ADVERTISEMENT

ಪಿಚ್ಚಳ್ಳಿ ಕೊಳ್ಳೇಗಾಲ ಪರಭಾರೆ!

ಚ.ಹ.ರಘುನಾಥ
Published 8 ಜುಲೈ 2012, 19:30 IST
Last Updated 8 ಜುಲೈ 2012, 19:30 IST

ಅತ್ತ ಕಡೆಯಿಂದ ದೇವನೂರ ಮಹಾದೇವ ಅವರ ಫೋನು: `ಮತ್ತೆ ಫೋನ್ ಮಾಡ್ತೇನೆ. ನೀನು ಪೋನ್ ಎತ್ತಬೇಡ. ನಾನು ಆ ಹಾಡು ಕೇಳಬೇಕು~ ಎಂದರು.
ಫೋನ್ ಇಟ್ಟರು. ಮತ್ತೆ ಟ್ರಿಣ್ ಟ್ರಿಣ್ ಟ್ರಿಣ್.

`ಕೊಳ್ಳೇಗಾಲದಲ್ಲಿ ಮಾಟ ಮಂತ್ರ ಮಾಡಿ ನಿಂಗೆ, ಹೆಂಗಾರ ನನ್ನ ವಶ ಮಾಡಿಕೊಳ್ಳುವೆ~ ಎನ್ನುವ ಹಾಡು. ಹಾಡು ಮುಗಿದ ಮೇಲೆ ಮತ್ತೆ ಫೋನು. `ಎಂಥ ಅದ್ಭುತ ಹಾಡು ಮಾರಾಯ~ ಎನ್ನುವ ಮಹಾದೇವರ ಮೆಚ್ಚುಗೆ.

ದೇವನೂರರ ಲಾಲಿಯಂಥ ಮಾತನ್ನು ನೆನಪಿನ ನವಿಲಗರಿಯಲ್ಲಿ ಮೂಡಿದ ಪ್ರಶಸ್ತಿ ಪತ್ರದಂತೆ ನೇವರಿಸಿದರು ಪಿಚ್ಚಳ್ಳಿ ಶ್ರೀನಿವಾಸ್.ಹಾಂ. ಸವಿ ನೆನಪಿನ ಬೆನ್ನಿಗೇ ವಿಷಾದದ ಕಥೆಯೂ ಇದೆ.

ಕೊಳ್ಳೇಗಾಲದಲ್ಲಿ ಮಾಟ ಮಂತ್ರದ ಹಾಡಿದೆಯಲ್ಲ; ಅದು `ಶಿವ~ ಚಿತ್ರಕ್ಕಾಗಿ ಪಿಚ್ಚಳ್ಳಿ ಅವರು ಹಾಡಿರುವ ಗೀತೆ. ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮೂಲ ಯೋಜನೆಯ ಪ್ರಕಾರ ಬಾಲಿವುಡ್‌ನ ಕೈಲಾಶ್ ಖೇರ್ ಈ ಗೀತೆ ಹಾಡಬೇಕಿತ್ತು. ಊರಲ್ಲಿಲ್ಲದ ಖೇರ್ ಸಮಯಕ್ಕೆ ಓಗೊಡಲಿಲ್ಲ.ಆಗ ಪಿಚ್ಚಳ್ಳಿಯವರಿಗೆ ಬುಲಾವ್.

ಈ ಮೊದಲು, ಗುರುಕಿರಣ್ ಸಂಗೀತದಲ್ಲಿ `ತಾಕತ್~ ಚಿತ್ರದಲ್ಲೊಂದು ಗೀತೆಯನ್ನು ಪಿಚ್ಚಳ್ಳಿ ಹಾಡಿದ್ದರು. ಆ ಹಾಡು ಜನಪ್ರಿಯವೂ ಆಗಿತ್ತು. ಆದರೆ, ಪಿಚ್ಚಳ್ಳಿಯವರಿಗೆ ಅಳುಕು ಇದ್ದೇಇತ್ತು. ಹೇಳಿಕೇಳಿ ಅವರು ಜಾನಪದದ ಕಸುವುಳ್ಳ ಹಾಡುಗಾರ. ಕಮರ್ಷಿಯಲ್ ಚಿತ್ರದ ಗೀತೆಯ ಸಖ್ಯ ಹೇಗೋ ಏನೋ ಎನ್ನುವ ಅಳುಕು ಅವರಿಗಿದ್ದೇ ಇತ್ತು.
 
ಆದರೆ, ಹುಡುಗರಿಗೆ ಇಷ್ಟವಾಗುವಂತಿರುವ ಈ ಹಾಡು ನನ್ನ ಪಿಚ್‌ಗೆ ಹೇಳಿಮಾಡಿಸಿದಂತಿದೆ ಎನ್ನುವ ಆತ್ಮವಿಶ್ವಾಸದಲ್ಲಿ `ಕೊಳ್ಳೇಗಾಲ~ದ ಹಾಡು ಹಾಡಿದರು. `ಪರವಾಗಿಲ್ವಾ?~ ಎಂದರು. `ತುಂಬಾ ಚೆನ್ನಾಗಿ ಬಂದಿದೆ~ ಎಂದು ಗುರು ಮೆಚ್ಚಿಕೊಂಡರು.

`ಶಿವ~ ಚಿತ್ರದ ಗೀತೆಗಳ ಧ್ವನಿಮುದ್ರಿಕೆ ಮೊದಲು ಬಿಡುಗಡೆಯಾದುದು ಬೆಂಗಳೂರಿನಲ್ಲಿ, ಆಮೇಲೆ ಚಿತ್ರದುರ್ಗದಲ್ಲಿ. ಎರಡೂ ಕಡೆ ಪಿಚ್ಚಳ್ಳಿ ಅವರ ಗೀತೆಯನ್ನು ಕೇಳಿಸಲಾಗಿತ್ತು. ಪೇಟೆಗೆ ಬಂದ `ಕೊಳ್ಳೇಗಾಲ~ದ ಹಾಡಿನ ಪಕ್ಕದಲ್ಲೂ ಅವರ ಹೆಸರಿತ್ತು. ಮಕ್ಕಳಿಂದ ದೊಡ್ಡವರವರೆಗೆ ಕೊಳ್ಳೇಗಾಲದ ಹಾಡು ಇಷ್ಟವಾಯಿತು.
 
ಆ ಎಲ್ಲ ಪ್ರಶಂಸೆಗಳಿಗೆ ಕಿರೀಟದಂತೆ ದೇವನೂರ ಮಹಾದೇವ ಹಾಡು ಮೆಚ್ಚಿಕೊಂಡು `ಭಲೇ ಪಿಚ್ಚಳ್ಳಿ~ ಎಂದರು. ಅದೆಲ್ಲವೂ ಸರಿಯೇ. ಆದರೆ, ಈಗ ಶುರುವಾಗಿರುವುದು ಹಾಡಿನ ಯಶಸ್ಸನ್ನು ಪರಭಾರೆ ಮಾಡಲು ಪ್ರಯತ್ನಿಸುತ್ತಿರುವ ವಿಷಯ.

`ಕೊಳ್ಳೇಗಾಲ~ದ ಹಾಡನ್ನು ಉಪೇಂದ್ರ ಅವರಿಂದ ಹಾಡಿಸಲಾಗಿದೆ ಎನ್ನುವುದು ಹೊಸ ಸುದ್ದಿ. `ಏನಪ್ಪಾ ಇದು ಕಲಿಗಾಲ~ ಎನ್ನುತ್ತಲೇ ಗುರುಕಿರಣ್ ಅವರನ್ನು ಪಿಚ್ಚಳ್ಳಿ ಸಂಪರ್ಕಿಸಿದರು. `ಏನ್ ಗುರು ಇದೆಲ್ಲ~ ಅಂದಿದ್ದಕ್ಕೆ ಅವರು ಹೇಳಿದ್ದಿಷ್ಟು- `ಆತಂಕ ಬೇಡ. ಚಿತ್ರದಲ್ಲಿ ನಿಮ್ಮ ಧ್ವನಿಯನ್ನೇ ಉಳಿಸಿಕೊಳ್ಳುತ್ತೇವೆ. ಕೇವಲ ಪ್ರಚಾರದ ಕಾರಣಕ್ಕಾಗಿಯಷ್ಟೇ ಉಪೇಂದ್ರರಿಂದ ಹಾಡಿಸಲಾಗಿದೆ~.

ಗುರುಕಿರಣ್ ಅವರ ಮಾತು ಕೇಳಿ ಪಿಚ್ಚಳ್ಳಿ ಸುಮ್ಮನಾಗಿದ್ದಾರೆ. ಆದರೆ, ಅವರನ್ನು ಕೆಲವು ನೈತಿಕ ಪ್ರಶ್ನೆಗಳು ಕಾಡುತ್ತಿವೆ: ಪ್ರಚಾರಕ್ಕೊಬ್ಬರು, ಚಿತ್ರಕ್ಕೊಬ್ಬರು ಎನ್ನುವ ಧೋರಣೆ ಸರಿಯಾ? ಜನಪ್ರಿಯಗೊಳ್ಳುತ್ತಿರುವ ಗೀತೆಯೊಂದನ್ನು ಮತ್ತೊಬ್ಬರಿಂದ ಹಾಡಿಸುವುದು ಎಷ್ಟು ಸರಿ?

ಪ್ರಶ್ನೆಗಳ ಜೊತೆಗೇ ಪಿಚ್ಚಳ್ಳಿ ಅವರು ಒತ್ತಿ ಹೇಳುವುದು- `ನಾನು ಕಮರ್ಷಿಯಲ್ ಸಿನಿಮಾದ ಬೆನ್ನು ಹತ್ತಿದವನಲ್ಲ~. ಹೌದು, ಪಿಚ್ಚಳ್ಳಿ ಅವರ ಸಖ್ಯವೇನಿದ್ದರೂ ಜಾನಪದ - ಜನಪರ ಲೋಕದೊಳಗೆ. ಹಾಗೆಂದು ಅವರು ಚಿತ್ರರಂಗಕ್ಕೆ ಅಪರಿಚಿತರಲ್ಲ.

ದೇವನೂರರ ಸಣ್ಣಕಥೆ ಆಧರಿಸಿದ `ಅಮಾಸ~ ಚಿತ್ರಕ್ಕೆ ಸಂಗೀತ ನೀಡಿ, ಗೀತೆಯೊಂದನ್ನು ಹಾಡಿದ್ದರು. ಆ ಗೀತೆಗೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು. `ಬನದ ನೆರಳು~ ಚಿತ್ರದಲ್ಲೂ ಹಾಡಿದ್ದರು. ಇತ್ತೀಚಿನ `ಸಿದ್ಧಗಂಗಾ~ ಚಿತ್ರಕ್ಕೆ ಅವರದೇ ಸಂಗೀತ. ಸಿನಿಮಾ ಹೊರತಾಗಿ ಪಿಚ್ಚಳ್ಳಿ ಅವರು ಹಾಡಿರುವ ಗೀತೆಗಳ ಅನೇಕ ಆಲ್ಬಂಗಳು ಹೊರಬಂದಿವೆ. ವಿಶೇಷವಾಗಿ ಕೈವಾರ ತಾತಯ್ಯನವರ ಕುರಿತಾಗಿ ಹೊರತಂದ ಆಲ್ಬಂ ಅವರ ಪ್ರಯೋಗಶೀಲತೆಗೆ ಉದಾಹರಣೆಯಂತಿತ್ತು.

ಪಿಚ್ಚಳ್ಳಿ ಅವರನ್ನು `ಶಿವ~ ಚಿತ್ರತಂಡ ನಡೆಸಿಕೊಂಡಿರುವ ರೀತಿ ಗಾಂಧಿನಗರದ ವ್ಯಾಕರಣದ ಮಟ್ಟಿಗೆ ಸರಿ ಇರಬಹುದು. ಆದರೆ, ಈ ಧೋರಣೆ ಕನ್ನಡದ ನಾಯಕರ ಬಗ್ಗೆ ನಮ್ಮ ನಿರ್ಮಾಪಕ - ನಿರ್ದೇಶಕರಿಗೆ ಇರುವ ವ್ಯಾಮೋಹವನ್ನೂ, ಸ್ಥಳೀಯ ಗಾಯಕರ ಬಗೆಗಿನ ನಿರ್ಲಕ್ಷ್ಯವನ್ನೂ ಒಟ್ಟಿಗೆ ಧ್ವನಿಸುವಂತಿಲ್ಲವೇ?

ಪ್ರಚಾರ ತಂತ್ರವಷ್ಟೇ...
ಪಿಚ್ಚಳ್ಳಿ ಅವರು ಹಾಡಿರುವ ಗೀತೆಯನ್ನು ಉಪೇಂದ್ರ ಅವರಿಂದ ಹಾಡಿಸಿರುವುದು ನಿಜ. ಅದು ನಿರ್ಮಾಪಕರ ನಿರ್ಧಾರ. ಪ್ರಚಾರದ ತಂತ್ರವಾಗಿ ಅವರು ಉಪೇಂದ್ರರ ಗೀತೆಯಿರುವ ಸೀಮಿತ ಸಂಖ್ಯೆಯ ಸೀಡಿಗಳನ್ನು ಹೊರತರಲಿದ್ದಾರೆ.


 
ಆದರೆ, ಈಗಾಗಲೇ ಪೇಟೆಯಲ್ಲಿರುವ ಸೀಡಿಯಲ್ಲಿ ಪಿಚ್ಚಳ್ಳಿ ಅವರ ಗೀತೆಯೇ ಇದೆ. ಸಿನಿಮಾದಲ್ಲೂ ಅವರದೇ ಹಾಡು ಇರಲಿದೆ. ಅದೇ ರೀತಿ, ಚಿತ್ರದ ಮತ್ತೊಂದು ಗೀತೆಯನ್ನು ಪುನೀತ್ ಅವರಿಂದ ಹಾಡಿಸುವ ಉದ್ದೇಶವೂ ನಿರ್ಮಾಪಕರಿಗಿದೆ. ಈ ಬಗ್ಗೆ ಪಿಚ್ಚಳ್ಳಿ ಜೊತೆಗೆ ಮಾತನಾಡಿದ್ದೇನೆ. 
ಗುರುಕಿರಣ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT