ADVERTISEMENT

ಪಂದನಲ್ಲೂರು ಕಾವ್ಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭರತನಾಟ್ಯ ನೋಡಿ ಆಕರ್ಷಿತಳಾದಾಗ ಕಾವ್ಯ ಇನ್ನೂ ಎರಡನೇ ತರಗತಿ ಹುಡುಗಿ. ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ಭರತನಾಟ್ಯ ಕಲಾವಿದೆಯೊಬ್ಬರನ್ನು ಕರೆಸಿ ಕಾರ್ಯಕ್ರಮ ಇಟ್ಟುಕೊಂಡಿದ್ದರು.

ಆ ನೃತ್ಯ ನೋಡಿ ಭರತನಾಟ್ಯ ಕಲಿಯಬೇಕು ಎಂಬ ಮಹದಾಸೆ ಮನೆಮಾಡಿತ್ತು. ಇದನ್ನು ಗುರುತಿಸಿದ ಅಪ್ಪ- ಅಮ್ಮ ಭರತನಾಟ್ಯ ಕ್ಲಾಸಿಗೆ ಸೇರಿಸಿದರು. ಇದೀಗ ಕಾವ್ಯ ಎಂಟೆಕ್ ಓದುತ್ತಿರುವ ವಿದ್ಯಾರ್ಥಿನಿ. ಜತೆಗೆ ಭರತನಾಟ್ಯದಲ್ಲಿ ಈಗಾಗಲೇ ಭರವಸೆ ಮೂಡಿಸ ಹೊರಟಿರುವ ಕಲಾವಿದೆ. ಅದೂ ಕ್ಲಿಷ್ಟಕರವಾದ ಪಂದನಲ್ಲೂರು ಶೈಲಿಯ ಭರತನಾಟ್ಯದಲ್ಲಿ.

ಈಗ ಕಾವ್ಯ ಷಣ್ಮುಗಂ ನಾಟ್ಯಕಲಾ ಭೂಷಣ ವಿದುಷಿ ಗೀತಾಲಕ್ಷ್ಮಿ ಅವರ ಶಿಷ್ಯೆ. 1997ರಿಂದ ಪಂದನಲ್ಲೂರು ಶೈಲಿಯಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದ ಕಾವ್ಯ 2002ರಲ್ಲಿ ರಂಗಪ್ರವೇಶ ಮಾಡಿದರು. ವೆಲ್ಲೂರು, ತಂಜಾವೂರು, ಕುಂಭಕೋಣಂ ಮತ್ತು ಚಿದಂಬರಂಗಳಲ್ಲಿ ಕಾರ್ಯಕ್ರಮ ನೀಡಿದ್ದಲ್ಲದೆ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸುವ ಚಿಗುರು, ಯುವ ಸೌರಭ ಕಾರ್ಯಕ್ರಮಗಳಲ್ಲಿ ಈಗಾಗಲೇ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈಟೀವಿ, ಚೆನ್ನೈಯ ಜಯಾ ಟೀವಿಯಲ್ಲಿ `ಥಕ ದಿಮಿ ಥ~ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ತಮಿಳುನಾಡಿನಲ್ಲಿ 2010ರಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ `ಬಾಲ ರತ್ನ~ ಬಿರುದು ಕೂಡ ಕಾವ್ಯಗೆ ಸಂದಿದೆ. 

ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಎಂಟೆಕ್ ಓದುತ್ತಿರುವ ಕಾವ್ಯ ಷಣ್ಮುಗಂ ವಿದುಷಿ ಗೀತಾಲಕ್ಷ್ಮಿ ಗೋವಿಂದರಾಜನ್ ಸಂಸ್ಥಾಪಿಸಿದ ನಂದಿ ಭರತನಾಟ್ಯ ಕಲಾಶಾಲೆಯಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದಲ್ಲಿ ಭರವಸೆ ಮೂಡಿಸುತ್ತಿರುವ ಈ ಉದಯೋನ್ಮುಖ ಕಲಾವಿದೆಗೆ ತಂದೆ-ತಾಯಿಯರ, ಗುರುವಿನ ಸತತ ಪ್ರೋತ್ಸಾಹವಿದೆ. ತಾಂತ್ರಿಕ ವಿಷಯದಲ್ಲಿ ಅಧ್ಯಯನ ಮಾಡುತ್ತಿದ್ದು, ಭರತನಾಟ್ಯವನ್ನು ಹೇಗೆ ಅಭ್ಯಾಸ ನಡೆಸುವುದು ಎಂಬ ಪ್ರಶ್ನೆಗೆ `ಎರಡನ್ನೂ ಬ್ಯಾಲೆನ್ಸ್ ಆಗಿ ಮಾಡುತ್ತಿದ್ದೇನೆ ಎನ್ನುತ್ತಾರೆ ಕಾವ್ಯ.

ಏನಿದು ಪಂದನಲ್ಲೂರು ಶೈಲಿ..?ಭರತನಾಟ್ಯದಲ್ಲಿ ಪಂದನಲ್ಲೂರು ಎಂಬುದು ಒಂದು ವಿಶಿಷ್ಟ ಶೈಲಿ. ಈ ಶೈಲಿಯಲ್ಲಿ ಸಾಮಾನ್ಯವಾಗಿ ಕುಳಿತ ಭಂಗಿಯಲ್ಲಿ ನೃತ್ತ-ನೃತ್ಯ, ಅಭಿನಯಕ್ಕೆ ಒತ್ತು. ಈ ಶೈಲಿಯ ನೃತ್ಯ ವಿಶಿಷ್ಟವಾಗಿದ್ದರೂ ಸ್ವಲ್ಪ ಕಷ್ಟದ ಶೈಲಿಯೇ. ಇದರಲ್ಲಿ ಗತಿ ಮತ್ತು ನಡೆ ನಿಧಾನವಾಗಿರುತ್ತದೆ.

ಅಲ್ಲದೆ ಮೂರು ಹಂತಗಳಲ್ಲಿ ಈ ನೃತ್ಯವನ್ನು ಪ್ರದರ್ಶಿಸಲಾಗುತ್ತದೆ. ನೆಲದ ಮೇಲೆ ಕುಳಿತು ಅಭಿನಯಿಸುವುದು, ನಿಂತು ಮಾಡುವುದು ಮತ್ತು ಎದ್ದು ನಿಂತು ಅತ್ಯಂತ ವೇಗದ `ಗತಿ~ಯಲ್ಲಿ ನೃತ್ಯ ಮಾಡುವುದು. ಹೀಗಾಗಿ ಪಂದನಲ್ಲೂರು ಶೈಲಿಯ ಭರತನಾಟ್ಯ ಕೊಂಚ ಕಷ್ಟವಾದದ್ದೇ ಎನ್ನಬಹುದು.

 -
 

ಶುಕ್ರವಾರ ಸಂಜೆ 61.5ಕ್ಕೆ ಭರತನಾಟ್ಯ ಕಾರ್ಯಕ್ರಮ.
ಪೊನ್ನಯ್ಯ ಲಲಿತಕಲಾ ಅಕಾಡೆಮಿ ನಡೆಸುವ ಗುರು ಕೆ.ಕಿಟ್ಟಪ್ಪ ಪಿಳೈ ಸಂಸ್ಮರಣೆಯ ಯುವ ನೃತ್ಯೋತ್ಸವ.
ನಟ್ಟುವಾಂಗಂನಲ್ಲಿ ವಿದುಷಿ ಗೀತಾಲಕ್ಷ್ಮಿ, ಗಾಯನದಲ್ಲಿ ಚೆನ್ನಕೇಶವ, ಮೃದಂಗ ಸಹಕಾರವನ್ನು ಬಿ.ಆರ್. ಪುರುಷೋತ್ತಮ್, ಕೊಳಲಿನಲ್ಲಿ ಎಚ್.ಎಸ್.ವೇಣುಗೋಪಾಲ್ ಮತ್ತು ವಿದ್ವಾನ್ ಸೋಮಣ್ಣ ಪಿಟೀಲು ಪಕ್ಕವಾದ್ಯ ಸಹಕಾರ ನೀಡುವರು.
ಸ್ಥಳ: ಪದ್ಮಿನಿರಾವ್ ಪರಂಪರ ಆರ್ಟ್ ಅಂಡ್ ಕಲ್ಚರ್ ರಿಸೋರ್ಸ್ ಡೆವಲಪ್‌ಮೆಂಟ್ ಸೆಂಟರ್, ಸಿಕೆಎ ಬಡಾವಣೆ, ಬನಶಂಕರಿ ಮೂರನೇ ಹಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT