ADVERTISEMENT

ನೆಲೆ ಇಲ್ಲದವರ ನರಳಾಟ

ಡಿ.ಎಂ.ಕುರ್ಕೆ ಪ್ರಶಾಂತ
Published 30 ಮಾರ್ಚ್ 2011, 19:30 IST
Last Updated 30 ಮಾರ್ಚ್ 2011, 19:30 IST
ನೆಲೆ ಇಲ್ಲದವರ ನರಳಾಟ
ನೆಲೆ ಇಲ್ಲದವರ ನರಳಾಟ   

ನಾವು ಎಷ್ಟೇ ತಾಂತ್ರಿಕವಾಗಿ ಪ್ರಗತಿ ಹೊಂದಿದರೂ ಪ್ರಕೃತಿಯ ಮುನಿಸಿನ ಮುಂದೆ ತೃಣಕ್ಕೆ ಸಮಾನ ಎಂಬುದನ್ನು ಹಲವು ಪ್ರಾಕೃತಿಕ ವಿಕೋಪಗಳಿಂದ ಅರಿತಿದ್ದೇವೆ. ಆದರೂ ನಮ್ಮ ಹಪಾಹಪಿ ಮುಂದುವರಿಸಿದರೆ ಎಂತಹ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಜಪಾನ್ ಸೇರಿ ವಿಶ್ವದ ವಿವಿಧೆಡೆ ಸಂಭವಿಸುತ್ತಿರುವ ಭೂಕಂಪ ಮತ್ತು ಸುನಾಮಿಗಳೇ ಸಾಕ್ಷಿ.

ಈ ಭೂಮಿ ಮೇಲೆ ಭೂಕಂಪ, ಸುನಾಮಿ, ಅಣು ದಾಳಿ ಮತ್ತಿತರ ಕಾರಣಗಳಿಂದ ನಿರಾಶ್ರಿತರಾಗಿ ಫುಟ್‌ಪಾತ್, ರೈಲ್ವೆ ನಿಲ್ದಾಣ, ಬೀದಿ ಬದಿಯಲ್ಲಿ, ಕೊಳಚೆ ಪ್ರದೇಶಗಳಲ್ಲಿ ತುತ್ತಿನ ಚೀಲ ತುಂಬಿಕೊಳ್ಳುವ ಚಿಂತೆಯಿಂದ ಬದುಕುವ ಜನರ ಹೃದಯ ವಿದ್ರಾವಕ ಛಾಯಾಚಿತ್ರಗಳ ಪ್ರದರ್ಶನ ಹನುಮಂತ ನಗರದ  ‘ಕಲಾ ಸೌಧ’ದಲ್ಲಿ ನಡೆಯುತ್ತಿದೆ.

ಬಾರ್ನ್‌ಫ್ರೀ ಕಲಾ ಶಾಲೆ ನಿರ್ದೇಶಕ ಜಾನ್ ದೇವರಾಜ್ ಹಮ್ಮಿಕೊಂಡಿರುವ ‘ಐ ಆಮ್ ಹೊಮ್ ಲೆಸ್’ ಶೀರ್ಷಿಕೆಯ ಈ ಪ್ರದರ್ಶನಕ್ಕೊಂದು ಉದಾತ್ತ ಉದ್ದೇಶವೂ ಇದೆ. ಈ ಕಲಾಕೃತಿಗಳ ಮಾರಾಟ ಮತ್ತು ವೀಕ್ಷಕರಿಂದ ಸಂಗ್ರಹವಾಗುವ ಹಣವನ್ನು ಜಪಾನ್‌ನ ಭೂಕಂಪ ಸಂತ್ರಸ್ತರ ಸಹಾಯಕ್ಕಾಗಿ ಬಳಸಲಾಗುತ್ತದೆ.

ಹಿರೋಶಿಮಾ, ನಾಗಾಸಾಕಿ ಮೇಲೆ ಅಮೆರಿಕ ನಡೆಸಿದ ಅಣುದಾಳಿಯ ಭೀಕರತೆ, ಮನೆ, ಮಕ್ಕಳ ಕಳೆದುಕೊಂಡವರ ಆಕ್ರಂದನ, ಸುಟ್ಟು ಕರಕಲಾದ ದೇಹಗಳು, ನಾಶದ ನಂತರ ಬದುಕು ಕಟ್ಟಿಕೊಳ್ಳಲು ನಡೆಸುವ ಹೋರಾಟದ ಛಾಯಾಚಿತ್ರಗಳು ಮನಕಲಕುತ್ತವೆ.ಉತ್ತರಪ್ರದೇಶದ ಗಾರ್ಗಿ ರೈಲ್ವೆ ನಿಲ್ದಾಣದಲ್ಲಿ ಮೈ ಮೇಲೆ ತುಂಡು ವಸ್ತ್ರವೂ ಇಲ್ಲದೇ ಅನ್ನಕ್ಕಾಗಿ ಪರಿತಪ್ಪಿಸುತ್ತಿದ್ದ ಮಹಿಳೆ ಯಾತನೆ, ಬೆಂಗಳೂರಿನ ಫುಟ್‌ಪಾತ್‌ಗಳಲ್ಲಿನ ಅಸಹಾಯಕರ ತಲ್ಲಣವನ್ನು ದೇವರಾಜ್ ಅವರು ಸೆರೆ ಹಿಡಿದಿದ್ದಾರೆ.

ಕಾಂಬೋಡಿಯ, ಪೋಲೆಂಡ್, ಜರ್ಮನಿ, ಜೆಕ್ ಗಣರಾಜ್ಯದಲ್ಲಿ ಈ ಹಿಂದೆ ಸಂಭವಿಸಿದ ಪ್ರಕೃತಿ ಮುನಿಸಿಗೆ ಮನುಕುಲ ತೆತ್ತ ಬೆಲೆ, ಅನಾಹುತಗಳ ಚಿತ್ರಗಳು, ಹಸಿದ ಹೊಟ್ಟೆಯ ನರಳಾಟ, ನಮಗೂ ಜೀವಿಸುವ ಹಕ್ಕು ಕೊಡಿ ಎಂಬ ನಿರಾಶ್ರಿತರ ಆರ್ತನಾದ, ತುತ್ತು ಅನ್ನಕ್ಕಾಗಿ ಮಕ್ಕಳು ಮೊರೆ, ಎಲ್ಲ ಹೋಯಿತು ಮುಂದಿನ ದಾರಿ ಏನು ಎಂಬ ಚಿಂತೆಯ ಚಿತ್ರಗಳು ಮನಸ್ಸನ್ನು ಮರುಗಿಸಿ, ಹೃದಯವನ್ನು ಹಿಂಡುತ್ತವೆ.
 
ನಿಸರ್ಗದ ವಿರುದ್ಧ ಮಾನವನ ಅತ್ಯಾಚಾರಕ್ಕೆ ಇನ್ನಾದರೂ ತಡೆ ಹಾಕದಿದ್ದರೆ ಮುಂದೆ ತೃಣವೂ ಉಳಿಯುವುದಿಲ್ಲ ಎಂಬ ಎಚ್ಚರದ ಸಂದೇಶಗಳನ್ನು ಹೊತ್ತಿವೆ ಇಲ್ಲಿನ ಛಾಯಾಚಿತ್ರಗಳು. ತಮ್ಮದೆಂಬ ತುಣುಕು ಜಾಗವೂ ಇಲ್ಲದ, ಸೂರಿಲ್ಲದ, ಯಾವ ಜಾಗವಾದರೇನೂ ಇದು ನಮ್ಮದೇ ಎಂಬ ಭಾವದಲ್ಲಿ ಬದುಕುವವರೇ ‘ಹೋಮ್ ಲೆಸ್‌ಗಳು’.

ಮಾ. 27ರಿಂದ ಆರಂಭವಾಗಿರುವ ಪ್ರದರ್ಶನದ ಮೊದಲ ದಿನವೇ 11,800ರೂಪಾಯಿ ನಿಧಿ ಸಂಗ್ರಹವಾಗಿದೆ. ಇನ್ನಷ್ಟು ಸಂಗ್ರಹಿಸಿ ಜಪಾನ್ ಭೂಕಂಪ ನಿರಾಶ್ರಿತರ ಬದುಕು ಕಟ್ಟಿಕೊಳ್ಳಲು ನೀಡಲಾಗುವುದು ಎನ್ನುತ್ತಾರೆ ಆಯೋಜಕ ಮತ್ತು ಛಾಯಾಗ್ರಾಹಕ ಜಾನ್ ದೇವರಾಜ್. ಪ್ರದರ್ಶನ ಏಪ್ರಿಲ್ 6ರಂದು ಮುಕ್ತಾಯವಾಗಲಿದೆ.                                                                                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.