ADVERTISEMENT

ನಾಸ್ತಿಕರನ್ನು ಅಪ್ಪಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ನೀವು ನಾಸ್ತಿಕರೇ? ಹಾಗಿದ್ದರೆ ನಿಮ್ಮಂತೆಯೇ ಇರುವ ನಾಸ್ತಿಕರನ್ನು ಈ ಶುಕ್ರವಾರ ಅಪ್ಪಿಕೊಳ್ಳಿ ಎಂದೆನ್ನುತ್ತದೆ `ಹಗ್ ಆ್ಯನ್ ಅಥೀಸ್ಟ್ ಡೇ' ಸಂಸ್ಥೆ. ಇಂದು ದೇಶದಾದ್ಯಂತ ಇರುವ ನಾಸ್ತಿಕ ಸಂಘಟನೆಗಳು ಪ್ರಮುಖ ನಗರಗಳ ಕೇಂದ್ರ ಭಾಗದಲ್ಲಿ ತಾವೂ ಅಪ್ಪಿಕೊಳ್ಳುವುದಲ್ಲದೇ ಇನ್ನೊಬ್ಬರನ್ನೂ ಅಪ್ಪಿಕೊಳ್ಳುವಂತೆ ಮಾಡುವ ಹೊಸತೊಂದು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಈ ರೀತಿಯ ಜಾಥಾ ದೆಹಲಿ, ಮುಂಬೈ ನಗರಗಳಲ್ಲಿ ಮಾತ್ರವಲ್ಲ ಉದ್ಯಾನ ನಗರಿ ಬೆಂಗಳೂರಿನ ರಿಚ್‌ಮಂಡ್ ರಸ್ತೆ, ಎಂಜಿ ರಸ್ತೆ ಹಾಗೂ ಕಬ್ಬನ್ ಉದ್ಯಾನದಲ್ಲೂ ನಡೆಯುತ್ತಿರುವುದು ವಿಶೇಷ.

ಕಳೆದ ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿ ಆರಂಭಗೊಂಡ ಈ ಬಗೆಯ ನಾಸ್ತಿಕರು ಪರಸ್ಪರ ಅಪ್ಪಿಕೊಳ್ಳುವ ಜಾಥಾ ಇದೇ ಮೊದಲ ಬಾರಿಗೆ ಭಾರತದಲ್ಲೂ ಆಯೋಜನೆಗೊಂಡಿದೆ. ನಾಸ್ತಿಕರು, ದೇವರ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದವರು ಹಾಗೂ ಧರ್ಮದಲ್ಲಿ ನಂಬಿಕೆ ಇಡದವರು ಈ ಜಾಥಾದಲ್ಲಿ ಪಾಲ್ಗೊಳ್ಳಬಹುದಾಗಿದೆ. `ನಾಸ್ತಿಕರು ನೈತಿಕತೆ ಇಲ್ಲದವರು ಎಂಬ ವಾದವನ್ನು ಮುಂದಿಡುವವರಿಗೆ ಉತ್ತರ ನೀಡಲು ಸಜ್ಜಾಗಿದ್ದೇವೆ. ಆಸ್ತಿಕರು ಹಾಗೂ ನಾಸ್ತಿಕರ ನಡುವಿನ ವ್ಯತ್ಯಾಸವೆಂದರೆ, ನಾಸ್ತಿಕರು ವಿಜ್ಞಾನದಲ್ಲಿ ನಂಬಿಕೆಯುಳ್ಳವರು ಹಾಗೂ ಆಸ್ತಿಕರು ಅಗೋಚರ ಶಕ್ತಿಯಲ್ಲಿ ನಂಬಿಕೆ ಇಟ್ಟವರು ಎಂದಷ್ಟೇ. ಅದನ್ನು ಹೊರತುಪಡಿಸಿ ನಾವೂ ಕೂಡಾ ನಿಮ್ಮಂತೆಯೇ ಮನುಷ್ಯರು' ಎಂಬ ವಾದವನ್ನು ಈ ಸಂಘದ ಸದಸ್ಯರು ಮುಂದಿಡುತ್ತಾರೆ.

ದೇಶದಲ್ಲಿರುವ ನಾಸ್ತಿಕ ಸಮೂಹ ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ನಾಸ್ತಿಕರನ್ನು ಸಂಪರ್ಕಿಸ್ದ್ದಿದು, ಶುಕ್ರವಾರದ ಕಾರ್ಯಕ್ರಮದ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಒಂದು ಸ್ಥಳದಲ್ಲಿ ಎಲ್ಲಾ ನಾಸ್ತಿಕರು ಸೇರಿ ಪರಸ್ಪರ ಅಪ್ಪಿಕೊಂಡು, ಪರಿಚಯವಿಲ್ಲದವರ ಸ್ನೇಹ ಮಾಡಿಕೊಳ್ಳುವ ಮೂಲಕ ರಾತ್ರಿ ಒಟ್ಟಿಗೆ ಊಟ ಮಾಡುವ ಕಾರ್ಯಕ್ರಮವನ್ನು ಇವರು ಹಮ್ಮಿಕೊಂಡಿದ್ದಾರೆ.

ಅಮೆರಿಕದ ವಿಲಿಯಮ್ ಬರ್ಮುಡಾಜ್ ಅವರು ಸ್ಥಾಪಿಸಿದ ಈ ಸಂಘವು ನಾಸ್ತಿಕರು, ಧರ್ಮ, ಜಾತಿಯಲ್ಲಿ ನಂಬಿಕೆ ಇಲ್ಲದವರು, ಮುಕ್ತವಾಗಿ ಚಿಂತಿಸುವವರು ಹಾಗೂ ಸಮಾನ ಮನಸ್ಕರು ಒಗ್ಗೂಡಲು ಕರೆ ನೀಡಿದ್ದರು.

ಅದರಂತೆಯೇ ಇತರ ಮಹಾನಗರಗಳಂತೆ ಬೆಂಗಳೂರು ಸಹ ಶುಕ್ರವಾರ ನಾಸ್ತಿಕರ ಅಪ್ಪುಗೆಯ ಕ್ಷಣಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ. ಇದಕ್ಕಾಗಿ ನಾಸ್ತಿಕ ವಾದವನ್ನು ಮುಂದಿಡುವ ಬರಹಗಳನ್ನು ಹೊಂದಿರುವ ಟಿ-ಶರ್ಟ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.