ADVERTISEMENT

ನೆನಪಾಗ್ತಾಳ ಹೆತ್ತವ್ವ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಸಂಕ್ರಾಂತಿ ಅಂದ ಕೂಡ್ಲೆ ಎಳ್ಳು ಬೆಲ್ಲ ಬೀರುವ ಸಂಭ್ರಮ ಈ ಊರೊಳಗ ಎದ್ದು ಬಿಡ್ತದ.
ಉಳದ ದಿನದಾಗ ಕಪಾಟು ಸೇರಿ, ಕಮಟು ನಾರುವ ಲಂಗ ಜಾಕೀಟುಗಳು ಅಂದು ಗರಿಗರಿ ಇಸ್ತ್ರಿ ಮಾಡಿ, ಛಂದಗೆ ಕಬ್ಬಿನ ಗಳ ಇಟ್ಕೊಂಡು, ಬೆಲ್ಲದಚ್ಚಿನ ಜೊತಿಗೆ ಸಕ್ರಿ ಆರತಿ ಇಟ್ಕೊಂಡು, ಎಳ್ಳು-ಬೆಲ್ಲದ ಮಿಶ್ರಣವನ್ನು ಕೊಡಾಕ ಬಾಲೇರು ಹೊರಡ್ತಾರ. ಪ್ರತಿ ಮನಿಯಿಂದ ಒಂದೊಂದು `ಪುಟ್ಟ ಗೌರಿ~ ಸಂತೋಷವನ್ನೇ ಬೀರಾಕ ಹೊಂಟಂಗ ಕಾಣ್ತದ.

ಈ ಊರಿನ ಸಂಭ್ರಮ ಇಷ್ಟಕ್ಕ ನಿಲ್ಲೂದಿಲ್ಲ. ಗುಡಿ ಸುತ್ತಿ, ದೊನ್ನಿಯೊಳಗ ಬಿಸಿ ಪೊಂಗಲ್ ಸವದ್ರ ಆ ವರ್ಷದ ಸಂಕ್ರಾಂತಿ ಪೂರ್ತಿ ಸಂಪನ್ನ. ಆದ್ರ ಉತ್ತರ ಕರ್ನಾಟಕದೊಳಗ ಹಂಗಲ್ಲ. ಸುಗ್ಗಿ ಹಬ್ಬ ಸಂಕ್ರಾಂತಿ ಮಕ್ಕಳ ಮ್ಯಾಲೆ ಅಷ್ಟ ಐಶ್ವರ್ಯನೇ ಸುರೀಲಿ ಅಂತ ಬಯಸ್ತಾರ.

ಐದು ವರ್ಷದೊಳಗಿನ ಮಕ್ಕಳಿಗೆ `ಹಣ್ಣೆರಿಯುವ~ ಸಂಭ್ರಮನ ದೊಡ್ಡದು.
ಅದಕ್ಕ ಹಿಂದಿನ ದಿನಾನ ಚುರುಮುರಿ ತಂದು, ಅದಕ್ಕ ಬಾರಿಕಾಯಿ, ಕ್ಯಾರಿಕಾಯಿ, ಬೆಂಡು, ಬತ್ತಾಸು  ಹಿಂಡಿನಿಂದ ಸುಲಗಾಯಿ ಬಿಚ್ಚಿ  ಕಲಸ್ತಾರ. ಮೊದಲಾಗಿದ್ರ 10-20 ಪೈಸೆ ನಾಣ್ಯ, ನಾಕಾಣಿ ನಾಣ್ಯನೂ ಹಾಕ್ತಿದ್ರು. ಈಗ ಒಂದು ರೂಪಾಯಿ ನಾಣ್ಯನೇ ಹಾಕ್ತಾರ.
ಪಡಸಾಲ್ಯಾಗ ಝಮಕಾನಿ ಹಾಸಿ, ಅಕ್ಕಪಕ್ಕದವರಿಗೆಲ್ಲ ಕರದು, ಆರತಿಗೆ ಸಜ್ಜು ಮಾಡ್ತಾರ.

ಆರತಿ ದೀಪ ಮುಡಿಸುವ ಹೊತ್ತಿಗೆ ಚುರುಮುರಿಯೊಳಗ ಬಾಳೆಹಣ್ಣು, ಪೇರಲ ಹಣ್ಣು (ಸೀಬೆಕಾಯಿ) ಸಣ್ಣಗೆ ಹೆಚ್ಚಿ ಕಲಸ್ತಾರ. ಇದರೊಳಗ ಕಬ್ಬಿನ ಜಲ್ಲೆಯನ್ನೂ ಸಣ್ಣ ಸಣ್ಣ ಚೂರು ಮಾಡಿ ಹಾಕ್ತಾರ. ಒಟ್ಟನಾಗ ಸಮೃದ್ಧ ಸಿರಿಯನ್ನೇ ಎರೀಬೇಕು ಅನ್ನೂದು ಈ ಸಂಪ್ರದಾಯದ ಆಶಯ.

ಪೂರ್ವಾಭಿಮುಖವಾಗಿ ಮಕ್ಕಳಿಗೆ ಕೂರಿಸಿ, ಅಕ್ಕ-ಪಕ್ಕ ಎರಡೂ ಕಡೆ ದೊಡ್ಡ ದೀವಿಗೆ `ಸಮಯ್~ನ ಹಚ್ಚಿಡಲಾಗ್ತದ. ಅದರೊಳಗಿನ ನವಿಲು ಗರಿಗೆದರಿದ ಬೆಳಕಿನ ಚಿತ್ತಾರ, ಕೂಸಿನ ಮುಖದ ಮ್ಯಾಲೆ ಹೊಂಬಣ್ಣದ ಕಿರಣ ಹೊಸ ಮೆರಗನ್ನೇ ಕೊಡ್ತದ.

ಆಧುನಿಕ ಬದುಕನ್ಯಾಗ ಮರತೇ ಹೋಗಿರುವ ಪ್ರಮಾಣಗಳಾದ ಪಾವು, ಗಿದ್ನ, ಅಚ್ಚೇರು, ಸೇರುಗಳನ್ನು ಪೂಜಾ ಮಾಡಿಟ್ಟು, ಸೇರಿನೊಳಗ ಈ ಕಲಿಸಿದ ಚುರುಮುರಿ ತುಂಬಿ ಗೋಪುರ ಮಾಡ್ತಾರ.

ಹಿಂದೆಲ್ಲ ಬೆಳ್ಳಿ ಸೋವಿ ಇದ್ದ ಕಾಲ. ನೂರು ರುಪಾಯಿಗೊಂದು ಬೆಳ್ಳಿ ನಾಣ್ಯ ಬರ್ತಿತ್ತು. ಅಂಥಾ ಕಾಲ್ದಾಗ, ಬೆಳ್ಳಿಯ ಸಣ್ಣ ಸಣ್ಣ ಕಣ್ಣು, ಮೀಸಿ, ಪಾದುಕಿ ಮುಂತಾದವನ್ನೂ ಇಟ್ಟು ಎರೀತಿದ್ರು.

ಹಣ್ಣೆರಿಯೂ ಸಂಭ್ರಮಕ್ಕ ತವರು ಮನಿಯ ಪ್ರೀತಿನೆ ದೊಡ್ಡದು. ಹಬ್ಬಕ್ಕ ಮನಿಗೆ ಬಂದ ಸೋದರತ್ತಿ, ಅಣ್ಣ ಇಡಿಸಿದ ಹಸಿರು ಬಳ್ಳಿ ತೊಟ್ಕೊಂಡು, ಮುತ್ತಿನುಂಗರ ಹಾಕ್ಕೊಂಡು, ಸೇರಿನ ಮ್ಯಾಲೆ ಕೈ ಇಟ್ಟು ಹಗರಕ ಹಣ್ಣೆರದು ಹರಸ್ತಾಳ.

ಅಣ್ಣನ ಮನಿತುಂಬ ಬೆಳ್ಳಿ ಬಂಗಾರ ಚೆಲ್ಲಾಡ್ಲಿ. ತವರ ಕುಡಿ ಅಷ್ಟ ಐಶ್ವರ್ಯದೊಳಗ ಬೆಳೀಲಿ ಅಂತ. ತಲಿ ಮ್ಯಾಲೆ ಬಿದ್ದ ಚುರುಮುರಿ ಮಕ್ಕಳಿಗೆ ಮಜಾ ಅನ್ನಿಸಿದ್ರ, ಉಳದು ಹುಡುಗ್ರು, ಹಣ್ಣೆರಿಯು ಮುಂದ ಸಿಗುವ ನಾಣ್ಯ, ಬೆಂಡು, ಬತ್ತಾಸುಗಳನ್ನು ಆರಸ್ಕೊಂತಾರ.
ಆಮೇಲೆ ಒಬ್ಬೊಬ್ಬರ ಹಣ್ಣೆರಿಯುಮುಂದ ಒಗಟ ಹೇಳುದು, ಒಡಪು ಕಟ್ಟೂದು ಎಲ್ಲಾ ಮುಂದುವರೀತದ.

ನಕ್ಕೊಂತ ಹೆಣ್ಮಕ್ಕಳೆಲ್ಲ ಅರಿಶಿನ ಕುಂಕುಮ ಬಾಗಿನ ಪಡೀತಾರ. ಸಂಕ್ರಾಂತಿ ಶಾಸ್ತ್ರದೊಳಗ ಏನು ದಾನ ಮಾಡಾಕ ಹೇಳ್ತಾರೋ ಅದನ್ನೇ ಬೀರುವ ಕೆಲಸ ಈ ಸಂಭ್ರಮದೊಳಗ ಪೂರೈಸ್ತಾರ. ಅದಕ್ಕಂತ ಮಾರುಕಟ್ಟೆಯೊಳಗ ಸಣ್ಣು ಸಣ್ಣು ಡಬ್ಬಿ, ಕಾಡಿಗಿ ಡಬ್ಬಿ, ಕರವಸ್ತ್ರ ಮುಂತಾದವೆಲ್ಲ ಬಂದಿರ್ತಾವ. ಅವರವರ ರಾಶಿಗೆ ತಕ್ಕಂಗ ದಾನ ಮಾಡೂದು ಕೆಲವೆಡೆಯ ಸಂಪ್ರದಾಯ.

ಬೆಂಗಳೂರಾಗ ರೊಕ್ಕ ಕೊಟ್ರ ಎಲ್ಲಾ ಸಿಗ್ತದ. ಸೇರು ಸಿಗ್ತದ. ಹಣ್ಣೆರಿಯಾಗ ಜನಾನೂ ಸೇರ್ತಾರ. ಆದ್ರ ನಕ್ಕೊಂತ ಒಗಟು ಹೇಳೋರು ಇಲ್ಲ. ಒಡಪು ಕೇಳೋರು ಇಲ್ಲ. ಕೈ ಹಿಡಿದು, ಗಂಡನ ಹೆಸರು, ಹೆಂಡ್ತಿ ಹೆಸರು ಕೇಳುವ ಸಂಪ್ರದಾಯವೇ ಇಲ್ಲಿಲ್ಲ.

ಹಿಂಗಾಗಿ ಆ ನಗಿ ಮಾಯ ಆಗೇದ. ಅದೇ ಕಿವಿಕಿವಿ ತನಾ ತುಟಿ ಹಿಗ್ಗಿಸಿ ನಗೂ ಮುಂದ ಯಾವುದೋ ನಗಿಯ ಸಾಲ ಹಿಂದಕ್ಕ ಕೊಟ್ಟಂಗ ಆಗ್ತದ. ಹೆತ್ತವ್ವ ನೀ ನೆನಪಾಗ್ತಿ. ನಿನ್ನ ನೆನಪಾಗ್ತದ.
   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.