಕರನ್ನು ಪ್ರಾಣಾಪಾಯದ ಅಂಚಿಗೆ ಹೇಗೆ ತಳ್ಳಬಹುದು ಎಂಬುದೇ ಈ ಕಥೆಯ ಹಿನ್ನೆಲೆ.ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಟಿಕೆಟ್ ದರ 70 ರೂ. ಬುಕಿಂಗ್‌ಗೆ: 99001 82400, www.indianstage.in.

ಅಚಾನಕ್...
ಸಂಕುಲ ಥಿಯೇಟರ್ ಇನ್‌ಸ್ಟಿಟ್ಯೂಟ್: ಸೋಮವಾರ ‘ಅಚಾನಕ್’ (ನಿ: ಅಶೋಕ್ ನಿಟ್ಟೂರ್) ಹಾಸ್ಯ ನಾಟಕ.
ಸ್ಥಳ; ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, ದಯಾನಂದ ಸಾಗರ್ ಕಾಲೇಜು ಬಳಿ. ಕುಮಾರಸ್ವಾಮಿ ಬಡಾವಣೆ. ಸಂಜೆ 7.

ನಮ್ಮ ಮೆಟ್ರೊ
ಎಂಇಎಸ್ ಕಲಾವೇದಿ: ಭಾನುವಾರ ಗೌಡ ರಾಮ್‌ಕುಮಾರ್ ಮತ್ತು ಸಿ.ಎಂ. ರಾಮ್ ಕುಮಾರ್ ಅವರ ಸ್ಮರಣಾರ್ಥ ‘ನಮ್ಮ ಮೆಟ್ರೊ’ ನಾಟಕ. (ನಿರ್ದೇಶನ: ಅಭಿಷೇಕ್ ಅಯ್ಯಂಗಾರ್, ವಿನ್ಯಾಸ: ಶ್ರೀಹರ್ಷ ಗ್ರಾಮ). ಸ್ಥಳ: ಎಂಇಎಸ್ ಕಿಶೋರ್ ಕೇಂದ್ರ, 15ನೇ ಕ್ರಾಸ್ ಮಲ್ಲೇಶ್ವರ. ಸಂಜೆ 6.30.

ಚಾಳೇಶ
ಗೆಳೆಯರ ರಂಗಬಳಗ: ಸೋಮವಾರ ‘ಚಾಳೇಶ’ (ರಚನೆ: ಚಂದ್ರಶೇಖರ ಕಂಬಾರ. ನಿರ್ದೇಶನ: ಪಿ.ಗಂಗಾಧರಸ್ವಾಮಿ) ನಾಟಕ.
ಸ್ಥಳ: ಸೇವಾಸದನ. ಮಲ್ಲೇಶ್ವರ 14ನೇ ಅಡ್ಡ ರಸ್ತೆ. ಸಂಜೆ 7.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.