ADVERTISEMENT

ನಾದ, ಬೋಧಪ್ರದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2010, 18:30 IST
Last Updated 27 ಅಕ್ಟೋಬರ್ 2010, 18:30 IST


ಬಹು ದಿನಗಳಿಂದ ಕಾಯುತ್ತಿದ್ದ ಸಂಗೀತ ಸಮ್ಮೇಳನ ಶುರುವಾಗಿದೆ. ಬೆಂಗಳೂರು ಗಾಯನ ಸಮಾಜದ 42ನೇ ಸಂಗೀತ ಸಮ್ಮೇಳನ ಸಂಗೀತ ಕಛೇರಿಗಳಲ್ಲದೆ ವಿದ್ವತ್ ಗೋಷ್ಠಿಗಳೂ ಮೇಳೈಸಿ, ರಂಜನೆಯ ಜೊತೆ ಚಿಂತನೆಯೂ ಸೇರಿ ಉಪಯುಕ್ತವಾಗಿದೆ. 31ರ ವರೆಗೆ ನಡೆಯಲಿದೆ.

ಸಮ್ಮೇಳನದಲ್ಲಿ ಕೊಳಲು ನುಡಿಸಿದ ಕೆ.ಎಸ್. ಗೋಪಾಲಕೃಷ್ಣನ್ ಅವರು ಸಂಗೀತ ಕ್ಷೇತ್ರದಲ್ಲಿ ಒಂದು ಗೌರವಾನ್ವಿತ ಸ್ಥಾನ ಗಳಿಸಿಕೊಂಡಿರುವವರು. ಅವರದು ಯಾವ ಆಡಂಬರವೂ ಇಲ್ಲದ, ಮಾಧುರ್ಯ ಪ್ರಧಾನ ಸಂಗೀತ. ಚಪ್ಪಾಳೆಗಾಗಲೀ, ಅಗ್ಗದ ಪ್ರಚಾರಕ್ಕಾಗಲೀ ಏನನ್ನಾದರೂ ನುಡಿಸುವ ಪ್ರವೃತ್ತಿ ಅವರದ್ದಲ್ಲ! ಹೀಗಾಗಿ ಸಮೂಹ ರಂಜನೆ ಇಲ್ಲದಿದ್ದರೂ ನೈಜ ಕಲಾಭಿಮಾನಿಗಳ ಬೆಂಬಲ ಅವರಿಗೆ ಇದ್ದೇ ಇದೆ.

ಸಮ್ಮೇಳನದ ಈ ಕಛೇರಿಯಲ್ಲೂ ಕೃತಿಗಳ ಹಿಂಡನ್ನು ತುರುಕದೆ, ರಾಗಾಲಾಪನೆ, ನೆರವಲ್, ಸ್ವರ ಪ್ರಸ್ತಾರಗಳಿಂದ ಸೃಜನಶೀಲ ಸಂಗೀತವನ್ನು ಅಭಿವ್ಯಕ್ತಗೊಳಿಸುತ್ತಾ ಒಂದು ಮೌಲಿಕ ಸಂಗೀತವನ್ನು ಪ್ರಸ್ತುತಗೊಳಿಸಿದರು. ಮಧ್ಯಮಾವತಿಯನ್ನು ಹಂತಹಂತವಾಗಿ ಅರಳಿಸುತ್ತಾ ರಾಗದ ಒಂದು ಸುಂದರ ಚಿತ್ರ ಬಿಡಿಸಿದರು. ತಾರಸ್ಥಾಯಿಯನ್ನು ತಲುಪುವ ವೇಳೆಗೆ ಒಂದು ಕ್ರಮಾನುಗತ ಆಲಾಪನೆಯ ಫಲದಿಂದ ಮೂಡಿದ ಸುಂದರ ಚಿತ್ರ ಗೋಚರವಾಗತೊಡಗಿತು. ಸ್ವರ ಪ್ರಸ್ತಾರದಲ್ಲೂ ಲೆಕ್ಕಾಚಾರಕ್ಕಿಂತ ರಾಗಭಾವವೇ ಪ್ರಧಾನವಾಗಿದ್ದುದು ಅಭಿನಂದನೀಯ.

ಖರಹರಪ್ರಿಯ ವರ್ಗಕ್ಕೆ ಸೇರಿದ ಔಡವ ರಾಗವು ಹಿಂದೆ ‘ಮಧ್ಯಮಾಡಿ’ ಎಂಬ ಹೆಸರಿನಲ್ಲಿ ಪ್ರಚಲಿತವಿತ್ತು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿ ಈ ಮೂವರು ತ್ರಿಮೂರ್ತಿಗಳೂ ಈ ರಾಗದಲ್ಲಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಕೊಳಲಿನಲ್ಲಂತೂ ಈ ರಾಗ ಇನ್ನೂ ಹೃದಯಂಗಮ!

ಗೋಪಾಲಕೃಷ್ಣನ್ ಅವರ ಕೈನಲ್ಲಿ ರಾಗವು ಸ್ವಾದಿಷ್ಟವಾಗಿ ಹೊಮ್ಮಿ, ಮಾಧುರ್ಯದ ‘ಅನುಭವ’ ನೀಡಿತು. ರೀತಿಗೌಳ ರಾಗ ಹಾಗೂ ವಿಳಂಬ ಕಾಲದ ಗತಿ ಮೇಳೈಸಿದ ಬಗೆಯಲ್ಲೆೀ ಒಂದು ಸೊಗಸಿತ್ತು. ಹಿರಿಯರಾದ ಮನ್ನಾರ್‌ಗುಡಿ ಈಶ್ವರನ್ ಮೃದಂಗ ತನಿವಾದನದಲ್ಲಿ ಮನ ತುಂಬಿದರೆ, ಘಟದಲ್ಲಿ ಸಹಕರಿಸಿದವರು ಎಂ.ಎ. ಕೃಷ್ಣಮೂರ್ತಿ. ‘ತುಂಗಾ ತೀರವಿಹಾರಂ’ ಬಳಕೆಯಲ್ಲಿರುವ ಪದವಾದರೂ ಗೋಪಾಲಕೃಷ್ಣನ್ ಅವರ ಕೊಳಲಿನ ಹೊನಲು ಬೆಳಕಿನಲ್ಲಿ ಪ್ರಖರವಾಗಿ ಬೆಳಗಿತು. ಹಾಗೇ ಭೋಗೇಂದ್ರಶಾಯಿನಂ, ವಿಶ್ವೇಶ್ವರ್, ಭಾಗ್ಯದ ಲಕ್ಷ್ಮೀ ಬಾರಮ್ಮ - ಭಕ್ತಿ, ನಾದಗಳ ಸೊಗಡಿನಿಂದ ಮೂಡಿತು. ಕಛೇರಿಯ ಯಶಸ್ಸಿನಲ್ಲಿ ಎಂ.ಎ. ಕೃಷ್ಣಸ್ವಾಮಿ (ಪಿಟೀಲು) ಸಹ ಉತ್ತಮ ಪಾಲು ಪಡೆದರು.

ವಿದ್ವತ್ ಗೋಷ್ಠಿ
ಸಮ್ಮೇಳನದ ವಿದ್ವತ್ ಗೋಷ್ಠಿ ಅಧಿವೇಶನಕ್ಕೆ ‘ದಕ್ಷಿಣೋತ್ತರ’ ಎಂಬ ಶೀರ್ಷಿಕೆ ನೀಡಿರುವುದರಿಂದ ಕರ್ನಾಟಕ ಹಾಗೂ ಹಿಂದುಸ್ತಾನಿ ಎರಡೂ ಪದ್ಧತಿಗಳ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಹೆಣೆಯಲಾಗಿದೆ. ಹಿರಿಯ ಪತ್ರಿಕೋದ್ಯಮಿ ಹಾಗೂ ವಿಮರ್ಶಕ ಎ. ಈಶ್ವರಯ್ಯ ತಮ್ಮ ದಿಕ್ಸೂಚಿ ಭಾಷಣದಲ್ಲಿ ಕರ್ನಾಟಕ-ಹಿಂದುಸ್ತಾನಿ ಶೈಲಿಯ ಸಂಗೀತದ ಬಗೆಗೆ ಬಿಚ್ಚು ಮನಸ್ಸಿನ ಮಾತನಾಡಿ, ಸಾಮ್ಯ, ಭಿನ್ನತೆಗಳನ್ನು ವಿವರಿಸಿದರು. ಸಂಗೀತ ಕಛೇರಿಗೆ ಒಂದು ‘ಸಂಗೀತ ಶಿಲ್ಪ ಇರಬೇಕು’ ಎಂದು ಹೇಳುತ್ತಾ ಬೆಳಕು (ಜ್ಞಾನ) ಎಲ್ಲ ಕಡೆಯಿಂದ ಹರಿದು ಬರಲಿ ಎಂದು ಆಶಿಸಿದರು.

ಸಮ್ಮೇಳನಾಧ್ಯಕ್ಷೆ ಶ್ಯಾಮಲಾ ಜಿ. ಭಾವೆ ಹಿಂದುಸ್ತಾನಿ ಸಂಗೀತದ ವಿವಿಧ ಘರಾನಾಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. 20ಕ್ಕೂ ಹೆಚ್ಚು ಘರಾನಾಗಳಲ್ಲಿ ಕೆಲವನ್ನು ವಿವರಿಸಿ, ಹಾಡಿ ತೋರಿಸಿದರು. ಗ್ವಾಲಿಯರ್ ಘರಾನಾಕ್ಕೆ ರಾಗ ಲಲಿತ್, ಆಗ್ರಾಕ್ಕೆ ದೇಸೀ, ಕಿರಾಣಾ ಘರಾನಾಕ್ಕೆ ಮಿಯಾಕಿ ತೋಡಿ ಹಾಗೂ ಜೈಪುರ್ - ಪಾಟಿಯಾಲ ಘರಾನಾಕ್ಕೆ ಚಂದ್ರಕೌಂಸ್ ಮತ್ತು ‘ಕಾಕರ ಸಜನಿ’ಗಳನ್ನು ಕಿರಿದಾಗಿ ಹಾಡಿ ಉತ್ತಮ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಅವರೊಂದಿಗೆ ವಾಗೀಶ್ ಭಟ್ ತಬಲಾ ಸಾಥ್ ನೀಡಿದರು.

ತಂಜಾವೂರಿನ ಮರಬು ಫೌಂಡೇಷನ್‌ನ ಡಾ. ಆರ್. ಕೌಸಲ್ಯ, ತ್ಯಾಗರಾಜರ ದಿವ್ಯ ನಾಮ ಕೀರ್ತನೆಗಳ ಬಗೆಗೆ ಕಿರು ಪರಿಚಯ ನೀಡಿದರು. ವಿಜಯ ಜಯ ಮತ್ತು ಸರಸ್ವತಿ ಆಯ್ದ ಕೆಲವನ್ನು ಹಾಡಿದರು. ರಾಮಯ್ಯ (ಬಲಹಂಸ); ‘ದೀನಜನ ಶ್ರೀರಾಮಂ’ ಭೂಪಾಳಿ ರಾಗದ ತ್ಯಾಗರಾಜರ ಏಕೈಕ ಲಭ್ಯ ಕೃತಿ. ‘ಮರವಕರ’ದಲ್ಲಿ ಹೊಮ್ಮಿದ ದೇವಗಾಂಧಾರಿ ರಾಗಭಾವ ಅಪೂರ್ವವಾದುದು. ಸಾವೇರಿ ರಾಗದ ‘ಬಲಮು ಕುಲಮು ಏಲರಾಮ’ದಲ್ಲಿ ಭಕ್ತಿಯ ಪ್ರತಿಪಾದನೆ ಗಾಢವಾಗಿದೆ. ಕಾಪೀರಾಗದ ’ಸುಂದರ ದರುಶನ ನಂದನ ರಾಮ’ದಿಂದ ಮುಕ್ತಾಯ ಮಾಡಿದರು.

ಚೆಲ್ಲಂ ಅಯ್ಯರ್ ನೆರವಿನಿಂದ ದೊರೆತ ಉತ್ತಮ ಪಾಠಾಂತರ ಹಾಗೂ ಒಳ್ಳೆಯ ಕಂಠದಿಂದ ಉತ್ತಮವಾಗಿ ಹಾಡಿದರು.ಜತೆಗೆ ಡಾ. ಆರ್. ಕೌಸಲ್ಯ ಅವರ ವಿವರಣೆ ಪೂರಕವಾಗಿ ಹೊಮ್ಮಿತು.

ಹಿಂದುಸ್ತಾನಿ ಪ್ರಭಾವಿತ ರಚನೆಗಳು
ಇಬ್ಬರು ಜನಾನುರಾಗಿ ಲಯವಾದ್ಯಗಾರರಾದ ಆನೂರು ಅನಂತಕೃಷ್ಣ ಶರ್ಮ ಮತ್ತು ಉದಯರಾಜ ಕರ್ಪೂರ ಅವರು ‘ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ತಾಳಪದ್ಧತಿಗಳು’ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಆದಿ ತಾಳ- ತೀನ್ ತಾಳ, ವಿಳಂಬ-ದ್ರುತ, ಸಂ-ಎಡುಪು, ಸಶಬ್ಧ-ನಿಶಬ್ಧ ಕ್ರಿಯೆ, ಠೇಕ್‌ಗಳು  ಮುಂತಾದವುಗಳನ್ನು ಚರ್ಚಿಸಿ, ಮೃದಂಗ- ತಬಲಾಗಳಲ್ಲಿ ನುಡಿಸಿ, ಸ್ವತಃ ಹಾಡಿ, ಲ್ಯಾಪ್‌ಟಾಪ್ ಮೂಲಕ ಹಾಡಿಸಿ, ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಹಿರಿಯ ಗಾಯಕಿ, ಸಂಗೀತಜ್ಞೆ ಡಾ. ಆರ್.ಎನ್. ಶ್ರೀಲತಾ ‘ಹಿಂದುಸ್ತಾನಿ ಪ್ರಭಾವಿತ ದೀಕ್ಷಿತರ ಕೃತಿಗಳು’ ಕುರಿತು ಮಾತನಾಡಿ, ಹಾಡಿ ಸೋದಾಹರಣ ಭಾಷಣ ಮಾಡಿದರು. ಶಿವಪಂತುವರಾಳಿ ರಾಗದ ಪಶುಪತೀಶ್ವರಂ ಸುಂದರರಾಜಂ ಆಶ್ರಯೇ, ಸ್ವಾಮಿನಾಥೇನ, ಜಂಬುಪತೆಪಾ’, ಪ್ರಸಿದ್ಧವಾದ ‘ಚೇತಶ್ರೀ’ ಮತ್ತು ಅರ್ಧನಾರೀಶ್ವರಂ (ಕುಮುದಕ್ರಿಯ) ಸಹಿತ ಹಿತಮಿತ ವಿವರಣೆ ನೀಡಿ, ಇಂಪಾಗಿ ಹಾಡಿ, ಸಭೆಯ ಗೌರವಕ್ಕೆ ಪಾತ್ರರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.