ADVERTISEMENT

ನಿಶಾಂತ್ ಮುಡಿಗೆ `ಐಡಿಯಾ ರಾಕ್ಸ್' ಗರಿ

ಪ್ರಜಾವಾಣಿ ವಿಶೇಷ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST
ನಿಶಾಂತ್ ಕುಮಾರ್
ನಿಶಾಂತ್ ಕುಮಾರ್   

ಆವತ್ತು ನಿಶಾಂತ್ ಕುಮಾರ್ ತುಂಬಾ ಎಕ್ಸೈಟ್ ಆಗಿದ್ದರು. ಐಡಿಯಾ ರಾಕ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದು  ಶಂಕರ್-ಎಹ್ಸಾನ್-ಲಾಯ್ ಅವರೊಂದಿಗೆ ಲೈವ್ ಆಗಿ ಹಾಡುವ ಅವಕಾಶ ಪಡೆದುಕೊಂಡಿದ್ದ ಅವರ ಮೊಗದಲ್ಲಿ ಸಂತೋಷ, ಉದ್ವೇಗ ಮೇಳೈಸಿತ್ತು. ಸೂಪರ್ ಸ್ಟಾರ್‌ಗಳ ಜತೆ ಹಾಡುವುದಕ್ಕೆ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎಂಬ ಕಾತರ ಕಾಣಿಸುತ್ತಿತ್ತು. ಅವರ ಉದ್ವೇಗಕ್ಕೆ ತೆರೆ ಬೀಳುವ ಸಮಯ ಬಂತು.

ನಿಶಾಂತ್ ವೇದಿಕೆ ಹತ್ತಿದರು. ಶಂಕರ್-ಎಹ್ಸಾನ್-ಲಾಯ್ ಮೂವರು ನಿಶಾಂತ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂರು. ಕಣ್ಣುಗಳಲ್ಲೇ ಆತ್ಮವಿಶ್ವಾಸ ತುಂಬಿದರು. ಸಂಗೀತ ವಾದ್ಯಗಳ ಸದ್ದು ತಾರಕಕ್ಕೇರಿತು. ನಿಶಾಂತ್ `ಜಿಂದಗಿ ನಾ ಮಿಲೆಂಗಿ ದುಬಾರ' ಚಿತ್ರದ ಗೀತೆಗೆ ದನಿಯಾದರು. ಗಾಯನ ಸುಂದರವಾಗಿ ಮೂಡಿಬಂತು. ನಿಶಾಂತ್ ಮೊಗದಲ್ಲಿ ಮಿಂಚಿನ ಸಂಚಾರ.ಹೀಗೆ, ಹಾಡುವುದಕ್ಕೂ ಮುನ್ನ  ಉದ್ವೇಗ, ಒತ್ತಡದಲ್ಲಿದ್ದಾಗಲೇ `ಮೆಟ್ರೊ'ದೊಂದಿಗೆ ನಿಶಾಂತ್ ಮಾತನಾಡಿದರು.

ಐಡಿಯಾ ರಾಕ್ಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದೀರಿ. ಹೇಗನ್ನಿಸುತ್ತಿದೆ?
ಹೃದಯದ ಬಡಿತ ಹೆಚ್ಚಾಗಿದೆ. ತುಂಬ ಖುಷಿ ಆಗುತ್ತಿದೆ. ನನಗೆ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ವರ್ಣಿಸಲು ಆಗುತ್ತಿಲ್ಲ. ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವಿನ ಮೆಟ್ಟಿಲು ಏರಿದ್ದು ನನ್ನ ಜೀನವದಲ್ಲಿ ಮರೆಯಲಾಗದಂತ ಸಂಗತಿ.

ಐಡಿಯಾ ರಾಕ್ಸ್ ಇಂಡಿಯಾ ಸ್ಪರ್ಧೆಯಲ್ಲಿ ನಿಮ್ಮ ಪ್ರಯಾಣ ಹೇಗಿತ್ತು?
ಒಮ್ಮೆ ಆನ್‌ಲೈನ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದೆ. ಆ ವೇಳೆ ಐಡಿಯಾ ರಾಕ್ಸ್ ಇಂಡಿಯಾ ಸ್ಪರ್ಧೆಯ ಜಾಹೀರಾತು ನನ್ನ ಕಣ್ಣಿಗೆ ಬಿತ್ತು. ಕುತೂಹಲ ಗರಿಗೆದರಿತು. ಆ ಕ್ಷಣವೇ ನಾನು ಕರೆಮಾಡಿ ಆಡಿಷನ್‌ನಲ್ಲಿ ಪಾಲ್ಗೊಂಡೆ. ಅದಾಗಿ ಕೆಲ ದಿನದ ನಂತರ ಐಡಿಯಾ ಕಡೆಯಿಂದ ನನಗೊಂದು ಕರೆಬಂತು. ಹದಿನೈದು ಜನರ ಶಾರ್ಟ್‌ಲಿಸ್ಟ್‌ನಲ್ಲಿ ನೀವು ಇದ್ದೀರಾ ಎಂದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಆನಂತರ, ಆಯ್ಕೆಯಾದ ಹದಿನೈದೂ ಮಂದಿ ಮತ್ತೊಂದು ಆಡಿಷನ್‌ನಲ್ಲಿ ಭಾಗವಹಿಸಿದೆವು. ಘಟಾನುಘಟಿ ಸ್ಪರ್ಧಿಗಳಿದ್ದರು. ತೀರ್ಪುಗಾರರಾಗಿ ಮನೀಶ್‌ನಾಥ್ ಮತ್ತು ಜಿಮಿ! ನಾನು ಈ ಆಡಿಷನ್‌ನಲ್ಲಿ `ಬಿಗಿ ಬಿಗಿ ಸೇ ರಾಥ್' ಹಾಗೂ `ಜೂಲಿ' ಚಿತ್ರದ `ದಿಲ್ ಕ್ಯಾ ಕರೆ ಜಬ್ ಕಿಸಿಕೋ' ಗೀತೆಗಳನ್ನು ಹಾಡಿದೆ. ಸ್ಪರ್ಧೆಯಲ್ಲಿದ್ದ, ಅಂತರ ಎಂಬ ಹುಡುಗಿ ಶಾಸ್ತ್ರೀಯ ಸಂಗೀತ ಪ್ರತಿಭೆ ಹಾಗೂ ಜಿತೇಂದ್ರ ರೆಟ್ರೊ ಶೈಲಿಯ ಗೀತೆಗಳನ್ನು ಅದ್ಭುತವಾಗಿ ಹಾಡುತ್ತಿದ್ದರು. ಇಷ್ಟೊಂದು ಪ್ರತಿಭೆ ಇರುವ ಸ್ಪರ್ಧಿಗಳ ನಡುವೆ ನಾನು ಗೆಲುವು ಸಾಧಿಸುತ್ತೇನಾ ಎಂಬ ಅನುಮಾನವಿತ್ತು. ಕೊನೆಗೂ ಅದೃಷ್ಟ ನನಗೆ ಒಲಿಯಿತು.

ನೀವು ಬೆಂಗಳೂರಿನವರಾ? ಏನು ಕೆಲಸ ಮಾಡುತ್ತಿದ್ದೀರಿ?
ಇಲ್ಲ. ನಾನು ಹುಟ್ಟಿ ಬೆಳೆದಿದ್ದು ಪಾಟ್ನಾದಲ್ಲಿ. ಓದುವ ಸಲುವಾಗಿ ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದೆ. ನಗರದಲ್ಲಿರುವ ಅಲಯೆನ್ಸ್ ಇನ್ಫೋ ಸಿಟಿ ಕಾಲೇಜಿನಲ್ಲಿ ಎಂಬಿಎ ಮುಗಿಸಿ, ಈಗ ಐಟಿಸಿ ಇನ್ಫೋಟೆಕ್ ಕಂಪೆನಿಯಲ್ಲಿ ಬಿಜಿನೆಸ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೇನೆ.

ಸಂಗೀತದ ಹಿನ್ನೆಲೆ?
ನಾನು ಶಾಸ್ತ್ರೀಯವಾಗಿ ಯಾವುದೇ ಸಂಗೀತವನ್ನು ಕಲಿತಿಲ್ಲ. ಆದರೆ, ಸಂಗೀತ ನನಗೆ ಗೀಳು. ನಮ್ಮದೊಂದು ಸಂಗೀತ ತಂಡವಿದೆ. ಹೆಸರು ಬಫರ್‌ಜೋನ್. ತಂಡ ಕಟ್ಟಿಕೊಂಡ ಮೇಲೆ ನಗರದ ಹಲವೆಡೆ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದೇವೆ. ತೀರ್ಥಂಕರ್, ಆಲನ್, ದಿಲೀಪ್ ಹಾಗೂ ಧ್ಯಾನ್‌ರಾಗ್ ನಮ್ಮ ತಂಡದ ಇತರೆ ಸದಸ್ಯರು. ಈ ತಂಡದಲ್ಲಿ ನಾನು ಗಾಯಕ ಮತ್ತು ಗಿಟಾರಿಸ್ಟ್
ಪಾತ್ರವನ್ನು ನಿರ್ವಹಿಸುತ್ತೇನೆ.

ಬೆಂಗಳೂರಿಗರ ಸಂಗೀತ ಪ್ರೀತಿ ಬಗ್ಗೆ ಏನ್ನನಿಸುತ್ತದೆ?
ಬೆಂಗಳೂರಿಗರು ಸೂಕ್ಷ್ಮ ಪ್ರವೃತ್ತಿಯುಳ್ಳವರು. ಒಳ್ಳೆ ಸಂಗೀತ ಕಾರ್ಯಕ್ರಮವಿದ್ದರೆ ಬಂದು ಆಸ್ವಾದಿಸುತ್ತಾರೆ. ಕಲಾವಿದರಿಗೆ ಗೌರವ ಕೊಡುತ್ತಾರೆ.

ಸ್ಪರ್ಧೆಯಲ್ಲಿ ಗೆದ್ದಿದ್ದೀರಿ. ಅವಕಾಶದ ಹೆಬ್ಬಾಗಿಲು ತೆರೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆಯಾ?
ಐಡಿಯಾ ವಿಲ್ ಚೇಂಚ್ ಮೈ ಲೈಫ್. ಅವಕಾಶ ಸಿಕ್ಕುತ್ತದೆ ಎಂಬ ನಂಬಿಕೆ ಇದೆ. ಆದರೆ, ಅತಿಯಾದ ಆತ್ಮವಿಶ್ವಾಸ ಇಟ್ಟುಕೊಳ್ಳುವುದಿಲ್ಲ. ಶಂಕರ್-ಎಹ್ಸಾನ್-ಲಾಯ್ ಅವರಂತಹ ದೊಡ್ಡ ಕಲಾವಿದರೊಂದಿಗೆ ಹಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನನ್ನ ಹಾಡುಗಾರಿಕೆ ಅವರಿಗೆ ಇಷ್ಟವಾದರೆ ಅವರ ಆಲ್ಬಂ, ಸಿನಿಮಾಗಳಲ್ಲಿ ಅವಕಾಶ ಸಿಗಬಹುದು ಎಂಬ ಆಶಾಭಾವನೆ ಇದೆ.

ಈ `ತ್ರಿಮೂರ್ತಿ'ಗಳ ಬಗ್ಗೆ...
ಮೂವರು ಮೇರು ಪ್ರತಿಭೆಗಳು. ಸಹೃದಯಿಗಳು. ಸಂಗೀತ ದಿಗ್ಗಜರು. ಇಷ್ಟು ಬಿಟ್ಟು ನನಗೆ ಬೇರೇನೂ ಹೇಳಲು ತೋಚುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT