ADVERTISEMENT

ನೆಲೆ ನೆರವಿಗೆ ಫ್ಯೂಷನ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST
ನೆಲೆ ನೆರವಿಗೆ ಫ್ಯೂಷನ್
ನೆಲೆ ನೆರವಿಗೆ ಫ್ಯೂಷನ್   

ಧ್ರುವ ಪ್ರತಿಷ್ಠಾನ ‘ಆಧಾರ’ ಯೋಜನೆಯಡಿ ಶುಕ್ರವಾರ ಖ್ಯಾತ ಪಿಟೀಲು ವಾದಕಿ ಡಾ. ಜ್ಯೋತ್ಸಾ ಶ್ರೀಕಾಂತ್ ಅವರ ‘ಫ್ಯೂಷನ್ ಡ್ರೀಮ್ಸ್’ ಶಾಸ್ತ್ರೀಯ, ಪಾಶ್ಚಾತ್ಯ ಮಿಶ್ರ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಎಸ್. ಸೊಲೊಮನ್ (ಕೀಬೋರ್ಡ್), ಅಲ್ವಿನ್ ಫರ್ನಾಂಡಿಸ್ (ಲೀಡ್ ಗಿಟಾರ್), ರೂಡಿ ಡೆವಿಡ್ (ಬಾಸ್ ಗಿಟಾರ್), ಕಾರ್ತಿಕ್ ಮಣಿ (ಡ್ರಮ್ಸ್), ಪ್ರಸನ್ನ ಕುಮಾರ್ (ಇಂಡಿಯನ್ ರಿದಮ್) ಮತ್ತು ಬಾಲಕೃಷ್ಣ (ವಿಶೇಷ ತಾಳವಾದ್ಯ) ಸಾಥ್ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ‘ನೆಲೆ’ ಅನಾಥಾಶ್ರಮದ ಪ್ರತಿಭಾನ್ವಿತ ಮಕ್ಕಳಿಗೆ ಸಂಗೀತ ಶಿಷ್ಯವೇತನ ಮತ್ತು ಆರ್. ಆರ್. ಕೇಶವಮೂರ್ತಿ ಸ್ಮಾರಕ ರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಇರುತ್ತದೆ. ಬೆಂಗಳೂರು ಮೂಲದ ಡಾ. ಜ್ಯೋತ್ಸಾ ಶ್ರೀಕಾಂತ್ ಯುರೋಪ್‌ನ ಸಂಗೀತ ಲೋಕದಲ್ಲಿ ಮನೆಮಾತು. ಲಂಡನ್‌ನಲ್ಲಿ ನೆಲೆಸಿದ್ದಾರೆ. ಓದಿದ್ದು ಪೆಥಾಲಜಿಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ. ಆದರೆ ಪಿಟೀಲು ವಾದನ ಅವರಿಗೆ ಅಚ್ಚುಮೆಚ್ಚು. ಈಗ ಸಂಗೀತವೇ ಅವರ ಉಸಿರು.

ಕರ್ನಾಟಕ ಶಾಸ್ತ್ರೀಯದ ಜೊತೆ ಪಾಶ್ಚಿಮಾತ್ಯ ಪಿಟೀಲು ವಾದನದಲ್ಲೂ ಪರಿಣತಿ ಸಾಧಿಸಿದ್ದಾರೆ. ಲಂಡನ್‌ನ ಟ್ರಿನಿಟಿ ಸಂಗೀತ ಕಾಲೇಜಿನಿಂದ ಕರ್ನಾಟಕ ಸಂಗೀತದಲ್ಲಿ ಫೆಲೊಶಿಪ್ ಪಡೆದಿದ್ದಾರೆ. ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತವನ್ನು ಬೆಸೆಯುವ ಉದ್ದೇಶದಿಂದ ‘ಫ್ಯೂಷನ್ ಸಂಗೀತ’ ಪ್ರಕಾರವನ್ನು ಬೆಳೆಸುತ್ತಿದ್ದಾರೆ.

200ಕ್ಕೂ ಹೆಚ್ಚು ದಕ್ಷಿಣ ಭಾರತೀಯ ಚಿತ್ರಗಳಿಗೆ ಪಿಟೀಲು ಸಂಗೀತ ನೀಡಿದ್ದಾರೆ. ಯುರೋಪ್‌ನ ಹಲವು ಸಂಗೀತ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ‘ಫ್ಯೂಷನ್ ಡ್ರೀಮ್ಸ್’ ಎಂಬ ತಮ್ಮದೇ ಆದ ಮಿಶ್ರ ಸಂಗೀತದ ಬ್ಯಾಂಡ್ ಹೊಂದಿದ್ದಾರೆ. ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣ ಬೀದಿ ಮಕ್ಕಳು ಮತ್ತು ಅನಾಥ ಮಕ್ಕಳಿಗೆ ಆಶ್ರಯ ಒದಗಿಸಿರುವ ‘ನೆಲೆ’ಗೆ ಹೋಗಲಿದೆ. ಅತಿಥಿಗಳು: ಶೋಭಾ ಕರಂದ್ಲಾಜೆ, ಐ.ಎಂ. ವಿಠಲಮೂರ್ತಿ, ಮೈಸೂರು ವಿ ಸುಬ್ರಹ್ಮಣ್ಯ, ಜಯಂತ ಕಾಯ್ಕಿಣಿ, ಪದ್ಮಿನಿ ರವಿ ಮತ್ತು ಮುದ್ದುಮೋಹನ್.
ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6.30. ದೇಣಿಗೆ ಪಾಸುಗಳಿಗೆ 96326 97281,  94480 85124, www.dhruvafoundation.org, www.indianstage.in.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.