ADVERTISEMENT

ನಿತ್ಯ ನಿರಂತರ ನೃತ್ಯ ಸಂಗೀತದ ಸುಧೆ...

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ನಗರದ ಲಲಿತ ಕಲೆಗಳ ಸಂಸ್ಥೆ `ಸಂಗೀತ ಸಂಭ್ರಮ~ ಹಮ್ಮಿಕೊಂಡಿದ್ದ ಸಂಗೀತ ಮತ್ತು ನೃತ್ಯೋತ್ಸವ `ನಿರಂತರಂ~ ಕಲಾಸಕ್ತರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು. ಕಲಾಪ್ರಿಯರನ್ನು ಸೂಜಿಗಲ್ಲಿನಂತೆ ತನ್ನೆಡೆಗೆ ಆಕರ್ಷಿಸಿತು.

ಉತ್ಸವದ ಮೂರನೇ ದಿನದ ಕಾರ್ಯಕ್ರಮ ಆಯೋಜನೆಗೊಂಡಿದ್ದ `ಸೇವಾ ಸದನ~ದ ಸಭಾಂಗಣ ತುಂಬಿ ತುಳುಕಿತ್ತು. ಸುಪರ್ಣ ವೆಂಕಟೇಶ್ ಅವರ ನೃತ್ಯ, `ತ್ರಿಶೂರ್ ಸಹೋದರ~ರ ದ್ವಂದ್ವ ಹಾಡುಗಾರಿಕೆಗೆ ಸಭಾಂಗಣದ ತುಂಬ ನೆರೆದಿದ್ದವರೆಲ್ಲರೂ ತಲೆದೂಗಿದರು. ನೃತ್ಯ- ಸಂಗೀತದ ಮೋಡಿಯನ್ನು ಆಹ್ಲಾದಿಸಲು ಆಸನವೇ ಬೇಕೆಂದು ಅವರಿಗೆ ತೋರಲಿಲ್ಲ, ಮನದ ದಣಿವು ನಿವಾರಣೆಯಾದಾಗ ಕಾಲುಗಳ ದಣಿವು ಅವರ ಗಮನಕ್ಕೆ ಬರಲಿಲ್ಲ. ಅನೇಕ ಕಲಾಸಕ್ತರು ನಿಂತುಕೊಂಡೇ ಸಂಗೀತದ ಮೋಡಿಗೆ ಮರುಳಾದರು.

`ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್~ ಸಂಸ್ಥೆ ನಿರ್ದೇಶಕಿ ಸುಪರ್ಣ ಸಂಜೆ ವೇಳೆಗೆ ಪ್ರಸ್ತುತ ಪಡಿಸಿದ `ಮಹಾಲಕ್ಷ್ಮಿ~ ಸ್ತ್ರೀ ಶಕ್ತಿ, ನಾಲ್ಕುಗುಣಗಳನ್ನು ಮನೋಜ್ಞವಾಗಿ ತೆರೆದಿಟ್ಟಿತು. ಪ್ರಮುಖ ನಾಲ್ಕು ದೇವತೆಗಳಾದ ಕಾಳಿ, ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿ, ಅವರಿಗೆ ಪೂರಕವಾಗಿ ನಾಲ್ಕು ಮಂದಿ ಸೂತ್ರದಾರರು ಕಥೆ ವಿವರಿಸುತ್ತಾ ಅಭಿನಯದ ಮೆರುಗು, ರಂಗನ್ನು ಮತ್ತಷ್ಟು ಹೆಚ್ಚಿಸಿದರು.

ಇದಕ್ಕೂ ಮುನ್ನ ತ್ರಿಶೂರ್ ಸಹೋದರರಾದ ಕೃಷ್ಣ ಮೋಹನ ಮತ್ತು ರಾಮ್‌ಕುಮಾರ್ ಮೋಹನ ಹಾಡುಗಾರಿಕೆಯೂ ಎಲ್ಲರ ಗಮನ ಸೆಳೆಯಿತು. ಕಛೇರಿಯ ಮೆರುಗಿಗೆ ವಯೊಲಿನ್‌ನಲ್ಲಿ ಸಿ.ಎನ್.ಚಂದ್ರಶೇಖರ್, ಮೃದಂಗದೊಂದಿಗೆ ತ್ರಿಶೂರ್ ಆರ್.ಮೋಹನ್, ಮೋರ್ಚಿಂಗ್ ಜತೆ ಎಸ್.ವಿ.ಬಾಲಕೃಷ್ಣ ಸಾಥ್ ನೀಡಿದರು.

ಕಛೇರಿ ಆರಂಭಕ್ಕೆ ಮುನ್ನ ಮಹಾಗಣಪತಿಯನ್ನು ಒಲಿಸುವ `ಕಮಚ ದರು ವರಂ~ ಕರ್ಣಾನಂದ ವಾಗಿತ್ತು. ಬಳಿಕ ದ್ವಂದ್ವ ಹಾಡುಗಾರಿಕೆಯಲ್ಲಿ ದೇಶ್ ರಾಗದಲ್ಲಿ ಪ್ರಸ್ತುತಗೊಂಡ `ವೀಣಾಮಣಿ ವಂಶ~ ಮತ್ತು `ರಾಗಂ ತಾಲಂ ಪಲ್ಲವಿ~ ಸುಧುರವಾಗಿತ್ತು. ಈ ಎರಡೂ ಪ್ರಕಾರಗಳು ಪ್ರೇಕ್ಷಕರ ಮನದಲ್ಲಿ `ನಿರಂತರ~ವಾಗಿ ಅಚ್ಚೊತ್ತಿದವು.

ಸಂಗೀತ ಸಂಭ್ರಮದ ಸ್ಥಾಪಕ ಪಿ.ರಮಾ ಕಾರ್ಯಕ್ರಮಕ್ಕೆ ಸಿಕ್ಕಿದ ಪ್ರತಿಕ್ರಿಯೆ ಕಂಡು, `ಸಂಗೀತ ಮತ್ತು ನೃತ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಮತ್ತು ಹಿರಿಯ ಮನಸ್ಸುಗಳಿಗೆ ಸಂಗೀತದ ಕಂಪು ಪಸರಿಸುವ ಉದ್ದೇಶವೂ ನಮ್ಮದಾಗಿತ್ತು~ ಎಂದರು.

ಸಂಘಟಕ ಶ್ರೀನಾಥ್, `ಇದು ಉತ್ಸವದ ಮೂರನೇ ಕಾರ್ಯಕ್ರಮ. ಪ್ರತಿವರ್ಷವೂ ವಿಶಿಷ್ಟ ಕಾರ್ಯಕ್ರಮಗಳನ್ನು ಉತ್ಸವ ಸಂದರ್ಭ ಅಳವಡಿಸಿಕೊಳ್ಳುತ್ತೇವೆ. ಅವುಗಳ ಒಂದು ಭಾಗವಾಗಿ ಸಂಗೀತ ಮತ್ತು ನೃತ್ಯಕ್ಕೇ ಒಂದು ದಿನ ಮೀಸಲಿಟ್ಟಿದ್ದೇವೆ. ಬುದ್ಧಿಮಾಂದ್ಯ ಹಾಗೂ ಅಂಗವಿಕಲ ಮಕ್ಕಳಿಗೂ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಅವರಿಗೂ ವೇದಿಕೆ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮ ಆಸ್ವಾದಿಸಲು ಬಂದಿದ್ದ ಪದ್ಮಿನಿ, ಕಾರ್ಯಕ್ರಮದ ಸೊಬಗು ನನ್ನ ಕಣ್ಣೆವೆ ಮುಚ್ಚಲೂ ಅವಕಾಶ ಕೊಟ್ಟಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು. ಸುಪರ್ಣ ಅವರು ಪ್ರಸ್ತುತ ಪಡಿಸಿದ `ಸ್ತ್ರೀ ಶಕ್ತಿ~ ನೃತ್ಯ ಅದ್ಭುತವಾಗಿತ್ತು. ಅದನ್ನು ಶಬ್ದಗಳಲ್ಲಿ ವಿವರಿಸಲು ಅಸಾಧ್ಯ ಎಂದರು.

`ತ್ರಿಶೂರ್ ಸಹೋದರರು ವಯಸ್ಸಿನಲ್ಲಿ ಕಿರಿಯರಾದರೂ ಅವರ ಸಾಧನೆಯಲ್ಲಿ ವಯಸ್ಸಿಗೂ ಮೀರಿದ ಪ್ರತಿಭೆ ಎದ್ದುಕಾಣುತ್ತದೆ. ಸಾಕಷ್ಟು ಶ್ರಮ ವಹಿಸಿರುವುದು ಅವರ ಪ್ರತಿಭೆ ಪ್ರದರ್ಶನದ ವೇಳೆ ವೇದ್ಯವಾಗುತ್ತದೆ. ನಗರದ ಜನತೆಗೆ ಉತ್ತಮ ಅವಕಾಶವನ್ನು ಮಾಡಿಕೊಟ್ಟಿರುವ ಸಂಘಟಕರೂ ಅಭಿನಂದನಾರ್ಹರು~ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.