ADVERTISEMENT

ನೂರನೇ ಹೆಜ್ಜೆಯಿರಿಸಿದ ರಿಲಯನ್ಸ್ ಫುಟ್‌ಪ್ರಿಂಟ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2012, 19:30 IST
Last Updated 27 ಜುಲೈ 2012, 19:30 IST
ನೂರನೇ ಹೆಜ್ಜೆಯಿರಿಸಿದ ರಿಲಯನ್ಸ್ ಫುಟ್‌ಪ್ರಿಂಟ್
ನೂರನೇ ಹೆಜ್ಜೆಯಿರಿಸಿದ ರಿಲಯನ್ಸ್ ಫುಟ್‌ಪ್ರಿಂಟ್   

ಒಂದೇ ಸೂರಿನಡಿ ಬರೋಬ್ಬರಿ ಐವತ್ತು ಬ್ರಾಂಡ್‌ಗಳ ಪಾದರಕ್ಷೆಗಳು ಗ್ರಾಹಕರಿಗೆ ದೊರಕುವಂತೆ ಮಾಡಿದ ಹೆಗ್ಗಳಿಕೆ `ರಿಲಯನ್ಸ್ ಫುಟ್‌ಪ್ರಿಂಟ್~ನದು. ರಿಲಯನ್ಸ್ ರಿಟೇಲ್‌ನ ಅಂಗಸಂಸ್ಥೆಗಳಲ್ಲೊಂದಾದ ರಿಲಯನ್ಸ್ ಫುಟ್‌ಪ್ರಿಂಟ್ ತನ್ನ ಮೊದಲ ಪಾದರಕ್ಷೆ ಮಳಿಗೆಯನ್ನು ತೆರೆದಿದ್ದು ನಗರದ ಇಂದಿರಾನಗರದಲ್ಲಿ. ಅದು 2007ರಲ್ಲಿ. ಅಲ್ಲಿಂದೀಚೆ ದೇಶದ ಉದ್ದಗಲಕ್ಕೂ ಹೆಜ್ಜೆಯೂರುತ್ತಾ ಬಂದ `... ಫುಟ್‌ಪ್ರಿಂಟ್~ ಕೇರಳದ ಕಣ್ಣೂರಿನಲ್ಲಿ ತನ್ನ 100ನೇ ಮಳಿಗೆಯನ್ನು ತೆರೆಯುವುದರೊಂದಿಗೆ ಶತಕ ಬಾರಿಸಿದೆ.

ಬೆಂಗಳೂರಿನಲ್ಲಿ ಶುರುವಾದ ಯಾನ 100ನೇ ಹೆಜ್ಜೆಯನ್ನೂರಿದ ಸಂಭ್ರಮವನ್ನು ನಗರದಲ್ಲಿ ಗುರುವಾರ ಆಚರಿಸಿದ `...ಫುಟ್‌ಪ್ರಿಂಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣನ್ ಶಂಕರ್, ಐದು ವರ್ಷದೊಳಗೆ ಇಷ್ಟೊಂದು ಯಶಸ್ಸು ಗಳಿಸಲು ಸಾಧ್ಯವಾದ ಬಗೆ ಮತ್ತು ಟ್ರೆಂಡ್ ಬಗ್ಗೆ ವಿವರಿಸಿದ್ದು ಹೀಗೆ-

ಪಾದರಕ್ಷೆಯ ಶೋಕಿಗಾಗಿ...
ಪಾದರಕ್ಷೆ, ಜೀವನಶೈಲಿಯ ಒಂದು ಭಾಗವಾಗಿಬಿಟ್ಟಿದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರವಲ್ಲ ಮನೆಯಿಂದಾಚೆ ಹೋಗುವ ಪ್ರತಿ ಸಲವೂ, ಪ್ರತಿದಿನವೂ ಉಡುಗೆ ತೊಡುಗೆ ಒಂದೇ ಬಣ್ಣದ್ದಿರಬೇಕು ಎಂದು ಜನ ಈಗ ಯೋಚಿಸುತ್ತಾರೆ. ತೊಡುಗೆಗಳ ಪಟ್ಟಿಯಲ್ಲಿ ಪಾದರಕ್ಷೆಗೆ ಮೊದಲ ಸ್ಥಾನ. ಇದು ಈಗಿನ ಟ್ರೆಂಡ್. ಆದರೆ ಮನಮೆಚ್ಚುವ ಪಾದರಕ್ಷೆಗಳಿಗಾಗಿ ಗ್ರಾಹಕರು ಅಲೆದಾಡಬೇಕಾದ ಅನಿವಾರ್ಯತೆಯಿತ್ತು. ಆಕಾರ, ವಿನ್ಯಾಸ, ಬ್ರಾಂಡ್ ಮತ್ತು ದರ ಈ ಎಲ್ಲವೂ ಸಮಾಧಾನಕರವಾದರಷ್ಟೇ ಖರೀದಿಸುವ ಜಾಣ ಗ್ರಾಹಕರೇ ಹೆಚ್ಚು ಇರುವುದು. ಈ ಹುಡುಕಾಟವನ್ನು ತಪ್ಪಿಸುವ ಉದ್ದೇಶದಿಂದ, `ಒಂದೇ ಸೂರಿನಡಿ ಹಲವು ಬ್ರಾಂಡ್~ ಎಂಬ ಪರಿಕಲ್ಪನೆಯ ಮಳಿಗೆಯಾಗಿ `ರಿಲಯನ್ಸ್ ಫುಟ್‌ಪ್ರಿಂಟ್~ ಅಸ್ತಿತ್ವಕ್ಕೆ ಬಂತು. ಐದೇ ವರ್ಷದಲ್ಲಿ ನೂರು ಮಳಿಗೆ ಸ್ಥಾಪಿಸುವ ಸಾಹಸ ಮಾಡಲು ಸಾಧ್ಯವಾಗಿರುವ ಹಿಂದಿನ ಗುಟ್ಟೂ ಇದೇ.

ಮಳಿಗೆಗಳ ವೈಶಿಷ್ಟ್ಯ...
ರಿಲಯನ್ಸ್ ಫುಟ್‌ಪ್ರಿಂಟ್‌ನಲ್ಲಿ ನಮ್ಮದೇ ಬ್ರಾಂಡ್‌ನ ಶೇ 40ರಷ್ಟು ಪಾದರಕ್ಷೆಗಳಲ್ಲದೆ ದೇಶೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಐವತ್ತಕ್ಕೂ ಹೆಚ್ಚು ಪ್ರಮುಖ ಬ್ರಾಂಡ್‌ಗಳು ಲಭ್ಯ. ಬರೋಬ್ಬರಿ 1,200 ಆಯ್ಕೆಗಳು, 18ಸಾವಿರಕ್ಕೂ ಅಧಿಕ ಜೋಡಿ ಪಾದರಕ್ಷೆಗಳು ಒಂದೇ ಸೂರಿನಡಿ ಸಿಗುವುದು ನಮ್ಮ ವೈಶಿಷ್ಟ್ಯ.

ಸಂಭ್ರಮಕ್ಕೆ ಸೆಲೆಬ್ರಿಟಿಗಳೇ ಬೇಕಿಲ್ಲ...
ನೂರು ಮಳಿಗೆಗಳನ್ನು ಹೊಂದಿರುವುದು ನಮಗೆ ಹೆಮ್ಮೆ. ಈ ಯಶಸ್ಸಿಗೆ ಗ್ರಾಹಕರು ಮಾತ್ರ ಕಾರಣರಲ್ಲ. ಅದರ ಹಿನ್ನೆಲೆಯಲ್ಲಿ ಸಂಸ್ಥೆಯ ನೌಕರರ ಪಾತ್ರವಿದೆ. ಆದ್ದರಿಂದ, ಸೆಲೆಬ್ರಿಟಿಗಳನ್ನು ಆಹ್ವಾನಿಸಿ ಸಂಭ್ರಮವನ್ನು ಹಂಚಿಕೊಳ್ಳುವುದಕ್ಕಿಂತ ಸಂಸ್ಥೆಯ ನೌಕರರ ಕುಟುಂಬ ಸದಸ್ಯರು ಸೆಲೆಬ್ರೇಷನ್‌ನ ಭಾಗವಾಗಬೇಕು ಎಂಬ ಆಶಯ ನಮ್ಮದು.

ಗ್ರಾಹಕರನ್ನು ಓಲೈಸಲಿಕ್ಕಾಗಿ...
ಗ್ರಾಹಕರಿಗೆ ವರ್ಷದುದ್ದಕ್ಕೂ ಏನಾದರೊಂದು ಕೊಡುಗೆ ಕೊಡುವುದು ರಿಲಯನ್ಸ್ ಫುಟ್‌ಪ್ರಿಂಟ್‌ನ ಪರಿಪಾಠ. ಪ್ರತಿ ತಿಂಗಳಿಗೊಂದರಂತೆ ಯೋಜನೆ ಹಾಕಿಕೊಂಡಿರುತ್ತೇವೆ. ಅದರಂತೆ ಸದಾ ಒಂದಿಲ್ಲೊಂದು ಕೊಡುಗೆ ಗ್ರಾಹಕರಿಗೆ ಸಿಗುತ್ತದೆ. ದರ ಕಡಿತ, ಹಬ್ಬದ ಕೊಡುಗೆ ಇತ್ಯಾದಿ ಸಾಂದರ್ಭಿಕ ಕೊಡುಗೆಗಳಲ್ಲದೆ, ಡ್ರೈಕ್ಲೀನ್ ಹಾಗೂ ಪೆಡಿಕ್ಯೂರ್ ಸೇವೆಯನ್ನು ಉಚಿತವಾಗಿ ನೀಡಿರುವುದು ನಮ್ಮ ವೈಶಿಷ್ಟ್ಯ.

ಕನಸು, ಗುರಿ...
ಬೆಂಗಳೂರಿನಲ್ಲಿ ಒಂಬತ್ತು ಮಳಿಗೆಗಳಿದ್ದು, ರಾಜ್ಯದಲ್ಲಿ ಒಟ್ಟು14 ಇವೆ. 17 ರಾಜ್ಯಗಳ 67 ನಗರಗಳಲ್ಲಿ ನಾವು ಹೆಜ್ಜೆಯೂರಿದ್ದೇವೆ. ವ್ಯವಹಾರ ಕ್ಷೇತ್ರವನ್ನು ಪ್ರತಿವರ್ಷವೂ ವಿಸ್ತರಿಸುತ್ತಿದ್ದೇವೆ. ಅದರಂತೆ ರಾಜ್ಯದಲ್ಲಿ 20 ಮಳಿಗೆ ತೆರೆಯುವುದು, ಈಶಾನ್ಯ ಭಾರತದಲ್ಲಿ ಮಳಿಗೆ ಆರಂಭಿಸುವುದು, ಜಮ್ಮು ಮತ್ತು ಕಾಶ್ಮೀರಕ್ಕೂ ರಿಲಯನ್ಸ್ ಫುಟ್‌ಪ್ರಿಂಟ್‌ನ್ನು ಪರಿಚಯಿಸುವುದು ನಮ್ಮ ಗುರಿ.

ಪಾದರಕ್ಷೆಯ ಆನ್‌ಲೈನ್ ಮಾರಾಟಕ್ಕೆ ಅತ್ಯುತ್ತಮ ಸ್ಪಂದನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಮಾರಾಟ ವ್ಯವಸ್ಥೆಯೂ ಶೀಘ್ರ ಆರಂಭವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.