ADVERTISEMENT

ನೋಡ ಬನ್ನಿ ಖಾದಿ ಉತ್ಸವ...

ಮಂಜುಶ್ರೀ ಎಂ.ಕಡಕೋಳ
Published 5 ಮೇ 2017, 19:30 IST
Last Updated 5 ಮೇ 2017, 19:30 IST
ಚಿತ್ರ: ಬಿ.ಎಚ್.ಶಿವಕುಮಾರ
ಚಿತ್ರ: ಬಿ.ಎಚ್.ಶಿವಕುಮಾರ   

ಸಂಜೆಯ ಮಬ್ಬುಗತ್ತಲಿನಲ್ಲಿ ಅಲ್ಲಿಗೆ ಹೋದಾಗ ಸ್ವಾಗತಿಸಿದ್ದು  ಚರಕದಲ್ಲಿ ನೂಲು ತೆಗೆಯುತ್ತಿದ್ದ ಗ್ರಾಮೀಣ ಮಹಿಳೆಯರು. ಅದುವರೆಗೆ ಖಾದಿ ಬಟ್ಟೆಯನ್ನಷ್ಟೇ ನೋಡಿದ್ದ ಬಹುತೇಕರಿಗೆ ಖಾದಿ ಬಟ್ಟೆಯಾಗಿ ರೂಪುಗೊಳ್ಳುವ ಪ್ರಾತ್ಯಕ್ಷಿಕೆ ನೋಡಿದ ಅನುಭವದ ಜತೆಗೆ ಸ್ವಾವಲಂಬಿ ಬದುಕಿನ ಪಾಠ ಹೇಳಿಕೊಟ್ಟ ಮಹಾತ್ಮ ಗಾಂಧೀಜಿ ಅವರ ಆದರ್ಶ ಜೀವನದ ದರ್ಶನವೂ ದಕ್ಕಿತು.

ಹಾಗೆ ಒಳಗೆ ಹೋಗುತ್ತಿದ್ದಂತೆ ಥರಾವರಿ ಖಾದಿ ಉತ್ಪನ್ನಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದ್ದವು. ಇಷ್ಟಪಟ್ಟು ನೋಡಿದ ವಸ್ತುವಿನ ಬೆಲೆ ಅಷ್ಟೇನೂ ದುಬಾರಿ, ಜೇಬಿಗೆ ಭಾರ ಎನಿಸುತ್ತಿರಲಿಲ್ಲ. ಇದು ನಗರದ ಇದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ (ಫ್ರೀಡಂ ಪಾರ್ಕ್‌) ನಡೆಯುತ್ತಿರುವ ಖಾದಿ ಉತ್ಸವದ ಝಲಕ್.

ಯುವಜನರಿಗೆ ಇಷ್ಟವಾಗುವ ಶಾರ್ಟ್ ಜುಬ್ಬಾ, ಪೈಜಾಮ, ಕೋಟ್‌, ಥರೇವಾರಿ ವಿನ್ಯಾಸದ ಕುರ್ತಾಗಳು, ಜೀನ್ಸ್ ಪ್ಯಾಂಟ್ ಮೇಲೆ ಧರಿಸಬಹುದಾದ ಶಾರ್ಟ್ ಟಾಪ್‌ಗಳು, ಬೇಸಿಗೆಗೆ ಹಿತ ನೀಡುವ ವಿವಿಧ ಬಗೆಯ ಉಡುಪುಗಳ ದೊಡ್ಡ ಸಂಗ್ರಹವೇ ಈ ಉತ್ಸವದಲ್ಲಿದೆ.

ADVERTISEMENT

ಖಾದಿಯಷ್ಟೇ ಅಲ್ಲ ದೇಸಿ ಕೈಮಗ್ಗಗಳಲ್ಲಿ ತಯಾರಾದ ಅಪ್ಪಟ ರೇಷ್ಮೆ ಸೀರೆಗಳು, ಉಣ್ಣೆ ಉತ್ಪನ್ನಗಳು, ಒಡಿಶಾದ ಕಾಟನ್, ಸಿಲ್ಕ್ ಸೀರೆಗಳು, ಆಕರ್ಷಕ ವಿನ್ಯಾಸದ  ದುಪಟ್ಟಾಗಳು ಉತ್ಸವದ ಆಕರ್ಷಣೆಯನ್ನು ಹೆಚ್ಚಿಸಿವೆ. ರಾಜ್ಯವಷ್ಟೇ ಅಲ್ಲ ದೇಶದ ವಿವಿಧ ಭಾಗದ ಗ್ರಾಮೀಣ ಗುಡಿ ಕೈಗಾರಿಕೆಗಳ ಉತ್ಪನ್ನಗಳು ಉತ್ಸವದಲ್ಲಿ ಪ್ರದರ್ಶನ ಮತ್ತು ಖರೀದಿಗಿವೆ.

‘ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಈ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಗುಣಮಟ್ಟದ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಗ್ರಾಹಕರ ಜೇಬಿಗೂ ಹಿತ’ ಎನ್ನುತ್ತಾರೆ ಉತ್ಸವಕ್ಕೆ ಭೇಟಿ ನೀಡಿದ್ದ ಅಕ್ಷತಾ ಹುಂಚದಕಟ್ಟೆ.

‘ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದೆ. ಸಾಮಾನ್ಯವಾಗಿ ಬೆಂಗಳೂರಿಗೆ ಬಂದಾಗ ಉತ್ಸವ, ಮೇಳಗಳಿಗೆ ಭೇಟಿ ಕೊಡುತ್ತೇನೆ. ಖಾದಿ ಉತ್ಸವದ ಬಗ್ಗೆ ತಿಳಿದು ಇಲ್ಲಿಗೆ ಬಂದೆ. ಉತ್ಸವದಲ್ಲಿ ಅಮ್ಮನಿಗಾಗಿ ಒಂದು ಕಾಟನ್ ಸೀರೆ ಖರೀದಿಸಿದೆ. ಧಾರಾವಾಡದ ಸ್ವಸಹಾಯ ಗುಂಪು ರೂಪಿಸಿರುವ ಸೀರೆಗಳು ಆಕರ್ಷಕವಾಗಿವೆ. ಬೆಲೆಯೂ ಕಡಿಮೆ’ ಎನ್ನುತ್ತಾರೆ ಅವರು.

‘ಉಣ್ಣೆಯಲ್ಲಿ ಇಷ್ಟೊಂದು ವೈವಿಧ್ಯ ನೋಡಿದ್ದು ಇದೇ ಮೊದಲು. ಉಣ್ಣೆಯ ಕಂಬಳಿ ಗೊತ್ತಿತ್ತು. ಇಲ್ಲಿ ಉಣ್ಣೆಯ ಟೋಪಿ, ಶೂ ಲೇಸ್‌, ಮ್ಯಾಟ್ ಇತ್ಯಾದಿ ವಸ್ತುಗಳನ್ನು ನೋಡಿ ಖುಷಿಯಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು ವಿಜಯನಗರದ ಕಾವ್ಯಾ ನವೀನ್.

‘ಧರಿಸುವವರಿಗೆ ಗೌರವದ ನೋಟ ನೀಡುವ ಖಾದಿ ಸ್ವಾಭಿಮಾನದ ಪ್ರತೀಕವೂ ಹೌದು. ವಾರ್ಡ್‌ರೋನಲ್ಲೂ ಒಂದು ಜತೆಯಾದರೂ ಖಾದಿ ಉಡುಪು ಇದ್ದರೆ ಚೆಂದ’ ಎಂದರು ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿ ಅಮಿತಾ.

‘ಬೇಸಿಗೆಯಲ್ಲಿ ತಂಪಾಗಿಡುವ, ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಖಾದಿ ಉತ್ಪನ್ನಗಳಿಗೆ ಸದಾ ಬೇಡಿಕೆ ಇದೆ. ಈ ಬಾರಿ ವ್ಯಾಪಾರವೂ ಚೆನ್ನಾಗಿದೆ. ವಾರಾಂತ್ಯದಲ್ಲಿ ಹೆಚ್ಚಿನ ಜನರು ಉತ್ಸವಕ್ಕೆ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಉತ್ಸವದ ಆಯೋಜಕರು.

**

ಕಡಿಮೆ ಬೆಲೆಗೆ ಉತ್ತಮ ಬಟ್ಟೆ
ಖಾದಿ ಈಗ ಯುವಜನರ ಟ್ರೆಂಡ್ ಆಗಿ ರೂಪುಗೊಂಡಿದ್ದೆ. ಪ್ರತಿವರ್ಷ ತಪ್ಪದೇ ಮೇಳಕ್ಕೆ ಬರುತ್ತೇನೆ. ಕಳೆದ ವರ್ಷ ₹ 5 ಸಾವಿರ ಮೌಲ್ಯದ ಉತ್ಪನ್ನಗಳನ್ನು  ಖರೀದಿಸಿದ್ದೆ. ಲಿನನ್ ಬಟ್ಟೆಗಿಂತ ಖಾದಿ ಉತ್ತಮ ಆಯ್ಕೆ. ದರದಲ್ಲೂ ರಿಯಾಯ್ತಿ ಇರುವುದರಿಂದ ಗ್ರಾಹಕರಿಗೂ ಹೊರೆಯಾಗದು.


-ಸುಭಾಷ್ ಕೆ.ಆರ್., ವಕೀಲ

**

ಖಾದಿ ಉತ್ಸವದಲ್ಲಿ ಏನೇನಿದೆ?
* ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಬಟ್ಟೆಗಳು
* ಗ್ರಾಮೀಣ ಗುಡಿಕೈಗಾರಿಕೆಯ ಮರದ ಕೆತ್ತನೆ ವಸ್ತುಗಳು, ಪೀಠೋಪಕರಣಗಳು
* ಆಕರ್ಷಕ, ನೈಸರ್ಗಿಕ ಸೆಣಬಿನ ಉತ್ಪನ್ನಗಳು
* ಗ್ರಾಮೀಣ ಚರ್ಮೋದ್ಯೋಗ ಉದ್ದಿಮೆಯ ದೀರ್ಘ ಕಾಲ ಬಾಳಿಕೆಯ ಪಾದರಕ್ಷೆಗಳು
* ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಕೈಕಾಗದ ವಸ್ತುಗಳು
* ನೈಜ, ಶುದ್ಧ ಜೇನುತುಪ್ಪ, ಗೋಡಂಬಿ ಹಾಗೂ ಔಷಧೀಯ ಉತ್ಪನ್ನಗಳು
* ಕಲಂಕಾರಿ ಚೂಡಿದಾರ್, ಬ್ಲೌಸ್, ಸೀರೆ, ವ್ಯಾನಿಟಿ ಬ್ಯಾಗ್, ಪರ್ಸ್‌ಗಳು

**

ನಮ್ಮಲ್ಲಿ ದೀರ್ಘ ಬಾಳಿಕೆ ಬರುವ ನೋಡಲು ಆಕರ್ಷಕವಾಗಿರುವ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಸಿಂಗಲ್ ಬೆಡ್‌ಶೀಟ್‌ ಬೆಲೆ ₹ 325 ಮಾತ್ರ. ಇತರ ಉತ್ಪನ್ನಗಳಿಗೆ ಹೋಲಿಸಿದರೆ ಖಾದಿ ಬಟ್ಟೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಚರ್ಮಕ್ಕೂ ಹಿತಕಾರಿ.


-ಆರ್.ಕೃಷ್ಣ, ಖಾದಿ ಪರಸ್ಪರ ಸಹಕಾರ ಸಂಘ, ಚಿತ್ರದುರ್ಗ

*

ಖಾದಿ ಉತ್ಸವ: ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ: ಸ್ಥಳ– ಸ್ವಾತಂತ್ರ್ಯ ಉದ್ಯಾನ (ಫ್ರೀಡಂ ಪಾರ್ಕ್‌), ಗಾಂಧಿ ನಗರ, ಪ್ರತಿದಿನ ಬೆಳಿಗ್ಗೆ 10ರಿಂದ  9ರವರೆಗೆ. ಮೇ 23 ಕೊನೆಯ ದಿನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.