ADVERTISEMENT

‘ಪದ್ಮಾವತಿ’ ನೃತ್ಯ ರಸದೌತಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
‘ಪದ್ಮಾವತಿ’ ನೃತ್ಯ ರಸದೌತಣ
‘ಪದ್ಮಾವತಿ’ ನೃತ್ಯ ರಸದೌತಣ   

ದಿನೇದಿನೇ ಜನರ ಮನಸ್ಸಿನಲ್ಲಿ ನಿರೀಕ್ಷೆಯ ಮಹಾಪೂರವನ್ನೇ ಹುಟ್ಟುಹಾಕುತ್ತಿರುವ ಪದ್ಮಾವತಿ ಸಿನಿಮಾದ ಮೊದಲ ‘ಘೂಮರ್‌’ ಹಾಡು ಬಿಡುಗಡೆಗೊಂಡಿದೆ. ಹಾಡು, ದೃಶ್ಯಗಳಲ್ಲಿ ಶ್ರೀಮಂತಿಕೆಯನ್ನು ಸ್ಫುರಿಸುವ ಈ ಹಾಡು ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಜಾಣ್ಮೆಗೂ ಸಾಣೆ ಹಿಡಿದಂತಿದೆ.

ದೇವದಾಸ್‌, ಬಾಜಿರಾವ್‌ ಮಸ್ತಾನಿ, ರಾಮಲೀಲಾ ಮುಂತಾದ ಸಿನಿಮಾಗಳನ್ನು ಮಾಡಿರುವ ಬನ್ಸಾಲಿ ಅವರು ಐತಿಹಾಸಿಕ ಹಾಗೂ ಪೌರಾಣಿಕ ಸಿನಿಮಾಗಳನ್ನು ತೆರೆಯ ಮೇಲೆ ಅಭಿವ್ಯಕ್ತಿಸುವುದರಲ್ಲಿ ಸಿದ್ಧಹಸ್ತರು ಎನ್ನುವುದನ್ನು ಹಾಡಿನ ಮೂಲಕ ಮತ್ತೆ ದೃಢಪಡಿಸಿದ್ದಾರೆ.

ಹಾಡಿನ ಪ್ರತಿ ಫ್ರೇಂ ಕೂಡ ನೋಡುಗನನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅದರಲ್ಲೂ ದೀಪಿಕಾ ಹಾಗೂ ಶಾಹಿದ್‌ ಕಪೂರ್ ತೆರೆಯ ಮೇಲೆ ಬರುತ್ತಿದ್ದಂತೆ ವಿಶೇಷ ಮೆರುಗು ದಕ್ಕುತ್ತದೆ. ತೆರೆ ತುಂಬಿಕೊಳ್ಳುವ ದೀಪಿಕಾ ತಿರುಗುತ್ತಾ ಘೂಮರ್‌ನ ಸಾಂಪ್ರದಾಯಿಕ ಶೈಲಿಯಲ್ಲಿಯೇ ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ. ನಿಧಾನವಾಗಿ ನೃತ್ಯದೊಳಗಿಳಿಯುವ ದೀಪಿಕಾ ರಾಣಿ ಪದ್ಮಾವತಿ ಚೆಲುವನ್ನು ಸ್ಫುರಿಸುತ್ತಾ ನೋಡುಗನ ಚಿತ್ತ ಬೇರೆಡೆ ಹರಿಯದಂತೆ ಹಿಡಿದಿಟ್ಟುಕೊಳ್ಳುತ್ತಾರೆ.

ADVERTISEMENT

‘ಪದ್ಮಾವತಿ ಸಿನಿಮಾದಲ್ಲಿ ಚಿತ್ರೀಕರಿಸಿದ ಅತಿ ಕಷ್ಟದ ಹಾಡಿದು. ನಿರ್ದೇಶಕರ ನಿಖರ ದೃಷ್ಟಿಕೋನ ಹಾಡಿನ ಇಂಚಿಂಚಿನಲ್ಲೂ ಪ್ರತಿಧ್ವನಿಸುತ್ತದೆ. ಹಾಡಿನ ಶ್ರೀಮಂತಿಕೆ ನಮ್ಮೆಲ್ಲರ ಪರಿಶ್ರಮದ ಫಲ. ಈ ಸಿನಿಮಾ ಮುಖ್ಯವಾಗಿ ಈ ಹಾಡಿಗಾಗಿ ನಾನು ತಿಂಗಳುಗಟ್ಟಲೆ ಪೂರ್ವತಯಾರಿ ಮಾಡಿಕೊಂಡಿದ್ದೇನೆ. ಈ ಸಿನಿಮಾಕ್ಕಾಗಿ ಮೊದಲ ಬಾರಿಗೆ ಪದ್ಮಾವತಿ ಪಾತ್ರದಲ್ಲಿ ಸೆಟ್‌ಗೆ ಕಾಲಿಟ್ಟಿದ್ದು ಘೂಮರ್‌ ಹಾಡಿಗಾಗಿಯೇ. ಹೀಗಾಗಿ ಹಾಡು, ಸನ್ನಿವೇಶ ಎಲ್ಲವೂ ನನಗೆ ವಿಶೇಷ’ ಎಂದಿದ್ದಾರೆ ದೀಪಿಕಾ.

ರಾಜಸ್ತಾನಿ ಶೈಲಿಯಲ್ಲಿರುವ ಈ ಹಾಡನ್ನು ಶ್ರೇಯಾ ಘೋಷಾಲ್‌ ಹಾಗೂ ಸ್ವರೂಪ್‌ ಖಾನ್‌ ಹಾಡಿದ್ದು, ಮತ್ತೆ ಮತ್ತೆ ಕೇಳಬೇಕು ಎನ್ನುವಷ್ಟು ಇಂಪಾಗಿದೆ. ಜ್ಯೋತಿ ಡಿ. ತೊಮ್ಮಾರ್‌ ಹಾಗೂ ಕೃತಿ ಮಹೇಶ್‌ ಮೈದ್ಯಾ ನೃತ್ಯ ಸಂಯೋಜನೆ ಹಾಡಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.