ADVERTISEMENT

ನೂಜಿವೀಡು ಸೀಡ್ಸ್‌ಗೆ ಬಯೋಅಗ್ರಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ದೇಶದ ಮುಂಚೂಣಿಯ ಬೀಜ ಸಂಸ್ಥೆಯಾಗಿರುವ ನೂಜಿವೀಡು ಸೀಡ್ಸ್ ಲಿಮಿಟೆಡ್ (ಎನ್‌ಎಸ್‌ಎಲ್)ಗೆ ವರ್ಷದ ಬಯೋ ಅಗ್ರಿ ಕಂಪೆನಿ -2012 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ನೂಜಿವೀಡು ಸೀಡ್ಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮೇಶ್ ವಿಶ್ವನಾಥನ್ ಅವರು ಸಂಸ್ಥೆಯ ಪರವಾಗಿ ನಗರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ  ಪ್ರಶಸ್ತಿಯನ್ನು ಸ್ವೀಕರಿಸಿದರು.

ಅಂದಹಾಗೆ, ನೂಜಿವೀಡು ಸೀಡ್ಸ್ ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸತತವಾಗಿ ನಾಲ್ಕನೇ ಬಾರಿಯೂ ಗೆದ್ದುಕೊಂಡಿದೆ. ಸಂಸ್ಥೆಯು ಈ ಹಿಂದೆ 2008, 2010, 2011ರಲ್ಲಿ ಪ್ರಶಸ್ತಿ ಪಡೆದಿತ್ತು. `ಬಯೋಸ್ಪ್ರೆಕ್ಟ್ರಮ್ ಏಬಲ್ ಅವಾರ್ಡ್ಸ್' ಭಾರತೀಯ ಜೈವಿಕ ತಂತ್ರಜ್ಞಾನ ಮತ್ತು ಕೃಷಿ ಕೈಗಾರಿಕೆಯಲ್ಲಿ ಅತ್ಯಂತ ನಂಬಿಕಾರ್ಹ ಪ್ರಶಸ್ತಿಗಳಲ್ಲಿ ಒಂದಾಗಿದ್ದು, ಬಯೋಸ್ಪ್ರೆಕ್ಟ್ರಮ್ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮಗಳ ಸಂಸ್ಥೆ ಜೊತೆಯಾಗಿ ನಡೆಸಿದ ಸಮೀಕ್ಷೆ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಮೀಕ್ಷೆಯನ್ನು 2012ರಲ್ಲಿ ನಡೆಸಲಾಗಿದ್ದು ಇದರ ವರದಿಯನ್ನು 11 ಜನ ಗಣ್ಯ ತೀರ್ಪುಗಾರರ ಮಂಡಳಿ ಮೌಲ್ಯೀಕರಿಸಿತ್ತು.

ವಂಶವಾಹಿ ಎಂಜಿನಿಯರಿಂಗ್ ಮತ್ತು ಜೈವಿಕ ತಂತ್ರಜ್ಞಾನದ ಅಂತಾರಾಷ್ಟ್ರೀಯ ಸಂಸ್ಥೆ (ಐಸಿಜಿಇಬಿ)ಯ ನಿರ್ದೇಶಕ ಪ್ರೊ.ವೀರೆಂದರ್ ಎಸ್ ಚೌಹಾನ್ ಮತ್ತು ಮಲೇರಿಯಾ ಗ್ರೂಪ್ ಐಸಿಜಿಇಬಿನ ಪ್ರಮುಖ ತನಿಖಾಧಿಕಾರಿ ಡಾ.ಚೇತನ್ ಚಿಟ್ನಿಸ್ ಅವರು ಈ ಸಮಿತಿಯ ನೇತೃತ್ವ ವಹಿಸಿದ್ದರು.

`ಸತತವಾಗಿ ನಾಲ್ಕನೇ ಬಾರಿಗೆ ಈ ಪ್ರಶಸ್ತಿ ಪಡೆಯುವುದು ಹೆಮ್ಮೆಯ ಸಂಗತಿ. ಇದು ನಮ್ಮ ತಂಡದ ಉತ್ಸಾಹ ಮತ್ತು ನಾಯಕತ್ವದ ಗುಣಗಳನ್ನು ಪ್ರತಿಬಿಂಬಿಸುತ್ತದೆ. ಗುಣಮಟ್ಟ ಹಾಗೂ ಕೈಗೆಟುಕುವ ದರದ ಬೀಜಗಳನ್ನು ರೈತರಿಗೆ ನೀಡುವಲ್ಲಿ ನಾವು ಸತತವಾಗಿ ಶ್ರಮಿಸುತ್ತಿದ್ದೇವೆ' ಎಂದರು ನೂಜಿವೀಡು ಸೀಡ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಪ್ರಭಾಕರ್ ರಾವ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.