ADVERTISEMENT

ನಿಫಾ… ಇಲ್ಲಿ ಬಂದಿಲ್ಲಪಾ...

ಸುಶೀಲಾ ಡೋಣೂರ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮನೆಗೆ ಮಾವು ತರಂಗಿಲ್ಲ, ಬಾಳೆಹಣ್ಣೂ ಬೇಡವಂತೆ, ಬಾವಲಿಗಳು ಹೆಚ್ಚು ವಾಸ ಮಾಡೂದು ಬಾಳೆಗಿಡದಲ್ಲಿಯೇ… ಇದಿಷ್ಟು ಹಣ್ಣುಗಳ ವಿಚಾರವಾಯ್ತು. ಇತ್ತ ಬಾವಲಿಗಳದ್ದು ಮತ್ತೊಂದು ಕಥೆ.

‘ಸಾಹೇಬ್ರ, ನಮ್ಮನೆ ಹಿಂದೆ ಗಿಡ ಹೆಚ್ಚಿವೆ. ಬಾವಲಿಗಳೂ ಕಾಣಿಸ್ಕತವೆ. ಬಂದು ಬಾವಲಿಗಳಿಗೆ ಏನಾರ ಮಾಡಿ’ ಅಂತ ಜನ ಬಿಬಿಎಂಪಿ ಅಧಿಕಾರಿಗಳಿಗೆ ಫೋನ್‌ ಹೊಡೆಯುತ್ತಿದ್ದಾರೆ.

ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೂ ಹೆದರಿ ಹತ್ತಿರದ ಆಸ್ಪತ್ರೆಗೆ ನುಗ್ಗುತ್ತಿರುವ ಜನರು ‘ನಿಫಾ ಏನೊ ಚೆಕ್‌ ಮಾಡಿ ಪ್ಲೀಸ್‌’ ಅಂತ ಗೋಗರೆಯುತ್ತಿದ್ದಾರೆ. ‘ಅಲ್ಲ, ಇದು ಸಾಮಾನ್ಯ ನೆಗಡಿ–ಜ್ವರ’ ಅಂತ ವೈದ್ಯರೇ ತಿಳಿಸಿದ ಮೇಲೂ ಸದ್ದಿಲ್ಲದೇ ಲ್ಯಾಬ್‌ಗೆ ನುಸುಳಿ, ‘ಸಾರ್‌, ಇದು ನಿಫಾ ಅಲ್ಲ ತಾನೆ?’ ಅಂತನ್ನುತ್ತಾರೆ. ನರ್ಸುಗಳನ್ನ ಪಕ್ಕಕ್ಕೆ ಕರೆದು, ’ಇದು ಸಾಮಾನ್ಯ ಜ್ವರ ಅಲ್ವಾ ಮೇಡಮ್‌’ ಎನ್ನುವ ಆತಂಕದ ಪ್ರಶ್ನೆ.

ADVERTISEMENT

ಮನುಷ್ಯ–ಮನುಷ್ಯರ ನಡುವೆಯೂ ಇಂಥದ್ದೇ ಅನುಮಾನ ಸುಳಿದಾಡುತ್ತಿದೆ. ‘ಏನ್ರಿ, ಕೇರಳದವ್ರಾ? ಯಾವಾಗ್‌ ಬಂದ್ರಿ ಊರಿಂದ? ಬಂದ್‌ ಮೇಲೆ ಚೆಕಪ್‌ ಏನಾರಾ ಮಾಡಿಸ್ಕಂಡ್ರಾ? ನೋಡೀಪಾ… ಬೆಂಗ್ಳೂರಿಗೂ ತಗುಲಿಸಿ ಬಿಟ್ಟೀರಾ?’ ಎನ್ನುವ ಮಾತಿಗೆ ಕೇರಳಿಗರ ಮನ ಮುದುಡುತ್ತಿದೆ.

ಇದಕ್ಕೆಲ್ಲ ಅರ್ಥವೇ ಇಲ್ಲ. ಇದೊಂದು ಅನಗತ್ಯ ಭಯ ಅಷ್ಟೆ. ಬೆಂಗಳೂರೇ ಅಲ್ಲ, ರಾಜ್ಯದ ಯಾವ ಮೂಲೆಯನ್ನೂ ಮುಟ್ಟಿಲ್ಲ ನಿಫಾ ಎಂದು ವೈದ್ಯಕೀಯ ವಲಯ ದೃಢಪಡಿಸಿದೆ.

ಅಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಕಾಣಿಸಿಕೊಂಡ ‘ನಿಫಾ’ ಇನ್ನು ನಮ್ಮಲ್ಲಿ ಬರುವುದೇನು ತಡ ಎನ್ನುವ ಆತಂಕ ಜನರ ನಿದ್ದೆಗೆಡಿಸಿದೆ. ಇತ್ತ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳಿಗರ ಮನದಲ್ಲೂ ಭಯ. ತನ್ನೂರಿನಲ್ಲಿರುವ ತನ್ನವರ ಚಿಂತೆಯ ಜೊತೆಗೆ ಮಲಯಾಳಂ ಮಾತಾಡಿದರೆ ಜನ ಅನುಮಾನಿಸುತ್ತಾರೆನ್ನುವ ಆತಂಕ.

ಕಳೆದೆರಡು ವರ್ಷಗಳ ಹಿಂದೆ ಎಬೋಲಾ ಬಂದಾಗಲೂ ಜನ ಹೀಗೇ ದಿಗಿಲುಗೊಂಡಿದ್ದರು. ಎಬೋಲಾ ಇನ್ನೂ ಭಾರತದ ಗಡಿ ತಟ್ಟಿರಲಿಲ್ಲ, ಆಗಲೇ ಇಲ್ಲಿನ ಜನ ಮಾಸ್ಕ್‌, ಗ್ಲೌಸ್ ಧರಿಸಿ ಓಡಾಡಿದ್ದರು. ಈಗಂತೂ ಇದು ಇಲ್ಲೇ ಪಕ್ಕದ ಕೇರಳದಲ್ಲಿರೋದರಿಂದ ಗಾಬರಿ ಸಹಜವಾಗಿಯೇ ಹೆಚ್ಚಿದೆ.

ಅಗತ್ಯ ಎಚ್ಚರಿಕೆ ಕೈಗೊಂಡರೆ ಸಾಕು. ಅನಗತ್ಯ ಭೀತಿ, ಅರ್ಥವಿಲ್ಲದ ವದಂತಿಗೆ ಆಸ್ಪದ ಕೊಡಬಾರದೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಸಾರಿ ಸಾರಿ ಹೇಳುತ್ತಿದ್ದಾರೆ.

‘ಕರ್ನಾಟಕ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯ ಎಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದೆ. ಜನ ಭಯಪಡುವ ಅಗತ್ಯವಿಲ್ಲ’ ಎನ್ನುತ್ತಾರೆ ರಾಷ್ಟ್ರೀಯ ಸಾಂಕ್ರಾಮಿಕ ರೋಗ ತಡೆ ಯೋಜನಾ ವಿಭಾಗದ (ಎಸ್‌ಪಿಎಮ್‌ ಎನ್‌ಎಚ್‌ಎಂ) ಉಪನಿರ್ದೇಶಕ ಡಾ. ಬಿ.ಜಿ. ಪ್ರಕಾಶ್‌ ಕುಮಾರ್‌ .

‘ಕರ್ನಾಟಕದ ಎಲ್ಲಾ ಗಡಿಜಿಲ್ಲೆಗಳಲ್ಲಿ ಮುಂಜಾಗ್ರತೆ ವಹಿಸಲಾಗಿದೆ. ಜ್ವರ, ಕೆಮ್ಮು, ವಾಂತಿ, ಭೇದಿ ಲಕ್ಷಣಗಳಿರುವ ರೋಗಿಗಳು ಬಂದರೆ ಸಂಪೂರ್ಣ ಪರೀಕ್ಷೆಗೆ ಒಳಪಡಿಸಿ ಮಾಹಿತಿ ನೀಡಬೇಕು ಎಂದು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಆದೇಶಿಸಲಾಗಿದೆ. ಒಂದು ವೇಳೆ ನಿಫಾ ದೃಢಪಟ್ಟರೆ ಏನು ಮಾಡುವುದು ಎನ್ನುವುದಕ್ಕೆ ಸ್ಪಷ್ಟ ಮಾನದಂಡಗಳಿವೆ. ನಮ್ಮ ರಾಜ್ಯದಲ್ಲಿ ಇನ್ನೂ ಈ ವೈರಸ್ ಪ್ರವೇಶವೇ ಆಗಿಲ್ಲ. ಆಗದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ’ ಎನ್ನುವ ಮಾಹಿತಿ ನೀಡುತ್ತಾರೆ ಅವರು.

‘ನಿಫಾ ಒಂದು ಗಂಭೀರ ಸ್ವರೂಪದ ಸಾಂಕ್ರಾಮಿಕ ರೋಗ. ಆದರೆ ಹಾಗೆಂದು ಜನರ ಮನದಲ್ಲಿ ಅರ್ಥವಿಲ್ಲದ ಅನಗತ್ಯ ಕಳವಳ ಬಿತ್ತುವುದು ಸರಿ ಅಲ್ಲ. ವಿಕ್ಟೋರಿಯಾ ಆಸ್ಪತ್ರೆ, ರಾಜೀವ್‌ಗಾಂಧಿ ಇನ್‌ಸ್ಟಿಟ್ಯೂಟ್, ಕೆ.ಸಿ. ಜನರಲ್ ಆಸ್ಪತ್ರೆಗಳಲ್ಲಿ ನಿಫಾ ರೋಗಗಕ್ಕೆ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲಾಗಿದೆ. ಇದಕ್ಕಾಗಿಯೇ ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಅನುಮಾನ ಬಂದಲ್ಲಿ ಬಗೆಹರಿಸಿಕೊಳ್ಳಬೇಕು’ ಎನ್ನುವ ವಿನಂತಿ ವೈದ್ಯಕೀಯ ಶಿಕ್ಷಣ ನಿರ್ದೇಶಕ ಎಸ್‌. ಸಚ್ಚಿದಾನಂದ ಅವರದು.

ನಿಫಾ ವೈರಸ್‌ ಹರಡಲು ಬಾವಲಿಯೂ ಕಾರಣವಲ್ಲ, ಯಾವುದೇ ಹಣ್ಣಿನಿಂದಲೂ ಇದು ಹರಡಿಸಲ್ಲ ಎನ್ನುವುದೂ ದೃಢಪಟ್ಟಿಲ್ಲ. ಜನ ಆಲೋಚನೆ ಮಾಡದೇ ವದಂತಿಯನ್ನು ನಂಬುವುದೂ ಅಥವಾ ಹರಡುವುದು ಮಾಡಬಾರದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯನ್ನೂ ಹೊರಡಿಸಿದೆ. (ಸಹಾಯವಾಣಿ ಸಂಖ್ಯೆ– 104)
**
ವೈದ್ಯಕೀಯ ವಲಯ ತನ್ನ ಸಂಪೂರ್ಣ ಸಿದ್ಧತೆಯಲ್ಲಿದೆ. ನಿಫಾ ಲಕ್ಷಣಗಳು ಕಂಡುಬಂದಲ್ಲಿ ಅಗತ್ಯ ಪರೀಕ್ಷೆ ಹಾಗೂ ತಪಾಸಣೆಗಳನ್ನು ನಡೆಸಲಾಗುತ್ತದೆ. ಇದಕ್ಕೆ ಚಿಕಿತ್ಸೆ ಇಲ್ಲವಾದ್ದರಿಂದ ಯಾವ ರೀತಿಯ ಪೂರಕ ಚಿಕಿತ್ಸೆ ನೀಡಬಹುದೆನ್ನುವ ಬಗ್ಗೆ ಹಾಗೂ ಚಿಕಿತ್ಸೆ ನೀಡುವ ವೇಳೆ ಸಿಬ್ಬಂದಿ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ತರಬೇತಿ ನೀಡಲಾಗಿದೆ. ಆದರೆ ಈ ವೈರಸ್‌ ನಮ್ಮ ರಾಜ್ಯವನ್ನು ಪ್ರವೇಶ ಮಾಡಿಲ್ಲವಾದ್ದರಿಂದ ‘ಎಪಿಡೆಮಿಕ್‌ ಡ್ರಿಲ್‌’ ಮಾಡಿಲ್ಲ.
ಡಾ. ವಿನಯ್‌ ದೇವರಾಜ್‌, ಕನ್ಸಲ್ಟಂಟ್‌ (ಸಾಂಕ್ರಾಮಿಕ ರೋಗಗಳು) ಅಪೊಲೊ ಆಸ್ಪತ್ರೆ
**

ಬೆಂಗಳೂರಿನಲ್ಲಿ ಬಾವಲಿಗಳಿರುವ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ನಾಶಪಡಿಸಿ ಎಂದು ಜನರಿಂದ ಕರೆಗಳು ಬರುತ್ತಿವೆ. ಆದರೆ ಇಲ್ಲಿನ ಬಾವಲಿಗಳಲ್ಲಿ ಆ ಸೋಂಕು ದೃಢಪಟ್ಟಿಲ್ಲ. ಕಾರಣವಿಲ್ಲದೇ ಬಾವಲಿಗಳನ್ನು ನಾಶಪಡಿಸಲು ಆಗುವುದಿಲ್ಲ.
ಡಾ. ಬಿ.ಜಿ. ಪ್ರಕಾಶ್‌ ಕುಮಾರ್‌, ಎಸ್‌ಪಿಎಮ್‌ ಎನ್‌ಎಚ್‌ಎಂ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.