ಪುರಸ್ಕಾರ ಪಡೆದವರಿಗೆ ಕರತಾಡನ, ಹರ್ಷೋದ್ಗಾರ ಬೆರೆತ ಸದ್ದು. ಬದುಕಿನ ಮುಂದಿನ ಹೆಜ್ಜೆಗಳ ಕುರಿತು ಸಣ್ಣದೊಂದು ಚರ್ಚೆ. ಕಟ್ಟಿಕೊಂಡ ಕನಸಿನತ್ತ ಏರಿದ ಮೆಟ್ಟಿಲುಗಳ ನೆನೆಸಿಕೊಂಡು ಕಣ್ಣುಗಳು ಹನಿಯಾಡಿದವು.
ಪದವಿ ಪಡೆದ ಸಂಭ್ರಮದಲ್ಲಿ ಆ ಹನಿಗಳು ಕೆನ್ನೆಯಿಂದ ಜಾರಿ ಇಳಿಯಲಿಲ್ಲ ಬಿಡಿ. ಪ್ರೆಸಿಡೆನ್ಸಿ ಸಮೂಹ ಸಂಸ್ಥೆಗಳ ಅಂಗಸಂಸ್ಥೆಯಾದ ಪ್ರೆಸಿಡೆನ್ಸಿ ಬ್ಯುಸಿನೆಸ್ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಪೂರೈಸಿದ ವಿದ್ಯಾರ್ಥಿಗಳ ಬೀಳ್ಕೊಡುಗೆ ದಿನದ ನೋಟಗಳಿವು.
ಒಂಬತ್ತನೇ ವರ್ಷದ ಈ ಕಾರ್ಯಕ್ರಮವನ್ನು ಅವರು ಸಂಭ್ರಮದಿಂದ ಆಚರಿಸಿದರು. ಸುಮಾರು 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳ ಸತತ, ಅತ್ಯುತ್ತಮ ಶೈಕ್ಷಣಿಕ ಸಾಧನೆಗಳಿಗಾಗಿ ಕಾಲೇಜು ವಿವಿಧ ಪುರಸ್ಕಾರಗಳನ್ನು ನೀಡಿತು.
ರೇಡಿಯೋ ಸಿಟಿ 91.1 ಎಫ್.ಎಂನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಪೂರ್ವ ಪುರೋಹಿತ್ ಮುಖ್ಯ ಅತಿಥಿಯಾಗಿಯೂ, ಸಿಟ್ರಿಕ್ಸ್ ಆರ್‌ಡಿ ಇಂಡಿಯಾ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಡಾ. ಪಲ್ಲಬ್ ಬಂಡೋಪಾಧ್ಯಾಯ ಪ್ರಮುಖ ಭಾಷಣಕಾರರಾಗಿ ಪಾಲ್ಗೊಂಡಿದ್ದರು. ಪ್ರೆಸಿಡೆನ್ಸಿ ಸಮೂಹ ಸಂಸ್ಥೆಗಳ (ಪಿಜಿಐ) ಅಧ್ಯಕ್ಷ ನಿಸಾರ್ ಅಹಮ್ಮದ್ ಅವರ ಉಪಸ್ಥಿತರಿದ್ದರು.
ಜಾಗತಿಕ ಮಟ್ಟದಲ್ಲಿ ಮುಂದಾಳುಗಳಾಗಲಿರುವ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವುದನ್ನು ಅಕಡೆಮಿಕ್ ಆಗಿಯೇ ಹೇಳಿಕೊಂಡರು ನಿಸಾರ್ ಅಹಮ್ಮದ್. ಪದವಿ ಪಡೆದ ಎಲ್ಲರ ಭವಿಷ್ಯವೂ ಹಸನಾಗಿರಲಿದೆ ಎಂಬ ಆಶಯವೂ ಅವರ ಮಾತಿನಲ್ಲಿತ್ತು.
ಮುಖ್ಯ ಅತಿಥಿ ಅಪೂರ್ವ ಪುರೋಹಿತ್ ಭಾಷಣದಲ್ಲಿ ಕಿವಿಮಾತುಗಳೇ ತುಂಬಿದ್ದವು. `ವಿದ್ಯಾರ್ಥಿಗಳು ತಮ್ಮಳಗಿರುವ ಶಕ್ತಿಯನ್ನು ಅರಿತುಕೊಂಡು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇವತ್ತನ ಜಗತ್ತು ತುಂಬಾ ಸ್ಪರ್ಧಾತ್ಮಕವಾಗಿದೆ. ವೃತ್ತಿಜೀವನದಲ್ಲಿ, ಬದುಕಿನಲ್ಲಿ ಯಶಸ್ಸು ಗಳಿಸಬೇಕಾದರೆ ಕಠಿಣ ಹೋರಾಟ ಮಾಡಬೇಕಾಗುತ್ತದೆ.
ಅತ್ಯುತ್ತಮವಾದದ್ದನ್ನು ಸಾಧಿಸಲು ನೈತಿಕತೆ, ಪ್ರಾಮಾಣಿಕತೆ, ಧಾರಣಾಶಕ್ತಿ ಹಾಗೂ ಬದ್ಧತೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು...~ ಹೀಗೆ ಅವರ ಮಾತು ಬೋಧನೆಗಳಿಂದ ತುಂಬಿತ್ತು.
ಹೊಸ ಗುರಿಗಳ ಕುರಿತು ಪ್ರಸ್ತಾಪ ಮಾಡಿ, ಪದವಿ ಪಡೆಯುವ ಹಾದಿಯಲ್ಲಿ ಭಾವನಾತ್ಮಕ ಹಾಗೂ ಶೈಕ್ಷಣಿಕ ಸಂಬಂಧಕ್ಕೆ ಒಳಪಟ್ಟದ್ದ ಎಲ್ಲರನ್ನು ವಿದ್ಯಾರ್ಥಿಗಳು ಸ್ಮರಿಸುತ್ತಾ, ಧನ್ಯವಾದ ಹೇಳಲು ಇದು ಸಕಾಲ ಎಂದರು ಡಾ. ಬಂಡೋಪಾಧ್ಯಾಯ.
ಮಾತುಗಳಿಗೂ ಮೀರಿದ ಭಾವಜಗತ್ತು ಅಲ್ಲಿ ನಿರ್ಮಾಣವಾಗಿತ್ತು. ಮುಂದೆ ಎಲ್ಲಿ, ಯಾವಾಗ ಸಿಗಬೇಕು ಎಂಬ ನಿರ್ಧಾರಗಳನ್ನೂ ಕೆಲವರು ಮಾಡಿಕೊಂಡು, ಪದವೀಧರರಾಗಿ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.