ADVERTISEMENT

ಪಾರ್ವತಿಗೆ ಕನ್ನಡ ಇಷ್ಟ!

ಸುಮಲತಾ ಎನ್, ಪದ್ಮನಾಭ ಭಟ್ಟ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST
ಪಾರ್ವತಿಗೆ ಕನ್ನಡ ಇಷ್ಟ!
ಪಾರ್ವತಿಗೆ ಕನ್ನಡ ಇಷ್ಟ!   

ಹುಟ್ಟಿದ ಊರು? ರೂಪದರ್ಶಿಯಾದ ಬಗೆ ಹೇಗೆ?
ನಾನು ಹುಟ್ಟಿದ್ದು ಕೇರಳದಲ್ಲಿ. ಆಮೇಲೆ ಓದಿಗೆಂದು ಆರಿಸಿಕೊಂಡಿದ್ದು ಕರ್ನಾಟಕವನ್ನು. ಇಲ್ಲಿಗೆ ಬಂದ ಮೇಲೆ ಕಾಲೇಜು ದಿನಗಳಲ್ಲಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿತು. ಅದೇ ನನ್ನ ಸಿನಿಮಾ ಎಂಟ್ರಿಗೆ ಮುನ್ನುಡಿ.

ವಿದ್ಯಾಭ್ಯಾಸ, ಸಿನಿಮಾ ನಂಟು ಬೆಳೆದಿದ್ದು?
ನನ್ನ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ನಡೆದದ್ದು ಅಬುಧಾಬಿಯಲ್ಲಿ. ಅನಂತರ ಎಂಜಿನಿಯರಿಂಗ್‌ಗೆಂದು ಕರ್ನಾಟಕಕ್ಕೆ ಬಂದೆ. ಅಲ್ಲಿಂದ ಪ್ರಾರಂಭವಾಗಿದ್ದು ಮಾಡೆಲಿಂಗ್. ರೂಪದರ್ಶಿಯಾಗಿದ್ದಾಗ ನನಗೆ ಮಲೆಯಾಳಂ ಸಿನಿಮಾದಲ್ಲಿ ನಟಿಸುವ ಅವಕಾಶ ಕೈ ಬೀಸಿ ಕರೆಯಿತು.

ರೂಪದರ್ಶಿ, ನಟಿ, ಎರಡೂ ಪಾತ್ರಗಳ ನಡುವಿನ ವ್ಯತ್ಯಾಸ?
ರೂಪದರ್ಶಿಯಾಗಿ ಅಷ್ಟು ಜವಾಬ್ದಾರಿ ಇರುವುದಿಲ್ಲ. ಆದರೆ ನಟಿಯಾದ ಮೇಲೆ ಮುಗಿಯಿತು, ಒಂದಿಷ್ಟು ನಿರ್ಲಕ್ಷ್ಯ ತೋರಿದರೂ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮಾಡೆಲಿಂಗ್, ಸಿನಿಮಾ ಎರಡೂ ಕ್ಷೇತ್ರಗಳಲ್ಲೂ ಸಾಮಾನ್ಯ ಅಂಶವೆಂದರೆ, ಕಷ್ಟಪಟ್ಟರೆ ಮಾತ್ರ ಫಲವುಂಟು ಎನ್ನುವುದು.

ಇದುವರೆಗೂ ನಟಿಸಿರುವ ಸಿನಿಮಾ?
ಮಲಯಾಳಂನಲ್ಲಿ ಯಕ್ಷಿ, ಪಾಪಿನ್ಸ್, ದೀಪನ್ ಪ್ರಮುಖ ಚಿತ್ರಗಳು. ತೆಲುಗು ಮತ್ತು ತಮಿಳಿನಲ್ಲಿ ಬಂದ `ನಿಮಿರಾಕು ನಿಲ್‌`ನಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಪರಬ್ರಹ್ಮ ಚಿತ್ರದಲ್ಲಿ ನಟಿಸುತ್ತಿದ್ದೇನೆ.

ಕನ್ನಡ ಭಾಷೆ ಹೇಗೆನಿಸುತ್ತಿದೆ?
ಕನ್ನಡವನ್ನು ಈಗಷ್ಟೇ ಕಲಿಯುತ್ತಿದ್ದೇನೆ. ಕೆಲವು ಪದಗಳು ರೂಢಿಯಾಗಿವೆ. ಸಿನಿಮಾದಲ್ಲಿ ನಟಿಸುವಾಗ ಎಲ್ಲರೂ ಬೆಂಬಲ ನೀಡುತ್ತಾರೆ. ಖುಷಿ ಎನಿಸುತ್ತದೆ. ನೋಡುತ್ತಿರಿ, ಇನ್ನು ಸ್ವಲ್ಪವೇ ದಿನ, ಕನ್ನಡ ಕಲಿತುಬಿಡುತ್ತೇನೆ.

ಎಂತಹ ಪಾತ್ರ ಮಾಡಬೇಕೆಂಬ ಬಯಕೆಯಿದೆ?
ನಟನೆ ಆಧರಿಸಿದ ಪಾತ್ರ ಮಾಡಬೇಕೆಂಬ ಬಯಕೆಯಿದೆ. ಈಗ ಎಲ್ಲವೂ ಗ್ಲಾಮರ್ ಇದ್ದರೆ ನಡೆಯುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಆದರೆ ನನಗೆ ಗ್ಲಾಮರ್ ಹೊರತಾಗಿಯೂ ನನ್ನ ನಟನೆಯಿಂದ ಜನರ ಮನಸ್ಸನ್ನು ಗೆಲ್ಲುವುದೇ ಇಷ್ಟ.

ಭಾರತೀಯ ಚಿತ್ರರಂಗದಲ್ಲಿ ನಿಮ್ಮಿಷ್ಟದ ನಟ-ನಟಿಯರು?
ಮಾಧುರಿ ದೀಕ್ಷಿತ್ ಎಂದರೆ ತುಂಬಾ ಇಷ್ಟ. ಆಕೆಯನ್ನು ನೋಡುತ್ತಿದ್ದರೆ ಸೌಂದರ್ಯದ ಖನಿಯೇನೋ ಎನಿಸುತ್ತದೆ. ಅಷ್ಟೇ ಅಲ್ಲ, ಆಕೆಯ ಭಾವಭಿವ್ಯಕ್ತಿಯ ಪರಿಯೂ ಮನಸ್ಸನ್ನು ಖುಷಿ ಪಡಿಸುತ್ತದೆ. ನಟರಲ್ಲಿ ಅಮೀರ್ ಖಾನ್ ಮೊದಲ ಪಟ್ಟಿಯಲ್ಲಿ ನಿಲ್ಲುತ್ತಾರೆ.

ಕನ್ನಡದಲ್ಲಿ ಯಾರಿಷ್ಟ?
ನಾನು ಈಗಷ್ಟೇ ಕನ್ನಡ ಕಲಿಯುತ್ತಿದ್ದೇನೆ. ನಟ ಮುರಳಿ ಜೊತೆ ನಾಯಕಿಯಾಗಿ ನಟಿಸುತ್ತಿದ್ದೇನೆ. ಸದ್ಯಕ್ಕೆ ಅವರೇ ನನ್ನಿಷ್ಟದ ನಟ.

ಸಿನಿಮಾದಲ್ಲಿನ ಸವಾಲುಗಳು?
ಸಿನಿಮಾದಲ್ಲಿ ನಮ್ಮ ಛಾಪು ಮೂಡಿಸಬೇಕೆಂದರೆ ನಮ್ಮ ಸೌಂದರ್ಯದ ಬಗ್ಗೆ ಕಾನ್ಷಿಯಸ್ ಆಗಿರಬೇಕು. ಫಿಟ್‌ನೆಸ್‌ನೊಂದಿಗೆ ತ್ವಚೆಯನ್ನೂ ಕಾಪಾಡಿಕೊಳ್ಳಬೇಕು. ಇದಿಷ್ಟು ಸೌಂದರ್ಯದ ವಿಷಯವಾದರೆ, ಸದಾ ಉತ್ಸಾಹದಿಂದಿರಬೇಕು. ಏನೇ ಬಂದರೂ ಸಾವಧಾನವಾಗಿ ಪರಿಹರಿಸಿಕೊಳ್ಳಬೇಕು. ಇವಷ್ಟೇ ನಮ್ಮನ್ನು ಇಲ್ಲಿ ಉಳಿಯುವಂತೆ ಮಾಡಬಲ್ಲವು.

ಬೇರೆ ಭಾಷೆಯ ಸಿನಿಮಾಗಳಿಗೂ, ಕನ್ನಡದ ಸಿನಿಮಾದಲ್ಲೂ ಕಂಡುಕೊಂಡಿರುವ ವ್ಯತ್ಯಾಸ?
ಯಾವ ಸಿನಿಮಾಗಳಲ್ಲೂ ಕೆಟ್ಟ ಅನುಭವ ಆಗಿಲ್ಲ ಎಂಬುದೇ ಸಂತಸದ ಸಂಗತಿ. ಆದರೆ ಒಮ್ಮಮ್ಮೆ ಭಾಷೆ ಸಮಸ್ಯೆ ಎದುರಾಗುತ್ತದೆ. ಆದರೆ ಜೊತೆಗಿದ್ದವರ ಸಹಾಯದಿಂದ ಎಲ್ಲವೂ ಆರಾಮವೆನಿಸಿದೆ.

ಈ ಕ್ಷೇತ್ರಕ್ಕೆ ಮನೆಯವರ ಬೆಂಬಲ ಹೇಗಿತ್ತು?
ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ. ಆದ್ದರಿಂದ ಅಪ್ಪ ಅಮ್ಮ ನಾನು ಚೆನ್ನಾಗಿ ಓದಿ ಎಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದ್ದರಿಂದ ವಿರೋಧ ಇದ್ದೇ ಇತ್ತು. ಈಗ ಅವರಿಗೂ ನಾನು ನಟಿಯಾಗಿರುವುದು ಹೆಮ್ಮೆ ಎನಿಸಿದೆಯಂತೆ.

ಯಾವ ಉಡುಪು ತುಂಬಾ ಇಷ್ಟ?
ಭಾರತೀಯ ಸಾಂಪ್ರದಾಯಿಕ ವಸ್ತ್ರ  ಹಾಗೂ ಪಾಶ್ಚಾತ್ಯ ಶೈಲಿ ಎರಡೂ ಮೆಚ್ಚುಗೆಯಾಗುತ್ತವೆ. ಆದರೆ ಅದು ನನ್ನ ದೇಹಕ್ಕೆ ಒಗ್ಗಿಕೊಂಡರೆ ಮಾತ್ರ ತೊಡುತ್ತೇನೆ. ಇಲ್ಲವೆಂದರೆ ಎಷ್ಟೇ ಚೆಂದ ಕಂಡರೂ ದೂರವಿಡುತ್ತೇನೆ.

ಬಾಲಿವುಡ್‌ನಲ್ಲಿ ನಟಿಸುವ ಯೋಜನೆ?
ಹೌದು. ಸದ್ಯದಲ್ಲೇ ಬಾಲಿವುಡ್ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿದೆ. `ಏಕಾಕಿ' ಸಿನಿಮಾಗೆ ತಯಾರಿ ನಡೆಸುತ್ತಿದ್ದೇನೆ. ಆದ್ಯನ್ ಸುಮನ್ ಅವರ ಜತೆ ಕೆಲಸ ನಿರ್ವಹಿಸುತ್ತಿರುವುದು ಥ್ರಿಲ್ಲಿಂಗ್ ಅನಿಸುತ್ತಿದೆ.

ಬೆಂಗಳೂರು ಹೇಗನಿಸುತ್ತಿದೆ?
ಎರಡು ಮೂರು ವರ್ಷಗಳಿಂದ ಬೆಂಗಳೂರಿನ ನಂಟಿದೆ. ಇದು ಕೂಲ್ ಜಾಗ. ಇಲ್ಲಿ ಅವಕಾಶಗಳೂ ಹೆಚ್ಚು. ಬೇರೆ ಊರವರನ್ನೂ ಪರರಂತೆ ಕಾಣುವುದಿಲ್ಲ. ಎಲ್ಲರಿಗೂ ಇಷ್ಟವಾದಂತೆ ನನಗೂ ಬೆಂಗಳೂರು ಅಚ್ಚುಮೆಚ್ಚಿನ ತಾಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.