ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡಾನ್ಸಿಂಗ್ ಸ್ಟಾರ್ ಜೂನಿಯರ್’ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಟ್ರೋಫಿ ಗಳಿಸಿ ವಿಜೇತರಾದವರು ಒಂದೆಡೆಯಾದರೆ, ತೆರೆಮರೆಯಲ್ಲಿ ಕೆಲಸ ಮಾಡಿದ ಹಲವರು ಈ ಮೂಲಕ ಮನ್ನಣೆಗೆ ಪಾತ್ರರಾಗಿದ್ದಾರೆ. ನೃತ್ಯ ಸಂಯೋಜಕ ಪವನ್ ಕೂಡ ಅಂಥವರಲ್ಲಿ ಒಬ್ಬರು.
ಡಾನ್ಸಿಂಗ್ ಸ್ಟಾರ್-2 ವಿಜೇತ ನಟ ಆನಂದ್ ಹಾಗೂ ಡಾನ್ಸಿಂಗ್ ಸ್ಟಾರ್ ಜೂನಿಯರ್‌ನಲ್ಲಿ ಟ್ರೋಫಿ ಪಡೆದ ಮುರಳಿ ಈ ಇಬ್ಬರಿಗೂ ನೃತ್ಯ ನಿರ್ದೇಶನ ಮಾಡಿದ್ದು ಪವನ್ ಅವರೇ. ಅವರ ಈ ಸಾಧನೆಯ ಹಿಂದೆ ಸಾಗಿಬಂದ ಕಷ್ಟದ ದಾರಿಯ ಶ್ರಮವಿದೆ.
ಮಗ ಸರ್ಕಾರಿ ಕೆಲಸಕ್ಕೆ ಸೇರಬೇಕು ಎನ್ನುವುದು ಪವನ್ ಪೋಷಕರ ಆಸೆಯಾಗಿತ್ತು. ಆದರೆ ಪವನ್ ಅವರಿಗೆ ನೃತ್ಯದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲ. ಪವನ್ ಅವರಿಗೆ ನೃತ್ಯದ ಮೇಲೆ ವ್ಯಾಮೋಹ ಮೂಡುವುದಕ್ಕೆ ಕಾರಣ ಗೆಳೆಯರು. ನೃತ್ಯದ ಗಂಧಗಾಳಿ ಇದ್ದರೂ ಕಾಲೇಜಿನಲ್ಲಿ ಸ್ನೇಹಿತರ ಡಾನ್ಸ್‌ನಿಂದ ಆಕರ್ಷಿತರಾಗಿ, ಅವರಿಗೆ ಸವಾಲೆಸೆದು ನೃತ್ಯದಲ್ಲಿ ತೊಡಗಿಕೊಂಡರು.
‘ನಾನು ದ್ವೀತೀಯ ವರ್ಷದ ಡಿಪ್ಲೊಮಾ ಓದುತ್ತಿದ್ದಾಗ ಕಾಲೇಜು ಸಮಾರಂಭವೊಂದರಲ್ಲಿ ನಾನೇ ನೃತ್ಯ ಕಲಿತು ಮೊದಲ ಬಾರಿ ಪ್ರದರ್ಶಿಸಿದೆ. ಅದಕ್ಕೆ ಸಿಕ್ಕ ಜನರ ಮೆಚ್ಚುಗೆ, ಹೊಗಳಿಕೆಗಳೇ ನೃತ್ಯ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು’ ಎನ್ನುತ್ತಾರೆ ಪವನ್. ಇದಾದ ನಂತರ ಶಾಸ್ತ್ರೀಯವಾಗಿ ನೃತ್ಯ ಕಲಿಯಲು ಪ್ರಾರಂಭಿಸಿದ ಅವರಿಗೆ ಉಮೇಶ್ ಮೊದಲ ಗುರುಗಳು. ನಂತರ ಕಲೈ ಮಾಸ್ಟರ್ ಅವರ ಬಳಿ ಹೆಚ್ಚಿನ ನೃತ್ಯ ಕಲಿಕೆ ನಡೆಸಿದರು. ‘ಗೆಳೆಯ ಭೂಷಣ್ ಅವರಿಂದಲೂ ನೃತ್ಯ ಪ್ರಕಾರಗಳನ್ನು ಕಲಿತಿದ್ದೇನೆ’ ಎನ್ನುವ ಪವನ್ ಅವರಿಗೆ ನೃತ್ಯ ಎಂಬುದು ನಿರಂತರ ಕಲಿಕೆಯ ಕ್ಷೇತ್ರ.
‘ನಮ್ಮದು ಕಲಾವಿದರ ಕುಟುಂಬವಲ್ಲ. ಅಪ್ಪನಿಗೆ ನಾನು ನೃತ್ಯ ಕಲಿಯುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ನೃತ್ಯದ ಮೇಲಿನ ಆಸಕ್ತಿಯಿಂದ ನಾನು ಡಿಪ್ಲೊಮಾ ಓದನ್ನು ಅರ್ಧಕ್ಕೆ ನಿಲ್ಲಿಸಿದೆ. ಇದು ಮನೆಯವರ ಆಕ್ರೋಶಕ್ಕೆ ಕಾರಣವಾಯಿತು. ಆ ದಿನಗಳಲ್ಲಿ ಮನೆಯವರ ಪ್ರೀತಿಯಿಂದಲೂ ಬಹುಕಾಲ ದೂರವಾಗಿದ್ದೆ’ ಎಂದು ಕಲಿಕೆಯ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
‘ಡಾನ್ಸ್ ಕಲಿಯಲು ಅಪ್ಪ ದುಡ್ಡು ಸಹ ಕೊಡುತ್ತಿರಲಿಲ್ಲ. ಕಲೈ ಮಾಸ್ಟರ್ ಅವರ ತರಗತಿಗೆ ನಾಗರಬಾವಿಯಿಂದ ಬಸವೇಶ್ವರ ನಗರಕ್ಕೆ ನಡೆದು ಹೋಗುತ್ತಿದ್ದೆ’ ಎನ್ನುವ ಪವನ್ ಅವರಿಗೆ ಮನೆಯವರ ಬೆಂಬಲವಿಲ್ಲದೆ ಇಷ್ಟು ಸಾಧನೆ ಮಾಡಿದ ಬಗ್ಗೆ ಖುಷಿಯಿದೆ. ಪ್ರಭುದೇವ ಹಾಗೂ ಪುನೀತ್ ರಾಜ್ ಕುಮಾರ್ ಅವರೇ ಪವನ್ ನೃತ್ಯಕ್ಕೆ ಪ್ರೇರಣೆ.
‘ನನ್ನ ಪ್ರತಿಭೆ ಗುರುತಿಸಿ, ವಾಹಿನಿಗಳಲ್ಲಿ ಅವಕಾಶಗಳನ್ನು ನೀಡಿದವರು ಮಧುಸರ್. ‘ಸೂಪರ್ ಮಿನಿಟ್’ ನನ್ನ ಮೊದಲ ರಿಯಾಲಿಟಿ ಷೋ. ಅಲ್ಲಿಂದ ನೃತ್ಯ ನಿರ್ದೇಶಕನಾಗಿ ನನ್ನ ಪಯಣ ಪ್ರಾರಂಭವಾಯಿತು’ ಎನ್ನುವ ಪವನ್ ಅವರಿಗೆ ಅವರ ನಿರ್ದೇಶನ ಮೆಚ್ಚಿ ಹಲವಾರು ಅವಕಾಶಗಳು ಒದಗಿಬಂದಿವೆ. ಈಗಾಗಲೇ ಜಲಪಾತೋತ್ಸವ, ಹಂಪಿ ಉತ್ಸವ, ದಸರಾ ಉತ್ಸವ, ಬೆಂಗಳೂರು ಉತ್ಸವ ಹಾಗೂ ಕನ್ನಡ, ತಮಿಳು, ತೆಲುಗು ವಾಹಿನಿಯ ಸೇರಿ ಅನೇಕ ಕಾರ್ಯಕ್ರಮಗಳಲ್ಲಿ ನೃತ್ಯ ನಿರ್ದೇಶನ ಮಾಡಿದ್ದಾರೆ.
ಡಾನ್ಸ್‌ನಿಂದಲೇ ಫಿಟ್‌ನೆಸ್
ಊಟದ ವಿಚಾರದಲ್ಲಿ ಪಥ್ಯವನ್ನೇನೂ ಪಾಲಿಸದ ಪವನ್ ಅವರಿಗೆ ಎಲ್ಲಾ ತಿಂಡಿಗಳು ಇಷ್ಟ. ‘ಡಾನ್ಸ್ ಮಾಡುವುದರಿಂದಲೇ ದೇಹ ಫಿಟ್ ಆಗುವುದರಿಂದ ಡಯೆಟ್ ಮಾಡುವ ಗೋಜಿಗೆ ಹೋಗುವುದಿಲ್ಲ’ ಎನ್ನುತ್ತಾರೆ ಪವನ್. ‘ಕಲಾವಿದರಲ್ಲಿ ಸಮರ್ಪಣಾ ಭಾವನೆ ಇರಬೇಕು, ಡಾನ್ಸ್ ಎಂದರೆ ಶೋಕಿಯಲ್ಲ, ಅದು ನಮ್ಮ ಮನಸ್ಸಿನಲ್ಲಿ ಇರಬೇಕು. ಆಗ ಮಾತ್ರ ಸಾಧನೆ ಮಾಡೋಕೆ ಸಾಧ್ಯ’ ಎನ್ನುವುದು ಕಲಿಕೆ ಬಗ್ಗೆ ಪವನ್ ಮಾತು.
‘ಡಾನ್ಸಿಂಗ್ ಸ್ಟಾರ್–2’ ಹಾಗೂ ‘ಡಾನ್ಸಿಂಗ್ ಸ್ಟಾರ್ ಜೂನಿಯರ್’ ಷೋಗಳ ವಿಜೇತರ ಬಗ್ಗೆ ಪವನ್ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ: ‘ಆನಂದ್ ಅವರು ತುಂಬಾ ಬದ್ಧತೆ ಇರುವ ಕಲಾವಿದ. ಹೇಳಿಕೊಟ್ಟಿದ್ದನ್ನು ಅವರು ಶ್ರಮ ಪಟ್ಟು ಅಭ್ಯಾಸ ಮಾಡುತ್ತಿದ್ದರು. ತಾನೊಬ್ಬ ನಿರ್ದೇಶಕ, ನಿರ್ಮಾಪಕ, ನಟ ಎಂಬ ಅಹಂ ಸ್ವಲ್ಪವೂ ಅವರಲ್ಲಿಲ್ಲ. ಸರಳ ವ್ಯಕ್ತಿತ್ವ ಅವರದು. ಮುರಳಿಯ ಕುಟುಂಬದವರು ಅರ್ಥಿಕವಾಗಿ ಸಬಲರೇನಲ್ಲ. ಆದರೆ ಅವನಲ್ಲಿರುವ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆತ ಹೇಳಿದ್ದನ್ನು ಬೇಗ ಗ್ರಹಿಸುತ್ತಾನೆ. ತುಂಬಾ ಕಷ್ಟವಾದ ನೃತ್ಯವನ್ನು ಇಷ್ಟ ಪಟ್ಟು ಅಭ್ಯಾಸ ಮಾಡುತ್ತಿದ್ದ. ಆತನ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೃತ್ಯ ನಿರ್ದೇಶನದ ಕನಸು
ಅವರು ಇಷ್ಟಕ್ಕೆ ತೃಪ್ತರಾಗಿಲ್ಲ. ಚಲನಚಿತ್ರಗಳಲ್ಲಿ ನೃತ್ಯ ನಿರ್ದೇಶನ ಮಾಡಬೇಕೆಂಬುದು ಅವರ ಬಹುದೊಡ್ಡ ಕನಸು. ‘ರವಿಚಂದ್ರನ್ ಅವರು ತಮ್ಮ ಮಗನ ಮುಂದಿನ ಚಿತ್ರಕ್ಕೆ ನೃತ್ಯ ನಿರ್ದೇಶಿಸಲು ಅವಕಾಶ ನೀಡಿದ್ದಾರೆ. ಅಲ್ಲದೆ ಡಾನ್ಸರ್ ಮಯೂರಿ ಅವರು ಸಹ ತಮ್ಮ ಹಲವಾರು ಕಾರ್ಯಕ್ರಮಗಳಲ್ಲಿ ಅವಕಾಶ ನೀಡಿದ್ದಾರೆ’ ಎಂದು ಮುಂದಿನ ಯೋಜನೆಗಳ ಬಗ್ಗೆ ಹೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.